Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಅಸ್ಥಿರ ಬಾಂಗ್ಲಾ: ಯೂನಸ್ ರಾಜೀನಾಮೆ ಬೆದರಿಕೆ

ಡಿ.ವಿ.ರಾಜಶೇಖರ 

ಬಾಂಗ್ಲಾದಲ್ಲಿ ವಿದ್ಯಾರ್ಥಿ ಚಳವಳಿಯಿಂದಾಗಿ ಹೊಸ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತಿರ ಹತ್ತಿರ ವರ್ಷ ಆಗುತ್ತಾ ಬಂದರೂ ರಾಜಕೀಯ ಸ್ಥಿರತೆ ಸ್ಥಾಪಿತವಾಗಿಲ್ಲ. ದೇಶದಲ್ಲಿ ಜನರು ಒಂದಲ್ಲ ಒಂದು ಕಾರಣ ಮುಂದೆ ಮಾಡಿಕೊಂಡು ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದಾರೆ. ಈ ಪ್ರತಿಭಟನೆಗಳನ್ನು ನಿಭಾಯಿಸುವುದೇ ಸರ್ಕಾರಕ್ಕೆ ದೊಡ್ಡ ಕೆಲಸವಾಗಿದೆ. ಸ್ಥಳೀಯ ಸಮಸ್ಯೆಗಳ ಜತೆಗೆ ಇದೀಗ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧವಾಗಿ ವಿವಾದ ಎದ್ದು ಬೀದಿ ರಂಪ ಆಗುತ್ತಿದೆ.

ಎಷ್ಟು ಕಾಲ ತಾತ್ಕಾಲಿಕ ಸರ್ಕಾರ ಅಧಿಕಾರದಲ್ಲಿ ಇರಲು ಬಿಡಬೇಕು ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಾಜಕೀಯ ನಾಯಕರು ಸಾರ್ವಜನಿಕವಾಗಿ ಚರ್ಚೆಗೆ ಇಳಿದಿದ್ದಾರೆ. ಮೊದಲು ಆಡಳಿತ ಸುಧಾರಣೆ ತರಬೇಕು ಎಂಬ ಬಯಕೆಯನ್ನು ಇತ್ತೀಚೆಗೆ ತಾತ್ಕಾಲಿಕ ಸರ್ಕಾರದ ಮುಖ್ಯಸಲಹೆಗಾರ (ವಾಸ್ತವವಾಗಿ ಆಡಳಿತಗಾರ) ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಮದ್ ಯೂನಸ್ ವ್ಯಕ್ತಮಾಡಿದ ಹಿನ್ನೆಲೆಯಲ್ಲಿ ಈ ವಿವಾದ ಎದ್ದಿದೆ. ಷೇಕ್ ಹಸೀನಾ ದೇಶಬಿಟ್ಟು ಹೋಗುವ (೫ನೇ ಆಗಸ್ಟ್ ೨೦೨೪) ಮತ್ತು ಹೊಸ ಸರ್ಕಾರ ರಚನೆ ಮಾಡುವ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೇನಾ ಮಖ್ಯಸ್ಥ ಜನರಲ್ ವಕಾರ್ ಉರ್ ಜಮಾನ್ ಅವರು ಬಹಿರಂಗವಾಗಿಯೇ ಈ ವರ್ಷದ ಡಿಸೆಂಬರ್ ಒಳಗೆ ಚುನಾವಣೆ ನಡೆಯಬೇಕು ಎಂದು ಹೇಳಿರುವುದು ಸರ್ಕಾರದ ಮಟ್ಟದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ. ಸುಧಾರಣೆಗಳನ್ನು ತಾತ್ಕಾಲಿಕ ಸರ್ಕಾರ ತರುವುದು ಸಮಂಜಸವಲ್ಲ ಎನ್ನುವುದು ಅವರ ಅಭಿಪ್ರಾಯ. ಸೇನಾ ಮುಖ್ಯಸ್ಥರ ಅಭಿಪ್ರಾಯಕ್ಕೆ ಅನುಗುಣವಾಗಿ ದೇಶದ ಪ್ರಮುಖ ರಾಜಕೀಯ ಪಕ್ಷವಾದ ಬಾಂಗ್ಲಾ ದೇಶ್ ನ್ಯಾಷನಲಿಸ್ಟ್ ಪಾರ್ಟಿ ( ಖಲೀದಾ ಜಿಯಾ ಅಧ್ಯಕ್ಷೆ) ಮುಖಂಡರೂ ಚುನಾವಣೆ ಇದೇ ವರ್ಷ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಸೇನಾ ಮುಖ್ಯಸ್ಥರೂ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಯೂನಸ್ ಅವರನ್ನು ಭೇಟಿ ಮಾಡಿ ಚುನಾವಣೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಯೂನಸ್ ಅವರು ರಾಜೀನಾಮೆ ಬೆದರಿಕೆಯನ್ನೂ ಹಾಕಿದರೆನ್ನಲಾಗಿದೆ. ಇಂಥ ಸ್ಥಿತಿಯಲ್ಲಿ ವಿದಾರ್ಥಿಗಳ ರಾಜಕೀಯ ಸಂಘಟನೆಯಾದ ನ್ಯಾಷನಲ್ ಸಿಟಿಜನ್ ಪಾರ್ಟಿ ನಾಯಕ ನಹೀದ್ ಇಸ್ಲಾಮ್ ಅವರು ಯೂನಸ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ಯೂನಸ್ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಅವರು ಚುನಾವಣೆ ಈ ವರ್ಷ ಬೇಡ, ಮುಂದಿನ ವರ್ಷ ನಡೆಯುವುದು ಸೂಕ್ತ ಎಂದು ಹೇಳಿದ್ದಾರೆ. ಮೊದಲು ರಾಜಕೀಯ ಸುಧಾರಣೆಗಳು ಆಗಬೇಕು ಎಂಬ ಯೂನಸ್ ಅಭಿಪ್ರಾಯವನ್ನು ಅವರು ಅನುಮೋದಿಸಿದ್ದಾರೆ. ಆದರೆ ಈ ವಿಚಾರದಲ್ಲಿ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಯೂನಸ್ ಮತ್ತೆ ಮತ್ತೆ ಅಧಿಕಾರ ತ್ಯಜಿಸುವ ಮಾತನ್ನು ಆಡುತ್ತಿರುವುದು ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಈ ಮಧ್ಯೆ ಹಿಂದಿನ ಪ್ರಧಾನಿ ಷೇಕ್ ಹಸೀನಾ ಕಾಲದಲ್ಲಿ ನಿಷೇಧಿಸಲಾಗಿದ್ದ ಬಾಂಗ್ಲಾ ದೇಶದ ಪ್ರಮುಖ ರಾಜಕೀಯ ಪಕ್ಷವಾಗಿದ್ದ ಜಮಾತೆ-ಇ -ಇಸ್ಲಾಮಿ ಪಕ್ಷಕ್ಕೆ ಮತ್ತೆ ಜೀವ ಬಂದಿದೆ. ಪಕ್ಷದ ಮೇಲಿನ ನಿಷೇಧವನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ಆಶ್ಚರ್ಯ ಹುಟ್ಟಿಸಿದೆ. ಇದರ ಬೆನ್ನಲ್ಲೇ ಆ ಪಕ್ಷದ ನಾಯಕ ಅಜರುಲ್ ಇಸ್ಲಾಂಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನೂ ಕೋರ್ಟ್ ರದ್ದು ಮಾಡಿದೆ.

೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಜಮಾತೆ ಇಸ್ಲಾಮಿ ಮತ್ತು ಅದರ ನಾಯಕ ಅಜರುಲ್ ಇಸ್ಲಾಮ್ ಪಾಕಿಸ್ತಾನವನ್ನು ಬೆಂಬಲಿಸಿದ್ದರು. ಈ ಕಾರಣಕ್ಕೇ ಹಿಂದಿನ ಸರ್ಕಾರ ಯುದ್ಧಾಪರಾಧ ಆರೋಪ ಹೊರಿಸಿತ್ತು. ನ್ಯಾಯಾಲಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಪಾಕಿಸ್ತಾನದ ಪರ ನಿಲುವು ತೆಗೆದುಕೊಂಡು ಪಾಕ್ ಸೇನೆಗೆ ನೆರವಾಗಿದ್ದ ಜಮಾತ್ ಇ ಇಸ್ಲಾಮಿ ಮತ್ತೆ ಬಾಂಗ್ಲಾದೇಶದಲ್ಲಿ ತಲೆಎತ್ತಲು ಅವಕಾಶ ಮಾಡಿಕೊಟ್ಟಿರುವುದು ದೇಶದ ರಾಜಕೀಯ ಸ್ವರೂಪವನ್ನೇ ಬದಲಾಯಿಸಲಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದ ಜಮಾತ್ ಇ ಇಸ್ಲಾಮಿ ಪಕ್ಷಕ್ಕೆ ಬಾಂಗ್ಲಾ ದೇಶದಲ್ಲಿ ಹಿಂದೆ ಸಾಕಷ್ಟು ಜನಬೆಂಬಲ ಇತ್ತು. ಈಗಲೂ ಪಾಕಿಸ್ತಾನವನ್ನು ಬೆಂಬಲಿಸುವ ಜನರು ಬಾಂಗ್ಲಾದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಮತ್ತೊಂದು ಪ್ರಬಲ ಪಕ್ಷವಾಗಿದ್ದ ಷೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮೇಲೆ ಹೊಸ ಸರ್ಕಾರ ನಿಷೇಧ ಹೇರಿದೆ. ಆ ಪಕ್ಷದ ಬಹುಪಾಲು ನಾಯಕರನ್ನು ಜೈಲಿಗೆ ದೂಡಲಾಗಿದೆ. ಹೀಗಾಗಿ ಅವಾಮಿ ಲೀಗ್ ಚುನಾವಣೆಗಳಲ್ಲಿಸ್ಪರ್ಧಿಸುವ ಸಾಧ್ಯತೆ ಇಲ್ಲ.

ಭಾರತ ಮತ್ತು ಬಾಂಗ್ಲಾ ನಡುವಣ ಸಂಬಂಧ ಕೆಟ್ಟಿರುವ ಹಾಗೆಯೇ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧವೂ ಹದಗೆಟ್ಟಿರುವ ಈ ಸಂದರ್ಭ ಹಲವು ಕೆಟ್ಟ ಬೆಳವಣಿಗೆಗಳಿಗೆ ಎಡೆಮಾಡಿಕೊಟ್ಟಿದೆ. ಷೇಕ್ ಹಸೀನಾ ಪರಾರಿಯಾಗಿ ಉಳಿದುಕೊಂಡಿರುವುದು ಭಾರತದಲ್ಲಿ. ಭಾರತ ಹಸೀನಾಗೆ ರಾಜಕೀಯ ಆಶ್ರಯ ನೀಡಿದೆ. ಬಾಂಗ್ಲಾ ಸರ್ಕಾರ ಅವರ ವಿರುದ್ಧ ಜನರ ಸಾಮೂಹಿಕ ಹತ್ಯೆಯ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ತನಿಖೆ ಆರಂಭಿಸಿ ಅವರನ್ನು ತಮ್ಮ ದೇಶಕ್ಕೆ ಒಪ್ಪಿಸಲು ಒತ್ತಾಯಿಸುತ್ತಿದೆ. ಆದರೆ ಭಾರತ ಆ ಒತ್ತಾಯಕ್ಕೆ ಮಣಿಯುತ್ತಿಲ್ಲ. ಹಸೀನಾ ಅವರನ್ನು ದೇಶಕ್ಕೆ ತಂದು ಶಿಕ್ಷೆ ವಿಧಿಸಲು ವಿರೋಧ ಪಕ್ಷಗಳು ಅಷ್ಟೇ ಏಕೆ ಮುಖ್ಯ ಸಲಹೆಗಾರ ಮಹಮದ್ ಯೂನಸ್ ಕೂಡಾ ಕಾತರರಾಗಿದ್ದಾರೆ. ಹಸೀನಾ ಸರ್ಕಾರದಿಂದ ಸಾಕಷ್ಟು ಕಿರುಕುಳವನ್ನು ತಾವು ಅನುಭವಿಸಿದ್ದಾಗಿ ಸ್ವತಃ ಯೂನಸ್ ಅವರೇ ಹಿಂದೆ ಹೇಳಿಕೊಂಡಿದ್ದಾರೆ.

ಅವರಿಗೂ ಸೇಡು ತೀರಿಸಿಕೊಳ್ಳುವ ಹಂಬಲ ಇದ್ದಂತೆ ಕಾಣುತ್ತಿದೆ. ಇದೇನೇ ಇದ್ದರೂ ಹಸೀನಾ ಅವರ ತಂದೆ ಷೇಖ್ ಮುಜಿಬುರ್ ರಹಮಾನ್ ಅವರು ಭಾರತದ ಆಪ್ತ ಮಿತ್ರರಾಗಿದ್ದರು. ಬಾಂಗ್ಲಾ ವಿಮೋಚನೆಗೆ ಈ ಸ್ನೇಹವೂ ಕಾರಣವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಎರಡು ದಿಕ್ಕಿನಲ್ಲಿ ಪಾಕಿಸ್ತಾನ ಇರುವುದು ಭಾರತದ ಭದ್ರತೆಗೆ ಸದಾ ಸಮಸ್ಯೆ ಒಡ್ಡುತ್ತಿತ್ತು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಪೂರ್ವ ಪಾಕಿಸ್ತಾನದ ಸೇನಾ ಆಡಳಿತವನ್ನು ನಿರ್ನಾಮ ಮಾಡಿ ಹೊಸ ದೇಶ ಬಾಂಗ್ಲಾವನ್ನು ರೂಪಿಸಲಾಯಿತು. ಇದಕ್ಕೆ ಬೆಂಬಲವಾಗಿ ನಿಂತವರು ಮುಜಿಬುರ್ ರಹಮಾನ್. ಬಾಂಗ್ಲಾ ಮುಸ್ಲಿಮ್ ಬಹುಸಂಖ್ಯಾತ ದೇಶವಾದರೂ ಅಲ್ಲಿ ೧.೩೦ ಕೋಟಿ ಹಿಂದೂಗಳು ವಾಸವಾಗಿದ್ದಾರೆ. ಅವರ ರಕ್ಷಣೆ ಭಾರತದ ಕರ್ತವ್ಯ. ಈ ದೃಷ್ಟಿಯಿಂದಲೂ ಭಾರತದೊಡನೆ ಸಹಕರಿಸುವ ಸರ್ಕಾರ ಅಲ್ಲಿ ಬೇಕಿತ್ತು. ಮುಜಿಬುರ್ ರಹಮಾನ್ ಸರ್ಕಾರ ಅಂತೆಯೇ ಹಸೀನಾ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾಲದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರು.

ಹಸೀನಾ ದೇಶ ಬಿಟ್ಟ ನಂತರ ಮೊದಲು ದಾಳಿ ನಡೆದದ್ದೇ ಹಿಂದೂಗಳ ಮೇಲೆ. ಬದಲಾವಣೆಯ ಸಂದರ್ಭದಲ್ಲಿ ಸತ್ತ ಹಿಂದೂಗಳ ಸಂಖ್ಯೆ ೧೪೦೦ ಎಂದು ಹೇಳಲಾಗಿದೆ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಈಗಿನ ಆಡಳಿತಗಾರ ಮಹಮದ್ ಯೂನಸ್ ನಿರ್ಲಕ್ಷ  ತಾಳಿದ್ದಾರೆ. ಏನೂ ಆಗಿಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ದೃಷ್ಟಿಯಿಂದ ಭಾರತ ಪರವಾದಿ ಹಸೀನಾಗೆ ಆಶ್ರಯ ನೀಡಿರುವುದಕ್ಕೆ ಸಮರ್ಥನೆಯಿದೆ. ಆದರೆ ರಾಜಕೀಯ ಸನ್ನಿವೇಶಗಳು ಹೇಗೆ ನಿರ್ಮಾಣವಾಗುತ್ತವೆ ಎಂಬುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಹಸೀನಾ ಅವರಿಗೆ ಆಶ್ರಯ ಕೊಟ್ಟಷ್ಟು ದಿನ ಬಾಂಗ್ಲಾದ ಆಡಳಿತಗಾರರು ಭಾರತದ ಪರ ಇರುವುದಿಲ್ಲ.ಅಷ್ಟೇ ಅಲ್ಲ ಅಲ್ಲಿನ ಜನರಲ್ಲಿ ಭಾರತ ವಿರೋಧಿ (ಹಿಂದೂ ವಿರೋಧಿ) ಮನಸ್ಥಿತಿ ಬದಲಾಗುವುದಿಲ್ಲ. ಈ ಪರಿಸ್ಥಿತಿಯನ್ನು ಬಹು ಎಚ್ಚರಿಕೆಯಿಂದ ಭಾರತ ನಿಭಾಯಿಸಬೇಕಿದೆ.

ಭಾರತ ಮತ್ತು ಬಾಂಗ್ಲಾ ನಡುವಣ ಬಾಂಧವ್ಯ ಕೆಡುತ್ತಿರುವುದು ಪಾಕಿಸ್ತಾನದ ನಾಯಕರಿಗೆ ರೋಮಾಂಚನ ತಂದಂತೆ ಕಾಣುತ್ತಿದೆ. ಅಥವಾ ಭಾರತಕ್ಕೆ ಮುಜುಗರ ಉಂಟುಮಾಡುವ ಉದ್ದೇಶದಿಂದ ಪಾಕ್ ಜೊತೆಗಿನ ಬಾಂಧವ್ಯ ಮರುಸ್ಥಾಪಿಸಲು ಯೂನಸ್ ಮುಂದಾದಂತೆ ಕಾಣುತ್ತಿದೆ. ಬೇರೆ ದೇಶದಲ್ಲಿ ಆದ ಸಮಾರಂಭದಲ್ಲಿ ಯೂನಸ್ ಅವರು ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಅವರೊಡನೆ ಮಾತುಕತೆ ನಡೆಸಿದ್ದಾರೆ. ಇದರ ಪರಿಣಾಮವೋ ಎಂಬಂತೆ ಸುಮಾರು ಐದು ದಶಕಗಳ ಬಳಿಕ ಎರಡೂ ದೇಶಗಳ ನಡುವೆ ವಾಣಿಜ್ಯ ವಹಿವಾಟು ಆರಂಭಗೊಂಡಿದೆ. ಅಷ್ಟೇ ಅಲ್ಲ ಮಿಲಿಟರಿ ಅಧಿಕಾರಿಗಳು ಬಾಂಗ್ಲಾ ದೇಶಕ್ಕೆ ಭೇಟಿ ನೀಡಿ ರಕ್ಷಣಾ ಸಂಬಂಧಗಳನ್ನು ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಯುದ್ಧ ವಿಮಾನ ಕೊಡಲು ಪಾಕ್ ಮುಂದೆ ಬಂದಿದೆ. ಪಾಕಿಸ್ತಾನ ಪಾಪರ್ ಆಗಿದೆ. ಐಎಂಎಫ್, ವಿಶ್ವಬ್ಯಾಂಕ್, ಎಡಿಬಿಯಂಥ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸರ್ಕಾರ ನಡೆಸಲಾಗುತ್ತಿದೆ. ಚೀನಾ ಮತ್ತು ಅರೆಬಿಯಾ ರಾಷ್ಟ್ರಗಳ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಇಂಥ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ನೆರವಾಗಲು ಮುಂದೆ ಬಂದಿರುವುದು ಒಂದು ದೊಡ್ಡ ತಮಾಷೆ. ಇವೆಲ್ಲದರ ಮುಖ್ಯ ಉದ್ದೇಶ ಭಾರತಕ್ಕೆ ಕಿರಿಕಿರಿ ಉಂಟುಮಾಡುವುದೇ ಆಗಿದೆ.

ಭಾರತಕ್ಕೆ ನೆರೆ ದೇಶಗಳದ್ದೇ ದೊಡ್ಡ ಸಮಸ್ಯೆ. ಮುಖ್ಯವಾಗಿ ಚೀನಾ ಆಡಳಿತಗಾರರು ನೆರವು ನೀಡುವ ಮೂಲಕ ಭಾರತದ ನೆರೆಯ ದೇಶಗಳನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಈಗ ಆಪ್ತ ದೇಶ ಚೀನಾ. ಅಪಾರ ಪ್ರಮಾಣದಲ್ಲಿ ಚೀನಾ ದೇಶ ಪಾಕಿಸ್ತಾನಕ್ಕೆ ನೆರವು ನೀಡಿದೆ ಮತ್ತು ಬಂಡವಾಳ ಹೂಡಿದೆ. ಅಷ್ಟೇ ಅಲ್ಲ ಪಾಕ್‌ಗೆ ಸಂಬಂಧಿಸಿದ ಎಲ್ಲ ವಿಚಾರದಲ್ಲಿಯೂ ಚೀನಾ ತಲೆಹಾಕುತ್ತಿದೆ. ಪಾಕ್ ಭಯೋತ್ಪಾದನೆ ನಿಗ್ರಹಿಸಲು ಸಿಂಧೂ ನದಿ ಒಪ್ಪಂದ ಸ್ಥಗಿತಮಾಡುವುದಾಗಿ ಭಾರತ ಹೇಳಿದರೆ ಅದರ ಪರಿಣಾಮ ನೆಟ್ಗಿರುವುದಿಲ್ಲ ಎಂದು ಚೀನಾ ಪ್ರತಿಕ್ರಿಯೆ ನೀಡುತ್ತದೆ. ಸಿಂಧೂ ಅಷ್ಟೇ ಅಲ್ಲ ಬ್ರಹ್ಮಪುತ್ರಾ ನದಿ ಹುಟ್ಟುವುದು ಚೀನಾ ಟಿಬೆಟ್‌ನಲ್ಲಿ ಎನ್ನುವುದನ್ನು ನೆನಪು ಮಾಡಿಕೊಳ್ಳುವಂತೆ ಭಾರತಕ್ಕೆ ಚೀನಾ ಎಚ್ಚರಿಕೆ ನೀಡುತ್ತದೆ. ಪಾಕಿಸ್ತಾನಕ್ಕೆ ಇಂಥ ಭದ್ರತೆಯನ್ನು ಚೀನಾ ನೀಡುತ್ತಿದೆ. ಇಂಥ ಸಂದರ್ಭದಲ್ಲಿ ಬಾಂಗ್ಲಾದೇಶ ಕೈತಪ್ಪಿಹೋಗುವಂತಿಲ್ಲ. ಅದೊಂದು ಶತ್ರು ದೇಶವಾಗಿ ಬೆಳೆದರೆ ಭಾರತ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇತರ ನೆರೆಯ ದೇಶಗಳಾದ ಶ್ರೀಲಂಕಾ, ಮಾಲ್ಡೀವ್ಸ್ ಮೇಲೂ ನಿಯಂತ್ರಣ ಸಾಧಿಸಲು ಚೀನಾ ಯತ್ನಿಸುತ್ತಿರುವುದನ್ನು ಭಾರತ ಮರೆಯುವಂತಿಲ್ಲ. ಬಾಂಗ್ಲಾ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಬಾಂಧವ್ಯ ಕುದುರುವುದು ಅಪಾಯದ ಸೂಚನೆಯಾಗಿದೆ.

” ಬಾಂಗ್ಲಾದೇಶ ಶತ್ರು ದೇಶವಾಗಿ ಬೆಳೆದರೆ ಭಾರತ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇತರ ನೆರೆಯ ದೇಶಗಳಾದ ಶ್ರೀಲಂಕಾ, ಮಾಲ್ಡೀವ್ಸ್ ಮೇಲೂ ನಿಯಂತ್ರಣ ಸಾಽಸಲು ಚೀನಾ ಯತ್ನಿಸುತ್ತಿರುವುದನ್ನು ಭಾರತ ಮರೆಯುವಂತಿಲ್ಲ. ಬಾಂಗ್ಲಾ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಬಾಂಧವ್ಯ ಕುದುರುವುದು ಅಪಾಯದ ಸೂಚನೆಯಾಗಿದೆ”

Tags:
error: Content is protected !!