Mysore
21
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಸಂಪಾದಕೀಯ : ಕೊಡಗಿನಲ್ಲಿ ಪದೇ ಪದೇ ಭೂ ಭೂಕಂಪನ; ಜನರ ಭಯ ನಿವಾರಿಸುವ ಅಗತ್ಯವಿದೆ

೨೦೧೮ರ ಬಳಿಕ ಸತತ ಮೂರು ವರ್ಷಗಳ ಪ್ರಕೃತಿ ವಿಕೋಪ, ನಂತರದ ಕೋವಿಡ್, ಲಾಕ್ಡೌನ್ ಸಂಕಷ್ಟಗಳಿಂದ ನಲುಗಿದ್ದ ಕೊಡಗು ಜಿಲ್ಲೆಯ ಜನತೆಗೆ ಇದೀಗ ಮತ್ತೊಂದು ಆತಂಕ ಶುರುವಾಗಿದೆ. ಇದ್ದಕಿದ್ದಂತೆ ಭೂಮಿಯ ಒಳಭಾಗದಲ್ಲಿ ಭಾರೀ ಶಬ್ದದ ಜೊತೆಗೆ ಕಂಪನದ ಅನುಭವ ಭೀತಿ ಸೃಷ್ಟಿಸಿದೆ.
೨೦೧೮ರ ಜುಲೈ ೦೯ ರಂದು ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ ೩.೩ ರಷ್ಟು ಪ್ರಮಾಣದ ಭೂಮಿ ಕಂಪಿಸಿದ ಅನುಭವವಾಗಿತ್ತು. ಜೊತೆಗೆ ಕೆಲವೊಂದು ಕಡೆ ಭೂಮಿ ಬಿರುಕು ಬಿಟ್ಟಿತ್ತು. ನಂತರ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಬಿರುಕು ಬಿಟ್ಟ ಸ್ಥಳದಲ್ಲಿ ಮಳೆ ನೀರು ಹೋಗಿ ಭೂ ಕುಸಿತವಾಗಿತ್ತು.

ಕಳೆದ ಶನಿವಾರ ಕರಿಕೆಯಿಂದ ೦೪ ಕಿ.ಮೀ. ವಾಯುವ್ಯ ಭಾಗದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ೨.೩ ಎಂದು ದಾಖಲಾಗಿದೆ. ಕಳೆದ ವಾರ ಹಾಸನದ ಹೊಳೆನರಸೀಪುರ ತಾಲ್ಲೂಕಿನಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ೩.೪ ಎಂದು ದಾಖಲಾಗಿದೆ. ಈ ಘಟನೆಯಿಂದ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಮಡಿಕೇರಿ ತಾಲ್ಲೂಕಿನ ದೇವಸ್ತೂರು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ, ಯಾವುದೇ ರೀತಿಯ ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿಲ್ಲ.
ಇದರ ಬೆನ್ನಲ್ಲೇ ಮಂಗಳವಾರ ಮಡಿಕೇರಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಭಾಗಮಂಡಲ, ಅರ್ವತ್ತೋಕ್ಲು, ನಾಪೋಕ್ಲು, ಕಾಲೂರು, ಮಕ್ಕಂದೂರು, ಮಡಿಕೇರಿ ಮತ್ತಿತರರ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಜೊತೆಗೆ ಭಾರೀ ಶಬ್ದ ಕೂಡ ಕೇಳಿದೆ. ಮನೆಯೊಳಗಿದ್ದ ಜನರು ಬೆದರಿ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪನದಲ್ಲಿ ೩.೦ರಷ್ಟು ಕಂಪನ ದಾಖಲಾಗಿದೆ.

೨೦೧೮ರಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸುವುದಕ್ಕೂ ಮುನ್ನ ಇದೇ ರೀತಿ ಭೂಕಂಪನದ ಅನುಭವವಾಗಿತ್ತು. ಈ ಬಾರಿ ಕೆಲವೇ ದಿನಗಳ ಅಂತರದಲ್ಲಿ ಮೂರು ಬಾರಿ ಕಂಪನವಾಗಿರುವುದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಜನವರಿಯಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ ೬೩೦.೩೧ ಮಿ.ಮೀ ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೯೪೦.೬೯ ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ ೮೫೪.೩೩ ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೧೩೭೮.೨೬ ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಲ್ಲಿಯವರೆಗಿನ ಮಳೆ ೫೬೫.೨೩ ಮಿ.ಮೀ. ದಾಖಲಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೮೧೯.೨೭ ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ ೪೭೧.೩೬ ಮಿ.ಮೀ. ದಾಖಲಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೬೨೪.೫೩ ಮಿ.ಮೀ. ಮಳೆಯಾಗಿತ್ತು.

ಅಂಕಿ ಅಂಶಗಳಿಗೆ ಹೋಲಿಸಿದಾಗ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಳೆ ಅಬ್ಬರಿಸುವ ಲಕ್ಷಣ ಗೋಚರಿಸುತ್ತಿದೆ.

ಈ ನಡುವೆ ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತಗೊಂಡಿದ್ದು, ಮುಂದಿನ ೩ ದಿನ ಕೊಡಗು ಸೇರಿದಂತೆ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಂಬಂಧ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭೂಕಂಪನದ ಅನುಭವದ ಜೊತೆಗೆ ಭಾರಿ ಮಳೆಯ ಮುನ್ಸೂಚನೆ ಜಿಲ್ಲೆಯ ಜನರ ಆತಂಕ ಹೆಚ್ಚಿಸುತ್ತಿದೆ.
ಭೂಮಿಯ ಅಂತರಾಳದಲ್ಲಿ ಆಗುವ ಕೆಲವು ಬದಲಾವಣೆಗಳು, ಕೆಲವು ಕೆಮಿಕಲ್ ರಿಯಾಕ್ಷನ್‌ನಿಂದಲೂ ಈ ರೀತಿಯ ಭೂ ಕಂಪನದ ಅನುಭವ ಆಗುತ್ತದೆ. ಒಂದು ಭಾಗದಲ್ಲಿ ನಡೆದ ಭೂಕಂಪದ ತೀವ್ರತೆ ಸುತ್ತಮುತ್ತಲಿನ ಸುಮಾರು ಕಿ.ಲೋ ಮೀಟರ್‌ನವರೆಗೂ ಇರುತ್ತದೆ. ಅದರ ಅನುಭವ ಜನರಿಗೆ ಆಗಿರುವ ಸಾಧ್ಯತೆ ಇದೆ. ಆದ್ದರಿಂದ ಭೂಕಂಪನಕ್ಕೆ ಜನತೆ ಭಯಪಡುವ ಅಗತ್ಯ ಇಲ್ಲ ಎಂದು ಜಿಲ್ಲೆಯ ಜಿಲ್ಲೆಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಭಯ ನೀಡಿದ್ದಾರೆ. ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವರು ಕೂಡ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಆದರೆ, ಭೂಕಂಪನ ವಿಚಾರವನ್ನು ಕೊಡಗಿನ ಮಟ್ಟಿಗೆ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗಿನಲ್ಲಿ ಈಗಾಗಲೇ ಪ್ರಕೃತಿ ವಿಕೋಪದಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಹೀಗಾಗಿ ಜಿಲ್ಲೆಗೆ ಪರಿಣಿತರಿರಿಂದ ಸಂಶೋಧನೆ ನಡೆಸಿ ಭೂಮಿ ಕಂಪಿಸುತ್ತಿರುವುದಕ್ಕೆ ನಿಖರ ಕಾರಣ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ವೈಜ್ಞಾನಿಕ ಕಾರಣವನ್ನು ಜನತೆಗೆ ತಿಳಿಸಿ, ಅನಾಹುತ ಸಂಭವಿಸುವ ಸಾಧ್ಯತೆ ಇದ್ದಲ್ಲಿ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

Tags: