ವರ್ಷಗಳ ಹಿಂದಿನ ಮಾತು. ೧೯೯೭. ಹೆಸರಾಂತ ಸಾಪ್ತಾಹಿಕವೊಂದಕ್ಕಾಗಿ ‘ಈಗ ಹೇಗೆ’ ಅಂಕಣ ಬರೆಯುತ್ತಿದ್ದ ದಿನಗಳು. ಕನ್ನಡ ಚಿತ್ರರಂಗದ ಸಾಧಕರನ್ನು, ಅವರ ಇಳಿವಯಸ್ಸಿನಲ್ಲಿ ಮಾತನಾಡಿಸಿ ಬರೆಯುತ್ತಿದ್ದ ಅಂಕಣವದು. ಕಾಂಚನಾ, ಕಮಲಾಬಾಯಿ, ರಾಜಕುಮಾರಿ ಸೇರಿದಂತೆ ಕೆಲವರನ್ನು ಬೆಂಗಳೂರಿನಲ್ಲಿ ಇದಕ್ಕಾಗಿ ಮಾತನಾಡಿಸಿದ್ದಿದೆ. ಅಜ್ಞಾತರಾಗಿ ಉಳಿದಿದ್ದ ಕಾಂಚನಾ ಅವರ ಕುರಿತು ಅಂಕಣ ಪ್ರಕಟವಾಗುತ್ತಲೇ, ಇತರ ಭಾಷಾ ಪತ್ರಿಕೆಗಳೂ ಅವರನ್ನು ಮಾತನಾಡಿಸಿದ್ದು, ಹೆತ್ತವರಿಂದ ಅವರಿಗಾದ ಅನ್ಯಾಯ ಸರಿಹೋದ ಬೆಳವಣಿಗೆ ಇತ್ಯಾದಿ ಇತ್ತು.
ಈ ಅಂಕಣಕ್ಕಾಗಿ ಮದರಾಸಿನಲ್ಲಿ (ಈಗಿನ ಚೆನ್ನೆ ) ಹಲವರನ್ನು ಭೇಟಿಯಾಗಿದ್ದಿದೆ. ಅವರಲ್ಲಿ ನಟಿ, ನಿರ್ಮಾಪಕಿ ಎಂ. ವಿ. ರಾಜಮ್ಮ ಒಬ್ಬರು. ರಂಗಭೂಮಿಯಲ್ಲಿ ಹೆಸರಾಗಿದ್ದವರು ರಾಜಮ್ಮ. ರಂಗಭೂಮಿಯಲ್ಲಿ ಪ್ರಚಂಡ ಯಶಸ್ಸು ಕಂಡ, ಎಚ್‌ಎಲ್‌ಎನ್ ಸಿಂಹ ನಿರ್ದೇಶನದ ‘ಸಂಸಾರನೌಕ’ ನಾಟಕ ಚಲನಚಿತ್ರವಾದಾಗ ಅದರಲ್ಲಿ ನಟಿಸಿದ ಬಿ. ಆರ್. ಪಂತುಲು, ರಾಜಮ್ಮ ಮುಂತಾದವರು ಅಲ್ಲೂ ಅವಕಾಶ ಪಡೆದರು. ಸಿಂಹ ಅವರೇ ನಿರ್ದೇಶಕರು. ೧೯೩೬ರಲ್ಲಿ ತೆರೆಕಂಡ ಈ ‘ಸಂಸಾರನೌಕ’ ಮೊದಲ ಕನ್ನಡ ಸಾಮಾಜಿಕ ಚಿತ್ರ. ನಂತರ ಅವರೇ ‘ರಾಧಾರಮಣ’ ಚಿತ್ರ ನಿರ್ಮಿಸಿ, ನಟಿಸುವುದರ ಮೂಲಕ ದಕ್ಷಿಣ ಭಾರತದ ಮೊದಲ ನಿರ್ಮಾಪಕಿ ಅನಿಸಿಕೊಂಡರು. ಆ ಚಿತ್ರದ ಮೂಲಕ ಜಿ. ವಿ. ಅಯ್ಯರ್, ಬಾಲಣ್ಣ ಮೊದಲಾದವರನ್ನು ಬೆಳ್ಳಿತೆರೆಗೆ ಪರಿಚಯಿಸಿದರು.
ಅದಿನ್ನೂ ದಕ್ಷಿಣ ಭಾರತದ ಎಲ್ಲ ಭಾಷಾ ಚಿತ್ರರಂಗಗಳೂ ಮದರಾಸಿನಲ್ಲಿ ತಳವೂರಿದ್ದ ದಿನಗಳು. ತಮಿಳು, ತೆಲುಗು, ಮಲಯಾಳ, ಕನ್ನಡ ಚಿತ್ರಗಳು ಬಹುತೇಕ ಅಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಕಲಾವಿದರು, ತಂತ್ರಜ್ಞರು ಹೆಚ್ಚಿನವರು ಅಲ್ಲೇ ವಾಸವಾಗಿರುತ್ತಿದ್ದರು. ಇದರಿಂದ ಕನ್ನಡದ ಕಲಾವಿದರು, ತಂತ್ರಜ್ಞರು ಇತರ ಭಾಷಾ ಚಿತ್ರರಂಗಗಳಲ್ಲಿ ಕೂಡ ಕೆಲಸ ಮಾಡಲು ಅವಕಾಶ ಸಿಗುತ್ತಿತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡವರೂ ಇದ್ದರು.
ಪಂತುಲು ಮತ್ತು ರಾಜಮ್ಮ ಅವರ ಪದ್ಮಿನಿ ಪಿಕ್ಚರ್ಸ್ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಗಳಲ್ಲೂ ಚಿತ್ರಗಳನ್ನು ನಿರ್ಮಿಸಿತ್ತು. ಕನ್ನಡ ಕಲಾವಿದರು, ತಂತ್ರಜ್ಞರು ಇತರ ಭಾಷೆಗಳಲ್ಲಿ ಅವಕಾಶ ಸಿಕ್ಕಾಗ ನಟಿಸಿದ್ದೂ ಇದೆ. ಅದಿನ್ನೂ ಎಲ್ಲ ಭಾಷೆಗಳಲ್ಲಿ ಬೆರಳೆಣಿಕೆಯ ಚಿತ್ರಗಳು ತಯಾರಾಗುತ್ತಿದ್ದ ದಿನಗಳು. ಹಾಗಾಗಿ ಸಿಕ್ಕ ಅವಕಾಶ ಬಳಸಿಕೊಳ್ಳುವ ಅಗತ್ಯವೂ ಇತ್ತು.
ರಾಜಮ್ಮ ಅವರು ಮಾತನಾಡುತ್ತಾ, ಕರ್ನಾಟಕದಲ್ಲಿ ಪ್ರತಿಭೆಗೆ ಸೂಕ್ತ ಮನ್ನಣೆ ಇಲ್ಲ; ಅವಕಾಶಗಳೂ ಇಲ್ಲ. ಎನ್ನುತ್ತಾ ‘ಕರ್ನಾಟಕ ನನಗೇನು ಕೊಟ್ಟಿದೆ? ’ ಎಂದು ನೊಂದುಕೊಂಡಿದ್ದರು. ಆ ವೇಳೆಗಾಗಲೇ ಅವರು ಇದ್ದಾರೋ ಇಲ್ಲವೋ ಎಂದು ಅನುಮಾನ ವ್ಯಕ್ತಪಡಿಸಿದವರೂ ಇದ್ದರೆನ್ನಿ. ಅವರು ಇದ್ದಾರೆ ಎಂದು ತಿಳಿದ ನಂತರ, ಕನ್ನಡ ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗಾಗಿ ಕೊಡುಗೆ ನೀಡಿದವರಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ರಾಜಕುಮಾರ್ ಪ್ರಶಸ್ತಿಗೆ ಆ ವರ್ಷ ಅವರನ್ನು ಆಯ್ಕೆ ಮಾಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲಾಗದ ಅವರಿಗೆ, ಅಲ್ಲೇ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರಾಜಮ್ಮ ಅವರು ಹೇಳಿದ ‘ಕರ್ನಾಟಕದಲ್ಲಿ ಪ್ರತಿಭೆಗೆ ಸೂಕ್ತ ಮನ್ನಣೆ ಇಲ್ಲ; ಅವಕಾಶಗಳು ಇಲ್ಲ’ ಎಂಬ ಮಾತು ನೆನಪಾದದ್ದು ಇತ್ತೀಚೆಗೆ ಇಬ್ಬರು ಪ್ರತಿಭಾವಂತರ ಮಾತು, ಅನುಭವ ಕೇಳಿದಾಗ. ಅವರಲ್ಲೊಬ್ಬರು ಯುವ ನಿರ್ದೇಶಕರು, ಇನ್ನೊಬ್ಬರು ನಟರು. ನಿರ್ದೇಶನದ ಮೊದಲ ಚಿತ್ರದ ಮೂಲಕ ತಮ್ಮ ನಿರ್ದೇಶನ ಪ್ರತಿಭೆಯನ್ನು ಪ್ರದರ್ಶಿಸಿದ ಈ ನಿರ್ದೇಶಕರಿಗೆ ಮುಂದಿನ ಚಿತ್ರ ನಿರ್ದೇಶಿಸಲು ಕನ್ನಡದ ಯಾವುದೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಿಂದಲೂ ಕರೆ ಬಂದಿಲ್ಲ! ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ, ರಾಷ್ಟ್ರೀಯ ಗೌರವವನ್ನೂ ಪಡೆದ ಚಿತ್ರದ ನಿರ್ದೇಶಕರು ಇವರು. ಮೊದಲ ಚಿತ್ರದ ನಂತರ ಎರಡನೇ ಚಿತ್ರದ ಚಿತ್ರಕಥೆ ಸಿದ್ಧವಾಗಿದೆ. ಅದಕ್ಕಾಗಿ ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿದ್ದಾರೆನ್ನಿ.
ಕನ್ನಡ ಚಿತ್ರೋದ್ಯಮದ ಯಾವ ನಿರ್ಮಾಪಕರಾಗಲಿ, ನಿರ್ಮಾಣ ಸಂಸ್ಥೆಯಾಗಲಿ ಕೇಳಿಲ್ಲ; ಆದರೆ ತೆಲುಗು ಮತ್ತು ಹಿಂದಿ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ತಮ್ಮನ್ನು ಸಂಪರ್ಕಿಸಿವೆ ಎಂದು ಹೇಳುವ ಅವರಿಗೆ ಇಲ್ಲಿ ತಮ್ಮಂತಹವರು ಅವಕಾಶ ವಂಚಿತರಾಗುವ ಬಗ್ಗೆ ಸಹಜವಾಗಿಯೇ ನೋವಿದೆ.
‘ಉಗ್ರಂ’ ಚಿತ್ರ ನಿರ್ದೇಶಿಸಿದ ಪ್ರಶಾಂತ್ ನೀಲ್, ಕನ್ನಡದಲ್ಲಿ ‘ಕೆಜಿಎಫ್’, ‘ಕೆಜಿಎಫ್ ಚಾಪ್ಟರ್ ೨’ ಚಿತ್ರಗಳ ನಂತರ ನಿರ್ದೇಶಿಸಿದ ತೆಲುಗು ‘ಸಾಲಾರ್’ ಚಿತ್ರದ ನಂತರ ಅಲ್ಲಿ ನೆಲೆಯೂರುವ ಸಾಧ್ಯತೆಯೇ ಹೆಚ್ಚು ಎನ್ನುವ ಮಾತು ಕೇಳಿಬರುತ್ತಿದೆ. ಹೊಂಬಾಳೆಗಾಗಿ ತಯಾರಾದ ‘ಬಘೀರ’ನ ರಚನೆ ಮಾತ್ರ ಅವರದು; ನಿರ್ದೇಶಿಸಿದ್ದು, ಡಾ. ಸೂರಿ. ಕರ್ನಾಟಕ ಮೂಲದವರಾದರೂ, ನಿರ್ದೇಶಕ ರಾಜಮೌಳಿ ತಮ್ಮ ಭವಿಷ್ಯ ಕಂಡುಕೊಂಡದ್ದು ತೆಲುಗು ಚಿತ್ರರಂಗದಲ್ಲಿ.
ಜನಪ್ರಿಯ ನಟರು, ತಾರೆಯರು ವರ್ಷದಲ್ಲಿ ಎರಡೋ ಮೂರೋ ಚಿತ್ರಗಳನ್ನು ನೀಡಿದರೆ ಮಾತ್ರ ಚಿತ್ರೋದ್ಯಮ ಇಲ್ಲಿ ಉಳಿಯಲು ಸಾಧ್ಯ ಎನ್ನುವ ಹೊಸರಾಗ ಈಗ ಹಳೆಯದಾಗುತ್ತಿದೆ. ಆದರೆ ಬರುವ ಹೊಸ ಪ್ರತಿಭೆಗಳೇ ತಾರೆಯರಾಗುತ್ತಾರೆ ಎನ್ನುವುದು ಮಾತ್ರ ಅವರ ಗಮನದಲ್ಲಿ ಇಲ್ಲ ಎನ್ನುವುದು ಚೋದ್ಯದ ವಿಷಯ. ಸಮರ್ಥ ನಿರ್ದೇಶಕನೊಬ್ಬ ನಟನ ಪ್ರತಿಭೆಯನ್ನು ಗುರುತಿಸಬಲ್ಲ. ಕನ್ನಡದಲ್ಲಿ ಅದಕ್ಕೊಂದು ಜ್ವಲಂತ ಉದಾಹರಣೆ ಪುಟ್ಟಣ್ಣ ಕಣಗಾಲರು. ಅವರು ಗುರುತಿಸಿದ, ಪರಿಚಯಿಸಿದ, ಕಲಾವಿದರು, ತಂತ್ರಜ್ಞರು, ಸಾಹಿತಿಗಳು ಕನ್ನಡ ಚಿತ್ರರಂಗದ ಹಾದಿಯನ್ನು ಬದಲಾಯಿಸಿದ್ದು ಈಗ ಇತಿಹಾಸ.
ಇಬ್ಬರು ಪ್ರತಿಭಾವಂತರು ಎಂದು ಪ್ರಸ್ತಾಪಿಸಿದವರಲ್ಲಿ ಇನ್ನೊಬ್ಬರು ನಟರು. ಸಾಂಸ್ಕ ತಿಕ ಹಿನ್ನೆಲೆ, ರಂಗಭೂಮಿಯಲ್ಲಿ ಚಿಕ್ಕಂದಿನಿಂದಲೇ ಅನುಭವ, ವಿದೇಶದಲ್ಲಿ ಚಲನಚಿತ್ರ ಅಭಿನಯ ಮತ್ತು ಇತರ ವಿಭಾಗಗಳಲ್ಲಿ ತರಬೇತಿ ಪಡೆದಿರುವ ಈ ಕೊಡಗಿನ ಹುಡುಗ ಬೆರಳೆಣಿಕೆಯ ಕನ್ನಡ ಚಿತ್ರಗಳಲ್ಲಿ, ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಕೊಂಡಿದ್ದಾರೆ. ಮುಖ್ಯಭೂಮಿಕೆಯ ಚಿತ್ರಗಳೂ ಒಂದೆರಡು. ಈ ಸ್ವಾಭಿಮಾನಿ ಯುವಕನಿಗೆ ನಿರ್ಮಾಪಕರ, ನಿರ್ದೇಶಕರ ಬೆನ್ನು ಹತ್ತುವುದೆಂದರೆ ಆಗದ ಕೆಲಸ. ಇವರ, ಇಂತಹವರ ಪ್ರತಿಭೆ ಗುರುತಿಸಿ ಅವಕಾಶ ನೀಡುವ ವ್ಯವಸ್ಥೆ ಇಲ್ಲೆಲ್ಲಿದೆ?
ಕನ್ನಡದ ಕಲಾಪ್ರತಿಭೆಗಳು ನೆರೆಯ ರಾಜ್ಯಗಳಿಗೆ ಪಲಾಯನ ಮಾಡುವುದಕ್ಕೆ ಇಂತಹ ವಾತಾವರಣ, ನಿರ್ದೇಶಕರಿಗೆ ಸಿಗಬೇಕಾದ ಸ್ಥಾನಮಾನಗಳು ಕಾರಣ ಎಂದರೆ ತಪ್ಪೇನಿಲ್ಲ. ಜನಪ್ರಿಯ ನಟರ ಬೆನ್ನುಹತ್ತಿ ಅವರ ಕಾಲ್‌ಶೀಟ್ ಪಡೆದು, ಹೆಚ್ಚಿನ ಸಂದರ್ಭಗಳಲ್ಲಿ ಅವರ ಮೂಗಿನ ನೇರಕ್ಕೆ ತಯಾರಾಗುವ ಚಿತ್ರಗಳು ಗೆಲ್ಲುವುದು ಅಲ್ಲೊಂದು ಇಲ್ಲೊಂದು ಅಪವಾದಗಳನ್ನು ಹೊರತುಪಡಿಸಿ ಗೆಲ್ಲುವುದು ಅಪರೂಪ. ಚಲನಚಿತ್ರವೊಂದರ ಮೂಲ ಚಿತ್ರಕಥೆ, ಅದರ ಸಿದ್ಧತೆಗೆ ಸಾಕಷ್ಟು ಸಮಯ ಕೊಡುವ ಬದಲು, ಚಿತ್ರೀಕರಣ ಆರಂಭಿಸಿ, ಅಲ್ಲಿ ಅನಗತ್ಯ ದುಂದು ವೆಚ್ಚ ಆದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಉದ್ಯಮಕ್ಕೆ ಕೋಟಿಗಟ್ಟಲೆ ನಷ್ಟವಾದ ಸುದ್ದಿ ಪ್ರತಿ ವರ್ಷ.
ಕನ್ನಡದ ಕಲಾಪ್ರತಿಭೆಗಳು ಅರಳುತ್ತಿರುವುದು ಇತರ ಭಾಷಾ ಚಿತ್ರರಂಗಗಳಲ್ಲಿ. ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಈಗಲೂ ಇರುವ ರಜನಿ ಕಾಂತ್, ಪ್ರತಿನಾಯಕ ಪಾತ್ರಗಳಲ್ಲಿ ತಮಿಳು ಮಾತ್ರವಲ್ಲ, ಇತರ ಭಾಷಾ ರಂಗಗಳಲ್ಲಿ ಹೆಸರಾಗಿರುವ ಪ್ರಕಾಶ್ ರೈ, ನಟ, ನಿರ್ಮಾಪಕ, ನಿರ್ದೇಶಕ ಅರ್ಜುನ್ ಸರ್ಜಾ, ಕೋಕಿಲ ಮೋಹನ್, ಕಿಶೋರ್, ವಿನೋದ್ ಆಳ್ವ, ಚರಣರಾಜ್, ರಮೇಶ್ ಅರವಿಂದ್, ಇನ್ನಿಲ್ಲವಾದ ಮುರಳಿ, ತಾಯ್ ನಾಗೇಶ್, ಆರ್. ನಾಗೇಂದ್ರರಾವ್, ಸುದರ್ಶನ್ ಹೀಗೆ ನಟರ ಪಟ್ಟಿ ಬೆಳೆಯುತ್ತದೆ. ನಟಿಯರೂ ಅಷ್ಟೇ. ರಾಜಮ್ಮ, ಸರೋಜಾದೇವಿ, ಪಂಡರೀಬಾಯಿ, ಲೀಲಾವತಿ ಮುಂತಾದ ಹಿರಿಯ ತಾರೆಯರಾದರೆ, ಸೌಂದರ್ಯ, ಅನುಷ್ಕಾ ಶೆಟ್ಟಿ, ಸೇರಿದಂತೆ ಹಲವು ಮಂದಿ ಹೆಸರಾದರು. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಜೆನಿಲಿಯಾ ಡಿಸೋಜಾ, ನಿತ್ಯಾ ಮೆನನ್, ಪೂಜಾ ಹೆಗ್ಡೆ, ಪ್ರಿಯಾ ಮಣಿ ಹೀಗೆ ಪರಭಾಷೆಗಳಲ್ಲಿ ನಟಿಸುತ್ತಿರುವ ತಾರೆಯರ ಪಟ್ಟಿ ಬೆಳೆಯುತ್ತಿದೆ. ನೃತ್ಯ ಸಂಯೋಜಕ, ನಟ ಪ್ರಭುದೇವ, ಗಾಯಕಿ ಸೌಮ್ಯಾರಾವ್ ಕನ್ನಡದ ಪ್ರತಿಭಾ ಸಂಪದ ಅಲ್ಲಿ ಇಲ್ಲಿ ನೆಲೆ ಕಾಣುತ್ತಿವೆ.
ಕರ್ನಾಟಕ ಮೂಲದ ಗುರುದತ್, ಶಾಮ್ ಬೆನಗಲ್ ಮೊದಲ್ಗೊಂಡು ನಿರ್ದೇಶಕರು, ವಿ. ಕೆ. ಮೂರ್ತಿ ಅವರಂತಹ ತಂತ್ರಜ್ಞರು ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಈ ಸಾಧಕರ ಬಹುದೊಡ್ಡ ಯಾದಿಯೇ ಇದೆ. ಮೊನ್ನೆ ಸಿಕ್ಕಿದ ಇಬ್ಬರು ಪ್ರತಿಭಾವಂತರ ಮಾತು ಕೇಳಿದಾಗ ಇವರೆಲ್ಲ ನೆನಪಾದರು. ಮೊದಲಿನಿಂದಲೂ ಆಗುತ್ತಿರುವ ಪ್ರತಿಭಾ ಪಲಾಯನದ ಚಿತ್ರವು ಕಣ್ಣ ಮುಂದೆ ಬಂತು.