Mysore
23
broken clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಗಾಜಾ ಪ್ರಜೆಗಳಿಗೆ ಇಸ್ರೇಲ್ ಆದೇಶ: ಇದು ವಿನಾಶಕಾರಿ ಪರಿಣಾಮಗಳಿಗೆ ಎಡೆಮಾಡಿಕೊಡಲಿದೆ ಎಂದ ವಿಶ್ವಸಂಸ್ಥೆ

ಟೆಲ್ ಅವಿವ್ : ಗಾಜಾ ಪಟ್ಟಿಯ ಮೇಲಿನ ತನ್ನ ದಾಳಿ ಮುಂದುವರಿಸಿರುವ ಇಸ್ರೇಲ್ ಪಡೆಗಳು, 24 ಗಂಟೆಗಳ ಒಳಗೆ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಹತ್ತು ಲಕ್ಷಕ್ಕೂ ಅಧಿಕ ಗಾಜಾ ಪ್ರಜೆಗಳಿಗೆ ಸೂಚನೆ ನೀಡಿದೆ. ಈ ಮೂಲಕ ಉತ್ತರ ಭಾಗದಿಂದ ಗಾಜಾ ಪಟ್ಟಿಯೊಳಗೆ ಭೂಸೇನಾ ಪಡೆಗಳ ಭಯಾನಕ ದಾಳಿ ಆರಂಭಿಸುವ ನಿರೀಕ್ಷೆಗಳನ್ನು ಬಲಪಡಿಸಿದೆ.

ಇದು ‘ವಿನಾಶಕಾರಿ ಪರಿಣಾಮಗಳಿಗೆ’ ಎಡೆಮಾಡಿಕೊಡಲಿದೆ ಎಂದಿರುವ ವಿಶ್ವಸಂಸ್ಥೆ, ದುರಂತವನ್ನು ವಿಪತ್ತಿನ ಪರಿಸ್ಥಿತಿಯಾಗಿ ಪರಿವರ್ತಿಸುವ ಸಾಹಸಕ್ಕೆ ಕೈಹಾಕದೆ, ಗಾಜಾ ಪ್ರಜೆಗಳ ಸಾಮೂಹಿಕ ಒಕ್ಕಲೆಬ್ಬಿಸುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಇಸ್ರೇಲ್‌ ಸೇನೆಗೆ ಒತ್ತಾಯಿಸಿದೆ.

ಒತ್ತೆಯಾಳುಗಳ ರಕ್ಷಣೆಯೇ ಆದ್ಯತೆ : ಹಮಾಸ್ ಉಗ್ರರು ಸುಮಾರು 150 ಒತ್ತೆಯಾಳುಗಳನ್ನು ಇರಿಸಿಕೊಂಡಿದೆ. ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಇಸ್ರೇಲ್, ಇಲ್ಲದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಪಹೃತರ ಬಿಡುಗಡೆಯವರೆಗೂ ತನ್ನ ಆಕ್ರಮಣವನ್ನು ನಿಲ್ಲಿಸುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದೆ.

ಗಾಜಾ ನಗರದಲ್ಲಿನ ಸುರಂಗಗಳ ಒಳಗೆ ಹಮಾಸ್ ಬಂಡುಕೋರರು ಅಡಗಿರುವುದರಿಂದ ಸ್ಥಳಾಂತರ ಆದೇಶ ಮಾಡಲಾಗಿದೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. “ಗಾಜಾ ನಿವಾಸಿಗಳೇ, ನಿಮ್ಮ ವೈಯಕ್ತಿಕ ಹಾಗೂ ನಿಮ್ಮ ಕುಟುಂಬಗಳ ಸುರಕ್ಷತೆಗಾಗಿ ದಕ್ಷಿಣಕ್ಕೆ ಸ್ಥಳಾಂತರಗೊಳ್ಳಿ. ನಿಮ್ಮನ್ನು ಮಾನವ ಗುರಾಣಿಗಳಂತೆ ಬಳಸುತ್ತಿರುವ ಹಮಾಸ್ ಉಗ್ರರಿಂದ ಅಂತರ ಕಾಪಾಡಿಕೊಳ್ಳಿ. ಮುಂಬರುವ ದಿನಗಳಲ್ಲಿ ಗಾಜಾ ನಗರದಲ್ಲಿ ಐಡಿಎಫ್ ಗಣನೀಯ ಕಾರ್ಯಾಚರಣೆ ನಡೆಸಲಿದೆ ಮತ್ತು ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಬಯಸುತ್ತದೆ” ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

ದಕ್ಷಿಣದಲ್ಲಿ ಈಜಿಪ್ಟ್ ಹಾಗೂ ಉತ್ತರ ಮತ್ತು ಪೂರ್ವದಲ್ಲಿ ಇಸ್ರೇಲ್ ಜತೆ ಗಾಜಾ ಗಡಿಗಳನ್ನು ಹಂಚಿಕೊಂಡಿದೆ.

ವಿಶ್ವಸಂಸ್ಥೆ ಮನವಿ : ಇಸ್ರೇಲ್ ಆದೇಶಕ್ಕೆ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ತನ್ನ ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಿದೆ. “ವಿನಾಶಕಾರಿ ಮಾನವೀಯ ಪರಿಣಾಮಗಳಿಲ್ಲದೆ ಅಂತಹ ಚಲನವಲನ ನಡೆಯುವುದು ಅಸಾಧ್ಯ ಎಂದು ವಿಶ್ವಸಂಸ್ಥೆ ಪರಿಗಣಿಸುತ್ತದೆ” ಎಂದು ಅದು ಹೇಳಿದೆ. ವಿಶ್ವಸಂಸ್ಥೆಯು ದಕ್ಷಿಣ ಗಾಜಾಕ್ಕೆ ತನ್ನ ಕಾರ್ಯಾಚರಣೆಗಳನ್ನು ಸ್ಥಳಾಂತರ ಮಾಡಿದೆ. ಈ ಆದೇಶವು ವಿಶ್ವಸಂಸ್ಥೆಯ ಸಿಬ್ಬಂದಿ ಹಾಗೂ ಶಾಲೆಗಳು ಮತ್ತು ಕ್ಲಿನಿಕ್‌ಗಳಂತಹ ತನ್ನ ಸೌಲಭ್ಯಗಳಲ್ಲಿ ಆಶ್ರಯ ಪಡೆದವರಿಗೂ ಅನ್ವಯ ಎಂದು ಅದು ತಿಳಿಸಿದೆ.

ಗಾಜಾದ ಉತ್ತರ ಭಾಗದಲ್ಲಿ ಸುಮಾರು 11 ಲಕ್ಷ ನಿವಾಸಿಗಳಿದ್ದಾರೆ. ಇದು ಇಡೀ ಗಾಜಾದ ಅಂದಾಜು ಅರ್ಧ ಭಾಗದಷ್ಟಿದ್ದು, ಅವರೆಲ್ಲರೂ 24 ಗಂಟೆಗಳಲ್ಲಿ ದಕ್ಷಿಣ ದಿಕ್ಕಿನತ್ತ ತೆರಳುವಂತೆ ಇಸ್ರೇಲ್ ಸೂಚಿಸಿದೆ. ಇದು ನಿಜಕ್ಕೂ ಅಸಾಧ್ಯದ ಮಾತು ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫಾನೆ ಡುಜಾರಿಕ್ ಹೇಳಿದ್ದಾರೆ.

ಗಾಜಾ ಮೇಲಿನ ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್, ಸತ್ತು ಬಿದ್ದಿರುವ ತನ್ನ ಮಕ್ಕಳು ಹಾಗೂ ನಾಗರಿಕರ ಶವಗಳ ಚಿತ್ರಗಳನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ನ್ಯಾಟೋ ರಕ್ಷಣಾ ಸಚಿವರುಗಳಿಗೆ ತೋರಿಸಿದೆ. ಅವರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದೆ.

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1300ಕ್ಕೂ ಅಧಿಕ ಇಸ್ರೇಲಿಗಳು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 1500ಕ್ಕೂ ಹೆಚ್ಚು ಪ್ಯಾಲೆಸ್ಟೀನಿಗಳು ಬಲಿಯಾಗಿದ್ದಾರೆ.

ಇಸ್ರೇಲ್ ತನ್ನ ಬಾಂಬ್ ದಾಳಿಯನ್ನು ನಿಲ್ಲಿಸದೇ ಹೋದರೆ ಇತರೆ ದೇಶಗಳೂ ಯುದ್ಧವನ್ನು ಸೇರಿಕೊಳ್ಳುವ ಅಪಾಯವಿದೆ ಎಂದು ಇಸ್ರೇಲ್‌ನಲ್ಲಿನ ವಿಶ್ವಸಂಸ್ಥೆ ಕಚೇರಿ ಎಚ್ಚರಿಕೆ ಕೊಟ್ಟಿದೆ. ಹಮಾಸ್ ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂದು ಇರಾನ್ ವರದಿಗಳನ್ನು ನಿರಾಕರಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ