ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೂ ಕ್ರೀಮಿಲೇಯರ್ ಜಾರಿಗೆ ತರಬೇಕೆಂಬುದು ಹಲವರ ವಾದ
ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹಿಂದುಳಿದ ವರ್ಗಗಳ ನೌಕರರ ವೇತನ ಮತ್ತು ಕೃಷಿ ಆದಾಯವನ್ನು ಹೊಂದಿರುವವರ ಮಕ್ಕಳು ಕ್ರೀಮಿಲೇಯರ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ತೀರ್ಪಿನಿಂದ ಮಧ್ಯಮ ವರ್ಗ ಬಚಾವ್ ಆದಂತಾಗಿದೆ. ೧೯೯೩ರಲ್ಲಿ ಮತ್ತು ಈ ವರ್ಷದ ಮಾರ್ಚ್ ೧೧ರಂದು ಸುಪ್ರೀಂ ಕೋರ್ಟ್ ತಾನು ನೀಡಿದ ತೀರ್ಪನ್ನೇ ಪುನರುಚ್ಚರಿಸಿರುವುದರಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಆತಂಕ ನಿವಾರಣೆ ಆದಂತಾಗಿದೆ.
ಆದರೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲು ಬಯಸುವ ಅಭ್ಯರ್ಥಿಯ ತಂದೆ -ತಾಯಿ ಸರ್ಕಾರದ ಗ್ರೂಪ್ ೧ ಮತ್ತು ಗ್ರೂಪ್ ೨ರ ಹುzಯಲ್ಲಿದ್ದರೆ ಹಾಗೂ ತಂದೆ- ತಾಯಿ ತಮ್ಮ ೪೦ ವರ್ಷದೊಳಗೆ ಗ್ರೂಪ್ ಎ ಉದ್ಯೋಗಕ್ಕೆ ಬಡ್ತಿ ಪಡೆದಿದ್ದರೆ ಅಂತಹವರು ಕ್ರೀಮಿಲೇಯರ್ ವ್ಯಾಪ್ತಿಗೆ ಬರಲಿದ್ದಾರೆ. ಇವರಲ್ಲದೆ ಸೇನಾ ಪಡೆಗಳಲ್ಲಿ ತಂದೆ ಕರ್ನಲ್ ಮತ್ತು ಅದಕ್ಕಿಂತ ಹೆಚ್ಚಿನ ಹುzಯಲ್ಲಿದ್ದರೆ ಅಂತಹವರ ಮಕ್ಕಳು ಕ್ರೀಮಿಲೇಯರ್ ವ್ಯಾಪ್ತಿಯಲ್ಲಿ ಸೇರಿಕೊಳ್ಳಲಿದ್ದಾರೆ. ಹಾಗೆಯೇ ವೈದ್ಯರು, ವಕೀಲರು, ಎಂಜಿನಿಯರುಗಳು, ಚಾರ್ಟೆರ್ಡ್ ಅಕೌಂಟೆಂಟ್ಗಳು, ಆರ್ಕಿಟೆಕ್ಟ್ಸ್, ಸಿನೆಮಾ ಕಲಾವಿದರು, ಲೇಖಕರು ಹಳ್ಳಿ ಇರಲಿ, ನಗರಗಳಿರಲಿ ಆಸ್ತಿಯಿಂದ ಬರುವ ಆದಾಯಕ್ಕೆ ತೆರಿಗೆ ಕಟ್ಟುವವರ ಮಕ್ಕಳು ಕ್ರೀಮಿಲೇಯರ್ ವ್ಯಾಪ್ತಿಗೆ ಬರಲಿದ್ದಾರೆ. ಆದರೆ ಇವರ ವಾರ್ಷಿಕ ಆದಾಯ ರೂ. ಎಂಟು ಲಕ್ಷಕ್ಕಿಂತ ಹೆಚ್ಚಿರಬಾರದು ಎಂದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ನಿಯಮಗಳಲ್ಲಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಹೋಗಿಲ್ಲ.
ವರ್ಷಕ್ಕೆ ರೂ.ಎಂಟು ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರ ಮಕ್ಕಳು ಕ್ರೀಮಿಲೇಯರ್ ವ್ಯಾಪ್ತಿಗೆ ಒಳಪಡುವ ನೀತಿಯನ್ನು ೨೦೧೭ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ವಿಚಿತ್ರ ಎಂದರೆ ಕ್ರೀಮಿಲೇಯರ್ ಪದ್ಧತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ವಾರ್ಷಿಕ ಆದಾಯ ರೂ. ನಾಲ್ಕು ಲಕ್ಷ ಮೀರಿರಬಾರದು ಎಂಬ ನಿಯಮಗಳಿವೆ. ಈ ಆದಾಯ ಮಿತಿ ಕಾಲೇಜುಗಳ ಪ್ರವೇಶ ಮತ್ತು ಉದ್ಯೋಗ ಪಡೆಯಲು ಅನ್ವಯವಾಗುವುದಿಲ್ಲ ಎನ್ನುವುದೇ ಆ ವರ್ಗಕ್ಕಿರುವ ಸಮಾಧಾನ.
ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡಕ್ಕೂ ಕ್ರೀಮಿಲೇಯರ್ ಜರಿಗೆ ತರಬೇಕೆಂದು ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಸೇರಿದಂತೆ ಹಲವರು ಈಗಲೂ ವಾದ ಮಾಡುತ್ತಾರೆ. ಈ ವಾದದ ಉದ್ದೇಶ ಈ ದಮನಿತ ವರ್ಗದ ಕಡು ಬಡವರಿಗೆ ಮೀಸಲಾತಿಯ ಅವಕಾಶಗಳು ತಲುಪಬೇಕೆನ್ನುವುದು. ನಿಜ, ಈ ವಾದದಲ್ಲಿ ಮೇಲ್ನೋಟಕ್ಕೆ ಸತ್ಯ ಇರುವುದನ್ನು ತಳ್ಳಿಹಾಕಲಾಗದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಕ್ರೀಮಿಲೇಯರ್ ಅನ್ವಯವಾಗುವ ಬಗೆಗೆ ತನ್ನ ನಿಲುವನ್ನು ತಿಳಿಸಬೇಕೆಂದು ಆಗಿಂದಾಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳುತ್ತಲೇ ಬಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಈ ಸಂಬಂಧ ಪ್ರಮಾಣ ಪತ್ರವೊಂದನ್ನು ಸಲ್ಲಿಸಿ, ಈ ವರ್ಗವನ್ನು ಹಿಂದುಳಿದ ವರ್ಗದ ಜೊತೆ ಹೋಲಿಕೆ ಮಾಡಲು ಬರುವುದಿಲ್ಲ. ಸಾವಿರಾರು ವರ್ಷಗಳಿಂದ ಸಾಮಾಜಿಕ ಅನ್ಯಾಯಕ್ಕೆ ಒಳಗಾಗಿದ್ದು, ಈ ವರ್ಗದ ಮಕ್ಕಳು ಮೀಸಲಾತಿ ಪಡೆದು ಉನ್ನತ ಅವಕಾಶವನ್ನು ಪಡೆದಿದ್ದರೂ ಈಗಲೂ ಜಾತಿಯ ತಾರತಮ್ಯದಿಂದ ಅವಮಾನಿತರಾಗಿ ಹಲವಾರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಷಯದಲ್ಲಿ ಕೇವಲ ಆರ್ಥಿಕ ಮಾನದಂಡವೊಂದೇ ಮುಖ್ಯವಾಗುವುದಿಲ್ಲ. ಈ ವರ್ಗದ ಸಾಮಾಜಿಕ ಸ್ಥಾನಮಾನವನ್ನು ಗಮನದಲ್ಲಿರಿಸಿಕೊಳ್ಳಬೇಕು. ಆದ್ದರಿಂದ ಈ ವರ್ಗಕ್ಕೆ ಕ್ರೀಮಿಲೇಯರ್ ಅನ್ವಯ ಮಾಡಲು ಸರ್ಕಾರ ಮುಂದಾಗುವುದಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಕೆಲವು ಪ್ರತಿಭಾವಂತರು ಮತ್ತು ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿದ್ದರೂ ಸಮಾಜ ಅವರನ್ನು ಕೀಳಾಗಿ ನೋಡುವ ವಾಸ್ತವ ಸತ್ಯವನ್ನು ಮುಚ್ಚಿಡಲಾಗದು. ವಾಸ್ತವವಾಗಿ ಮೀಸಲಾತಿ ಸೌಲಭ್ಯ ಮೂರ್ನಾಲ್ಕು ದಶಕಗಳಿಂದೀಚೆಗೆ ಈ ವರ್ಗಕ್ಕೆ ತಲುಪಿದ್ದು, ಅದರಿಂದ ಆರ್ಥಿಕ ಪ್ರಗತಿ ಸಾಧಿಸಿರುವವರೂ ಇದ್ದಾರೆ. ಈ ಬೆರಳೆಣಿಕೆಯ ಮಂದಿಯನ್ನೇ ಆಧಾರವನ್ನಾಗಿಟ್ಟುಕೊಂಡು ಕ್ರೀಮಿಲೇಯರ್ ಜರಿಗೆ ತರುವುದು ಸೂಕ್ತವಲ್ಲ ಎನ್ನುವುದು ಸರ್ಕಾರದ ನಿಲುವು. ಈಗಾಗಲೇ ಶಿಕ್ಷಣದಲ್ಲಿ ಮೀಸಲಾತಿ ಇದ್ದರೂ, ಉನ್ನತ ಶಿಕ್ಷಣ ಸಂಸ್ಥೆಗಳಾದ ಪ್ರತಿಷ್ಠಿತ ಐಐಟಿ, ಐಐಎಂ, ಐಐಸಿಎಸ್, ಏಮ್ಸ್ ಮುಂತಾದ ಕಡೆಗಳಲ್ಲಿ ಶಿಕ್ಷಣ ಪಡೆಯಲು ಹೋಗುವ ಪರಿಶಿಷ್ಟ ಜಾತಿಯ ಮಕ್ಕಳ ಸಂಖ್ಯೆ ಇನ್ನೂ ಶೇ.೩ರಷ್ಟನ್ನು ದಾಟಿಲ್ಲ.
ಈ ಉನ್ನತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹೆಚ್ಚು ಕಡಿಮೆ ಅರ್ಥಿಕವಾಗಿ ಸಬಲರಾಗಿರುವ ಮತ್ತು ಸರ್ಕಾರದ ಉನ್ನತ ಸ್ಥಾನಗಳಲ್ಲಿರುವ ಕುಟಂಬದವರು. ಇಲ್ಲಿಯ ಶಿಕ್ಷಣ ಪಡೆಯಲು ಶೈಕ್ಷಣಿಕವಾಗಿ ಹೆಚ್ಚು ಅಂಕಗಳನ್ನು ಪಡೆದಿರುವ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಮಾತ್ರ ಬರಲು ಸಾಧ್ಯ. ಈಗಾಗಲೇ ಅಲ್ಲಿರುವ ವಿದ್ಯಾರ್ಥಿಗಳು ಬೇರೆ ವರ್ಗದ ವಿದ್ಯಾರ್ಥಿಗಳು ಮತ್ತು ಕೆಲವು ಪ್ರಾಧ್ಯಾಪಕರು ಅನುಸರಿಸುವ ತಾರತಮ್ಯದಿಂದ ಅರ್ಧಕ್ಕೆ ಶಿಕ್ಷಣ ನಿಲ್ಲಿಸುವುದು ಮತ್ತು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ವರದಿಯಾಗುತ್ತಿವೆ.
ಇಂತಹ ತಾರತಮ್ಯದಿಂದ ಆಂಧ್ರದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರೋಹಿತ್ ವೇಮುಲ ಮತ್ತು ಮುಂಬೈನ ಮೆಡಿಕಲ್ ಕಾಲೇಜೊಂದರಲ್ಲಿ ಇದ್ದ ಪಾಯಲ್ ತಡ್ವಿ ಅತ್ಮಹತ್ಯೆ ಪ್ರಕರಣಗಳನ್ನು ನೋಡಬಹುದಾಗಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಪ್ರೊ. ಥೋರಟ್ ನೇತೃತ್ವದಲ್ಲಿ ಸಮಿತಿ ಮಾಡಿದ್ದ ಶಿಫಾರಸ್ಸುಗಳನ್ನು ಈ ವರ್ಷದ ಆರಂಭದಲ್ಲಿ ಜಾರಿಗೆ ತರಲು ನಿರ್ಧರಿಸಿತಾದರೂ, ಸಾಮಾನ್ಯ ವರ್ಗಗಳ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಮೀಸಲಾತಿ ರದ್ದು ಮಾಡಬೇಕು ಎಂಬ ಹೋರಾಟಗಾರರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ಮತ್ತೆ ಈ ನಿಯಮಾವಳಿಗಳನ್ನು ಪುನರ್ ಪರಿಶೀಲನೆ ಮಾಡಲು ಮತ್ತೊಂದು ಸಮಿತಿ ನೇಮಿಸಲು ನಿರ್ಧರಿಸಿರುವುದನ್ನು ಗಮನಿಸಿದರೆ ಈಗಿನ ಪರಿಸ್ಥಿತಿ ಬದಲಾಗುವ ಸಾಧ್ಯತೆಗಳು ಇಲ್ಲ ಎನ್ನಬಹುದು.
ಮೀಸಲಾತಿ ಕೇವಲ ಆರ್ಥಿಕ ಸುಧಾರಣೆಯ ಕ್ರಮವಲ್ಲ. ಸರ್ಕಾರದ ಎಲ್ಲ ಅಂಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಇರಬೇಕೆನ್ನುವ ಪರಿಕಲ್ಪನೆ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ. ಈ ಪರಿಕಲ್ಪನೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ವರ್ಗಕ್ಕೆ ಕ್ರೀಮಿಲೇಯರ್ ಜಾರಿಗೆ ತಂದರೆ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಿಗುವುದಿಲ್ಲ ಮತ್ತು ಅಂತಹ ಕಡೆಗಳಲ್ಲಿ ಉದ್ಯೋಗ ಪಡೆಯುವ ಅಭ್ಯರ್ಥಿಗಳು ಲಭ್ಯವಾಗುವುದಿಲ್ಲ ಎನ್ನುವ ವಾಸ್ತವವನ್ನು ಗಮನಿಸುವುದು ಮುಖ್ಯ. ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹೆಚ್ಚು ಅರ್ಹತೆ ಗಳಿಸುವ ಶಕ್ತಿ ಶೈಕ್ಷಣಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸಬಲರಾಗಿರುವವರ ಮತ್ತು ಉನ್ನತ ಹುದ್ದೆಗಳಲ್ಲಿ ಇರುವವರ ಮಕ್ಕಳಿಗೆ ಸಾಧ್ಯವಾಗುವ ಸತ್ಯವನ್ನು ಕಡೆಗಣಿಸಲಾಗದು. ಇನ್ನೂ ಕೀಳರಿಮೆ ಮತ್ತು ಆರ್ಥಿಕವಾಗಿ ಸಬಲರಲ್ಲದ ಕುಟುಂಬದ ವಿದ್ಯಾರ್ಥಿಗಳು ಇಂತಹ ಉನ್ನತ ಶೈಕ್ಷಣಿಕ ಸಂಸ್ಥೆಗಳ ಮೆಟ್ಟಿಲು ಹತ್ತುವುದು ಕನಸಾಗಬಹುದು.ಈ ಹಿನ್ನೆಲೆಯನ್ನು ಪರಿಗಣಿಸಿದಾಗ ಈ ವರ್ಗಕ್ಕೆ ಕ್ರೀಮಿಲೇಯರ್ ಪದ್ಧತಿಯನ್ನು ಈಗಲೇ ಅನ್ವಯಿಸುವುದು ಕಷ್ಟ ಎನ್ನುವ ನಿರ್ಧಾರ ಅನಿವಾರ್ಯ.
ರಾಜಕೀಯವಾಗಿ ಹತ್ತಾರು ವರ್ಷಗಳಿಂದ ಅಧಿಕಾರ ರಾಜಕಾರಣ ಮಾಡುವವರು ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬರಲಿ ಎನ್ನುವ ಸಲಹೆ ಮತ್ತು ಸವಾಲು ಹಾಕುವುದನ್ನು ಕೇಳುತ್ತಿದ್ದೇವೆ. ಇಂತಹ ಸಲಹೆ ಕೇವಲ ದಲಿತೇರರಿಂದ ಮಾತ್ರವಲ್ಲ ದಲಿತ ವರ್ಗದೊಳಗೇ ಕೆಲವರಿಗೆ ಈ ಪ್ರಶ್ನೆಗಳನ್ನು ಹಾಕಲಾಗುತ್ತಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಿರುವವರು ಇಂತಹ ಪ್ರಶ್ನೆಗಳನ್ನು ನಿರಂತರವಾಗಿ ಎದುರಿಸುತ್ತಲೇ ಇದ್ದಾರೆ. ಆದರೆ ವಾಸ್ತವವಾಗಿ ಸಾಮಾನ್ಯ ಕ್ಷೇತ್ರದಿಂದ ಪರಿಶಿಷ್ಟ ವರ್ಗದ ಅಭ್ಯರ್ಥಿಯನ್ನು ಗೆಲ್ಲಿಸುವ ಮನಸ್ಥಿತಿ ದಲಿತೇತರಿಗೆ ಇನ್ನೂ ಬಂದಿಲ್ಲ ಎನ್ನುವ ಮಾತು ವಾಸ್ತವಕ್ಕೆ ಹತ್ತಿರವಾದದ್ದು.
ಕಲ್ಬುರ್ಗಿ ಜಿಲ್ಲೆಯ ಗುರುಮಿಠ್ಕಲ್ ಕ್ಷೇತ್ರದಿಂದ ಒಂಬತ್ತು ಬಾರಿ ವಿಧಾನಸಭೆಗೆ ಆರಿಸಿ ಬಂದಿದ್ದ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಈ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಚಿತ್ತಾಪುರ ಮೀಸಲು ಕ್ಷೇತ್ರವಾದಾಗ ತಮ್ಮ ಕ್ಷೇತ್ರವನ್ನು ಬದಲಾಯಿಸಿದರು. ಈ ಬಗೆಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿ, ನೋಡಿ ಗುರುಮಿಠ್ಕಲ್ ಕ್ಷೇತ್ರ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾದಾಗಲೂ ನಾನು ಅಲ್ಲಿಯೇ ಸ್ಪರ್ಧಿಸಲು ಸಾಧ್ಯವಿತ್ತು. ಆದರೆ ಬೇರೆ ವರ್ಗದ ಜನರು, ನಮಗೆ ಅವಕಾಶ ಸಿಕ್ಕಾಗಲೂ ಈ ಮನುಷ್ಯ ಇಲ್ಲಿಯೇ ಸ್ಪರ್ಧಿಸಿ ನಮಗೆ ಸಿಕ್ಕ ಅವಕಾಶವನ್ನು ಕಸಿದುಕೊಳ್ಳುತ್ತಾನೆ ಎಂದು ನನ್ನ ವಿರುದ್ಧ ಮತಚಲಾಯಿಸುವ ಮನಸ್ಸು ಮಾಡುವ ಸಾಧ್ಯತೆಗಳೇ ಹೆಚ್ಚಿದ್ದರಿಂದ ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ಹೋಗಬೇಕಾಯಿತು ಎಂದು ಉತ್ತರಿಸಿದ್ದಾಗಿ ಬರೆಯಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತನ್ನು ಪೂರ್ಣ ತಳ್ಳಿಹಾಕಲು ಬರುವುದಿಲ್ಲ. ಆದರೆ ರಾಜಕೀಯ ಪಕ್ಷಗಳು ಮತ್ತು ರಾಜಕೀಯವಾಗಿ ಸಬಲರಾದ ವ್ಯಕ್ತಿಗಳು ಸಾಮಾನ್ಯ ಕ್ಷೇತ್ರಗಳಿಂದಲೂ ಸ್ಪರ್ಧಿಸುವ ದೃಢ ಮನಸ್ಸು ಮಾಡಬೇಕು ಎನ್ನುವ ಸತ್ಯವನ್ನು ಅವರು ಅರ್ಥಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನೇರ ನಡೆ ನುಡಿಯ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿ ಎಲ್ಲ ಜನರ ವಿಶ್ವಾಸ ಗಳಿಸಿದ್ದ ದಿವಂಗತ ಕೆ.ಎಚ್.ರಂಗನಾಥ್ ಅವರೊಬ್ಬರು ಮಾತ್ರ ಚಿತ್ರದುರ್ಗ ಸಾಮಾನ್ಯ ಲೋಕಸಭೆ ಕ್ಷೇತ್ರದಿಂದ ಆರಿಸಿಬಂದದ್ದನ್ನು ಬಿಟ್ಟರೆ ಆ ದಾಖಲೆಯನ್ನು ಸರಿಗಟ್ಟಿದವರು ಮತ್ತೊಬ್ಬರು ಬರಲಿಲ್ಲ.
” ಮೀಸಲಾತಿ ಸೌಲಭ್ಯ ಪಡೆದು ಉನ್ನತ ಶಿಕ್ಷಣ ಮತ್ತು ಉನ್ನತ ಹುದ್ದೆಗಳನ್ನು ಪಡೆದು ಮತ್ತು ಹಲವಾರು ವರ್ಷಗಳಿಂದ ಮೀಸಲು ಕ್ಷೇತ್ರದಿಂದ ಮಾತ್ರ ಆರಿಸಿ ಬಂದು ಅಧಿಕಾರ ಹಿಡಿಯುವ ಹಲವರ ಬಗೆಗೆ ಅಸೂಯೆ ವ್ಯಕ್ತವಾಗುತ್ತಿರುವುದನ್ನು ಕಾಣುತ್ತೇವೆ.”





