ಡಾ. ಬಸವರಾಜ್ ಇಟ್ನಾಳ
ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ ಕರೆನ್ಸಿಗಳ ಮೂಲಕ ರಫ್ತುಅಮದು ವ್ಯವಹಾರ ಮಾಡುವುದರ ಬಗ್ಗೆ ಬದ್ಧತೆ ಇತ್ಯಾದಿಗಳ ಬಗ್ಗೆ ಹೇಳಿಕೆ ಕೊಡಲಾಯಿತು. ಜೊತೆಗೆ ಭಾರತದ ಆಹಾರ ವೈವಿಧ್ಯತೆಯ ಬಗ್ಗೆ ಒಂದು ವಿವಾದವೂ ನಡೆಯಿತು. ಬ್ರಿಕ್ಸ್ ಸಮ್ಮೇಳನದಲ್ಲಿ ಮಾಂಸಾಹಾರ ಯಾಕಿಲ್ಲ, ಮಾಂಸಾಹಾರ ಭಾರತೀಯ ಅಲ್ಲವೇ ಎಂಬ ಚರ್ಚೆ ನಡೆಯಿತು.
ಆದರೆ ಬ್ರಿಕ್ಸ್ ಏನು, ಯಾಕೆ, ಇದರ ಮಹತ್ವ ಏನು ಎಂಬ ಬಗ್ಗೆ ಚರ್ಚೆ ಅಷ್ಟಾಗಿ ನಡೆಯಲಿಲ್ಲ. ಅಮೆರಿಕಾದ ಎಕಾನಮಿ ಅಷ್ಟೇ ಅಲ್ಲ ಇಡೀ ಜಗತ್ತಿನ ಎಕಾನಮಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿರುವಾಗ ಯಾಕೆ ಬ್ರಿಕ್ಸ್ ಮಹತ್ವ ಹೆಚ್ಚುತ್ತಿದೆ ಎಂಬ ಬಗ್ಗೆ ಚರ್ಚೆ ಅಗತ್ಯ. ಯುದ್ಧ ಈ ಜಗತ್ತಿನ ಅತ್ಯಂತ ದೊಡ್ಡ ಉದ್ಯಮ ಅಂತ ಅನೇಕ ಚಿಂತಕರು ಹೇಳಿದ್ದಾರೆ. ಅದು ನಿಜವೋ ಎಂಬಂತೆ ಅಧುನಿಕ ಜಗತ್ತಿನ ಎಕಾನಮಿಯ ರೂಪುರೇಷೆಗಳನ್ನು ಎರಡನೇ ವಿಶ್ವ ಯುದ್ಧ ರೂಪಿಸಿತು.
ಅಮೆರಿಕ ಮತ್ತು ಸೋವಿಯೆತ್ ರಷ್ಯಾದ ಸಹಾಯದಿಂದ ಜರ್ಮನಿಯ ವಿರುದ್ಧ ಯುದ್ಧ ಗೆದ್ದ ನಂತರದ ದಿನಗಳಲ್ಲಿ ಸ್ಟಾಲಿನ್ ಯುದ್ಧದ ಗೆಲುವಿನ ಬಹುಮಾನವಾಗಿ ತನ್ನ ಪಾಲಿನ ಜರ್ಮನಿಯನ್ನು ಕೇಳುತ್ತಾನೆ, ಅಮೆರಿಕ ತಾನು ಕೊಟ್ಟ ಅರ್ಥಿಕ ಸಹಾಯದ ಪ್ರತಿ-ಲ ಕೇಳುತ್ತದೆ. ಸ್ಟಾಲಿನ್ ಪೂರ್ವ ಜರ್ಮನಿ -ಬರ್ಲಿನ್ ನಗರದ ಮಧ್ಯದಲ್ಲಿ ಗೆರೆ ಎಳೆದು – ಪಡೆಯುತ್ತಾನೆ.
ಅಮೆರಿಕಾದ ಸಾಲ ತೀರಿಸಲು ಪಾಶ್ಚಾತ್ಯ ದೇಶಗಳೆಲ್ಲ ೧೯೪೪ರಲ್ಲಿ ಅಮೆರಿಕಾದ ಬ್ರೆಟನ್ ವುಡ್ಸ್ ಎಂಬಲ್ಲಿ ಸಭೆ ಸೇರಿ, ಐಎಂಎ- ಮತ್ತು ವರ್ಲ್ಡ್ ಬ್ಯಾಂಕ್ ಸ್ಥಾಪನೆ ಮಾಡಿಕೊಂಡು, ಅವುಗಳ ನಿಯಂತ್ರಣದಲ್ಲಿ ಅಮೆರಿಕಕ್ಕೆ ಸಿಂಹ ಪಾಲು ಕೊಡುತ್ತವೆ. ಡಾಲರ್ ಜಗತ್ತಿನ ಪ್ರಾಥಮಿಕ ಕರೆನ್ಸಿ (ಪ್ರೈಮರಿ ಕರೆನ್ಸಿ) ಮಾಡುತ್ತಾರೆ. ಅಷ್ಟೇ ಅಲ್ಲ ಡಾಲರಿಗೆ ಯಾವುದೇ ಗೋಲ್ಡ್ ಸ್ಟಾಂಡರ್ಡ್ ಬೇಕಿಲ್ಲ ಅಂತ ತೀರ್ಮಾನ ಆಗುತ್ತದೆ. ಒಂದು ದೇಶ ಇನ್ನೊಂದು ದೇಶದಿಂದ ಏನನ್ನಾದರೂ ಕೊಳ್ಳಬೇಕಾದರೆ ಡಾಲರ್ ಮೂಲಕವೇ ವ್ಯವಹರಿಸತಕ್ಕದ್ದು ಅಂತ ಒಪ್ಪುತ್ತವೆ. ೧೯೭೪ರಲ್ಲಿ ತೈಲ ಉತ್ಪಾದಕ ಕೊಲ್ಲಿ ದೇಶ ಸೌದಿ ಅರೇಬಿಯಾ ಜೊತೆ ಇಂತಹುದೇ ಒಪ್ಪಂದ ಮಾಡಿಕೊಂಡು ಅದನ್ನೇ ಇತರೆ ಕೊಲ್ಲಿ ರಾಷ್ಟ್ರಗಳು ಅನುಸರಿಸಿ ಇಡೀ ಜಗತ್ತಿನ ಅರ್ಥ ವ್ಯವಸ್ಥೆಯ ಕೇಂದ್ರ ಡಾಲರ್ ಆಯಿತು.
ಅಮೆರಿಕ ಜಗತ್ತಿನ ದೊಡ್ಡಣ್ಣ ಆಯಿತು. ನಾವು ತೈಲ ಖರೀದಿಸಬೇಕೆಂದರೆ ಮೊದಲು ಅಮೆರಿಕದಿಂದ ಡಾಲರ್ ಖರೀದಿಸಬೇಕು, ಪಕ್ಕದ ದೇಶದಿಂದ ಸಕ್ಕರೆ ಖರೀದಿ ಮಾಡಬೇಕು ಅಂದರೆ ಮೊದಲು ಡಾಲರ್ ಖರೀದಿ ಮಾಡಬೇಕು. ಮತ್ತು ಡಾಲರ್ ಬೆಲೆ, ನೀವು ಅಮೆರಿಕ ಜೊತೆ ಎಷ್ಟು , ಏನು ವ್ಯವಹಾರ ಮಾಡಿದ್ದೀರಿ ಅನ್ನುವುದರ ಮೇಲೆ ತೀರ್ಮಾನ ಆಗುತ್ತದೆ. ಮತ್ತೆ ಅಮೆರಿಕ ತನಗೆ ತೋಚಿದಷ್ಟು ಡಾಲರುಗಳನ್ನು ಬೇಕಾಬಿಟ್ಟಿ ಪ್ರಿಂಟ್ ಮಾಡಬಹುದು -ಗೋಲ್ಡ್ ಸ್ಟಾಂಡರ್ಡ್ ಇಲ್ಲ !
ಹೀಗಾಗಿ ಅಮೆರಿಕ ಇಡೀ ಜಗತ್ತನ್ನು ತನಗೆ ತೋಚಿದಂತೆ ಆಟ ಆಡಿಸುವುದು ಸಲೀಸಾಗುತ್ತದೆ. ಆದರೆ ಸ್ಟಾಲಿನ್ ಮತ್ತು ನಂತರದ ರಷಿಯ ಅಮೆರಿಕಾದ ಅತಿ ದೊಡ್ಡ ತಲೆ ನೋವು. ೧೯೫೫ ರ ವಾರ್‌ಸಾ ಪ್ಯಾಕ್ಟ್ ಮಾಡಿಕೊಂಡ ಸೋವಿಯೆತ್ ರಷ್ಯಾ ಅನೇಕ ದೇಶಗಳನ್ನು ತನ್ನೊಡನೆ ಸೇರಿಸಿಕೊಂಡು ಅಮೆರಿಕಾದ ನಿದ್ದೆಗೆಡಿಸಿ ಇಡೀ ಜಗತ್ತು ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ ದೇಶಗಳಾಗಿ ವಿಭಜನೆಗೊಂಡು ಶೀತಲ ಯುದ್ಧವೇ ಶುರುವಾಗುತ್ತದೆ.
೧೯೮೫ರಲ್ಲಿ ರಷ್ಯಾದ ಅಧ್ಯಕ್ಷರಾಗಿದ್ದ ಗೋರ್ಬಚೆವ್ ಪೆರೆಸ್ಟ್ರಾಯಿಕ ಮತ್ತು ಗ್ಲಾಸ್ ನಾಸ್ಟ ಎಂಬ ಘೋಷಣೆಯೊಂದಿಗೆ ಸೋವಿಯೆತ್ ರಷ್ಯಾ ಶೀತಲ ಯುದ್ಧವನ್ನು ಅಂತ್ಯಗೊಳಿಸಿ ೧೯೮೯ರ ಹೊತ್ತಿಗೆ ಇದು ಬರ್ಲಿನ್ ಗೋಡೆಯನ್ನು ಒಡೆಯಲು ಪ್ರೇರೇಪಿಸಿ, ಶೀತಲ ಯುದ್ಧ ಮುಕ್ತಾಯಗೊಳ್ಳುತ್ತದೆ. ಆಗ ಅಮೇರಿಕ ಮಾತ್ರವೇ ಜಗತ್ತಿನ ದೊಡ್ಡಣ್ಣ ಎಂಬ ಕಲ್ಪನೆ ಹುಟ್ಟುತ್ತದೆ. ಒಂದು ದಶಕದ ಅನಿಶ್ಚಿತತೆಯ ನಂತರ ೨೦೦೧ರಲ್ಲಿ ಗೋಲ್ಡ್‌ಮನ್ ಸ್ಯಾಚಸ್ ಸಂಸ್ಥೆಯ ತಜ್ಞ ಜಿಮ್ ಓ’ನಿಲ್‌ಒಂದು ಪ್ರಬಂಧ ಬಿಲ್ಡಿಂಗ್ ಬೆಟರ್ ಗ್ಲೋಬಲ್ ಎಕನಾಮಿಕ್ ಬ್ರಿಕ್ಸ್ ಎಂಬ ಶೀರ್ಷಿಕೆಯಲ್ಲಿ ಬರೆಯುತ್ತಾನೆ. ಮುಂದಿನ ದಿನಗಳಲ್ಲಿ ಬ್ರೆಜಿಲ, ರಷ್ಯಾ , ಇಂಡಿಯಾ ಮತ್ತು ಚೀನಾ ದೇಶಗಳ ಎಕಾನಮಿ ಅಗಾಧವಾಗಿ ಬೆಳೆಯಲಿದ್ದು, ಸದ್ಯದ ಅಂತರ ರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಾದ ವರ್ಲ್ಡ್ ಬ್ಯಾಂಕ್, ಐಎಂಎ- ಇತ್ಯಾದಿಗಳು ಈ ದೇಶಗಳ ಬೆಳವಣಿಗೆಗೆ ಅನುಗುಣವಾಗಿ ಈ ದೇಶಗಳಿಗೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಅಂತ ವಾದಿಸುತ್ತಾನೆ.
ಇದು ಅನೇಕ ಆರ್ಥಿಕ ತಜ್ಞರಲ್ಲಿ, ಜಗತಿಕ ನಾಯಕರಲ್ಲಿ ಒಂದು ಚಿಂತನೆಯನ್ನು ಶುರುಮಾಡುತ್ತದೆ. ೨೦೦೬ರಲ್ಲಿ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಎ೮ ದೇಶಗಳ ಶೃಂಗ ಸಭೆ ನಡೆದಾಗ ಅದರಲ್ಲಿ ಭಾಗವಹಿಸಿದ ಭಾರತದ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಮತ್ತಿತರೇ ಬ್ರಿಕ್ ನಾಯಕರು ಸೇರಿ ಈ ಸಂಘಟನೆಯ ರೂಪುರೇಷೆಗಳನ್ನು ಚರ್ಚಿಸುತ್ತಾರೆ ಮತ್ತು ಒಂದು ಸರ್ವ ಸಮ್ಮತದ ತೀರ್ಮಾನಕ್ಕೆ ಬರುತ್ತಾರೆ.
ಬಹಳ ಮುಖ್ಯವಾಗಿ ಬ್ರಿಕ್ ಅನಿವಾರ್ಯ ಗೊಳಿಸಿದ್ದು ೨೦೦೮ರ ಜಾಗತಿಕ ಅರ್ಥಿಕ ಹಿಂಜರಿತ. ಇದು ಕೇವಲ ಒಂದು ದೇಶ ಮಾತ್ರ ಜಗತಿಕ ಅರ್ಥ ವ್ಯವಸ್ಥೆಯ ಕೇಂದ್ರವಾಗಿದ್ದರ -ಲ ಅಂತ ಅಂದಿನ ತಜ್ಞರಾದ ಡಾ. ಮನ್ ಮೋಹನ್ ಸಿಂಗ್, ರಘುರಾಮ್ ರಾಜನ್ ಮತ್ತಿತರೇ ದೇಶಗಳ ತಜ್ಞರು ಒಮ್ಮತಕ್ಕೆ ಬರುತ್ತಾರೆ. ಕೂಡಲೇ ಬ್ರಿಕ್ ಒಕ್ಕೂಟವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಾರೆ.
ಅಧಿಕೃತವಾಗಿ ಘೋಷಣೆಯಾದ ಬ್ರಿಕ್‌ಒಕ್ಕೂಟದ ಮೊದಲ ಸಭೆ ೨೦೦೯ರಲ್ಲಿ ರಷ್ಯಾದಲ್ಲಿ ನಡೆಯುತ್ತದೆ. ಇದರಲ್ಲಿ ಭಾಗವಹಿಸಿದ ಸಿಂಗ್ ಹೇಳುತ್ತಾರೆ ಜಾಗತಿಕ ಆರ್ಥಿಕ ಪಾರುಪತ್ಯವನ್ನು ಪಶ್ಚಿಮದ ದೇಶಗಳು ನಡೆಸಿಕೊಂಡು ಇನ್ನಿಲ್ಲದ ಜಗತಿಕ ಆರ್ಥಿಕ ಕುಸಿತ ಕಾಣುತ್ತಿದ್ದೇವೆ, ಆದ್ದರಿಂದ ಇನ್ನು ಮೇಲಿನ ಎ ಜಗತಿಕ ತೀರ್ಮಾನಗಳಿಗೆ ಬ್ರಿಕ್‌ಒಕ್ಕೂಟ್ಟದ ಸಹಮತಿ ಬೇಕೇ ಬೇಕು ಅಂತ. ಜಗತಿಕ ಆಡಳಿತದಲ್ಲಿ ತಮ್ಮ ದನಿಯನ್ನು ಮೊಟ್ಟ ಮೊದಲ ಸಭೆಯ ಬ್ರಿಕ್‌ಒಕ್ಕೂಟ ಎತ್ತಿ ಡಾಲರ್ ಕೇಂದ್ರಿತ ಎಕಾನಾಮಿಗೆ ಸವಾಲು ಎಸೆಯುತ್ತದೆ. ಆದರೆ ಡಾಲರ್ ಗೆ ಪರ್ಯಾಯ ಇನ್ನೊಂದು ಕರೆನ್ಸಿ ಬೇಕು ಅಂತ ಅಂದೂ ಹೇಳಿಲ್ಲ, ಇಂದೂ ಹೇಳುತ್ತಿಲ್ಲ. ಆದರೆ ಜಗತ್ತಿನ ರಾಷ್ಟ್ರಗಳು ಡಾಲರ್ ಮೂಲಕವೇ ವ್ಯವಹರಿಸತಕ್ಕದ್ದು ಎಂಬ ಕರಾರನ್ನು ಒಪ್ಪುವುದಿಲ್ಲ. ಅಮೆರಿಕಾದ ತಪ್ಪುಗಳಿಗೆ ಜಗತ್ತು ದಂಡ ಏಕೆ ಕಟ್ಟಬೇಕು ಅಂತಲೇ ಈ ಡಾಲರ್ ಪಾರುಪತ್ಯವನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಪ್ರತಿನಿಽಸುವ ಬ್ರಿಕ್ ಒಕ್ಕೂಟದ ಪ್ರಯತ್ನಗಳು ಶುರುವಾಗುತ್ತವೆ.
೨೦೧೧ರಲ್ಲಿ ಚೀನಾದಲ್ಲಿ ನಡೆದ ಸಭೆಯ ಹೊತ್ತಿಗೆ ದಕ್ಷಿಣ ಆಫ್ರಿಕಾ ಕೂಡ ಸೇರಿಕೊಂಡು ಬ್ರಿಕ್ ಒಕ್ಕೂಟ ಬ್ರಿಕ್ಸ್ ಆಗುತ್ತದೆ. ೨೦೧೨ರಲ್ಲಿ ದೆಹಲಿಯಲ್ಲಿ ನಡೆದ ಶೃಂಗ ಸಭೆಯಲ್ಲಿ ಡಾ. ಸಿಂಗ್ ಬ್ರಿಕ್ಸ್ ದೇಶಗಳೇ ನಡೆಸುವ ಅಂತರರಾಷ್ಟ್ರೀಯ ಬ್ಯಾಂಕ್ ಸ್ಥಾಪನೆಯ ಪ್ರಸ್ತಾವನೆ ಇಟ್ಟು, ಅದಕ್ಕೆ ಬ್ರಿಕ್ಸ್ ಡೆವಲೆಪ್‌ಮೆಂಟ್ ಬ್ಯಾಂಕ್ ಅಂತ ಹೆಸರಿಡುತ್ತಾರೆ. ಹಾಗೆಯೇ ಡಾಲರ್ ತಿಕ್ಕಲುತನವನ್ನು ಎದುರಿಸಲು ಬ್ರಿಕ್ಸ್ ದೇಶಗಳಿಗೋಸ್ಕರ ಕಂಟಿಜೆಂಟ್ ರಿಸರ್ವ್ ಅರೆಂಜ್‌ಮೆಂಟ್ ಅಂತ ಒಂದು ವ್ಯವಸ್ಥೆಯ ಚರ್ಚೆ ಶುರುಮಾಡುತ್ತಾರೆ. ೨೦೧೪ರಲ್ಲಿ ಬ್ರೆಜಿಲ್ ದೇಶದಲ್ಲಿ ನಡೆದ ಸಭೆಯಲ್ಲಿ ಇದನ್ನೆ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ (ಎನ್‌ಡಿಬಿ) ಅಂತ ಕೆರೆದು ಸ್ಥಾಪನೆ ಮಾಡುತ್ತಾರೆ ಹಾಗೆಯೇ ನೂರು ಬಿಲಿಯನ್ ಡಾಲರುಗಳ ಕಂಟಿಜೆಂಟ್ ರಿಸರ್ವ್ ಅರೆಂಜ್‌ಮೆಂಟ್ ಕೂಡ ರಚನೆಯಾಗುತ್ತದೆ.
೨೦೨೩ರ ಜೋಹಾನ್ಸ್ ಬರ್ಗ್ ಸಭೆಯ ಹೊತ್ತಿಗೆ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೆಬಿಯಿಯ ಮತ್ತು ಯುಎಇ ಸೇರಿಕೊಳ್ಳುತ್ತವೆ. ೨೦೨೫ರಲ್ಲಿ ಇಂಡೋನೇಷಿಯಾ ಸೇರಿಕೊಳ್ಳುತ್ತದೆ. ೨೦೨೪ರಲ್ಲಿ ಪಾರ್ಟನ್ ಕ್ರಂಟ್ರಿ ವ್ಯವಸ್ಥೆ ಶುರು ಮಾಡಿ ಬೆಲಾರ್, ಬೊಲುವಿಯಾ, ಕ್ಯೂಬಾ, ಕಜಕಿಸ್ತಾನ್,ಮಲೇಷಿಯಾ, ನೈಜೀರಿಯಾ, ಥೈಲ್ಯಾಂಡ್, ಉಗಾಂಡ ಮತ್ತು ಉಜ್‌ಬೇಕಿಸ್ತಾನ್ ಸೇರಿಸಿ ಕೊಂಡು ಬ್ರಿಕ್ಸ್ ಒಕ್ಕೂಟ ಈಗ ಒಂದು ಬಲಾಢ್ಯ ಶಕ್ತಿ. ಇದು ಜಗತ್ತಿನ ೪೯.೫% ಜನಸಂಖ್ಯೆ, ಜಗತ್ತಿನ ೪೦% ಜಿಡಿಪಿ ಮತ್ತು ಜಗತ್ತಿನ ೨೬% ವಹಿವಾಟಿನ್ನು ಪ್ರತಿನಿಧಿಸುತ್ತದೆ.
ಅಮೆರಿಕ ಏಕಮುಖವಾಗಿ -ಇರಾನ್ ಯುದ್ಧದಂತಹ – ತೆಗೆದುಕೊಳ್ಳುವ ತೀರ್ಮಾನಗಳಿಂದ ಉಂಟಾಗುವ ಕಷ್ಟ ನಷ್ಟಗಳನ್ನು ನೀಗಿಸಿಕೊಳ್ಳಲು ಸದಸ್ಯ ರಾಷ್ಟ್ರಗಳು ಯಾವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು ? ಹಾಗೆಯೇ ಬ್ರಿಕ್ಸ್ ಒಕ್ಕೂಟದ ದೇಶಗಳ ಅಭಿವೃದ್ಧಿಗೆ ಯಾವ ಪರಸ್ಪರ ಸಹಕಾರ ಮತ್ತು ಸಹಾಯ ವ್ಯವಸ್ಥೆ ಮಾಡಿಕೊಳ್ಳಬೇಕು ? ಬ್ರಿಕ್ಸ್ ಒಕ್ಕೂಟದ ದೇಶಗಳು ತಮ್ಮ ತಮ್ಮ ವ್ಯವಹಾರ ಮಾಡಬೇಕಾದಲ್ಲಿ ಡಾಲರ್ ಬದಲಾಗಿ ತಮ್ಮ ತಮ್ಮ ಕರೆನ್ಸಿಗಳ ವ್ಯವಹರಿಸಲು ಮುಂದಾಗಬೇಕು ಮತ್ತು ಎನ್‌ಡಿಬಿಯನ್ನು ಇನ್ನೂ ಹೆಚ್ಚು ಬಲಪಡಿಸುವುದು, ವರ್ಲ್ಡ್ ಬ್ಯಾಂಕ್‌ಗೆ ಪರ್ಯಾಯ ಆಗುವಂತೆ ನೋಡಿಕೊಳ್ಳುವುದಾಗಿದೆ.
” ಒಟ್ಟಾರೆಯಾಗಿ ಅಮೆರಿಕ-ಸೋವಿಯೆತ್ ರಷ್ಯಾ ಜುಗಲ್ ಬಂದಿ ಮುಗಿದು ಅಮೆರಿಕಾದ ಏಕ ವ್ಯಕ್ತಿ ಪ್ರದರ್ಶನವಾಗಿ ಪರಿವರ್ತನೆಗೊಂಡು ಅದೂ ಕೂಡ ಮುಗಿದಿದೆ. ಈಗ ಬ್ರಿಕ್ಸ್ ಬಹು ತಾರಾಗಣದ ಸಿನಿಮಾ ಶುರುವಾಗಿದೆ. ಮುಂದೇನಾಗುತ್ತದೋ ಕಾದು ನೋಡೋಣ.”



