ನವದೆಹಲಿ: ಅತ್ಯಾಚಾರ ಸಂತ್ರಸ್ತೆ ಮಾಂಗ್ಲಿಕ್ ಎನ್ನುವುದನ್ನು ಪತ್ತೆ ಹಚ್ಚಲು ಆಕೆಯ ಜಾತಕವನ್ನು ಪರೀಕ್ಷಿಸುವಂತೆ ಅಲಹಾಬಾದ್ ಹೈಕೋರ್ಟ್‍ನ ಆದೇಶದ ಮೇರೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ವಿದೇಶದಲ್ಲಿದ್ದರೂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ಧಾರೆ.
ಮುಖ್ಯನ್ಯಾಯಮೂರ್ತಿಗಳ ಸೂಚನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿಥಾಲ್ ವಿಶೇಷ ಸಭೆ ನಡೆಸಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದಾರೆ.
ಅತ್ಯಾಚಾರ ಸಂತ್ರಸ್ತ ಮಹಿಳೆ ಮಾಂಗ್ಲಿಕ್ ಆಗಿರುವುದರಿಂದ ಆಕೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆರೋಪಿ ಹೇಳಿದ ಬಳಿಕ ಆಕೆಯ ಜಾತಕ ಪರಿಶೀಲಿಸುವಂತೆ ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ಥೆಗೆ ನ್ಯಾಯ ಒದಗಿಸಲು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂತಿ ಚಂದ್ರಚೂಡ್ ಮಧ್ಯ ಪ್ರವೇಶಿಸಿದ್ಧಾರೆ.
ಸುಪ್ರೀಂ ಕೋರ್ಟ್‍ಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಯಾವುದೇ ವಿಚಾರಣೆ ನಡೆಯುವುದಿಲ್ಲ. ಅಲಹಾಬಾದ್ ಹೈಕೋರ್ಟ್ ಆದೇಶದ ಬಗ್ಗೆ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮಾಹಿತಿ ತಿಳಿದುಕೊಂಡು ಸಮಸ್ಯೆಯನ್ನು ಗಮನಿಸಲು ನ್ಯಾಯಪೀಠಕ್ಕೆ ಸೂಚಿಸಿದ್ದಾರೆ.
ಭಾರತೀಯ ಸಮಾಜದಲ್ಲಿ ಮಂಗಳ ಗ್ರಹದ ಪ್ರಭಾವದಿಂದ ಜನಿಸಿದ ವ್ಯಕ್ತಿಗೆ “ಮಂಗಳ ದೋಷ” ಇದೆ ಎಂದು ನಂಬುತ್ತಾರೆ. ಮಾಂಗಲ್ಯ ಮತ್ತು ಮಾಂಗಲ್ಯೇತರರ ನಡುವಿನ ವಿವಾಹ ಅಶುಭ ಎಂಬ ಮೂಢನಂಬಿಕೆ ಇದೆ ಎಂದು ನ್ಯಾಯಪೀಠಕ್ಕೆ ವಕೀಲರು ತಂದಿದ್ದರು.
ಮದುವೆಯ ನೆಪದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿರುವ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಹಾಬಾದ್ ಹೈಕೋರ್ಟ್‍ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಮಹಿಳೆ ಮಾಂಗ್ಲೀಕ್ ಆಗಿರುವುದರಿಂದ ಮದುವೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಮೇ 23 ರಂದು, ಹೈಕೋರ್ಟ್ ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರಿಗೆ ಮಹಿಳೆಯ ಜಾತಕವನ್ನು ಅಧ್ಯಯನ ಮಾಡಿ ಅವರ ಹಕ್ಕು ನಿಜವೇ ಎಂದು ಪರಿಶೀಲಿಸುವಂತೆ ಸೂಚಿಸಿತ್ತು. ಅದಕ್ಕೆ ಈಗ ಸುಪ್ರೀಂಕೋರ್ಟ್ ತಡೆ ನೀಡಿದೆ.