Mysore
25
mist

Social Media

ಗುರುವಾರ, 12 ನವೆಂಬರ್ 2026
Light
Dark

ಕಾಡುಪ್ರಾಣಿಗಳ ಹಾವಳಿಗೆ ಕಂಗಾಲಾದ ಕೃಷಿಕರು

ಲಕ್ಷ್ಮೀಕಾಂತ್ ಕೊಮಾರಪ್ಪ

ಭತ್ತದ ಪೈರು, ಕಾಳುಮೆಣಸಿನ ಬಳ್ಳಿಗಳಿಗೆ ಹಾನಿ; ಫಸಲು ಉಳಿಸಿಕೊಳ್ಳಲು ರಾತ್ರಿ ಕಾವಲು

ಸೋಮವಾರಪೇಟೆ: ಮಳೆ ಕೊರತೆ ಮೊದಲಾದ ಹವಾಮಾನ ವೈಪರೀತ್ಯಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ಸೋಮವಾರಪೇಟೆ ತಾಲ್ಲೂಕಿನ ಕೃಷಿಕರಿಗೆ ಇದೀಗ ಕಾಡುಪ್ರಾಣಿಗಳ ಹಾವಳಿ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ತಾಲ್ಲೂಕಿನ ಬಹುತೇಕ ಗದ್ದೆಗಳಲ್ಲಿ ಕಾಡುಕೋಣ, ಕಾಡು ಹಂದಿಗಳ ಹಿಂಡು ಭತ್ತದ ಪೈರನ್ನು ತಿಂದು, ತುಳಿದು ನಾಶಪಡಿಸುತ್ತಿವೆ. ಕಾಫಿ ತೋಟಗಳಲ್ಲಿ ಕಾಡಾನೆಗಳ ಸಂಚಾರದಿಂದ ಗಿಡಗಳಿಗೆ ಹಾನಿಯಾಗುತ್ತಿದ್ದರೆ, ಮುಳ್ಳುಹಂದಿಗಳು ಕಾಳುಮೆಣಸಿನ ಬಳ್ಳಿಗಳನ್ನೇ ಬುಡಸಮೇತ ಹಾಳು ಮಾಡುತ್ತಿವೆ. ಇದರಿಂದಾಗಿ ಕೃಷಿಕರು ಬೆಳೆದ ಫಸಲು ಕೈ ಸೇರುವ ಮೊದಲೇ ನಷ್ಟ ಅನುಭವಿಸುವಂತಾಗಿದೆ.

ಮೀಸಲು ಅರಣ್ಯಗಳ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಶಾಂತಳ್ಳಿ ಹೋಬಳಿಯ ಕೂತಿ, ತೋಳೂರುಶೆಟ್ಟಳ್ಳಿ, ಹರಗ, ಕುಂದಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ಕುಡಿ ಗಾಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡುಕೋಣ, ನವಿಲು ಹಾಗೂ ಕಾಡು ಹಂದಿಗಳು ಗದ್ದೆಗಳಿಗೆ ನುಗ್ಗಿ ಭತ್ತದ ಪೈರನ್ನು ಹಾಳುಮಾಡುತ್ತಿವೆ.

ಸುಂಟಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ ಹಾಗೂ ಮಂಕ್ಯ ಗ್ರಾಮಗಳಲ್ಲಿಯೂ ಕಾಡುಪ್ರಾಣಿಗಳ ಉಪಟಳ ಮಿತಿಮೀರಿದೆ. ರೈತರು ಕಷ್ಟಪಟ್ಟು ಬೆಳೆದಿರುವ ಫಸಲು ಕೈಸೇರುವ ನಿರೀಕ್ಷೆಯಲ್ಲಿರುವಾಗಲೇ ಕಾಡುಪ್ರಾಣಿಗಳು ಗದ್ದೆಗಳಿಗೆ ನುಗ್ಗಿ ಪೈರನ್ನು ತಿಂದು, ತುಳಿದು ಹಾಳು ಮಾಡು ತ್ತಿವೆ. ಈಗಾಗಲೇ ಮಳೆಯ ಕೊರತೆಯಿಂದ ಕಂಗಾಲಾಗಿರುವ ಕೃಷಿಕರಿಗೆ ಇದರಿಂದ ಮತ್ತಷ್ಟು ಆರ್ಥಿಕ ನಷ್ಟದ ಭೀತಿ ಎದುರಾಗಿದೆ.

ಭತ್ತದ ಜೊತೆಗೆ ಕೆಸುವಿನ ಗೆಡ್ಡೆ, ಸಿಹಿ ಗೆಣಸು ಹಾಗೂ ವಿವಿಧ ತರಕಾರಿ ಬೆಳೆಗಳಿಗೂ ಕಾಡುಹಂದಿಗಳು ಹಾನಿ ಮಾಡುತ್ತಿವೆ. ಕೃಷಿ ಭೂಮಿಯಲ್ಲಿ ಹಗಲಿರುಳು ಶ್ರಮಿಸಿ ಬೆಳೆದ ಫಸಲು ಕಟಾವಿನ ಹಂತ ತಲುಪುವಷ್ಟರಲ್ಲಿ ಕಾಡುಪ್ರಾಣಿಗಳ ಪಾಲಾಗುತ್ತಿದೆ.

ಶನಿವಾರಸಂತೆ, ಕೊಡ್ಲಿಪೇಟೆ ಹಾಗೂ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯ ನಿಡ್ತ, ಮಾಲಂಬಿ, ಜೇನುಕಲ್ಲು ಬೆಟ್ಟ, ಯಡವನಾಡು ಮೀಸಲು ಅರಣ್ಯದಂಚಿನ ಗ್ರಾಮಗಳಲ್ಲಿಯೂ ಕಾಡು ಪ್ರಾಣಿಗಳ ಹಾವಳಿ ಮುಂದುವರಿದಿದೆ. ಬೇಳೂರು ಗ್ರಾಪಂ ವ್ಯಾಪ್ತಿಯ ಕಾರೆಕೊಪ್ಪ, ಬೇಳೂರು, ಬಸವನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಳ್ಳುಹಂದಿಗಳ ಹಾವಳಿ ಹೆಚ್ಚಿದ್ದು, ಕಾಫಿ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದಿದೆ. ರಾತ್ರಿ ವೇಳೆ ಹಿಂಡು ಹಿಂಡಾಗಿ ಕಾಫಿ ತೋಟಗಳಿಗೆ ನುಗ್ಗುವ ಮುಳ್ಳು ಹಂದಿಗಳು ಕಾಳು ಮೆಣಸಿನ ಬಳ್ಳಿಗಳ ಕಾಂಡವನ್ನು ಕಡಿಯುತ್ತಿವೆ. ಇದರಿಂದ ಬಳ್ಳಿಗಳು ಒಣಗಿ ಫಸಲು ನಷ್ಟವಾಗುತ್ತಿದೆ

ಅಟ್ಟಣಿಗೆ ನಿರ್ಮಿಸಿಕೊಂಡು ಬೆಳೆ ರಕ್ಷಣೆಗೆ ಮುಂದಾದ ರೈತರು: 

ಸೋಮವಾರಪೇಟೆ: ಮಳೆಯ ಅನಿಶ್ಚಿತತೆ, ಕೃಷಿ ವೆಚ್ಚದ ಹೆಚ್ಚಳ, ಕಾರ್ಮಿಕರ ಕೊರತೆ ಹಾಗೂ ಬೆಲೆ ಏರಿಳಿತದ ನಡುವೆ ಕೃಷಿ ಮಾಡುತ್ತಿರುವ ರೈತರಿಗೆ ಕಾಡುಪ್ರಾಣಿಗಳ ಹಾವಳಿಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿ ವೇಳೆ ಗದ್ದೆ ಹಾಗೂ ತೋಟಗಳಲ್ಲಿ ಕಾವಲು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವು ಗ್ರಾಮಗಳಲ್ಲಿ ಮರಗಳ ಮೇಲೆ ಅಟ್ಟಣಿಕೆ ನಿರ್ಮಿಸಿಕೊಂಡು ಬೆಳೆಗಳ ರಕ್ಷಣೆಗೆ ರೈತರು ಮುಂದಾಗಿದ್ದಾರೆ.

” ಮಳೆ ಕೊರತೆ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿ ಕ್ಷೇತ್ರ ನಷ್ಟದ ಹಾದಿಯಲ್ಲಿದೆ. ಕೃಷಿಯಲ್ಲಿ ರೈತರಿಗೆ ಆಸಕ್ತಿಮೂಡಿಸುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಿ ಪ್ರೋತ್ಸಾಹ ನೀಡಬೇಕು. ವನ್ಯಪ್ರಾಣಿಗಳಿಂದ ಬೆಳೆ ಹಾನಿಯಾಗುತ್ತಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಪರಿಹಾರ ಒದಗಿಸಬೇಕು.”

-ಮಜಂತ್ ಈರಪ್ಪ, ಕೃಷಿಕ, ತಾಕೇರಿ ಗ್ರಾಮ

 

 

Tags:
error: Content is protected !!