ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ಇಲ್ಲದೇ ಕೆಎಂಎಫ್ ಹೆಚ್ಚು ಮಾಡಿದೆ. ಇದು ಮಧ್ಯಮ ವರ್ಗದ ಗ್ರಾಹಕರ ಮೇಲೆ ಹೇರಿದ ಹೆಚ್ಚಿನ ಹೊರೆ.ಬಹುತೇಕ ಮಧ್ಯಮ ವರ್ಗದ ಜನರು ನಂದಿನಿ ಉತ್ಪನ್ನಗಳನ್ನೇ ಬಳಸುತ್ತಾರೆ. ಈಗ ಬೆಲೆ ಏರಿಕೆಯಿಂದ ಈ ವರ್ಗದ ಜನರು ತುಪ್ಪ ತಿನ್ನುವ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ. ತುಪ್ಪ ತಿನ್ನುವ ಅನಿವಾರ್ಯತೆ ಇದ್ದರೆ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತಹ ನಾಣ್ಣುಡಿ ಈಗ ಹೆಚ್ಚು ಪ್ರಸ್ತುತವಾಗುತ್ತಿದೆ ಎಂದು ಅನಿಸುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ನವೆಂಬರ್ ತಿಂಗಳಲ್ಲಿ ಕೆಎಂಎಫ್ ತುಪ್ಪ ಮತ್ತು ಬೆಣ್ಣೆ ಉತ್ಪನ್ನಗಳ ಬೆಲೆಯನ್ನು ಶೇ. ೬ ರಷ್ಟು ಏರಿಕೆ ಮಾಡಿತ್ತು. ಅಂದರೆ ಕಳೆದ ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಈ ಎರಡು ನಂದಿನಿ ಉತ್ಪನ್ನಗಳನ ಬೆಲೆಯನ್ನು ಏರಿಕೆ ಮಾಡಿದೆ. ಜನ ಸಾಮಾನ್ಯರ ಬಗ್ಗೆ ತೀವ್ರ ಕಾಳಜಿ ವಹಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುಪ್ಪದ ವಿಷಯಕ್ಕಿಂತ ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಂತೆ ಇದೆ!
-ಬೂಕನಕೆರೆ ವಿಜೇಂದ್ರ , ಮೈಸೂರು



