Mysore
20
clear sky

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ಚುನಾವಣಾ ಆಯೋಗದ ಬಿಕ್ಕಟ್ಟು ಬಗೆಹರಿಯುವುದು ಹೇಗೆ?

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ, ನಿರಂಕುಶ ಅಧಿಕಾರ ಚಲಾವಣೆ ಇಂದು ಹಾದಿ-ಬೀದಿ ರಂಪವಾಗಿದೆ. ಆಯೋಗದೊಳಗೇ ಬಿಕ್ಕಟ್ಟು, ಮುಖ್ಯ ಚುನಾವಣಾ ಕಮಿಷನರ್ ಮತ್ತು ಇತರೆ ಇಬ್ಬರು ಕಮಿಷನರ್‌ಗಳ ನಡುವೆ ಭಿನ್ನಾಭಿಪ್ರಾಯ, ಒಮ್ಮತ ಮೂಡದ ನಿರ್ಧಾರ, ಹಲವು ಸಂದರ್ಭಗಳಲ್ಲಿ ಸಹದ್ಯೋಗಿ ಕಮಿಷನರ್‌ಗಳನ್ನು ಕಡೆಗಣಿಸಿ ಮುಖ್ಯ ಚುನಾವಣಾ ಕಮಿಷನರದ್ದೇ ನಿರಂಕುಶ ನಡೆಯ ತೀರ್ಮಾನ ಈಗ ಪ್ರಜಪ್ರಭುತ್ವದ ಅಡಿಗದ ಆಯೋಗದ ಪಾವಿತ್ರ್ಯವನ್ನೇ ಶಂಕಿಸುವಂತಾಗಿದೆ.

ಹತ್ತು ವರ್ಷಗಳಿಗೊಮ್ಮೆ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮುಖ್ಯ ಚುನಾವಣಾ ಕಮಿಷನರ್ ಕೈಗೊಂಡಿರುವ ಏಕಪಕ್ಷೀಯ ತೀರ್ಮಾನದಿಂದ ಈವರೆಗೆ ನಡೆದಿರುವ ಹಲವು ರಾಜ್ಯಗಳ ಪರಿಷ್ಕರಣೆ ಕಾರ್ಯದಲ್ಲಿ ೧೩ ಕೋಟಿ ಮತದಾರರು ತಮಗಿದ್ದ ಮತದಾನದ ಹಕ್ಕನ್ನು ಕಳೆದುಕೊಂಡಿರುವುದು ಹತ್ತಾರು ಅನುಮಾನಗಳಿಗೆ ಎಡೆಕೊಟ್ಟಿದೆ. ಈ ವಿಚಾರದಲ್ಲಿ ಮುಖ್ಯ ಚುನಾವಣಾ ಕಮಿಷನರ್ ಮತ್ತು ಇತರೆ ಇಬ್ಬರು ಕಮಿಷನರ್‌ಗಳ ನಡುವೆ ಹೊಂದಾಣಿಕೆ ಇಲ್ಲದೆ ನಡೆದಿರುವ ಗೊಂದಲಕಾರಿ ಪರಿಷ್ಕರಣೆ ಕಾರ್ಯ ದೇಶದ ಮತದಾರರಲ್ಲಿ ತಲ್ಲಣ ಉಂಟು ಮಾಡಿದೆ.

ಪತ್ರಿಕಾ ರಂಗದಲ್ಲಿ ತನಿಖಾ ವರದಿ ಎನ್ನುವುದು ಓದುಗರ ಮನಸ್ಸಿನಿಂದ ಮರೆಯಾಗಿ ಎರಡು ಮೂರು ದಶಕಗಳೇ ಆಗಿದ್ದ ಈ ಸಂದರ್ಭದಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಆಂಗ್ಲ ದಿನಪತ್ರಿಕೆ ಕಳೆದ ವಾರ ಬಯಲಿಗೆ ತಂದ ಚುನಾವಣಾ ಆಯೋಗದ ಅಂತರಿಕ ಬಿಕ್ಕಟ್ಟಿನ ಸುದೀರ್ಘವಾದ ವರದಿ ಪತ್ರಿಕೆಯೊಂದು ತನ್ನ ತನಿಖಾ ವರದಿ ಜೀವಂತವಾಗಿರುವ ಸಂದೇಶ ನೀಡಿದೆ. ಸರ್ಕಾರ ಮತ್ತು ಸಂವಿಧಾನಬದ್ಧವಾಗಿ ರಚನೆಗೊಂಡಿರುವ ಸ್ವತಂತ್ರ ಸಂಸ್ಥೆಗಳಲ್ಲಿನ ಸ್ವೇಚ್ಛಾಚಾರದ ಆಡಳಿತ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವುದನ್ನು ಈ ತನಿಖಾ ವರದಿ ಬಹಿರಂಗಗೊಳಿಸಿರುವುದರಿಂದ ಚುನಾವಣಾ ಆಯೋಗ ಮಾತ್ರವಲ್ಲ ಈ ಅಧ್ವಾನಗಳಿಗೆಲ್ಲ ಪರೋಕ್ಷವಾಗಿ ಕಾರಣ ಎನ್ನಲಾದ ಕೇಂದ್ರ ಸರ್ಕಾರದ ಷಡ್ಯಂತರವು ಬಹಿರಂಗಗೊಂಡಂತಾಗಿದೆ. ಚುನಾವಣಾ ಆಯೋಗದಲ್ಲಿನ ಒಮ್ಮತವಲ್ಲದ ಏಕಪಕ್ಷೀಯ ನಿರ್ಧಾರದಿಂದ ದೇಶದ ಮತದಾರರ ನಂಬಿಕೆಗೆ ಈಗ ಮೋಸ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಂತಾಗಿದೆ.

ಚುನಾವಣೆಯ ಪ್ರಕ್ರಿಯೆಯಲ್ಲಿ ದೇಶದ ಪ್ರತಿಯೊಬ್ಬ ಮತದಾರರನ್ನೂ ಒಳಗೊಳ್ಳುವ ಮೂಲಕ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಚುನಾವಣಾ ಆಯೋಗ ಕೇಂದ್ರ ಸರ್ಕಾರವನ್ನು ಮೆಚ್ಚಿಸುವಂತೆ ಬೇಡವಾದ ಮತದಾರರ ಹೆಸರನ್ನು ಕಿತ್ತುಹಾಕುವುದೇ ಮತದಾರರ ಪಟ್ಟಿಯ ಪರಿಷ್ಕರಣೆ ಎಂದು ಭಾವಿಸಿದಂತಿದೆ. ಈ ಮತದಾರರ ಪಟ್ಟಿಯ ಪರಿಷ್ಕರಣೆ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗಳಿಗೆ ಮತದಾನ ನಡೆದಿದೆ. ಇದಕ್ಕೂ ಮುನ್ನ ನಡೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎನ್ನುವ ದೂರುಗಳು ಎಲ್ಲಡೆ ಬಂದಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಮತದಾನದ ಕಳ್ಳತನವಾಗುತ್ತಿದೆ (ವೋಟ್ ಚೋರಿ) ಎಂದು ದೇಶದುದ್ದಕ್ಕೂ ಹೇಳಿಕೊಂಡು ಬಂದದ್ದನ್ನು ಹಲವರು ಸಂಶಯದಿಂದ ನೋಡುವ ಮೂಲಕ ಅವರನ್ನು ವೈಯಕ್ತಿಕವಾಗಿ ನಿರಂತರವಾಗಿ ನಿಂದನೆ ಮಾಡಿಕೊಂಡು ಬಂದರು.

ಆದರೆ ಈಗಿನ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ನೋಡಿದಾಗ ರಾಹುಲ್ ಗಾಂಧಿ, ಆಯೋಗ ಕೈಗೊಳ್ಳುತ್ತಿರುವ ತೀರ್ಮಾನದಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ನೇರ ಕೈವಾಡವಿದೆ ಎಂದು ಆರೋಪಿಸುತ್ತಲೇ ಬಂದದ್ದನ್ನು ನಿಷ್ಪಕ್ಷಪಾತ ಮತದಾನವನ್ನು ಬಯಸುವ ಮಂದಿ ಗಂಭೀರವಾಗಿ ಚಿಂತಿಸಬೇಕಾದ ತುರ್ತು ಈಗ ಎದುರಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದ ಬಗೆಗೆ ನಡೆದ ಚರ್ಚೆ ಮತ್ತು ತೀರ್ಮಾನಗಳಲ್ಲಿ ಆಯೋಗದ ಇಬ್ಬರು ಕಮಿಷನರ್‌ಗಳಾದ ಸುಖ್ಬೀರ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ವರ್ಷದ ಅಕ್ಟೋಬರ್ ತಿಂಗಳಿಂದ ಈ ವರ್ಷದ ಅಗಸ್ಟ್ ತಿಂಗಳವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ನಡೆದ ಸಭೆಗಳ ನಿರ್ಧಾರದ ಬಗೆಗೆ ಹದಿನಾಲು ಬಾರಿ ಒಪ್ಪಿಗೆ ಇಲ್ಲದ ಆಕ್ಷೇಪಗಳನ್ನು ದಾಖಲುಗೊಳಿಸಿರುವುದು ಮತ್ತು ಈ ಇಬ್ಬರು ಕಮಿಷನರ್ಗಳ ಅಭಿಪ್ರಾಯವನ್ನು ಕಾಲುಕಸವಾಗಿ ಕಂಡು ತಮ್ಮ ಮನಸೋ ಇಚ್ಛೆಯಂತೆ ನಡೆದುಕೊಂಡಿರುವ ಮುಖ್ಯ ಕಮಿಷನರ್ ಜ್ಞಾನೇಶ್ ಕುಮಾರ್ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆಯೋಗದ ಗೌರವವನ್ನು ಮತ್ತು ಜನತಂತ್ರದ ಮೌಲ್ಯವನ್ನು ಕಾಪಾಡುವ ದೃಷ್ಟಿಯಿಂದ ಅನಿವಾರ್ಯ.

ಕಳೆದ ವರ್ಷದಿಂದ ನಡೆದಿರುವ ಈ ಅಕ್ರಮ ಮತದಾರರ ಪಟ್ಟಿ ಪರಿಷ್ಕರಣೆಯನ್ನು ರದ್ದು ಮಾಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿವೆ. ರಾಜಕೀಯ ಪಕ್ಷಗಳ ಇಂತಹ ಒತ್ತಾಯವನ್ನು ಸಹಜ ಎಂದುಕೊಳ್ಳುತ್ತೇವೆ. ಆದರೆ ಮುಖ್ಯ ಚುನಾವಣಾ ಕಮಿಷನರ್ ಅವರ ಸ್ವೇಚ್ಛಾಚಾರವನ್ನು ಅಪರೂಪದಲ್ಲಿ ಅಪರೂಪ ಎನ್ನುವಂತೆ ದೇಶದ ಪ್ರತಿಷ್ಠಿತ ಇಂಗ್ಲಿಷ್ ಪತ್ತಿಕೆಗಳಾದ ದ ಹಿಂದೂ ಮತ್ತು ದ ಡೆಕ್ಕನ್ ಹೆರಾಲ್ಡ ಹಾಗೂ ರಾಜ್ಯದ ವಿಶ್ವಾಸಾರ್ಹ ಪ್ರಜವಾಣಿ ಪತ್ರಿಕೆಗಳು ಸೇರಿದಂತೆ ದೇಶದ ಹಲವು ಪತ್ರಿಕೆಗಳುತಮ್ಮ ಸುದೀರ್ಘವಾದ ಸಂಪಾದಕೀಯ ಬರವಣೆಗೆಗಳ ಮೂಲಕ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನವನ್ನು ತ್ಯಜಿಸಬೇಕೆಂದು ಆಗ್ರಹಪಡಿಸಿರುವುದನ್ನು ಸುಪ್ರೀಂಕೋರ್ಟ್ ಮತ್ತು ರಾಷ್ಟ್ರಪತಿ ಅವರು ಗಮನಿಸಬೇಕಾದ ತುರ್ತು ಇದಾಗಿದೆ.

ಮುಖ್ಯಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಚುನಾವಣೆಗಳಲ್ಲಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಏಕಪಕ್ಷೀಯವಾಗಿ ನಡೆದುಕೊಂಡು ಬಂದಿzರೆ ಎನ್ನುವುದು ಈಗ ರಹಸ್ಯವಾಗಿ ಉಳಿದಿಲ್ಲ. ಹೀಗಾಗಿ ಬಿಜೆಪಿ ಮಾತ್ರ ಮುಖ್ಯಚುನಾವಣಾ ಕಮಿಷನರ್ ಆಡಳಿತ ವೈಖರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಎನ್ ಡಿ ಎ ಮಿತ್ರಪಕ್ಷಗಳಲ್ಲಿ ಮುಖ್ಯವಾಗಿ ತೆಲುಗು ದೇಶಂ, ಲೋಕಜನಶಕ್ತಿ ಮುಂತಾದ ಕೆಲವು ಪಕ್ಷಗಳ ನಾಯಕರು ಚುನಾವಣಾ ಆಯೋಗವು ಈ ಗೊಂದಲದ ಬಗೆಗೆ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಈ ವಿವಾದವನ್ನು ಗಂಭೀರವಾಗಿ ತೆಗೆದುಕೊಂಡು ದೇಶದಾದ್ಯಂತ ಪ್ರತಿಭಟನೆಗಿಳಿದಿದೆ. ಈ ಪ್ರತಿಭಟನೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆಯ ಅಕ್ರಮದ ಬಗೆಗೆ ಕೇಂದ್ರ ಸರ್ಕಾರದ ಮೈಚಳಿ ಬಿಡಿಸಿದ ಜೆನ್ ಝೀ ಯುವ ದನಿಯಾದ ಕಾಕ್ರೋಚ್ ಜನತಾ ಪಾರ್ಟಿಯು ಬೀದಿಗಳಿಯಲು ಮುಂದಾಗಿರುವುದರಿಂದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ದಿನಗಳು ಹತ್ತಿರವಾಗುತ್ತಿದೆ.

ಬಿಹಾರದಲ್ಲಿ ಆರ್ ಜೆ ಡಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಈಗಾಗಲೇ ತಮ್ಮ ಪ್ರತಿಭಟನೆಗಳನ್ನು ನಡೆಸುತ್ತಿರುವುದರಿಂದ ಚುನಾವಣಾ ಆಯೋಗದ ಪಕ್ಷಪಾತ ಆಡಳಿತವನ್ನು ಹರಾಜು ಹಾಕುವ ದಿನಗಳು ಎದುರಾಗುತ್ತಿವೆ. ಆಯೋಗದ ಏಕಪಕ್ಷೀಯವಾದ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯವೈಖರಿಯ ಸಾಚಾತನವನ್ನು ಜನರು ಶಂಕಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಸಂಬಂಧ ಅರ್ಜಿಗಳು ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿದ್ದು, ನ್ಯಾಯಾಲಯದ ತೀರ್ಪು ಏನಾಗಬಹುದು ಎನ್ನುವುದು ಸಹಜವಾಗಿ ಕುತೂಹಲ ಹುಟ್ಟಿಸಿದೆ. ಆದರೆ ಮುಖ್ಯ ಚುನಾವಣಾ ಕಮಿಷನರ್ ನೇಮಕಾತಿ ಸಮಿತಿಯಲ್ಲಿದ್ದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಅವರನ್ನೇ ಕಿತ್ತುಹಾಕಿ ಪ್ರಧಾನಿ ತಮ್ಮ ಸಚಿವ ಸಂಪುಟದ ಸದಸ್ಯರೊಬ್ಬರನ್ನು ಸೇರಿಸಿಕೊಳ್ಳುವ ತಿದ್ದುಪಡಿ ಕಾಯ್ದೆ ಮಾಡಿದಾಗಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಜೆಂಡಾದ ಉದ್ದೇಶವನ್ನು ಅನುಮಾನದಿಂದ ನೋಡಿದವರಿಗೆ ಈ ಬೆಳವಣಿಗೆ ದೇಶದ ಆಡಳಿತ ಎತ್ತ ಸಾಗಿದೆ ಎನ್ನುವುದನ್ನು ತೋರಿಸುತ್ತದೆ.

ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಕಮಿಷನರ್‌ಗಳು ಮತ್ತು ಮುಖ್ಯಚುನಾವಣಾ ಕಮಿಷನರ್ ನೇಮಕವನ್ನು ಆಯ್ಕೆ ಸಮಿತಿಯು ಮಾಡುವುದನ್ನು ಬಿಟ್ಟರೆ ಅದರ ನಿತ್ಯದ ಕಾರ್ಯದಲ್ಲಿ ಸರ್ಕಾರ ಹಸ್ತಕ್ಷೇಪಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಈಗ ಉದ್ಭವಿಸಿರುವ ಬಿಕ್ಕಟ್ಟಿನ ಬಗೆಗೆ ಇಬ್ಬರು ಕಮಿಷನರ್ ಗಳಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ಪರಿಷ್ಕರಣೆ ನಿರ್ಧಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿಯೂ ಮುಖ್ಯ ಚುನಾವಣಾ ಕಮಿಷನರ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒಮ್ಮತ ಸೂಚಿಸುವಂತೆ ನಡೆದುಕೊಂಡಿರುವ ಕ್ರಮವು ಈಗ ಟೀಕೆಗೆ ಒಳಗಾಗಿದೆ. ತಮ್ಮ ನಿಜವಾದ ಪಾತ್ರವನ್ನು ಅವರು ರಹಸ್ಯವಾಗಿ ಇಟ್ಟಿದ್ದೇಕೆ? ಮತ್ತು ತಮ್ಮ ವಿರೋಧವನ್ನು ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಗೆ ಪತ್ರದ ಮೂಲಕ ತಿಳಿಸುವ ಅವಶ್ಯಕತೆ ಏನಿತ್ತು? ನೇರವಾಗಿ ಅವರೇ ಪತ್ರಿಕಾಗೋಷ್ಠಿಗಳ ಮೂಲಕ ಬಹಿರಂಗಪಡಿಸಬಹುದಿತ್ತು. ಇಲ್ಲವೇ ಈ ಬೆಳವಣಿಗೆ ಬಗೆಗೆ ರಾಷ್ಟ್ರಪತಿ ಅವರ ಗಮನಕ್ಕೆ ತರಬಹುದಿತ್ತು ಎನ್ನುವ ವಾದ ಈಗ ರಾಜಕೀಯ ರಂಗ ಮತ್ತು ಮಾಧ್ಯಮಗಳಲ್ಲಿ ಗಂಭೀರ ಚರ್ಚೆಗೆ ಎಡೆಕೊಟ್ಟಿದೆ.

ಈ ಗೊಂದಲ ಮತ್ತು ಆಯೋಗದ ಬಿಕ್ಕಟ್ಟು ಬೀದಿಗೆ ಬಂದ ನಂತರವೂ ಮುಖ್ಯ ಚುನಾವಣಾ ಕಮಿಷನರ್ ರಾಷ್ಟ್ರಪತಿ ಅವರ ಗಮನಕ್ಕೆ ಏಕೆ ತರುತ್ತಿಲ್ಲ? ಇಷ್ಟೆಲ್ಲ ಗೊಂದಲ ಬಹಿರಂಗಗೊಂಡಿರುವಾಗ ತಮ್ಮ ನೇರ ಸುಪರ್ದಿಗೆ ಸೇರಿರುವ ಚುನಾವಣಾ ಆಯೋಗದ ಬಿಕ್ಕಟ್ಟಿನ ಬಗೆಗೆ ರಾಷ್ಟ್ರಪತಿ ಅವರೂ ಮೌನವಹಿಸಿರುವುದೇಕೆ ಎನ್ನುವ ಹಲವು ಪ್ರಶ್ನೆಗಳು ಈಗ ಚರ್ಚೆಯ ವಿಷಯವಾಗಿವೆ.

ಚುನಾವಣಾ ಆಯೋಗದ ಈ ಬಿಕ್ಕಟ್ಟು ನಿವಾರಣೆ ಆಗುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು? ಸಂವಿಧಾನದ ನಿಯಮಾವಳಿಗಳ ಪ್ರಕಾರ ಚುನಾವಣಾ ಆಯೋಗದ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಿರುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮುಖ್ಯಪಾತ್ರವಹಿಸಿದ್ದಾರೆಂದು ಶಂಕಿಸಲಾಗಿರುವ ಗೃಹ ಸಚಿವ ಅಮಿತ್ ಶಾ ಅವರ ನಡೆ ಏನಿರಬಹುದು ಎನ್ನುವುದು ಕುತೂಹಲಕಾರಿಯಾಗಿದೆ.

” ಮುಂದಿನ ದಿನಗಳಲ್ಲಿ ಆಗಬಹುದಾದ ಬೆಳವಣಿಗೆಗಳಿಂದ ವಿವಾದದ ಕೇಂದ್ರಬಿಂದುವಾಗಿರುವ ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ಆಯೋಗದ ಗೌರವ ಮತ್ತು ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ತಮ್ಮ ಸ್ಥಾನವನ್ನು ತ್ಯಜಿಸುವರೇ? ಇದುವರೆಗೆ ನಡೆದಿರುವ ಈ ಗೊಂದಲಕಾರಿ ಮತದಾರರ ಪಟ್ಟಿಯ ಪರಿಷ್ಕರಣೆ ರದ್ದಾಗುವುದೇ ಎನ್ನುವ ಪ್ರಶ್ನೆ ಈಗ ದೇಶದ ಮುಂದಿದೆ.”

 

 

 

Tags:
error: Content is protected !!