ಮಹೇಂದ್ರ ಹಸಗೂಲಿ
ಒಂದು ಕಾರು ಪಾರ್ಕಿಂಗ್ಗೆ ೧೧೮ ರೂ. ಶುಲ್ಕ ; ಪ್ರವಾಸಿಗರ ಆಕ್ರೋಶ
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಟಿಕೆಟ್ ದರಗಳು ಗಣನೀಯವಾಗಿ ಹೆಚ್ಚಾಗಿರುವ ಜತೆಗೆ ಈಗ ಪಾರ್ಕಿಂಗ್ ಶುಲ್ಕವೂ ದುಬಾರಿಯಾಗಿದೆ.
ಇತ್ತೀಚಿನ ಪರಿಷ್ಕರಣೆಯ ಪ್ರಕಾರ ಬಸ್ ಮತ್ತು ಜೀಪ್ ಸಫಾರಿಗಳ ದರವನ್ನು ಬಹುತೇಕ ದುಪ್ಪಟ್ಟು ಮಾಡಲಾಗಿತ್ತು. ಅರಣ್ಯ ಇಲಾಖೆಯ ಆದೇಶದಂತೆ ಬಸ್ ಸಫಾರಿಗೆ (ವಯಸ್ಕರು) ಹಿಂದೆ ೬೫೦ ರೂ. ಇದ್ದ ಟಿಕೆಟ್ ದರವನ್ನು ಈಗ ೧,೦೦೦ ರೂ.ಗೆ ಹೆಚ್ಚಿಸಲಾಗಿದೆ.
೧೨ ವರ್ಷದೊಳಗಿನ ಮಕ್ಕಳಿಗೆ ೩೫೦ ರೂ. ಇದ್ದ ದರವನ್ನು ೫೦೦ ರೂ.ಗೆ ಏರಿಸಲಾಗಿದೆ. ಜೀಪ್ ಸಫಾರಿಗೆ (ವಯಸ್ಕರು) ೭೫೦ ರೂ. ಇದ್ದ ದರವನ್ನು ಶೇ.೧೦೦ ರಷ್ಟು ಹೆಚ್ಚಿಸಿ ೧,೫೦೦ ರೂ.ಗೆ ಹೆಚ್ಚಿಸಲಾಗಿದೆ. ಜೀಪ್ ಸಫಾರಿ ಮಕ್ಕಳಿಗೆ ಪ್ರತಿ ಟಿಕೆಟ್ಗೆ ೭೫೦ ರೂ. ದರವಿರುತ್ತದೆ.
ಕ್ಯಾಮೆರಾ ಶುಲ್ಕ: ೨೦೦ ಎಂಎಂಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಪ್ರತಿ ಟ್ರಿಪ್ಗೆ ಹೆಚ್ಚುವರಿಯಾಗಿ ೧,೫೦೦ ರೂ. ಮತ್ತು ಜಿಎಸ್ಟಿ ಸೇರಿದರೆ ೧,೮೦೦ ರೂ. ಪಾವತಿಸಬೇಕಾಗುತ್ತದೆ.
ಇದರ ಜೊತೆಗೆ ಪ್ರತ್ಯೇಕವಾಗಿ ಪಾರ್ಕಿಂಗ್ ಮತ್ತು ಕ್ಯಾಮೆರಾ ಶುಲ್ಕಗಳನ್ನು ಪಾವತಿಸ ಬೇಕಾಗಿರುವುದು ಪ್ರವಾಸಿಗರ ಅಸಮಾ ಧಾನಕ್ಕೆ ಕಾರಣವಾಗಿದೆ.ಒಂದು ಕಾರು ಪಾರ್ಕಿಂಗ್ ಮಾಡಿದರೆ ೧೧೮ ರೂ. ಪಾರ್ಕಿಂಗ್ ಶುಲ್ಕ, ಟಿಟಿ ಇನ್ನಿತರ ವಾಹನಗಳಿಗೆ ೨೩೮ ರೂ., ಬಸ್ಸುಗಳಿಗೆ ೩೫೪ ರೂ. ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ.
ಪ್ರವಾಸಿಗರು ದುಪ್ಪಟ್ಟು ಹಣವನ್ನು ಸಫಾರಿಗೆ ನೀಡಿ, ಪಾರ್ಕಿಂಗ್ಗೆ ಕೂಡ ನೂರಾರು ರೂ.ಗಳನ್ನು ನೀಡುವುದು ಪ್ರವಾಸಿಗರಿಗೆ ಹೊರೆಯಾಗಿದೆ. ಮೊದಲು ಪಾರ್ಕಿಂಗ್ಗೆ ೫೦ ರೂ. ಇತ್ತು, ಈಗ ದುಪ್ಪಟ್ಟು ಹೆಚ್ಚಿಸಿದ್ದಾರೆ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
” ಸಫಾರಿಯಿಂದ ಕಾಡುಪ್ರಾಣಿಗಳು ನಾಡಿನತ್ತ ಬಂದು ಮನುಷ್ಯನ ಮೇಲೆ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಆದರೆ ಅರಣ್ಯ ಇಲಾಖೆ ಸಫಾರಿ, ಪಾರ್ಕಿಂಗ್ ಶುಲ್ಕ ಮೂಲಕ ಕೋಟಿ, ಕೋಟಿ ರೂ. ವಸೂಲಿ ಮಾಡುತ್ತಿದ್ದು, ಇದರ ಬಳಕೆಯ ಬಗ್ಗೆ ಇದುವರೆಗೂ ಮಾಹಿತಿ ನೀಡುತ್ತಿಲ್ಲ. ಸರ್ಕಾರ ಕೂಡಲೇ ಸಫಾರಿ ಬಂದ್ ಮಾಡಬೇಕು.”
ಹೊನ್ನೂರು ಪ್ರಕಾಶ್, ರೈತ ಮುಖಂಡ
” ನಾವು ಸಫಾರಿಗೆ ಹೋಗಿದ್ದಾಗ ಕಾರ್ ಪಾರ್ಕಿಂಗ್ಗೆ ೧೧೮ ರೂ. ಸಫಾರಿಗೆ ಸಾವಿರ ರೂ. ಕಟ್ಟಿಸಿಕೊಂಡರು. ಇಷ್ಟೊಂದು ಹಣ ಸಂಗ್ರಹವಾಗುತ್ತಿದ್ದರೂ ಅದರಿಂದ ಅರಣ್ಯ ಪ್ರದೇಶದ ಅಭಿವೃದ್ಧಿಗೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಏನು ಅನುಕೂಲ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ. ಸಫಾರಿ, ಪಾರ್ಕಿಂಗ್ ಶುಲ್ಕ ಅತಿ ದುಬಾರಿಯಾಗಿದ್ದು, ಕೂಡಲೇ ಕಡಿಮೆ ಮಾಡಬೇಕು.”
ಗವಿಸ್ವಾಮಿ, ಪ್ರವಾಸಿಗ




