ಡಾ. ಚೈತ್ರಾ ಸುಖೇಶ್
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಈಗಾಗಲೇ ಪ್ರಕಟವಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಒಳ್ಳೆಯ ಕಾಲೇಜಿನಲ್ಲಿ ಭವಿಷ್ಯದ ಜೀವನಕ್ಕೆ ವರದಾನವಾಗುವ ಕೋರ್ಸ್‌ಗಳ ಆಯ್ಕೆಗಾಗಿ ಕಾಲೇಜುಗಳಿಗೆ ಎಡತಾಕುತ್ತಿದ್ದಾರೆ. ಜೊತೆಗೆ ಮೇ ತಿಂಗಳ ಎರಡನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ -ಫಲಿತಾಂಶ ಪ್ರಕಟವಾಗುವುದಿದೆ. ಆಗಲೂ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತವರ ಪೋಷಕರು ಕಲೆ, ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ದಾಖಲಾತಿಗಾಗಿ ಉತ್ತಮ ಕಾಲೇಜುಗಳನ್ನು ಹುಡುಕುತ್ತಿರುತ್ತಾರೆ. ಅಂಥವರಿಗಾಗಿ ಒಂದಷ್ಟು ಕೋರ್ಸ್‌ಗಳ ಮಾಹಿತಿ ಇಲ್ಲಿದೆ.
ಭಾರತ ಒಂದು ಯುವ ರಾಷ್ಟ್ರ, ಅಭಿವೃದ್ಧಿಯ ಹಾದಿಯಲ್ಲಿದೆ. ಇದನ್ನು ಮುಂದುವರಿಸಲು, ನಮ್ಮ ಈ ಪೀಳಿಗೆಯ ವಿದ್ಯಾರ್ಥಿಗಳ ಪಾತ್ರ ತುಂಬಾ ಮುಖ್ಯ. ನಿಮ್ಮ ಆಸಕ್ತಿ, ಆಕಾಂಕ್ಷೆ ಮತ್ತು ಸಾಮರ್ಥ್ಯವನ್ನು ಪರಿಗಣಿಸಿ, ಸೂಕ್ತವಾದ ಕಲಿಕೆಯ ಆಯ್ಕೆಯನ್ನು ಮಾಡಬೇಕಾಗುತ್ತದೆ. ಕೆಲವು ಜನಪ್ರಿಯ ಆಯ್ಕೆಗಳು ಇಲ್ಲಿವೆ.
ಒಬ್ಬ ವಿದ್ಯಾರ್ಥಿಯು ವಿಜ್ಞಾನ ವಿಷಯವನ್ನು ದ್ವಿತೀಯ ಪಿಯುಸಿಯಲ್ಲಿ ಆಯ್ಕೆ ಮಾಡಿಕೊಂಡಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೋರ್ಸ್, ಸಾಫ್ಟ್-ವೇರ್ ಅಭಿವೃದ್ಧಿ, ಡೇಟಾ ವಿಜ್ಞಾನ, ಸೈಬರ್ ಭದ್ರತೆ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳು ಲಭ್ಯವಿದೆ.
ಆರ್ಕಿಟೆಕ್ಚರ್ ನಾಟಾ ಎಕ್ಸಾಂ ಅನ್ನು ಬರೆಯುವುದರಿಂದ ಈ ಕೋರ್ಸ್ ಅನ್ನು ಆಯ್ಕೆ ಮಾಡಬಹುದು. ಬಯೋ ಟೆಕ್ನಾಲಜಿ, ಏರೋಸ್ಪೇಸ್ ಇಂಜಿನಿಯರಿಂಗ್, ನ್ಯೂಕ್ಲಿಯರ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ರೋಬೋಟಿಕ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್ ಮುಂತಾದ ಕೋರ್ಸ್‌ಗಳು ಉತ್ತಮ ಕೆರಿಯರ್ ಆಯ್ಕೆಯಾಗಿವೆ.
ಇದಲ್ಲದೆ ಅಗ್ರಿಕಲ್ಚರ್ ಬಿ. ಎಸ್ಸಿ, ಪರಿಸರ ವಿಜ್ಞಾನ ಬಿ. ಎಸ್ಸಿ, ಏವಿಯೇಷನ್ ಬಿ. ಎಸ್ಸಿ, ಮರ್ಚಂಟ್ ನೇವಿ ಮುಂತಾದ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.
ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಯುನಾನಿ, ಯೋಗ, ನ್ಯಾಚುರೋಪತಿ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆ ಬರೆಯಬೇಕಾಗುತ್ತದೆ. ಬಿ. -ರ್ಮ,ಎಂ. -ರ್ಮ ಕೂಡ ಮಾಡಿಕೊಳ್ಳಬಹುದು. ನೀವು ಕಲಾವಿಭಾಗದಲ್ಲಿ ಪಿಯುಸಿ ಪಾಸ್ ಮಾಡಿದರೆ ಕಾನೂನು ಪದವಿ, ಹೋಟೆಲ್ ಮ್ಯಾನೇಜ್ ಮೆಂಟ್, ಪತ್ರಿಕೋದ್ಯಮ, ಆಭರಣಗಳ ಡಿಸೈನಿಂಗ್ ಕೋರ್ಸ್ ಮುಂತಾದವುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಬಿಎ, ಬಿ. ಇಡಿ, ಎಂ. ಎ. ಮಾಡಬಹುದು. ಕೆಎಎಸ್, ಯುಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬಹುದು.
ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಪಾಸ್ ಮಾಡಿದರೆ, ಬಿಕಾಂ, ಬಿಬಿಎಂ, ಎಂಬಿಎ, ಸಿಎ, ಪಿಜಿಡಿಎಂ ಮುಂತಾದ ಹಲವು ಅವಕಾಶಗಳಿವೆ. ಈ ವರ್ಷದಿಂದ ಡಿಪ್ಲೊಮೊದಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಟೂರಿಸಂ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಮೊದಲು ವೃತ್ತಿಯನ್ನು ಆಯ್ಕೆಮಾಡಿ ನಂತರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಒಂದು ಉತ್ತಮ ಸಲಹೆ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆಯಬಹುದು. ಉದ್ಯೋಗ ಸಿಕ್ಕಿದ ನಂತರ ಅದನ್ನು ತೀರಿಸಬಹುದಾಗಿದೆ.
ಪಿಯುಸಿಯಲ್ಲಿ ಅನುತ್ತೀರ್ಣರಾದವರೂ ಎದೆಗುಂದ ಬೇಕಿಲ್ಲ. ಹತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ ಡಿಪ್ಲೊಮೊ ಕೋರ್ಸ್‌ಗಳಿಂದ ಅನಿಮೇಷನ್, ವೀಡಿಯೋ ಎಡಿಟಿಂಗ್ ಮುಂತಾದ ವಿಷಯಗಳಲ್ಲಿ ಪದವಿ ಪಡೆಯಬಹುದು. ಒಟ್ಟಿನಲ್ಲಿ ಯಾವುದೇ ಕೋರ್ಸ್ ಅನ್ನು ಇಷ್ಟಪಟ್ಟು ಆಯ್ಕೆಮಾಡಿ ಮುಂದುವರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಭಾರತದ ಅನಾದಿ ಕಾಲದ ಯುನಾನಿ ವೈದ್ಯಕೀಯ ಪದ್ಧತಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಯುನಾನಿ ವೈದ್ಯರಾಗಲು ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಅಂಡ್ ಸರ್ಜರಿ ಪದವಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವಶ್ಯ. ಐದೂವರೆ ವರ್ಷಗಳ ಅವಧಿಯ ಈ ಬಿಯುಎಂಎಸ್ ಕೋರ್ಸ್ ಯುನಾನಿ ತತ್ವಗಳು, ಔಷಧಿಗಳು ಮತ್ತು ಆಧುನಿಕ ವೈದ್ಯ ಕೀಯದ ಮೂಲಭೂತ ಅಂಶಗಳನ್ನು ಒಳಗೊಂಡಿದೆ.
ಭಾರತದಲ್ಲಿ ಯುನಾನಿ ಚಿಕಿತ್ಸಾ ವಿಧಾನವನ್ನು ಸಾಂಪ್ರದಾಯಿಕ ಮತ್ತು ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ. ಈ ಚಿಕಿತ್ಸಾ ವಿಧಾನವು ದೇಹದ ನಾಲ್ಕು ದ್ರವ ಅಂಶಗಳಾದ ರಕ್ತ, ಲೋಳೆ, ಪಿತ್ತರಸ ಮತ್ತು ಕಪ್ಪು ಪಿತ್ತರಸದ ಸಮತೋಲವನ್ನು ಆಧರಿಸಿದೆ. ಯುನಾನಿ ವೈದ್ಯರು ಈ ವಿಧಾನದ ಪ್ರಕಾರ ಚಿಕಿತ್ಸೆ ನೀಡುತ್ತಾರೆ.
ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಜೀವನ ಶೈಲಿಗೆ ಸಂಬಂಽಸಿದ ಸಲಹೆಗಳನ್ನು ನೀಡುವ ಮೂಲಕ ರೋಗಿಗಳ ಆರೋಗ್ಯವನ್ನು ಸುಧಾರಿಸಲಾಗುತ್ತದೆ. ಪಿಯುಸಿ ನಂತರಯುನಾನಿ ವೈದ್ಯರಾಗಲು ಬಯಸಿದರೆ ಮೊದಲು ಸರಿಯಾದ ಯೋಜನೆ ರೂಪಿಸಿಕೊಳ್ಳಬೇಕು. ಯುನಾನಿ ವೈದ್ಯರಾಗಲು ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ (ಪಿಸಿಎಂಬಿ) ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಬಳಿಕ 5 ವರ್ಷ 6 ತಿಂಗಳು ಅವಧಿಯ ಬಿಯುಎಂಎಸ್ ಕೋರ್ಸ್ ಮಾಡಬೇಕಾಗುತ್ತದೆ. ನಾಲ್ಕೂವರೆ ವರ್ಷಗಳ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳ ಅಧ್ಯಯನದ ನಂತರ ಒಂದು ವರ್ಷದ ಅವಧಿಯ ಇಂಟರ್ನ್‌ಶಿಪ್ ಕಡ್ಡಾಯ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿ ರೋಗಿಗಳೊಂದಿಗೆ ಕೆಲಸ ಮಾಡುವ ಮೂಲಕ ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳುತ್ತಾರೆ.
ಬಿಯುಎಂಎಸ್ ಕೋರ್ಸ್‌ನಲ್ಲಿ ಏನನ್ನು ಕಲಿಸಲಾಗುತ್ತದೆ: ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಯುನಾನಿ ಚಿಕಿತ್ಸೆಯ ಮೂಲತತ್ವಗಳು, ಅಂಗರಚನಾ ಶಾಸ, ರೋಗ ನಿರ್ಣಯ, ಯುನಾನಿ ಔಷಧಿಗಳ ಜ್ಞಾನ, ನಾಡಿ ಪರೀಕ್ಷೆ, ಯುನಾನಿ ಔಷಧಾಲಯ ಮತ್ತು ಗಿಡಮೂಲಿಕೆಗಳ ಬಳಕೆಯನ್ನು ಕಲಿಸ ಲಾಗುತ್ತದೆ. ಜೊತೆಗೆ ಇದು ಆಧುನಿಕ ಚಿಕಿತ್ಸೆಯ ಮೂಲ ಭೂತ ಅಂಶಗಳನ್ನೂ ಸಹ ಒಳಗೊಂಡಿರುತ್ತದೆ. ಇದರಿಂದ ವೈದ್ಯರು ಎರಡು ವಿಧಾನಗಳನ್ನೂ ಅರ್ಥ ಮಾಡಿಕೊಳ್ಳಬಹುದು. ಬಿಯುಎಂಎಸ್ ಕೋರ್ಸ್‌ಗೆ ಪ್ರವೇಶ ಪಡೆಯಲು ರಾಷ್ಟ್ರಮಟ್ಟದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಉತ್ತೀರ್ಣರಾಗುವುದು ಅತ್ಯವಶ್ಯ. ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಸರ್ಕಾರಿ ಅಥವಾ ಖಾಸಗಿ ಯುನಾನಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳಬಹುದು.





