Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಮಂಡ್ಯ ಬಂದ್ ಗೆ ಸಂಪೂರ್ಣ ಬೆಂಬಲ : ಕನ್ನಡ ಸಂಘಟನೆಗಳು,ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿ

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿದೆ, ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದರು, ಬೆಳಿಗ್ಗೆ ತೆರೆದಿದ್ದ ಹೋಟೆಲ್ ಗಳು ಬಂದ್ ಕಾವೇರುತ್ತಿದ್ದಂತೆ ಬಾಗಿಲು ಮುಚ್ಚಿದವು.

ಚಲನಚಿತ್ರ ಮಂದಿರಗಳು ಬೆಳಗಿನ ಮತ್ತು ಮಧ್ಯಾಹ್ನದ ಚಿತ್ರ ಪ್ರದರ್ಶನವನ್ನು ರದ್ದು ಮಾಡಿದ್ದವು, ಸರ್ಕಾರಿ ಮತ್ತು ಖಾಸಗಿ ಬಸ್, ಟೆಂಪೋ ಸೇರಿ ಖಾಸಗಿ ವಾಹನ ಸಂಚಾರ ಸ್ಥಗಿತವಾಗಿತ್ತು, ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು,ಆಟೋ ಸಂಚಾರ ವಿರಳವಾಗಿತ್ತು, ಕೆಲವು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ತೆರೆದಿದ್ದ ಕಾಲೇಜುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.

ಬಂದ್ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದರೆ ಸಾರ್ವಜನಿಕರ ಓಡಾಟ ಕಡಿಮೆಯಾಗಿತ್ತು, ಬೈಕ್ ಜಾಥಾ ಮೂಲಕ ಮಂಡ್ಯ ನಗರ ಸುತ್ತಿದ ಪ್ರತಿಭಟನಾಕಾರರು ಕೆಲವು ಪ್ರದೇಶಗಳಲ್ಲಿ ತೆರೆದಿದ್ದ ಅಂಗಡಿಗಳ ಬಾಗಿಲು ಮುಚ್ಚಿಸಿದರು ಪ್ರಮುಖ ಪ್ರದೇಶವಾದ ಪೇಟೆ ಬೀದಿ, ಬೆಂಗಳೂರು -ಮೈಸೂರು ಹೆದ್ದಾರಿ,ವಿ.ವಿ ರಸ್ತೆ,ಗುತ್ತಲು ರಸ್ತೆ, ಡಾ.ಬಿ. ಆರ್ ಅಂಬೇಡ್ಕರ್ ರಸ್ತೆ,ಆರ್‌, ಪಿ ರಸ್ತೆ, ವಿನೋಬಾ ರಸ್ತೆ, ಕೆ ಆರ್ ರಸ್ತೆ,ವಿವೇಕಾನಂದ ರಸ್ತೆ ಗಳಲ್ಲಿ ಬಂದ್ ವಾತಾವರಣ ಕಂಡು ಬಂದಿತು.

ಕೊನೆಯ ಶನಿವಾರ ನಿಮಿತ್ತ ಕೇಂದ್ರ, ರಾಜ್ಯ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿರುವ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಸಾರ್ವಜನಿಕರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೆ, ಪ್ರತಿಭಟನಾಕಾರರು ಸಹ ಅತ್ತ ಸುಳಿಯಲಿಲ್ಲ, ನ್ಯಾಯಾಲಯ ಎಂದಿನಂತೆ ಕಾರ್ಯ ಕಲಾಪ ಆರಂಭಿಸಿತ್ತಾದರೂ ವಕೀಲರು ಕಾರ್ಯಕಲಾಪ ಬಹಿಷ್ಕರಿಸಿದರು. ಕಾವೇರಿ ಹೋರಾಟದ ಮಂಡ್ಯ ಬಂದ್ ಗೆ ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮಂಡ್ಯ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಾಗಿತ್ತು,ಪ್ರಮುಖ ಆಯಾ ಕಟ್ಟಿನಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ