ಶ್ರೀರಂಗಪಟ್ಟಣ : ತಾಲ್ಲೂಕಿನ ನಗುವನಹಳ್ಳಿ ಗೇಟ್ ಬಳಿಯ ಫ್ಲೈ ಓವರ್‌ನಲ್ಲಿ ಭಾನುವಾರ ಮುಂಜಾನೆ 5.30ರ ಸಮಯದಲ್ಲಿ ಕಾರೊಂದು ಪಲ್ಟಿಹೊಡೆದು ಹೊತ್ತಿ ಉರಿದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾದ ನಿವೃತ್ತ ಸೈನಿಕ ಕಿಶೋರ್ ಬಾಬು(45) ಮೃತಪಟ್ಟ ವ್ಯಕ್ತಿ.
ಇವರು ಎಕ್ಸ್ ಯುವಿ ಮಹೇಂದ್ರ ಕಾರಿನಲ್ಲಿ ಮೈಸೂರು, ಊಟಿ ಪ್ರವಾಸಕ್ಕೆ ಹೋಗುತ್ತಿದ್ದು ಬೆಳಗಿನ ಜಾವ ಡಿವೈಡರ್‌ಗೆ ಹೊಡೆದು ಕಾರು ಪಲ್ಟಿಯಾಗಿ ಹೊತ್ತಿ ಉರಿದಿದೆ.
ಮೃತ ಕಿಶೋರ್‌ಬಾಬು ಸಹೋದರ ನವೀನ್ ಬಾಬು ಹಾಗೂ ಯುವರಾಜ್, ರಮೇಶ್, ಧನಪಾಲ್ ಇವರು ಗಾಯಗೊಂಡಿದ್ದು, ಈ ನಾಲ್ವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ, ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
ಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.