ಸೀತಾಪುರ ಎಂಬುದು ಉತ್ತರಪ್ರದೇಶದ ಅದೆಷ್ಟೋ ಕುಗ್ರಾಮಗಳಲ್ಲೊಂದು. ೪೫ ವರ್ಷಗಳ ಹಿಂದೆ ಅಲ್ಲಿನ ಒಂದು ಬಡಕುಟುಂಬದ ಹದಿನಾಲ್ಕು ವರ್ಷ ಪ್ರಾಯದ ಕಲಾವತಿ ದೇವಿ ಎಂಬ ಬಾಲಕಿ ೧೮ ವರ್ಷ ಪ್ರಾಯದ ಜೈರಾಜ್ ಸಿಂಗ್ ಎಂಬ ಹುಡುಗನೊಂದಿಗೆ ಮದುವೆಯಾಗಿ, ಕಾನ್ಪುರದ ರಾಜಾ ಕಾ ಪೂರ್ವ ಎಂಬ ಒಂದು ಸ್ಲಮ್ಮಿಗೆ ಬಂದಿದ್ದಳು. ಬಡತನ ಮತ್ತು ಬಾಲ್ಯ ವಿವಾಹದ ಕಾರಣ ಅವಳಿಗೆ ಶಾಲೆಗೆ ಹೋಗುವ ಅವಕಾಶವೇ ಸಿಗಲಿಲ್ಲ. ರಾಜಾ ಕಾ ಪೂರ್ವ ಕೊಳೆಗೇರಿ ಅವಳ ತವರಾದ ಸೀತಾಪುರಕ್ಕಿಂತಲೂ ಹೆಚ್ಚಿನ ದರಿದ್ರ ಸ್ಥಿತಿಯಲ್ಲಿತ್ತು. ಎಲ್ಲಿ ನೋಡಿದರೂ ಕಸ, ಕೊಳಕು. ಚರಂಡಿಯ ಗಲೀಜಲ್ಲದೆ ಮಲಮೂತ್ರಗಳೂ ಸುತ್ತಲು ಹರಡಿ ಮನುಷ್ಯರೆನಿಸಿಕೊಂಡವರು ಅಲ್ಲಿ ಉಸಿರಾಡಿಕೊಂಡಿರುವುದು ಅತ್ಯಂತ ದಾರುಣಮಯವಾಗಿತ್ತು. ಅಲ್ಲಿರುವ ೭೦೦ ಕುಟುಂಬಗಳಿಗೆ ಒಂದಾದರೂ ಶೌಚಾಲಯವಿರಲಿಲ್ಲ. ಹೆಂಗಸರು, ಗಂಡಸರು, ಮಕ್ಕಳು ಸೇರಿ ಎಲ್ಲರೂ ಬಯಲಲ್ಲೇ ಬಹಿರ್ದೆಸೆಗೆ ಕುಳಿತುಕೊಳ್ಳಬೇಕಿತ್ತು.
ಕಲಾವತಿ ದೇವಿ ಹುಟ್ಟಿ ಬೆಳೆದ ಸೀತಾಪುರದಲ್ಲೂ ಇದೇ ಪರಿಸ್ಥಿತಿ ಇದ್ದಿತಾದರೂ ಅಲ್ಲಿ ಕನಿಷ್ಠ ಗಿಡ ಮರ ಪೊದೆ ಗುಡ್ಡ ಬೆಟ್ಟಗಳ ಮರೆಯಾದರೂ ಇತ್ತು. ಆದರೆ, ರಾಜಾ ಕಾ ಪೂರ್ವದಲ್ಲಿ ಅಂತಹ ಯಾವ ಮರೆಯೂ ಇರಲಿಲ್ಲ. ಹೆಣ್ಣು ಮಕ್ಕಳು, ಹೆಂಗಸರು ಪ್ರತೀ ದಿನ ಹಗಲು ರಾತ್ರಿಯಾಗುವುದನ್ನು ಕಾಯಬೇಕಾಗುತ್ತಿತ್ತು. ಆದರೆ, ರಾತ್ರಿ ಹೊತ್ತಲ್ಲಿ ಹೊರ ಹೋಗುವುದು ಎಷ್ಟೋ ಬಾರಿ ಅಪಾಯಕ್ಕೆ ಆಮಂತ್ರಣ ಕೊಟ್ಟಂತಾಗುತ್ತಿತ್ತು. ೫೦ ವರ್ಷ ಪ್ರಾಯದ ಒಬ್ಬ ಮಹಿಳೆ ಹೀಗೆ ರಾತ್ರಿ ಹೊತ್ತು ಬಹಿರ್ದೆಸೆಗೆ ಹೋದಾಗ ಅವಳ ಮೇಲೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರಿಗಳು ಅವಳ ಮೇಲೆ ಎಂತಹ ಆಕ್ರಮಣ ಮಾಡಿದ್ದರೆಂದರೆ, ಮುಂದೆ ಅವಳು ತನ್ನ ಮಾತಾಡುವ ಶಕ್ತಿಯನ್ನು ಕಳೆದುಕೊಂಡಳು. ತಾಯಿಗಾದ ಸ್ಥಿತಿಯನ್ನು ನೋಡಿ ಬೆದರಿದ ಅವಳ ಹರೆಯದ ಮಗಳು ಅವಳನ್ನು ಕರೆದುಕೊಂಡು ಬೇರೊಂದು ವಠಾರಕ್ಕೆ ಹೋಗಿ ಇರತೊಡಗಿದಳು.
ಕಲಾವತಿ ದೇವಿ ಆ ಪರಿಸ್ಥಿತಿಯನ್ನು ಬದಲಾಯಿಸಲು ಆಲೋಚಿಸುತ್ತಿದ್ದರೂ ಏನೂ ಆಗಲಿಲ್ಲ. ಅಷ್ಟರಲ್ಲಾಗಲೇ ಹಲವು ವರ್ಷಗಳು ಉರುಳಿದವು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು. ಈ ಮಧ್ಯೆ ಅವರ ಗಂಡ ತೀರಿಕೊಂಡು, ಸಂಸಾರವನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ಕಲಾವತಿ ದೇವಿಯ ಹೆಗಲಿಗೆ ಬಿತ್ತು. ಅವರ ಗಂಡ ಕಟ್ಟಡಗಳ ನೆಲಕ್ಕೆ ಹಾಸುವ ಟೈಲ್ಸ್‌ಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಕಲಾವತಿ ಕಟ್ಟಡ ಗಾರೆ ಕೆಲಸ ಮಾಡತೊಡಗಿದರು. ಆ ಕಾಲದಲ್ಲಿ ಹೆಂಗಸೊಬ್ಬಳು ಗಾರೆ ಕೆಲಸ ಮಾಡುವುದು ತೀರಾ ಅಪರೂದ ವಿದ್ಯಮಾನವಾಗಿತ್ತು.
‘ಶ್ರಮಿಕ್ ಭಾರತಿ’ ಎಂಬುದು ಸಾರ್ವಜನಿಕ ಶೌಚಾಲಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಒಂದು ಸ್ಥಳಿಯ ಸರ್ಕಾರೇತರ ಸಂಸ್ಥೆ. ಅದು ರಾಜಾ ಕಾ ಪೂರ್ವ ಸ್ಲಮ್ಮಿನ ಶೌಚಾಲಯದ ಸಮಸ್ಯೆಯನ್ನು ಅರಿತು ಅದನ್ನು ಪರಿಹರಿಸಲು ಮುಂದಾಯಿತು. ಅದು ಇಂಗ್ಲೆಂಡ್ ಮೂಲದ ‘ವಾಟರ್ ಏಯ್ಡ್’ ಎಂಬ ಚಾರಿಟಿ ಸಂಸ್ಥೆಯ ಬೆಂಬಲ ಪಡೆದು ರಾಜಾ ಕಾ ಪೂರ್ವ ಸ್ಲಮ್ಮಿನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮುಂದಾಯಿತು. ಆ ಕೆಲಸಕ್ಕೆ ಶ್ರಮಿಕ್ ಭಾರತಿ ನಿಷ್ಠಾವಂತ ಕಾರ್ಯಕರ್ತರ ಹುಡುಕಾಟದಲ್ಲಿತ್ತು. ಆ ವಿಚಾರ ಕಲಾವತಿ ದೇವಿಗೆ ತಿಳಿಯಿತು. ಅದಕ್ಕೂ ಕಾರಣವಿತ್ತು. ಕಲಾವತಿ ದೇವಿಯ ಗಂಡ ಅದೇ ಶ್ರಮಿಕ್ ಭಾರತಿಯಲ್ಲಿ ಕೆಲಸ ಮಾಡುತ್ತಿದ್ದದರಿಂದ ಕಲಾವತಿಗೆ ಶ್ರಮಿಕ್ ಭಾರತಿಯ ಪರಿಚಯವಿತ್ತು.
ಕಲಾವತಿ ದೇವಿ ಶ್ರಮಿಕ್ ಭಾರತಿಗೆ ಹೋಗಿ ತನ್ನ ಸ್ಲಮ್ಮಿನಲ್ಲಿ ೧೦-೨೦ ಕೋಣೆಗಳಿರುವ ಒಂದು ಸಾರ್ವಜನಿಕ ಶೌಚಾಲಯದ ಬೇಡಿಕೆಯನ್ನು ಅವರ ಮುಂದಿಟ್ಟರು. ಶ್ರಮಿಕ ಭಾರತಿ ಕಲಾವತಿ ದೇವಿಯ ಉತ್ಸಾಹ ಹಾಗೂ ಅರ್ಪಣಾ ಮನೋಭಾವನೆಯನ್ನು ಮೆಚ್ಚಿಕೊಂಡು ಆ ಶೌಚಾಲಯವನ್ನು ನಿರ್ಮಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ಅವರಿಗೇ ವಹಿಸಿತು. ತನ್ನ ಸ್ಲಮ್ಮಿನ ಶೌಚಾಲಯ ಸಮಸ್ಯೆಯನ್ನು ಹೇಗಾದರೂ ಮಾಡಿ ಪರಿಹರಿಸಬೇಕು ಎಂದು ಹಲವು ವರ್ಷಗಳಿಂದ ಆಲೋಚಿಸುತ್ತಿದ್ದ ಕಲಾವತಿ ದೇವಿ ಆ ಸವಾಲನ್ನು ಸಂತೋಷದಿಂದ ಸ್ವೀಕರಿಸಿದರು.
ಆದರೆ, ಆ ಜವಾಬ್ದಾರಿ ಕಲಾವತಿ ದೇವಿ ಊಹಿಸಿದಷ್ಟು ಸುಲಭದ್ದಲ್ಲ ಎಂಬುದು ಅವರಿಗೆ ನಂತರ ಅರಿವಿಗೆ ಬರತೊಡಗಿತು. ಮೊದಲನೆಯದಾಗಿ, ಯಾರೂ ಕೂಡಾ ಶೌಚಾಲಯ ಕಟ್ಟಲು ಬೇಕಾದ ಜಾಗ ನೀಡಲು ಮುಂದೆ ಬರಲಿಲ್ಲ. ಮತ್ತು, ರಾಜಾ ಕಾ ಪೂರ್ವ ಸ್ಲಮ್ಮಿನ ನಿವಾಸಿಗಳು ತಮ್ಮಿಂದಾದ ಧನ ಸಹಾಯ ಮಾಡಲಾಗಲೀ, ಶ್ರಮದಾನ ಮಾಡಲಾಗಲೀ ಒಲವು ತೋರಲಿಲ್ಲ. ಕೆಲವರಂತೂ ‘ನಮಗೆ ಶೌಚಾಲಯದ ಅಗತ್ಯವೇನಿದೆ? ನಾವು ಇಷ್ಟು ವರ್ಷಗಳಿಂದ ಶೌಚಾಲಯವಿಲ್ಲದೆ ಬದುಕಿಲ್ಲವೇ?’ ಅಂತ ಪ್ರಶ್ನೆ ಮಾಡಿದರು! ಆದರೆ, ಕಲಾವತಿ ದೇವಿ ಏನೇ ಮಾಡಿಯಾದರೂ ತನ್ನ ಗುರಿ ಸಾಽಸುವ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ್ದರು. ಅವರು ತನ್ನ ಸ್ಲಮ್ಮಿನ ಪ್ರತೀ ಮನೆಗೆ ಭೇಟಿ ಅಲ್ಲಲ್ಲಿ ಸಾಮುದಾಯಿಕ ಮೀಟಿಂಗ್‌ಗಳನ್ನು ನಡೆಸಿ, ಜನರಿಗೆ ಶೌಚಾಲಯದ ಅಗತ್ಯದ ಬಗ್ಗೆ ವಿವರಿಸಿದರು. ಅಂತಹ ಹಲವು ಭೇಟಿ, ಮೀಟಿಂಗ್‌ಗಳ ಫಲವಾಗಿ ಜನ ನಿಧಾನಕ್ಕೆ ಕಲಾವತಿಯ ಆಲೋಚನೆಯ ಹಿಂದಿನ ಕಾಳಜಿಯನ್ನು ಅರಿತುಕೊಳ್ಳ ತೊಡಗಿದರು. ನಂತರ, ಕಲಾವತಿ ದೇವಿ ಕಾನ್ಪುರ್ ಮುನಿಸಿಪಲ್ ಕಾರ್ಪೋರೇಶನ್ ಕಮಿಷನರನ್ನು ಭೇಟಿಯಾಗಿ, ಸರ್ಕಾರದ ನಗರಾಭಿವೃದ್ಧಿ ಯೋಜನೆಗಳಲ್ಲಿ ಯಾವ ಸ್ಕೀಮ್‌ನ ಪ್ರಯೋಜನ ಪಡೆಯಬಹುದು ಎಂಬುದನ್ನು ವಿಚಾರಿಸಿದರು. ಆ ಕಮಿಷನರ್ ಕಲಾವತಿಯ ಬದ್ಧತೆಯನ್ನು ಕಂಡು ಬಹಳ ಪ್ರಭಾವಿತಗೊಂಡು ಅವರಿಗೆ ಒಂದು ಸರಳವಾದ ಪ್ಲಾನ್ ಕೊಟ್ಟರು-ಕಲಾವತಿ ದೇವಿ ಜನರಿಂದ ಒಂದು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದರೆ ಕಾರ್ಪೋರೇಶನ್ ತನ್ನ ವತಿಯಿಂದ ಎರಡು ಲಕ್ಷ ರೂಪಾಯಿ ಅದಕ್ಕೆ ಸೇರಿಸಿ ರಾಜಾ ಕಾ ಪೂರ್ವದಲ್ಲಿ ಹತ್ತು ಕೋಣೆಗಳ ಒಂದು ಸಾರ್ವಜನಿಕ ಶೌಚಾಲಯವನ್ನು ಕಟ್ಟುವುದು.
ರಾಜಾ ಕಾ ಪೂರ್ವ ಸ್ಲಮ್ಮಿನಲ್ಲಿ ವಾಸಿಸುವ ಜನ ಹೆಚ್ಚಾಗಿ ರಿಕ್ಷಾ ಚಾಲಕರು, ದಿನಗೂಲಿ ಕಾರ್ಮಿಕರು, ಮನೆಗೆಲಸದಾಳುಗಳಾಗಿ ಜೀವನ ಸಾಗಿಸುವವರು. ಅವರುಗಳಿಂದ ಒಂದು ಲಕ್ಷ ರೂಪಾಯಿ ಸಂಗ್ರಹಿಸುವುದು ಎಷ್ಟು ದುಸ್ತರ ವಾದ ಕೆಲಸ ಎಂಬುದು ಕಲಾವತಿ ದೇವಿ ತಿಳಿದ ವಿಚಾರವೇ. ಆದರೂ ಅವರು ದೇಣಿಗೆ ಸಂಗ್ರಕ್ಕೆ ನಡೆದರು. ಕೆಲವರು ಹತ್ತು ರೂಪಾಯಿ ಕೊಟ್ಟರು, ಇನ್ನು ಕೆಲವರು ೨೦, ಮತ್ತೆ ಕೆಲವರು ೫೦, ಇನ್ನು ಕೆಲವರು ನೂರು ರೂಪಾಯಿ ಕೊಟ್ಟರು. ಹೀಗೆ ಕಲಾವತಿ ದೇವಿ ೫೦ ಸಾವಿರ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಉಳಿದ ಹಣಕ್ಕೇನು ಮಾಡುವುದು ಎಂದು ಚಿಂತಿಸುತ್ತಿದ್ದಾಗ, ಶ್ರಮಿಕ್ ಭಾರತಿ ರಾಜ್ಯ ಸರ್ಕಾರದಿಂದ ಏಳು ಲಕ್ಷ ರೂಪಾಯಿ ದೇಣಿಗೆ ಪಡೆಯುವಲ್ಲಿ ಯಶಸ್ವಿಯಾಯಿತು. ಅದರ ನಂತರ ಕಲಾವತಿ ದೇವಿಯ ಗುರಿ ಸಾಧನೆ ಸರಾಗವಾಗಿ ಈಡೇರಿತು. ಅವರು ಬಯಸಿದಂತೆ ರಾಜಾ ಕಾ ಪೂರ್ವದಲ್ಲಿ ಹತ್ತು ಕೋಣೆಗಳ ಶೌಚಾಲಯಕ್ಕೆ ಬದಲಾಗಿ ೫೦ ಕೋಣೆಗಳ ಒಂದು ದೊಡ್ಡ ಸಾರ್ವಜನಿಕ ಶೌಚಾಲಯ ತಲೆ ಎತ್ತಿತು.
ಅಂದಿನಿಂದ ಕಲಾವತಿ ದೇವಿಯ ಬದುಕಿನ ದೃಷ್ಟಿಕೋನವು ಬದಲಾಯಿತು. ಯಾವುದೇ ಸ್ಲಮ್ ಅಥವಾ ಬಡಬಗ್ಗರು ವಾಸಿಸುವ ಕೇರಿಗಳಲ್ಲಿ ಸಾರ್ವಜನಿಕಅಥವಾ ಖಾಸಗೀ ಶೌಚಾಲಯಗಳಿಲ್ಲ ಎಂದು ತಿಳಿಯುತ್ತಲೇ ಅವರು ಸಂಘಸಂಸ್ಥೆಗಳು, ಸರ್ಕಾರಿ ಏಜೆನ್ಸಿಗಳು, ಸ್ಥಳೀಯ ಆಡಳಿತಗಳು ಹಾಗೂ ದಾನಿಗಳ ಸಹಾಯ ಪಡೆದು ಅಂತಹ ಜನವಸತಿ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುವುದನ್ನು ತಮ್ಮ ಬದುಕಿನ ಮುಖ್ಯ ಉದ್ದೇಶವನ್ನಾಗಿಸಿಕೊಂಡರು.
ಕಲಾವತಿ ದೇವಿಗೆ ಈಗ ೬೦ ವರ್ಷ ಪ್ರಾಯ. ಪತಿ ತೀರಿಕೊಂಡ ಕೆಲವು ವರ್ಷಗಳ ನಂತರ ಅವರ ಹಿರಿ ಮಗಳು ಲಕ್ಷಿ ಯ ಗಂಡನೂ ಅಕಾಲಿಕ ಮರಣಕ್ಕೆ ತುತ್ತಾಗಿ, ಆ ಮಗಳು ಮತ್ತು ಅವಳ ಎರಡು ಮಕ್ಕಳೂ ಇವರೊಂದಿಗೆ ಬದುಕುತ್ತಿದ್ದಾರೆ. ಕಲಾವತಿ ದೇವಿ ಈಗಲೂ ಗಾರೆ ಕೆಲಸ ಮಾಡುತ್ತ ಸಂಸಾರ ನಡೆಸುತ್ತಿದ್ದಾರೆ. ಇದರೊಂದಿಗೆ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುವ ಸಾಮಾಜಿಕ ಕೆಲಸವನ್ನೂ ಮುಂದುವರಿಸಿದ್ದಾರೆ. ಹೀಗೆ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುವ ಮೂಲಕ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಒಂದು ಗೌರವದ ದಿನಚರಿ ನಡೆಸಲು ತಾನೊಂದು ಅಳಿಲು ಸೇವೆ ನಡೆಸುತ್ತಿದ್ದೇನೆ ಎಂಬ ಆತ್ಮತೃಪ್ತಿ ಕಲಾವತಿ ದೇವಿಯದು.
” ಕಲಾವತಿ ದೇವಿ ಯಾವುದೇ ಸ್ಲಮ್ ಅಥವಾ ಬಡಬಗ್ಗರು ವಾಸಿಸುವ ಕೇರಿಗಳಲ್ಲಿ ಸಾರ್ವಜನಿಕ ಅಥವಾ ಖಾಸಗಿ ಶೌಚಾಲಯಗಳಿಲ್ಲ ಎಂದು ತಿಳಿಯುತ್ತಲೇ ಅವರು ಸಂಘಸಂಸ್ಥೆಗಳು, ಸರ್ಕಾರಿ ಏಜೆನ್ಸಿಗಳು, ಸ್ಥಳೀಯ ಆಡಳಿತಗಳು ಹಾಗೂ ದಾನಿಗಳ ಸಹಾಯ ಪಡೆದು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುವುದನ್ನು ತಮ್ಮ ಬದುಕಿನ ಮುಖ್ಯ ಉದ್ದೇಶವನ್ನಾಗಿಸಿಕೊಂಡರು.”
:- ಪಂಜು ಗಂಗೊಳ್ಳಿ