Mysore
22
overcast clouds

Social Media

ಭಾನುವಾರ, 20 ಸೆಪ್ಟೆಂಬರ್ 2026
Light
Dark

ಕೆಡ್ಲಿ ಬಾಳ್ಲಿ ನಮ್‌ ಬದ್ಕ್‌ ನಾಮ್‌ ನೋಡ್ಬೇಕು ಕಣ ಕುಸೋ 

ಚಂದ್ರಶೇಖರ್ ಮೂರ್ತಿ ಕೆ.ಎಸ್.

ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ ಹುಡುಗರಿಗೇ ಗೊತ್ತು. ಜೀವ್ನನೇ ಸಾಕಾಗೋಗದೆ ಎಂದು ಮನದಲ್ಲಿ ಬೇಸರದಿಂದ ಗೊಣಗುತ್ತಾ ವರುಣಾ ಬಸ್ ನಿಲ್ದಾಣದಲ್ಲಿ ನಿಂತಿದ್ದ ನನಗೆ ಕಂಡಿದ್ದು ಇಳಿ ವಯಸ್ಸಿನಲ್ಲಿಯೂ ಉತ್ಸಾಹಭರಿತ ಬದುಕು ಸಾಗಿಸುತ್ತಿರುವ ಬೆನ್ನು ಬಾಗಿದ ೬೫ ವರ್ಷದ ಮಹದೇವಮ್ಮ ಅಜ್ಜಿ.

ಮಣ್ಣೆತ್ತಿನ ಒಲೆಯ ಹೊಗೆಗೋ ದಶಕಗಳ ಕಾಲ ಅಜ್ಜಿ ಮಹದೇವಮ್ಮ ಬದುಕಿನ ಜೊತೆ ಸವೆದ ಹಾದಿಗೋ ಮುದುಡಿದಂತೆ ಸಂಪೂರ್ಣ ಕಪ್ಪು ಮಸಿಯಿಂದ ಆವೃತವಾಗಿ ಅಲ್ಲಲ್ಲಿ ಕಿಂಡಿ ಬಿಟ್ಟ ಒಣಗಿರೋ ಪೆಟ್ಟಿ ಅಂಗಡಿ. ಅದರ ಮುಂದೆಯೇ ಬೆನ್ನು ಬಾಗಿ ಮಣ್ಣೆತ್ತಿನೊಲೆಯಲ್ಲಿ ಉರಿಯುತ್ತಿದ್ದ ಸೌದೆಯ ಉರಿಯನ್ನ ಉರುಬಿ, ಪಾತ್ರೆಯ ತಳ ಆಡಿಸುತ್ತಿದ್ದ ಅಜ್ಜಿ. ಆ ಸೌದೆಯ ಬೆಂಕಿಯು ಕೇವಲ ಅಡುಗೆ ಮಾಡುವ ಬೆಂಕಿಯಾಗಿರಲಿಲ್ಲ. ಅದು ನಾಲ್ಕು ದಶಕಗಳಿಂದ ಮಹಾದೇವಮ್ಮ ಅಜ್ಜಿಯ ಬದುಕಿನ ಆತ್ಮವಿಶ್ವಾಸವನ್ನು ಹೊತ್ತಿಸುತ್ತಿರುವ ಪರಿಶ್ರಮದ ಜ್ವಾಲೆಯಾಗಿತ್ತು.

ಸೌದೆ ಹೊಗೆ ಕಣ್ಣಿಗೆ ತುಂಬಿ ಕಣ್ಣೀರಾದಾಗ ಸೆರಗಲ್ಲಿ ಕಣ್ಣೀರ ಒರೆಸುತ್ತಿದ್ದ ಅಜ್ಜಿಗೆ ‘ಅಲ್ಲಾಕಣ ಅಜ್ಜಿ ಈ ವಯಸ್ಸಿನಲ್ಲೂ ಇಷ್ಟು ಕಷ್ಟ ಪಡಬೇಕಾ? ಯಾಕೆ ಮಕ್ಳು ಮರಿ ಇಲ್ವಾ? ಮಕ್ಳು ಮೊಮ್ಮಕ್ಕಳ ಜೊತೆ ಚೆನ್ನಾಗಿ ಇರಬಹುದಲ್ವಾ’ ಎಂದು ಕೇಳಿದ ನನಗೆ ‘ಮಾಡೋರ್ ಯಾರಪ್ಪ? ನನ್ಗ ಗಂಡೈಕ ಇದ್ದಾವ, ಮಾಡ್ಕೊಟ್ಟಾವ. ಮಗ್ಳು ಮನೆ ಕೆಲ್ಸಕ ಹೊಯ್ತಳ, ನಾನಿಲ್ಲಿ ಜೀತ ಮಾಡ್ತಿನಿ, ಗಂಡ ಪ್ಯಾಕ್ಟ್ರಿಗ್ ಹೊಯ್ತನ, ಮೊಮ್ಮಗ ತಿರಗ್ತನ.., ಯಾರಪ್ಪ ಇಟ್ಟಾಕ್ಕೋರು ನಂಗಾ..’ ಎಂದು ನನ್ನ ಪ್ರಶ್ನೆಗೆ ಉತ್ರ ಬಿಸಾಕಿದ್ಲು ಅರವತ್ತೈದು ವರ್ಷದ ವರುಣದ ಮಹದೇವಮ್ಮ. ‘ಹಾಗಿದ್ರೆ ಯಾರು ಇಲ್ವಾ ಅಜ್ಜಿ ನಿನ್ನ ನೋಡ್ಕೋಳೋಕೆ’ ಅಂದ್ರೆ ‘ಎಲ್ಲಾ ಅವ್ರೆ ಕಣಪ್ಪಾ ಮಕ್ಳು, ಮೊಮ್ಮಕ್ಕಳು ಎಲ್ಲಾ ಅವ್ರೆ ಹಂಗಂತ ಅವ್ರ್ ಅಟ್ಟೀಗ್ ಹೋಗ್ಲಾ ? ಅವ್ವೈ ಥೂ.. ಇನ್ನೊಬ್ರಟ್ಗಾ  ನಾ ಹೋದನಾ, ಅಂಗ್ ಹೋದ್ರಾ ಅವ್ರ್ ಕಾಲಲ್ ತೋರಿಸಿದ್ನ ಕೈಯಲ್ ಮಾಡ್ಬೇಕೈತ. ಕೆಡ್ಲಿ ಬಾಳ್ಲಿ ನಮ್ ಬದ್ಕ್ ನಾಮ್ ನೋಡ್ಬೇಕು ಕಣಾ ಕುಸೋ’ ಅನ್ನೋ ಅಜ್ಜಿಯ ಆ ಭರವಸೆಯ ಮಾತು, ಆತ್ಮಾಭಿಮಾನ, ಸ್ವಾಭಿಮಾನದ ಮಾತು ಎಂತವರನ್ನೂ ಅರೆಕ್ಷಣ ನಿಬ್ಬೆರಗಣ್ಣಿಂದ ಮೂಕರನ್ನಾಗಿಸದೇ ಇರದು.

ಗಟ್ಟಿಗಿತ್ತಿ ಮಹಾದೇವಮ್ಮರ ಕಾಯಕ ಆರಂಭವಾಗುವುದು ಊರೇ ನೆಮ್ಮದಿಯಿಂದ ಮಲಗಿರುವ ಸಿಹಿ ನಿದ್ರೆಯ ಬೆಳಿಗ್ಗೆ ೪ ಗಂಟೆಗೆ. ‘ಯಾಕ್ ಅಜ್ಜಿ ನಿಂಗ್ ಗ್ಯಾಸ್ ಕೊಟ್ಟಿಲ್ವಾ? ಸೌದೆ ಒಲೆಯಲ್ಲೇ ಹೊಗೆ ಕುಡ್ಕೊಂಡು ಅಡ್ಗೆ ಮಾಡ್ತಿಯಲ್ಲ’ ಎಂದು ಮಾತಿಗೆ ಇನ್ನೊಂದಷ್ಟು ಮಾತು ಸೇರಿಸಿದರೆ ‘ಗ್ಯಾಸೂಪಾಸು ನಂಗ್ ಅಚ್ಚಕ್ ಬರಲ್ಲ ಕಣಪ್ಪ, ಅದ್ಕೆಯಾ ನಾನು ಈ ಸೌದೆ ಒಲೆಯಲ್ಲೇ ಅಡ್ಗ ಮಾಡ್ತಿನಿ. ಆರ್ಕಾಸು ನಾಲ್ಕಾಸು ಆಯ್ತದೆ ಬದ್ಕ್ ಮಾಡ್ತಿನಿ. ಇದೇ ಹೋಟ್ಲ್ ಮಾಡ್ಕಂಡ್ ಮಕ್ಳ್ ಮದ್ವ ಮಾಡಿ, ಮೊಮ್ಮಕ್ಳನ್ನ ಓದ್ಸೀನಿ. ಈ ಹೋಟ್ಲು ಮಾಡಕ್ ಮುಂಚ ಗಂಧದಕಡ್ಡಿ ಊದ್ಬತ್ತಿ ಉಜ್ತಿದ್ದಿ. ಅಮ್ಯಾಕ್ ಊರ್ನೋರೆಲ್ಲಾ ಸೇರಿ ಊದ್ಬತ್ತಿ ಉಜ್ಜಿ ಹೈಕ್ಳಗ್ ಎಡವಟ್ಮಾಬುಟ್ಟೆ  ಅಂತ ಹೋಟ್ಲ್ ಇಟ್ಕಳ್ಕ ಮಾಡ್ಕೊಟ್ರು. ಈ ನೆರಕ ಕಟ್ಕಂಡ್, ಬಿಸ್ಲು ಮಳೆ ನೆನ್ಕಂಡ್ ಕಷ್ಟ ನೀಯ್ಸಿನಿ. ಕಷ್ಟ ಅಂತ ನೆರಮನೆಗೆ ಹೋದ್ರ ಚಂದ್ವಾ…

ಯಾನ ಗೌರ್ಮೆಂಟ್ ರಜಾ ದಿನ್ಗಳಲ್ಲಿ ಒಂಚೂರ್ ಯಾಪಾರ ಕಮ್ಮಿ ಅಸ್ಟೆಯಾ. ಅದ್ಬುಟ್ರಾ ನನ್ ಪಾಡ್ ನಾನ್ ಮಾಡ್ತಿನಿ ಅಸ್ಟೆಯಾ ಕಣಪ್ಪಾ ಎಂದು ಇಡ್ಲಿ ಕೇಳಿದ್ದ ಪರ್ಮನೆಂಟ್ ಗ್ರಾಹಕನಿಗೆ ಚಟ್ನಿ ಒಟ್ಗೆ ಹಾಕ್ಲ್ಯಾ ಹೆಂಗ್ಯಾ ಯೋಳು’ ಎಂದು ನೂಲಿನುಂಡೆಯತ್ತ ಕೈ ಇಟ್ಟಳು ಅಜ್ಜಿ… ಇದು ನಾಲ್ಕು ದಶಕಗಳ ಪರಿಶ್ರಮ, ಸ್ವಾಭಿಮಾನ ಮತ್ತು ಬದುಕಿನ ಹೋರಾಟದ ಮಹದೇವಮ್ಮರ ಕಥೆ. ಅದು ಏನೋ ಕೆಲ್ಸ ಸಿಕ್ಕಿಲ್ಲ, ಪರೀಕ್ಷೆ ಬರೆಯೋಕೆ ಆಗ್ಲಿಲ್ಲ, ಇನ್ನು ಏನೋ ಅವಮಾನ ಆಗ್ಹೋಯ್ತು, ಯಾರೋ ಅದೇನೋ ಅಂದುಬಿಟ್ಟರು ಅಂತ ಜೀವ ಬಿಡುವ ಅದೆಷ್ಟೋ ಆತುರದ ಅವಿವೇಕಿತನದ ಜೀವಗಳಿಗೆ, ನನಗೆ ಎಲ್ಲ ಇದ್ದರೂ ಯಾರ ಹಂಗೂ ಬೇಡ. ನನ್ನ ಬದುಕನ್ನು ನಾನು ಸಾಗಿಸುತ್ತೇನೆ ಎಂದು ಸ್ವಾಭಿಮಾನದಿಂದ ಆತ್ಮಾಭಿಮಾನದಲ್ಲಿ ಬದುಕು ಸಾಗಿಸ್ತಿರೋ ಈ ಹಿರಿಜೀವ ಮಾದರಿ ಮತ್ತು ಆದರ್ಶ!

” ಇದು ವರುಣ ಮಹದೇವಮ್ಮನವರ ನಾಲ್ಕು ದಶಕಗಳ ಪರಿಶ್ರಮ, ಸ್ವಾಭಿಮಾನ ಮತ್ತು ಬದುಕಿನ ಹೋರಾಟದ ಕಥೆ” 

 

 

 

Tags:
error: Content is protected !!