Mysore
22
overcast clouds
Light
Dark

‘ಹಾಡುಪಾಡು ರಾಮು’ ಇನ್ನಿಲ್ಲ

ಮೈಸೂರು : ‘ಆಂದೋಲನ’ ದಿನಪತ್ರಿಕೆಯ ಹೃದಯದಂತಿರುವ ಹಾಡುಪಾಡು ಸಂಚಿಕೆಯ ಆರಂಭಕ್ಕೆ ಮೇಟಿಯಾಗಿದ್ದ, ‘ಹಾಡುಪಾಡು ರಾಮು’ ಎಂದೇ ಖ್ಯಾತಿಯಾಗಿದ್ದ ಹಿರಿಯ ಪತ್ರಕರ್ತ ಟಿ.ಎಸ್.ರಾಮಸ್ವಾಮಿ (69) ಅವರು ಮಂಗಳವಾರ ಬೆಳಗಿನ ಜಾವ 3.20ರಲ್ಲಿ ಹೃದಯಾಘಾತದಿಂದ ಸರಸ್ವತಿಪುರಂನ 9ನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಅತ್ಯಾಪ್ತರಾಗಿದ್ದರು. ‘ ಆಂದೋಲನ’ ದಿನಪತ್ರಿಕೆಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು. ಪತ್ರಿಕೆಯ ಹಾಡುಪಾಡು ಸಂಚಿಕೆಗೆ ರಾಮಸ್ವಾಮಿ ಅವರ ಕೊಡುಗೆ ಅಪಾರವಾಗಿತ್ತು. ಇತ್ತೀಚಿನವರೆಗೂ ಮಾರ್ಗದರ್ಶನ ನೀಡುತ್ತಿದ್ದರು.

ಮೃತರು ಸೋದರಿ ರಾಜಲಕ್ಷ್ಮಿ, ಸೋದರ ಟಿ.ಎಸ್.ವೇಣುಗೋಪಾಲ್, ನಾದಿನಿ ಶೈಲಜಾ, ಸೋದರಿಯ ಪತಿ ಡಾ.ಎಸ್.ತುಕಾರಾಮ್, ಮತ್ತೊಬ್ಬ ಸೋದರಿ ದಿ.ಕುಮುದವಲ್ಲಿ ಅವರ ಪತಿ ರಾಘವೇಂದ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಅವಿವಾಹಿತರಾಗಿದ್ದ ರಾಮು ಅವರು, ಪತ್ರಿಕಾರಂಗದಲ್ಲಿ ಪ್ರಾಮಾಣಿಕತೆಗೆ ಮಾದರಿಯಾಗಿದ್ದರು. ನೊಂದವರು, ಬಡವರ ಏಳಿಗೆಗೆ ಪತ್ರಿಕೆಗಳು ಸ್ಪಂದಿಸಬೇಕಾದ ಬಗೆಯನ್ನು ಪ್ರತಿಕ್ಷಣ ಚಿಂತಿಸುತ್ತಿದ್ದರು. ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು. ರಾಮು ಅವರ ಗರಡಿಯಲ್ಲಿ ಪಳಗಿದ ದೊಡ್ಡ ಸಂಖ್ಯೆಯ ಪತ್ರಕರ್ತರು ಮೈಸೂರು ಸೇರಿದಂತೆ ರಾಜ್ಯಾದ್ಯಂತ ಇದ್ದಾರೆ.

ರಾಮಸ್ವಾಮಿ ಅವರು ಕವಿಯೂ ಆಗಿದ್ದು, ಅಗ್ನಿಸೂಕ್ತ ಮತ್ತು ರಾಮು ಕವಿತೆಗಳು ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ.

ಅಂತಿಮ ದರ್ಶನ : ಮಧ್ಯಾಹ್ನ ೧ ಗಂಟೆವರೆಗೆ ರಾಮಸ್ವಾಮಿ ಅವರ ಮೃತದೇಹವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ಸ್ಮಶಾನದ ಅನಿಲ ಚಿತಾಗಾರದಲ್ಲಿ ರಾಮಸ್ವಾಮಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ