ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಅಟ್ಟುತ್ತಿರುವ ಪ್ರದರ್ಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಕಳೆದ ವರ್ಷ ತಮಿಳುನಾಡಿನ ಹೈಕೋರ್ಟ್ ಆದೇಶ ನೀಡಿತ್ತು. ಹೊಸ ಚಿತ್ರವೊಂದರ ಬಿಡುಗಡೆಯ ವೇಳೆ ಚಿತ್ರಮಂದಿರದ ಪ್ರವೇಶ ದರ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿಧಿಸಿದ್ದನ್ನು ಪ್ರಶ್ನಿಸಿ ಪ್ರೇಕ್ಷಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ವರ್ಷಗಳ ಹಿಂದಿನ ಆ ಕೇಸನ್ನು ಇತ್ಯರ್ಥ ಮಾಡುವ ವೇಳೆ ನ್ಯಾಯಾಲಯ ಮೇಲಿನ ಆದೇಶ ನೀಡಿತ್ತು. ತಮಿಳುನಾಡು ಮತ್ತು ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರವೇಶ ದರ ಸರ್ಕಾರ ನಿಗದಿಪಡಿಸಿದಂತೆ ಇದೆ.
ಕರ್ನಾಟಕದಲ್ಲಿ ಮಾತ್ರ ಮನಸೋ ಇಚ್ಛೆ ಪ್ರವೇಶ ದರ. ಕಳೆದ ವರ್ಷ ಸರ್ಕಾರ ಗರಿಷ್ಟ ಪ್ರವೇಶ ದರ ರೂ. ೨೦೦ಕ್ಕೆ ಮೀರುವಂತಿಲ್ಲ ಎನ್ನುವ ಆದೇಶ ಮಾಡಿತ್ತು. ಆದರೆ ಇದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿತ್ತು. ಅದಿನ್ನೂ ಇತ್ಯರ್ಥ ಆಗಬೇಕಷ್ಟೆ. ಮಲ್ಟಿಪ್ಲೆಕ್ಸ್‌ಗಳದೇ ಒಂದು ರೀತಿಯಾದರೆ, ಏಕಪರದೆಯ ಚಿತ್ರ ಮಂದಿರಗಳದು ಇನ್ನೊಂದು ರೀತಿ. ಮುಖ್ಯವಾಗಿ ಬಾಡಿಗೆಯನ್ನು ಹಂಚುವ ರೀತಿ. ದೇಶಾದ್ಯಂತ ಪ್ರವೇಶ ದರಗಳು ಏನೇ ಇರಲಿ, ಬಹುತೇಕ ಮಲ್ಟಿಪ್ಲೆಕ್ಸ್ಗಳು ಮೊದಲ ವಾರ ಗಳಿಕೆಯಲ್ಲಿ ಪ್ರತಿಶತ ಐವತ್ತನ್ನು ಬಾಡಿಗೆಯಾಗಿ ಮುರಿದು, ಉಳಿದ ಮೊತ್ತವನ್ನು ವಿತರಕ/ನಿರ್ಮಾಪಕರಿಗೆ ನೀಡುತ್ತವೆ. ಹೊರ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ಸಾಮಾನ್ಯವಾಗಿ ಅವುಗಳ ಹಂಚಿಕೆ ಹೀಗಿರುತ್ತದೆ. ಕೆಲವು ಚಿತ್ರಮಂದಿರಗಳಲ್ಲಿ, ನಿರ್ಮಾಣ ಸಂಸ್ಥೆ ಮತ್ತು ಚಿತ್ರಮಂದಿರಗಳ ನಡುವಿನ ಸಂಬಂಧದ ಮೇಲೆ ಈ ಹಂಚಿಕೆ ವ್ಯತ್ಯಾಸ ಆಗಲೂಬಹುದು.
ಗಳಿಕೆ, ಆದಾಯಗಳ ಮಾತು ಒತ್ತಟ್ಟಿಗಿರಲಿ, ಚಿತ್ರಮಂದಿರಗಳಿಗೆ ಹಿಂದಿ ನಂತೆ ಪ್ರೇಕ್ಷಕರು ಬರುವುದೂ ಕಡಿಮೆ ಆಗಿದೆ ಎನ್ನುವುದನ್ನು ಈಗ ಎಲ್ಲರೂ ಒಪ್ಪುತ್ತಾರೆ. ‘ಕುಟುಂಬ ಸಮೇತ ನೋಡುವ ಚಿತ್ರ’ ಎನ್ನುವ ಘೋಷಣೆಯೊಂದಿಗೆ ಬರುವ ಚಿತ್ರಗಳು ಅಪರೂಪವಾಗಿವೆ. ಅದೇ ನಿದ್ದರೂ ‘ಮಾಸ್’ ಚಿತ್ರಗಳು ಎನ್ನುವ ಲೇಬಲ್ ಹಚ್ಚಿಕೊಂಡು ಬರುವ ಚಿತ್ರಗಳು. ನಟ ಧನಂಜಯ ಅವರು ಇದನ್ನೇ ತಮ್ಮ ಹೊಸ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೊ’ ಚಿತ್ರದ ಟೀಸರಿನಲ್ಲಿ ಪ್ರಸ್ತಾಪ ಮಾಡಿದ್ದಾರೆ.
‘ಅಲ್ಲಮ’ನಂತಹ ಪಾತ್ರ ಮಾಡಿದ ಅವರಿಗೆ ಲಾಂಗು ಹಿಡಿದಾಗ ಅವರ ಹುಡುಗರೂ ಕೈ ಹಿಡಿದರು ಎನ್ನುವುದು ಸೂಚಿಸಿದ್ದು ಇದನ್ನೇ. ಭೂಗತ ಜಗತ್ತಿನ ಕಥೆಗಳು, ಹಿಂಸೆಯ ಗರಿಷ್ಟ ದೃಶ್ಯಗಳು ಪ್ರೇಕ್ಷಕರಿಗೆ ಆಪ್ಯಾಯಮಾನ ಆಗುತ್ತವೆ ಎನ್ನುವುದನ್ನು ನಂಬಿದವರೇ ಹೆಚ್ಚು. ‘ಸೆಕ್ಸ್ – ಕ್ರೆ ಮ್ ಸೆಲ್ಸ್’ ಎನ್ನುವ ಮಾತನ್ನು ತಲೆಯ ಮೇಲೆ ಹೊತ್ತುಕೊಂಡವರದೇ ಕಾರುಬಾರು. ಚಿತ್ರದ ಕಥಾನಕಗಳೇನೇ ಇರಲಿ, ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗತೊಡಗಿದ್ದು ಕಿರುತೆರೆ ನಡುಮನೆಯ ಒಳಗೆ ಬಂದಾಗ. ಅಲ್ಲಿ ಪ್ರಸಾರವಾದ ಸರಣಿಗಳು, ಕೌಟುಂಬಿಕ ಕಥಾನಕಗಳು ಕುಟುಂಬ ಸಮೇತ ನೋಡುವ ಮನರಂಜನೆಯ ಪರ್ಯಾಯ ಆಯಿತು. ಸರಣಿಗಳ ಇನ್ನೊಂದು ಮುಖವೂ ಇದೆ. ಕುಟುಂಬಗಳನ್ನು ಒಡೆಯುವ ಕಥೆಗಳ ಸರಣಿಗಳು! ಒಟ್ಟಿನಲ್ಲಿ ಚಿತ್ರಮಂದಿರಗಳಿಂದ ಒಂದು ವರ್ಗದ ಪ್ರೇಕ್ಷಕರನ್ನು ದೂರ ಮಾಡಲು ಕಿರುತೆರೆ ಮುಖ್ಯ ಹೇತುವಾಯಿತು. ಕಿರುತೆರೆಯ ಆರಂಭದ ದಿನಗಳಲ್ಲಿ ಅವುಗಳ ವಿರುದ್ಧ ಮೂಗೆಳೆಯುತ್ತಿದ್ದ ಚಿತ್ರೋದ್ಯಮ, ಯಾವಾಗ ಚಲನಚಿತ್ರಗಳನ್ನು ಅವು ಪ್ರಸಾರ ಮಾಡತೊಡಗಿತೋ, ಆಗ ಅದನ್ನು ತಬ್ಬಿಕೊಂಡಿತು. ಜನಪ್ರಿಯ ತಾರೆಯರು ಕಾಣಸಿಗುವುದೇ ಅಪರೂಪ ಎಂದಿದ್ದ ದಿನಗಳು ಹೋಗಿ, ಒಂದಲ್ಲ ಒಂದು ವಾಹಿನಿಯಲ್ಲಿ ಈ ಜನಪ್ರಿಯ ನಟರ ದರ್ಶನ ಆಗತೊಡಗಿತು. ಅದು ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೋ, ಇಲ್ಲವೇ ಸರಣಿಗಳಲ್ಲಿ ನಟಿಸುತ್ತಲೋ, ಕಲಾವಿದರೂ ದಿನನಿತ್ಯ ನಡುಮನೆಯಲ್ಲಿ ಕಾಣಿಸಿದರು!
ಕೊರೋನಾ ದಿನಗಳು ಮನರಂಜನೋದ್ಯಮದ ಸಾಧ್ಯತೆಯನ್ನು ಬುಡಮೇಲು ಮಾಡಿತು. ಲಾಕ್‌ಡೌನ್ ದಿನಗಳಲ್ಲಿ ಒಟಿಟಿ ತಾಣಗಳು ಪ್ರಪಂಚದ ಚಲನಚಿತ್ರಗಳ ಪರಿಚಯ ಮಾಡಿ ಕೊಟ್ಟಿತು. ನೆರೆರಾಜ್ಯಗಳ ಚಿತ್ರಗಳ ಪರಿಚಯ ಹೆಚ್ಚು ಆದದ್ದೂ ಆಗಲೇ. ನಮ್ಮ ಚಲನಚಿತ್ರಗಳನ್ನು ಇತರ ಭಾಷೆಗಳವುಗಳ ಜೊತೆ ಹೋಲಿಸಿ, ತೂಕ ಹಾಕುವ ಕೆಲಸವೂ ಆಯಿತು. ಮತ್ತೆ ಚಿತ್ರಮಂದಿರಗಳು ತೆರೆದಾಗ ಪ್ರೇಕ್ಷಕರ ಉತ್ಸಾಹ ಹಿಂದಿನಂತೆ ಇರಲಿಲ್ಲ. ಅಳೆದು ತೂಗಿ, ಚಿತ್ರಮಂದಿರಗಳತ್ತ ಅವರು ಹೋಗತೊಡಗಿದರು. ಒಟಿಟಿ ತಾಣಗಳು ಆರಂಭದಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳನ್ನೂ ಕೊಂಡುಕೊಂಡವು. ಆದರೆ ಮುಂದಿನ ದಿನಗಳಲ್ಲಿ, ಅವು ತಾರಮ್ಮಯ್ಯ ಮಾಡತೊಡಗಿದ್ದು, ಕನ್ನಡದ ಚಿತ್ರಗಳತ್ತ ತಿರಸ್ಕಾರ ಭಾವ ತೋರಿದ್ದು ಎಲ್ಲವೂ ಚರ್ಚೆಯಾಗುತ್ತಲೇ ಇತ್ತು.
ಚಿತ್ರಮಂದಿರಗಳತ್ತ ಪ್ರೇಕ್ಷಕರು ಬರದಂತೆ ತಡೆಯುವುದರಲ್ಲಿ ಒಟಿಟಿಗಳ ಪಾತ್ರವೂ ಹಿರಿದು. ದುಬಾರಿ ವೆಚ್ಚದ ಚಿತ್ರಗಳ ನಿರ್ಮಾಪಕರು ಚಿತ್ರ ಬಿಡುಗಡೆಗೆ ಮೊದಲೇ ತಮ್ಮ ಚಿತ್ರಗಳನ್ನು ಒಟಿಟಿ, ಟಿವಿ ಮುಂತಾದ ಕಡೆ ಪ್ರಸಾರಕ್ಕಾಗಿ ಮಾರಿರುತ್ತಾರೆ. ಹೇಗಿದ್ದರೂ ಚಿತ್ರ ಒಟಿಟಿಯಲ್ಲೋ ಟಿವಿಯಲ್ಲೋ ಬರುತ್ತದೆ, ಆಗ ನೋಡಿದರಾಯಿತು ಎಂದುಕೊಂಡು ಮನೆಯಲ್ಲೇ ಉಳಿಯುವವರ ಸಂಖ್ಯೆ ಹೆಚ್ಚು.
ತಮಿಳುನಾಡಿನ ಪ್ರದರ್ಶಕರ ವಲಯ ಕಳೆದ ಕೆಲವು ತಿಂಗಳುಗಳಿಂದ ಈ ಕುರಿತಂತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದೆ. ಅದೆಂದರೆ, ನಿರ್ಮಾಪಕರು ತಮ್ಮ ಚಿತ್ರಗಳನ್ನು ತೆರೆಕಂಡ ೮ ವಾರಗಳ ತನಕ ಒಟಿಟಿ ಅಥವಾ ಟಿವಿಗಳಲ್ಲಿ ಪ್ರಸಾರ ಮಾಡಕೂಡದು, ಆ ರೀತಿ ಮಾರಾಟದ ವೇಳೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದೆ. ಇದನ್ನು ನಿರ್ಮಾಪಕ/ವಿತರಕರ ವಲಯ ಒಂದು ವೇಳೆ ಒಪ್ಪದೇ ಹೋದರೆ, ಇದೇ ಮೇ ೧೫ರಿಂದ ಚಿತ್ರಮಂದಿರಗಳ ಪ್ರದರ್ಶನ ನಿಲ್ಲಿಸುವ ಮತ್ತು ಯಾವುದೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡದೆ ಇರುವ ನಿರ್ಧಾರ ಮಾಡಿದೆ. ಇಂತಹ ನಿರ್ಧಾರ ಹೊಸದೇನೂ ಅಲ್ಲ. ಹಿಂದೆ ಒಟಿಟಿ ಬರುವ ಮೊದಲು, ಕಿರುತೆರೆಯಲ್ಲಿ ಪ್ರಸಾರ ಮಾಡಲು, ಚಿತ್ರ ತೆರೆಕಂಡು ಒಂದು ವರ್ಷ ಆಗಬೇಕಾಗಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿತ್ತು. ಒಂದು ವೇಳೆ ಚಿತ್ರ ಸೋತರೆ, ಗಣನೀಯ ನಷ್ಟ ಆದರೆ ಅಂತಹ ಚಿತ್ರಗಳನ್ನು ಪ್ರಸಾರ ಮಾಡಲು ಅನುಮತಿ ನೀಡುತ್ತಿತ್ತು. ಅಂತಹ ಹಲವಾರು ಪ್ರಸಂಗಗಳಿವೆ. ಆ ದಿನಗಳಲ್ಲಿ ಹೊಸ ಚಿತ್ರಗಳ ಬಿಡುಗಡೆ ಒಮ್ಮೆಲೆ ಆಗುತ್ತಿರಲಿಲ್ಲ. ಮೊದಲು ಜಿಲ್ಲಾ ಕೇಂದ್ರಗಳಲ್ಲಿ, ನಂತರ ನಗರಗಳು, ತಾಲ್ಲೂಕುಗಳು ಹೀಗೆ ‘ಎ’, ‘ಬಿ’, ‘ಸಿ’ ಎಂದು ಕೇಂದ್ರಗಳನ್ನು ವಿಂಗಡಿಸಿ, ಒಂದರ ನಂತರ ಇನ್ನೊಂದು ಕೇಂದ್ರದಲ್ಲಿ ಬಿಡುಡಗೆ ಆಗುತ್ತಿತ್ತು. ವಿತರಕರು ಕಮಿಶನ್ ಮೇಲೆ, ಇಲ್ಲವೇ ಕೊಂಡುಕೊಂಡು ಅವುಗಳನ್ನು ಬಿಡುಗಡೆ ಮಾಡುತ್ತಿದ್ದರು. ಅವರಿಗೆ ತೊಂದರೆಯಾಗದಂತೆ, ಈ ಒಂದು ವರ್ಷದ ಗಡುವು ಇರುತ್ತಿತ್ತು. ಆದರೆ ಈ ದಿನಗಳ ಬಿಡುಗಡೆಯ ರೀತಿಯೇ ಬೇರೆ. ಡಿಜಿಟಲ್ ದಿನಗಳ ನಂತರ ರಾಜ್ಯದ ‘ಎ’, ‘ಬಿ’, ‘ಸಿ’ ಎಲ್ಲ ಕೇಂದ್ರಗಳಲ್ಲಿ ಒಮ್ಮೆಲೇ ತಲಪುವ ವ್ಯವಸ್ಥೆ ಬಿಡುಗಡೆಯನ್ನು ಸುಲಭಸಾಧ್ಯವಾಗಿಸಿದೆ. ಮೊದಲಾದರೆ ಪ್ರತಿ ಊರಿಗೆ ಒಂದೊಂದು ಪ್ರಿಂಟ್ ಹಾಕಬೇಕಾಗಿತ್ತು. ಆದರೆ] ಈಗ ಒಂದು ಮಾಸ್ಟರ್ ಪ್ರತಿ ಸಾಕು. ಎಲ್ಲೆಡೆ ಪ್ರದರ್ಶನ ಸಾಧ್ಯ. ಉತ್ತರ ಭಾರತದಲ್ಲಿ ಈ ಎಂಟು ವಾರಗಳ ನಿಯಮ ಇದ್ದಂತಿದೆ. ಒಂದು ವೇಳೆ ತಮಿಳುನಾಡಿನಲ್ಲಿ ಈ ನಿಯಮವನ್ನು ನಿರ್ಮಾಪಕರು ಒಪ್ಪದೆ, ಪ್ರದರ್ಶಕರು ಬಂದ್ ಮಾಡಿದ್ದೇ ಆದರೆ, ಅದರಿಂದ ಮೊದಲು ತೊಂದರೆ ಆಗುವುದು ‘ಜನನಾಯಗನ್’ ಚಿತ್ರಕ್ಕೆ ಎಂದು ಅದಾಗಲೇ ತಮಿಳು ಚಿತ್ರೋದ್ಯಮ ಹೇಳುತ್ತಿದೆ. ಅದರ ಬಿಡುಗಡೆ ತಡವಾದ ಕಾರಣ, ಅದರ ಒಟಿಟಿ ಹಕ್ಕನ್ನು ಪಡೆದುಕೊಂಡಿದ್ದ ತಾಣ, ಒಪ್ಪಂದದಿಂದ ಹೊರಬಂದಿದೆ. ಅದೂ ಅಲ್ಲದೆ, ಈಗಾಗಲೇ ಆ ಚಿತ್ರದ ಪೈರೆಸಿ ಆಗಿದೆ. ಕೊಯಂಬತ್ತೂರಿನಲ್ಲಿ ಕೇಬಲ್ ವಾಹಿನಿನಿಯೊಂದು ಅದನ್ನು ಪ್ರಸಾರ ಮಾಡಿದ್ದಾಗಿ ಬೇರೆ ಸುದ್ದಿ ಇದೆ.
ಮುಂದಿನ ವಾರ ‘ಜನನಾಯಗನ್’ ತೆರೆಗೆ ಬರುವುದಾಗಿ ಪ್ರಕಟವಾಗಿದೆ, ಒಂದು ವೇಳೆ ನಿರ್ಮಾಪಕರ ವಲಯ ಎಂಟು ವಾರಗಳ ನಿಯಮಕ್ಕೆ ಬದ್ಧರಾಗದೆ ಹೋದರೆ ಈಗಾಗಲೇ ಹೇಳಿದಂತೆ ಮತ್ತೆ ‘ಜನನಾಯಗನ್’ ಚಿತ್ರಕ್ಕೆ ಅದರಿಂದ ತೊಂದರೆ. ತಮಿಳು ನಾಡಿನ ಎಲ್ಲ ಚಿತ್ರಮಂದಿರಗಳೂ ಮುಚ್ಚಿದರೆ ಮಾತ್ರ. ಹೊಸ ಚಿತ್ರಗಳ ಬಿಡುಗಡೆ ಇಲ್ಲ; ಈಗ ಬಿಡುಗಡೆ ಆಗಿರುವ ಚಿತ್ರಗಳನ್ನು ಮಾತ್ರ ಮುಂದುವರಿಸುತ್ತೇವೆ ಎನ್ನುವ ನಿಲುವು ತಾಳಿದರೆ ಈ ನಿರ್ಮಾಪಕರಿಗೆ ಅನುಕೂಲವಾಗಬಹುದು. ಪ್ರೇಕ್ಷಕನನ್ನು ಮತ್ತೆ ಚಿತ್ರಮಂದಿರಗಳತ್ತ ಬರುವಂತೆ ಮಾಡಲು ಇಂತಹದೊಂದು ನಿರ್ಧಾರ ಭಾಗಶಃ ನೆರವಾಗಬಹುದು. ಆದರೆ ಅಂತಿಮವಾಗಿ ಒಳ್ಳೆಯ ಕಥೆ ಮತ್ತು ಕಥಾನಕಗಳೇ ಚಿತ್ರದ ಮೂಲಾಧಾರ ಎನ್ನುವ ಸತ್ಯ ತಡವಾಗಿಯಾದರೂ ಚಿತ್ರರಂಗಕ್ಕೆ ಅರಿವಾಗುತ್ತಿದೆ.
” ತಮಿಳುನಾಡು ಮತ್ತು ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರವೇಶ ದರ ಸರ್ಕಾರ ನಿಗದಿಪಡಿಸಿದಂತೆ ಇದೆ. ಕರ್ನಾಟಕದಲ್ಲಿ ಮಾತ್ರ ಮನಸೋ ಇಚ್ಛೆ ಪ್ರವೇಶ ದರ. ಕಳೆದ ವರ್ಷ ಸರ್ಕಾರ ಗರಿಷ್ಟ ಪ್ರವೇಶ ದರ ರೂ.೨೦೦ಕ್ಕೆ ಮೀರುವಂತಿಲ್ಲ ಎನ್ನುವ ಆದೇಶ ಮಾಡಿತ್ತು. ಆದರೆ ಇದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿತ್ತು. ಅದಿನ್ನೂ ಇತ್ಯರ್ಥ ಆಗಬೇಕಷ್ಟೆ.”





