Mysore
22
broken clouds

Social Media

ಬುಧವಾರ, 09 ಸೆಪ್ಟೆಂಬರ್ 2026
Light
Dark

ಬರದಲ್ಲೂ ಜಾನುವಾರುಗಳ ಮೇವಿಗಿಲ್ಲ ಕೊರತೆ

ಕೆ.ಬಿ.ರಮೇಶನಾಯಕ

ಹೋಬಳಿಗೊಂದರಂತೆ ೨೯ ಮೇವು ಬ್ಯಾಂಕ್ ತೆರೆಯಲು ಪ್ರಸ್ತಾವನೆ 

ಮೈಸೂರು: ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟಕ್ಕೀಡಾಗಿರುವ ಕಾರಣ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹೈನುಗಾರಿಕೆ ಅವಲಂಬಿತರಿಗೆ ತೊಂದರೆಯಾಗದಂತೆ ಜಾನು ವಾರುಗಳಿಗೆ ಮೇವು ಸಂಗ್ರಹಿಸುತ್ತಿದ್ದು, ೬ ತಿಂಗಳ ಕಾಲ ಮೇವಿನ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ.

ಜಿಲ್ಲೆಯಲ್ಲಿ ರೈತರು ಬೆಳೆಯುವ ಮೇವಿನ ಜತೆಗೆ ಇಲಾಖೆ ವತಿಯಿಂದ ಬೆಳೆಯುವ ಮೇವನ್ನೂ ದಾಸ್ತಾನು ಮಾಡಿಕೊಂಡು ರೈತರಿಗೆ ಅಗತ್ಯವಿರುವಷ್ಟು ಪೂರೈಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಮುಂದಾಗಿದೆ. ಇದರಿಂದಾಗಿ ಮೇವಿನ ಕೊರತೆಯ ಚಿಂತೆಯಲ್ಲಿದ್ದ ಸಾವಿರಾರು ರೈತರಿಗೆ ಇಲಾಖೆ ಅಭಯ ನೀಡಿದೆ. ಕಾವೇರಿ, ಕಬಿನಿ ಜಲಾಶಯಗಳಿದ್ದರೂ ಮಳೆಯಾಶ್ರಿತ ೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆಗಳು ಶೇ.೫೬ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಒಣಗಿ ನಿಂತಿವೆ. ಈಗಾಗಲೇ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ನಡುವೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆಮೇವಿನ ಪೂರೈಕೆಯಲ್ಲಿ ವ್ಯತ್ಯಯವಾಗುವುದನ್ನು ತಡೆಯಲು ಅಗತ್ಯವಿರುವ ಮೇವು ಸಂಗ್ರಹಕ್ಕೆ ಇಲಾಖೆ ಹೆಜ್ಜೆ ಇಟ್ಟಿದೆ.

ಕರ್ನಾಟಕ ಹಾಲು ಒಕ್ಕೂಟದಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೈಸೂರು, ನಂಜನಗೂಡು, ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ, ತಿ.ನರಸೀಪುರ, ಎಚ್.ಡಿ.ಕೋಟೆ ತಾಲ್ಲೂಕುಗಳಿಗೆ ೩೧ ಸಾವಿರ ಸಣ್ಣ ಜೋಳದ ಕಿಟ್, ೨೦ ಸಾವಿರ ದಪ್ಪ ಜೋಳದ ಕಿಟ್ ವಿತರಿಸಲಾಗಿದ್ದು, ೪,೭೯,೮೯೭ ಟನ್ ಹಸಿರು ಮೇವು ಉತ್ಪಾದನೆಯಾಗಿದೆ. ಇದೇ ರೀತಿ ಇಲಾಖೆ ವತಿಯಿಂದ ೧,೮೪,೦೦೦ ಮೇವಿನ ಬೀಜದ ಕಿರುಪೊಟ್ಟಣ ಸರಬರಾಜು ಮಾಡಲು ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಆಯುಕ್ತಾಲಯಕ್ಕೆ ಪತ್ರ ಬರೆಯಲಾಗಿದ್ದು, ಅಂದಾಜು ೨೫ ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯಮಟ್ಟದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸುವ ಕಾರಣ ಅಗತ್ಯಕ್ಕೆ ತಕ್ಕಂತೆ ಮೇವಿನ ಬೀಜ ಒದಗಿಸುವಂತೆ ಕೋರಲಾಗಿದೆ.

೨೯ ಮೇವು ಕೇಂದ್ರಕ್ಕೆ ಪ್ರಸ್ತಾವನೆ: ಬರ ಪರಿಸ್ಥಿತಿಯಿಂದ ಮೇವಿನ ಕೊರತೆ ಉಂಟಾದಲ್ಲಿ ರೈತರು ಪರದಾಡುವುದನ್ನು ತಪ್ಪಿಸಲು ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ೨೯ ಮೇವು ಬ್ಯಾಂಕ್, ತಾಲ್ಲೂಕಿಗೆ ಒಂದರಂತೆ ಎಂಟು ಜಾನುವಾರು ಶಿಬಿರ, ಗೋಶಾಲೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲ್ಲೂಕಿಗೊಂದರಂತೆ ಗೋಶಾಲೆಗಳನ್ನು ತೆರೆದರೆ ರೈತರು ತಮ್ಮ ಜಾನುವಾರುಗಳನ್ನು ಅಲ್ಲಿ ಬಿಟ್ಟು ಮೇಯಿಸಬಹುದಾಗಿದೆ.

ಕುಡಿಯುವ ನೀರು, ಮೇವಿನ ವ್ಯವಸ್ಥೆ ಇರುವುದರಿಂದ ಉಂಟಾಗುವ ಖರ್ಚು ಕೂಡ ತಪ್ಪಲಿದೆ ಎನ್ನುವುದು ಅಧಿಕಾರಿಗಳ ನಿರೀಕ್ಷೆಯಾಗಿದೆ. ಈಗಾಗಲೇ ಇಲಾಖೆ ವತಿಯಿಂದ ಹೋಬಳಿ ಕೇಂದ್ರದಲ್ಲಿ ಜಾಗಗಳನ್ನು ಗುರುತಿಸಿದ್ದು, ಸರ್ಕಾರ ಅನುಮತಿ ನೀಡಿದ ಕೂಡಲೇ ಗೋಶಾಲೆ ತೆರೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಜಿಲ್ಲೆಯಲ್ಲಿ ಖಾಲಿ ಕೆರೆಗಳೇ ಹೆಚ್ಚು: ಕಾವೇರಿ, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ನೀರು ಹರಿಯುತ್ತಿದ್ದರೂ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಮುಂದಾಗದ ಕಾರಣ ಬಹುತೇಕ ಕೆರೆಗಳು ಖಾಲಿ ಖಾಲಿ ಇವೆ. ಕೆರೆಗಳನ್ನು ತುಂಬಿಸುವಂತೆ ರೈತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಡ ಹೆಚ್ಚಿದೆ. ಮೈಸೂರು ಜಿಲ್ಲೆಯಲ್ಲಿ ೨,೯೯೧ ಕೆರೆಗಳಿದ್ದು, ಈ ಪೈಕಿ ೩೦೧ ಕೆರೆಗಳು ಖಾಲಿ ಇದ್ದರೆ, ೧,೧೫೬ ಕೆರೆಗಳು ಶೇ.೩೦ರ ಒಳಗೆ, ೧,೦೫೨ ಕೆರೆಗಳು ಶೇ.೫೦ರಷ್ಟು, ೪೧೯ ಕೆರೆಗಳು ಶೇ.೫೧ರಿಂದ ೯೯ರಷ್ಟು ತುಂಬಿದ್ದರೆ, ೬೩ ಕೆರೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಹೀಗಾಗಿ ಕಾವೇರಿ, ಕಬಿನಿ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸುವ ಜತೆಗೆ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ದೂರ ಮಾಡುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವರು ಖಡಕ್ ಸೂಚನೆ ನೀಡಿರುವುದರಿಂದ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ.

” ಮೈಸೂರು ಜಿಲ್ಲೆಯಲ್ಲಿ ಅಂದಾಜು ೩೭ ವಾರಗಳ ಕಾಲ ಪೂರೈಸುವಷ್ಟು ಮೇವು ದಾಸ್ತಾನು ಮಾಡಲಾಗಿದೆ. ಮೇವು ಬೆಳೆಯುವಂತಹ ರೈತರಿಗೆ ಕಿಟ್ಗಳನ್ನು ನೀಡಲಾಗುತ್ತಿದೆ. ಹೊರ ರಾಜ್ಯಕ್ಕೆ ಮೇವು ಸಾಗಾಣಿಕೆ ಮಾಡದಂತೆ ನೋಡಿಕೊಂಡು ನಮ್ಮಲ್ಲೇ ಸಂಗ್ರಹ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ.”

-ಸಿದ್ದರಾಮು, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ 

 

 

Tags:
error: Content is protected !!