Mysore
21
overcast clouds
Light
Dark

ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲ : ಬಿಜೆಪಿಗೆ ಪ್ರಿಯಾಂಕ್ ತಿರುಗೇಟು

ಬೆಂಗಳೂರು : ರಾಜ್ಯದಲ್ಲಿ ಆರ್‌ಎಸ್‌ಎಸ್‌ ಬ್ಯಾನ್ ವಿಚಾರವಾಗಿ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡುವ ಮೂಲಕ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಗರು ಪದೇ ಪದೆ ಆರ್‌ಎಸ್‌ಎಸ್‌ ಬ್ಯಾನ್ ಮಾಡಿ ನೋಡಿ ಅಂತಿದ್ದಾರೆ. ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲ. ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಂಸವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ. ಆಗ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಬಜರಂಗದಳ, ಆರ್‌ಎಸ್‌ಎಸ್‌ ಸೇರಿ ಯಾವುದೇ ಸಂಘಟನೆ ನಿಷೇಧದ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಯಾಗಿಲ್ಲ. ಸಚಿವ ಸಂಪುಟ ಪೂರ್ಣಗೊಂಡ ಬಳಿಕ ಇಂತಹ ವಿಚಾರಗಳ ಪರಿಶೀಲನೆ ನಡೆಯಲಿದೆ. ಒಬ್ಬೊಬ್ಬರೆ ಹೇಳಿಕೆ ನೀಡಿದ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಶಾಂತಿ ಕದಡುವ ಕೆಲಸ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆವು. ಕಾನೂನು ಕೈಗೆ ತೆಗೆದುಕೊಂಡು ಶಾಂತಿ ಕದಡುವ ಪ್ರಯತ್ನ ಮಾಡಿದರೆ ಕ್ರಮವಾಗುತ್ತದೆ. ಪಠ್ಯ ಪುಸ್ತಕ ಪರಿಷ್ಕರಣೆ ಸೇರಿದಂತೆ ಇಂತಹ ವಿಚಾರಗಳ ಬಗ್ಗೆ ಸಚಿವ ಸಂಪುಟ ರಚನೆ ಪೂರ್ಣಗೊಂಡ ಬಳಿಕ ಪರಿಶೀಲನೆ ನಡೆಸಲಾಗುವುದು. ಅಗತ್ಯ ಬಿದ್ದರೆ ಕ್ರಮವಾಗುತ್ತದೆ ಎಂದರು.

ಆರ್‌ಎಸ್‌ಎಸ್‌ ನಿಷೇಧಕ್ಕೆ ಬಿಜೆಪಿ ಸವಾಲ್‌: ಆರ್‌ಎಸ್‌ಎಸ್‌, ಬಜರಂಗದಳ ನಿಷೇಧ ಮಾಡುವ ಕುರಿತು ಕಾಂಗ್ರೆಸ್‌ ನಾಯಕರು ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದಿದ್ದು, ತಾಕತ್‌ ಇದ್ದರೆ ನಿಷೇಧ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಮಾಜಿ ಸಚಿವ ಆರ್‌.ಅಶೋಕ್‌ ಪ್ರತ್ಯೇಕವಾಗಿ ಮಾತನಾಡಿ, ಕಾಂಗ್ರೆಸ್‌ ಹೇಳಿಕೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು, ಆರ್‌ಎಸ್‌ಎಸ್‌, ಬಜರಂಗದಳ ನಿಷೇಧದ ಕುರಿತು ಕಾಂಗ್ರೆಸ್‌ ಹೇಳಿಕೆ ನೀಡಿದೆ. ನಿಷೇಧ ಮಾಡಿ ತೋರಿಸಲಿ.

ಯಾವುದೇ ಸಂಘ-ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಅದನ್ನು ಮಾಡುವುದು ಕೇಂದ್ರ ಸರ್ಕಾರ. ಇದೆಲ್ಲ ಗೊತ್ತಿದ್ದರೂ ಸಹ ತುಷ್ಟೀಕರಣದ ರಾಜಕಾರಣ ಮಾಡಲು ಹೊರಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ ಅವರಿಗೂ ಇವರು ಯಾಮಾರಿಸುತ್ತಿದ್ದಾರೆ ಎಂದು ಟೀಕಿಸಿದರು. ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಸಂಘಟನೆಯನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಷೇಧ ಮಾಡಲು ಮುಂದಾಗಿದ್ದವರನ್ನು ಈಗಾಗಲೇ ಮನೆಗೆ ಕಳುಹಿಸಲಾಗಿದೆ. ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿ, ರಾಜಕೀಯವಾಗಿ ಎದುರಿಸುತ್ತೇವೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ