Mysore
22
overcast clouds

Social Media

ಭಾನುವಾರ, 20 ಸೆಪ್ಟೆಂಬರ್ 2026
Light
Dark

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ  

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ 

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿವಾದಿತ ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ತನ್ನ ನಿಯಂತ್ರಣದಲ್ಲಿರುವ ೨೧ ಎನ್ ಡಿ ಎ ಆಡಳಿತವಿರುವ ರಾಜ್ಯಗಳಲ್ಲಿ ಜರಿಗೆ ತರಲು ಹೊರಟಿರುವುದು ಮತ್ತೆ ವಿವಾದಕ್ಕೆ ಎಡೆಕೊಟ್ಟಿದೆ. ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರಕ್ಕೆ ವಿಶೇಷವಾಗಿ ನೀಡಿದ್ದ ಸಂವಿಧಾನದ ವಿಧಿ ೩೭೦ ರದ್ದು ಮಾಡುವುದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜರಿಗೆ ತರುವುದು ತನ್ನ ಆದ್ಯತೆ ಎಂದು ಘೋಷಿಸಿತ್ತು.

ಈಗ ಆಡಳಿತ ಸೂತ್ರ ಹಿಡಿದಿರುವ ಬಿಜೆಪಿಯು ಈಗಾಗಲೇ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಸಂವಿಧಾನದ ೩೭೦ನೇ ವಿಧಿಯ ರದ್ದು ಮತ್ತು ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ಈಗ ಏಕರೂಪ ನಾಗರಿಕ ಸಂಹಿತೆ ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ ಜರಿಗಾಗಿ ಮುಂದಡಿ ಇಡುತ್ತಿದೆ. ೨೦೨೯ರಲ್ಲಿ ಬರುವ ಲೋಕಸಭೆ ಚುನಾವಣೆ ಒಳಗೆ ಬಿಜೆಪಿ ಮುಂದಾಳುತನದಲ್ಲಿ ಇರುವ ಎನ್ ಡಿ ಎ ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ನೀಡಿದ ಹೇಳಿಕೆ ಈಗ ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ಕೇಂದ್ರ ಸರ್ಕಾರವು ೨೦೧೯ ರಿಂದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಪ್ರಯತ್ನವನ್ನು ನಡೆಸುತ್ತಾ ಬಂದಿದೆ. ಆದರೆ ಯುಸಿಸಿಯಿಂದ ಸಂವಿಧಾನದ ೪೪ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಆಗಲಿದೆ. ಇದರಿಂದ ಅಲ್ಪ ಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ ಎಂದು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ವಿರೋಧ ಮಾಡಿಕೊಂಡು ಬರುತ್ತಿರುವುದರಿಂದ ಬಿಜೆಪಿ ಸರ್ಕಾರದ ಕನಸು ನನಸಾಗಲು ಸಾಧ್ಯವಾಗುತ್ತಿಲ್ಲ. ೨೦೧೯ರಲ್ಲಿ ಸಿದ್ಧಪಡಿಸಿದ್ದ ಮಸೂದೆಯನ್ನು ಕೈಬಿಟ್ಟು ಈಗ ತನ್ನ ರಾಜ್ಯಗಳ ಮೂಲಕ ಯುಸಿಸಿಯನ್ನು ಜಾರಿಗೆ ತರುವ ಹಿಂಬಾಗಿಲಿನ ಪ್ರಯತ್ನದಲ್ಲಿ ತೊಡಗಿದೆ. ಮಾರ್ಗ ಬೇರೆಯಾದರೂ ಉದ್ದೇಶ ಗುರಿಮುಟ್ಟಬೇಕೆನ್ನುವ ತವಕದಿಂದ ಅದೀಗ ರಾಜ್ಯ ಸರ್ಕಾರಗಳಿಗೆ ಸಂವಿಧಾನದ ೪೪ನೇ ವಿಧಿಯನ್ವಯ ಕನ್ಕರೆಂಟ್ ಲಿಸ್ಟ್ ನಲ್ಲಿ ದೊರೆತಿರುವ ಅಧಿಕಾರವನ್ನು ಚಲಾಯಿಲು ಮುಂದಾಗಿದೆ. ಬಿಜೆಪಿ ಸರ್ಕಾರದ ಈ ಆಣತಿಯಂತೆ ಈಗಾಗಲೇ ಗುಜರಾತ, ಅಸ್ಸಾಂ, ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಬಿಜೆಪಿ ಸರ್ಕಾರಗಳು ಈ ಕಾಯ್ದೆಯನ್ನು ವಿಧಾನ ಮಂಡಲಗಳಲ್ಲಿ ಅಂಗೀಕರಿಸಿವೆ.

ಈ ಕಾಯ್ದೆಯ ಜರಿಗಾಗಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಚತ್ತೀಸ್‌ಗಢ ಮತ್ತು ಇತರೆ ರಾಜ್ಯಗಳು ಕರಡು ಮಸೂದೆಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿವೆ. ಆದರೆ ಬಿಹಾರದಲ್ಲಿ ಬಿಜೆಪಿ ಮತ್ತು ಜನತಾದಳ (ಯು) ನೇತೃತ್ವದ ಎನ್ ಡಿ ಎ ಸರ್ಕಾರವು ಈ ಮಸೂದೆಯ ಜರಿಗೆ ತರುವ ಮುನ್ನ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ನಿತೀಶ್ ನೇತೃತ್ವದ ಸಂ.ಜನತಾದಳ ಮತ್ತು ಚಿರಾಗ್ ಪಾಸ್ವಾನ್‌ರ ಲೋಕ ಜನಶಕ್ತಿಯಿಂದ ಭಾರೀ ವಿರೋಧ ವ್ಯಕ್ತವಾಗಿರುವುದು ಕೇಂದ್ರ ಸರ್ಕಾರದ ತಲೆ ಬಿಸಿ ಮಾಡಿದೆ. ಯುಸಿಸಿಯು ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ಹರಣ ಮಾಡುವುದಲ್ಲದೆ ದೇಶದ ಏಕತೆಯಲ್ಲಿನ ವೈವಿಧ್ಯತೆಯ ಬಹುತ್ವ ರಾಷ್ಟ್ರದ ಪರಿಕಲ್ಪನೆಯನ್ನು ಹಾಳು ಮಾಡುತ್ತದೆ. ಆದ್ದರಿಂದ ಬಿಹಾರದಲ್ಲಿ ಯುಸಿಸಿ ಜರಿಗೆ ಬಿಡುವುದಿಲ್ಲ ಎಂದು ಜನತಾದಳ (ಯು) ನಾಯಕರು ಹೇಳಿದರೆ, ಲೋಕಜನಶಕ್ತಿಯ ನಾಯಕ ಕೇಂದ್ರದ ಸಚಿವ ಚಿರಾಗ್ ಪಾಸ್ವಾನ್ ,ಈ ಬಗೆಗೆ ಮತ್ತೆ ವಿಸ್ತೃತವಾದ ಚರ್ಚೆ ನಡೆಸಬೇಕು. ಏಕಾಏಕಿ ಈ ಕಾಯ್ದೆ ಜಾರಿಗೆ ಬರಲು ಬಿಡುವುದಿಲ್ಲ ಎಂಬ ಹೇಳಿಕೆ ಮೊದಲಿನಿಂದಲೂ ಯುಸಿಸಿಗೆ ವಿರೋಧ ಮಾಡುತ್ತಲೇ ಬಂದಿರುವ ಮುಸ್ಲಿಮ್ ನಾಯಕರ ದನಿ ಮತ್ತೆ ಜೋರಾಗುತ್ತಿದೆ.

ಈ ಪ್ರತಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಉದ್ದೇಶಿತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಪ್ರಯತ್ನದಿಂದ ಹಿಂದೆ ಸರಿಯಿತು. ಯುಸಿಸಿ ಬಗೆಗೆ ೧೯೪೮ರ ನವೆಂಬರ್ ೨೩ರಂದು ಸಂವಿಧಾನ ಕರಡು ಸಮಿತಿಯ ಸಭೆಯಲ್ಲಿ ಸಾಕಷ್ಟು ಚರ್ಚೆ ಆಗಿದೆ. ಹಿಂದೂ ವಿವಾಹ ಕಾಯ್ದೆ ೧೯೫೫, ಹಿಂದೂ ಉತ್ತರಾಧಿಕಾರತ್ವ ಕಾಯ್ದೆ ೧೯೫೬, ಹಿಂದೂ ಅಲ್ಪಸಂಖ್ಯಾತ ಮತ್ತು ನಾಗರಿಕತ್ವ ಕಾಯ್ದೆ ೧೯೫೬, ಹಿಂದೂ ದತ್ತಕ ಮತ್ತು ವಿಚ್ಛೇದಿತ ಮಹಿಳೆಯರ ಜೀವನ ನಿರ್ವಹಣೆ ಕಾಯ್ದೆ ೧೯೫೬ನ್ನು ಈ ಹಿಂದೆಯೇ ಸಂಸತ್ ಅಂಗೀಕರಿಸಿ ಇವು ಜರಿಯಲ್ಲಿವೆ. ಈಗ ಯುಸಿಸಿ ಜರಿಗೆ ಬಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವ ಮತ್ತು ದತ್ತು ತೆಗೆದುಕೊಳ್ಳುವ ಪದ್ಧತಿ ಕೊನೆಯಾಗಲಿದೆ. ಇದು ಮುಸ್ಲಿಂ ಶರಿಯತ್‌ಗೆ ವಿರುದ್ಧ ಇರುವುದಾಗಿ ಸಂವಿಧಾನ ಕರಡು ಸಭೆಯಲ್ಲಿ ಮತ್ತು ನಂತರದ ದಿನಗಳಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ನಿರಂತರವಾಗಿ ವಿರೋಧ ಮಾಡಿಕೊಂಡೇ ಬರಲಾಗಿದೆ.

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಕಾಯ್ದೆಯ ಅವಶ್ಯಕತೆಯನ್ನು ಒಪ್ಪಿದರಾದರೂ, ದೇಶ ಈಗಷ್ಟೇ ವಿಭಜನೆಗೊಂಡು ಗಾಯಗೊಂಡಿದೆ. ಜನರ ಮನಸ್ಸು ಒಡೆದಿದೆ. ಈ ನೋವು ಮಾಸುವವರೆಗೆ ಈ ಕಾಯ್ದೆಯನ್ನು ಈಗಲೇ ಜರಿಗೆ ತರುವ ಅವಶ್ಯಕತೆ ಇಲ್ಲ ಎಂದಿದ್ದರು. ಈ ಏಕರೂಪ ನಾಗರಿಕ ಸಂಹಿತೆ ಕಾಯ್ದೆಗೆ ವ್ಯಕ್ತವಾಗುತ್ತಿದ್ದ ಮುಸ್ಲಿಂ ನಾಯಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈಗಾಗಲೇ ಬಹುತೇಕವಾಗಿ ಈ ಕಾಯ್ದೆಯ ಅಂಶಗಳು ಜರಿಯಲ್ಲಿವೆ. ಇನ್ನು ಕೆಲವೇ ಅಂಶವು ಜರಿಗೆ ಬರಬೇಕಷ್ಟೆ. ಈ ಕಾಯ್ದೆಯನ್ನು ತುರ್ತಾಗಿ ಜಾರಿಗೆ ತರುವ ಬದಲಿಗೆ ರಾಜ್ಯ ಸರ್ಕಾರಗಳಿಗೆ ಈ ಕಾಯ್ದೆಯ ಮಹತ್ವವನ್ನು ತಿಳಿಸುವ ಮೂಲಕ ನಿಧಾನವಾಗಿ ಇದನ್ನು ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಲಹೆ ನೀಡಿದ್ದರು.

ವಾಸ್ತವವಾಗಿ ಈ ಏಕರೂಪ ಕಾಯ್ದೆಯು ಜರಿಯಲ್ಲಿಲ್ಲದಿದ್ದರೂ, ಅದರ ಆಶಯ ಸಂವಿಧಾನದ ಹಲವು ಕಾಯ್ದೆಗಳಲ್ಲಿ ವ್ಯಕ್ತವಾಗಿರುವುದನ್ನು ಕಾಣುತ್ತೇವೆ. ಮಧ್ಯಪ್ರದೇಶದ ಇಂದೋರ್ ನ ೬೨ ವರ್ಷದ ಮುಸ್ಲಿಂ ಮಹಿಳೆ ಶಾ ಬಾನೂ ಬೇಗಂ ತನ್ನ ಜೀವನ ನಿರ್ವಹಣೆಗೆ ತನಗೆ ವಿಚ್ಛೇದನ ನೀಡಿರುವ ಮಾಜಿ ಪತಿಯಿಂದ ಆರ್ಥಿಕ ನೆರವು ಕೊಡಿಸಬೇಕೆಂದು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ೧೯೮೫ರ ಏಪ್ರಿಲ್ ೨೩ರಂದು ಎತ್ತಿ ಹಿಡಿಯಿತು. ಭಾರತೀಯ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ ೧೨೫ರ ಅನ್ವಯ ಶಾ ಬಾನೂ ಅವರಿಗೆ ಜೀವನ ನಿರ್ವಹಣೆಯ ವೆಚ್ಚವನ್ನು ಮಾಜಿ ಪತಿ ನೀಡಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತು. ಈ ತೀರ್ಪು ದೇಶದ ಎಲ್ಲ ಜತಿ ಧರ್ಮಗಳಿಗೂ ಅನ್ವಯಿಸುವುದಾಗಿ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ನೇತೃತ್ವದ ಪೀಠ ನೀಡಿದ ತೀರ್ಪಿನ ಬಗೆಗೆ ರಾಜಕೀಯ ವಲಯ ಸೇರಿದಂತೆ ಇಸ್ಲಾಂ ಧರ್ಮದೊಳಗೆ ಬಿಸಿ ಬಿಸಿ ಚರ್ಚೆ ನಡೆಯತೊಡಗಿತು.

ಈ ಐತಿಹಾಸಿಕ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದವರೆಂದರೆ ನ್ಯಾಯಮೂರ್ತಿಗಳಾದ ರಂಗನಾಥ್ ಮಿಶ್ರ, ಡಿ.ಎ. ದೇಸಾಯಿ, ಓ. ಚಿನ್ನಪ್ಪ ರೆಡ್ಡಿ ಮತ್ತು ಇ.ಎಸ್. ವೆಂಕಟರಾಮಯ್ಯ. ಸುಪ್ರೀಂ ಕೋರ್ಟಿನ ಈ ತೀರ್ಪು ಮುಸ್ಲಿಂ ಶರಿಯತ್‌ನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದು ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ನೋಯಿಸಿರುವುದಾಗಿ ದೇಶದಾದ್ಯಂತ ಗುಬ್ಬಿತು. ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಮುಸ್ಲಿಂ ಧರ್ಮಗುರುಗಳು ಮತ್ತು ಹಲವು ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಮುಸ್ಲಿಂ ಮಹಿಳೆ ( ವಿಚ್ಛೇದನದ ಹಕ್ಕುಗಳ ರಕ್ಷಣೆ) ಮಸೂದೆಯನ್ನು ೧೯೮೬ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ಏಕರೂಪ ಕಾಯ್ದೆಯ ಆಶಯಕ್ಕೆ ಎಳ್ಳು ನೀರು ಬಿಟ್ಟದ್ದು ವಿಪರ್ಯಾಸ ಎನ್ನುವ ಚಾರಿತ್ರಿಕ ಸತ್ಯ ಈಗಲೂ ಚರ್ಚೆಯ ವಿಷಯವಾಗಿದೆ. ವಿಶೇಷ ಎಂದರೆ, ಈ ಯುಸಿಸಿ ಕಾಯ್ದೆಯಿಂದ ಬುಡಕಟ್ಟು ಜನಾಂಗಕ್ಕೆ ವಿನಾಯ್ತಿ ನೀಡಲಾಗಿದೆ.

ದೇಶದ ಉದ್ದಗಲಕ್ಕೂ ಇರುವ ವಿವಿಧ ಪಂಗಡಗಳಿಗೆ ಸೇರಿದ ಬುಡಕಟ್ಟು ಜನರ ವೈವಾಹಿಕ ಸಂಬಂಧಗಳು ಮತ್ತು ಅವರು ಆಚರಿಸಿಕೊಂಡು ಬಂದಿರುವ ಸಂಸ್ಕೃತಿಯು ವಿಭಿನ್ನವಾಗಿದೆ. ಹಾಗಾಗಿ ಅವರಿಗೆ ಈ ಕಾಯ್ದೆಯನ್ನು ಅನ್ವಯಿಸಲಾಗದು ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯಗಳು ಏಕರೂಪ ನಾಗರಿಕ ಮಸೂದೆಯನ್ನು ಸಿದ್ಧಪಡಿಸುವಾಗ ಸಂವಿಧಾನದ ಆಶಯಗಳಾದ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತು ನಾಗರಿಕ ಹಕ್ಕುಗಳ ಸಂರಕ್ಷಣೆಯನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ. ಈ ಮೂಲಕ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಕಡೆ ಗಮನ ನೀಡಬೇಕಿದೆ. ಮಸೂದೆಯನ್ನು ಸಿದ್ಧಪಡಿಸಿ ಅದನ್ನು ಸ್ಪಷ್ಟ ಬಹುಮತವಿರುವ ಪಕ್ಷಗಳ ರಾಜ್ಯ ಸರ್ಕಾರವು ವಿಧಾನ ಮಂಡಲದಲ್ಲಿ ಅಂಗೀಕರಿಸುವುದು ಸುಲಭ. ಆದರೆ ಈ ಕಾಯ್ದೆಯನ್ನು ಜರಿಗೆ ತರುವುದು ಅಕ್ಷರಶಃ ಕಷ್ಟವಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಯ ಮಹತ್ವದ ಬಗೆಗೆ ಸಾರ್ವಜನಿಕರಲ್ಲಿ ಸದಭಿಪ್ರಾಯ ಮೂಡಿಸಬೇಕಿದೆ. ಇವು ಈಗ ಬಿಜೆಪಿ ನೇತೃತ್ವದ ಎನ್ ಡಿ ಎ ಆಡಳಿತವಿರುವ ರಾಜ್ಯ ಸರ್ಕಾರಗಳ ಮುಂದಿರುವ ಸವಾಲುಗಳು.

ಈ ಏಕರೂಪ ನಾಗರಿಕ ಸಂಹಿತೆಗೆ ಅಲ್ಪಸಂಖ್ಯಾತರು ಮತ್ತು ಕೆಲವು ರಾಜಕೀಯ ಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧ ಎಂದರೆ ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಿದೆ ಎನ್ನುವುದು. ವಿಶೇಷವಾಗಿ ಇಸ್ಲಾಂ ಧರ್ಮದಲ್ಲಿರುವ ಬಹುಪತ್ನಿತ್ವ ಪದ್ಧತಿಗೆ ಧಕ್ಕೆ ಆಗಲಿದೆ. ಅಲ್ಪಸಂಖ್ಯಾತ ಧರ್ಮಗಳಲ್ಲಿ ಆಚರಣೆಯಲ್ಲಿರುವ ಕೆಲವು ನಂಬಿಕೆಗಳನ್ನು ಕಾನೂನಿನ ಮೂಲಕ ನಾಶಪಡಿಸುವ ಯತ್ನ. ಈ ಧರ್ಮಗಳಲ್ಲದೆ ವಿವಾಹವಾಗದೆ ಜೊತೆಯಲ್ಲಿ ಸಹಜೀವನ ನಡೆಸುವುದನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಮುಂತಾದ ಅಂಶಗಳನ್ನು ಉಖಿಸುವ ಮೂಲಕ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಇದು ವಿರುದ್ಧವಾಗಿದೆ ಎನ್ನುವ ವಾದವನ್ನು ಯುಸಿಸಿ ವಿರೋಧಿಗಳು ಮಂಡಿಸುತ್ತಿದ್ದಾರೆ. ಆದರೆ ಈ ಕಾಯ್ದೆ ಜರಿಗೆ ಬಂದರೆ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದೆ.

” ಏಕರೂಪ ನಾಗರಿಕ ಸಂಹಿತೆಗೆ ಅಲ್ಪಸಂಖ್ಯಾತರು ಮತ್ತು ಕೆಲವು ರಾಜಕೀಯ ಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧ ಎಂದರೆ ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಿದೆ ಎನ್ನುವುದು. ವಿಶೇಷವಾಗಿ ಇಸ್ಲಾಂ ಧರ್ಮದಲ್ಲಿರುವ ಬಹುಪತ್ನಿತ್ವ ಪದ್ಧತಿಗೆ ಧಕ್ಕೆ ಆಗಲಿದೆ ಎಂಬುದು.”

 

 

Tags:
error: Content is protected !!