Mysore
26
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ʼಸಮಯವಿಲ್ಲʼ ಎಂಬ ಸುಂದರ ಸುಳ್ಳು!

ಡಾ. ನೀ. ಗೂ. ರಮೇಶ್

‘ಬರಲೇಬೇಕು ಅಂದುಕೊಂಡಿದ್ದೆ, ಆದರೆ, ಸಮಯ ಆಗಲಿಲ್ಲ’, ‘ಫೋನ್ ಮಾಡಬೇಕು ಅಂದ್ಕೊಂಡೆ ಟೈಮೇ ಸಿಗಲಿಲ್ಲ’, ‘ನೋಟ್ಸ್ ಬರೆಯಲು ಸಮಯವೇ ಇಲ್ಲ’, ‘ವಾಕ್ ಮಾಡಬೇಕು ಅಂತ ಆಸೆ ಸಮಯವೇ ಸಾಕಾಗ್ತಾ ಇಲ್ಲ’, ‘ಓದೋದು ತುಂಬಾ ಇದೆ, ಆದರೆ, ಸಮಯ ಇಲ್ಲ’, ‘ಊಟ ಮಾಡುವುದಕ್ಕೂ ಸಮಯ ಇಲ್ಲ’ ‘ಯಾವುದಕ್ಕೂ ಸಮಯವೇ ಇಲ್ಲ’. . .

ಇತ್ತೀಚಿನ ಯುವಕರ ಬಾಯಲ್ಲಿ ಬರುವ ಮಾತಿವು. ನಿಜವಾಗಲೂ ಸಮಯ ಕಡಿಮೆ ಆಗಿದೆಯೇ? ಅಥವಾ ಎಲ್ಲೋ ಸೋರಿಕೆ ಆಗುತ್ತಿದೆಯೇ? ಬಗೆ ಬಗೆಯ ಯಂತ್ರಗಳನ್ನು ಮನೆಗೆ ತರುವಾಗ ಸಮಯ ಉಳಿಯುತ್ತದೆ ಎಂದೆವು; ವಾಹನಗಳನ್ನು ಖರೀದಿಸುವಾಗ ಬೇಗ ತಲುಪಬಹುದು ಎಂದೆವು; ಜನಕ್ಕಿಂತ ಜಾಸ್ತಿ ಯಂತ್ರಗಳೇ ಮನೆ ತುಂಬಿಕೊಂಡಾಗಲೂ ಯಾವುದಕ್ಕೂ ಬಿಡುವಿಲ್ಲ ಎನ್ನುತ್ತಿರುವೆವು ಉಳಿಸಿದ ಸಮಯವೆಲ್ಲ ಏನಾದವು? ಮನೆಯಲ್ಲಿ ಜನಗಳಿಗಿಂತ ಯಂತ್ರಗಳನ್ನು ತುಂಬಿಸಿಕೊಂಡಿರುವ ಕಾಲ ಇದು. ಮನುಷ್ಯರಿಗಿಂತ ಹೆಚ್ಚಾಗಿ ಯಂತ್ರಗಳ ಮೇಲೆಯೇ ಅವಲಂಬನೆಯಾಗಿದ್ದೇವೆ. ಇಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಂಡಿದ್ದರೂ ಯಾರಿಗೂ ಈಗ ಬಿಡುವಿಲ್ಲ! ವಿದ್ಯಾರ್ಥಿಗಳಿಗೆ ಓದಲು ಬಿಡುವಿಲ್ಲ, ಯುವಜನರಿಗೆ ಮಾತುಗಳನ್ನು ಕೇಳಲೂ ಸಮಯವಿಲ್ಲ. ಹಾಗಾದರೆ ಈ ಯಂತ್ರಗಳಿಂದೆಲ್ಲಾ ಉಳಿಸಿದ ಸಮಯ ಏನಾಯಿತು? ಸಮಯ ಉಳಿದಿರುವುದಂತೂ ಸತ್ಯ. ಆದರೆ ಅದು ಯಾವುದಕ್ಕೆ ಬಳಕೆಯಾಗುತ್ತಿದೆ? ಪ್ರತಿಯೊಬ್ಬರೂ ಜರೂರಾಗಿ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ ಇದು.

ಒಮ್ಮೆ ಸಮಯ ಕಳೆದು ಹೋದರೆ ಮತ್ತೆ ಬರುವುದಿಲ್ಲ. ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಸಮಯದ ನಿರ್ವಹಣೆಯು ಹಣದ ನಿರ್ವಹಣೆಯಷ್ಟೇ ಪ್ರಮುಖವಾಗಿದೆ. ಹಣಕ್ಕೆ ಪರ್ಯಾಯ ಮಾರ್ಗಗಳಿದ್ದರೂ ಸಮಯಕ್ಕಿಲ್ಲ. ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳ ಸಮಯಕ್ಕೆ ಅಪಾರ ಮೌಲ್ಯವಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಮನರಂಜನೆಯ ಮತ್ತಿನಲ್ಲೋ ಗೆಳೆಯರ ಕೂಟದಲ್ಲೋ ಕೈತಪ್ಪಿದ ಕಾಲ ಎಂದೂ ಮತ್ತೆ ಸಿಗುವುದಿಲ್ಲ. ಹಾಗಾಗಿಯೇ ಸಮಯ ಎಂಬುದು ಒಂದೊಂದು ವಯಸ್ಸಿನಲ್ಲಿಯೂ ಒಂದೊಂದು ರೀತಿಯಲ್ಲಿ ಅರ್ಥ ಮತ್ತು ಮಹತ್ವ ಪಡೆದುಕೊಳ್ಳುತ್ತದೆ.

ವಿದ್ಯಾರ್ಥಿಗೆ ಸಮಯ ಎಂದರೆ ಅಂಕ/ಜ್ಞಾನ ವ್ಯಾಪಾರಿಗೆ ಸಮಯ ಎಂದರೆ ಹಣ ಉದ್ಯೋಗಿಗೆ ಸಮಯ ಎಂದರೆ ಕೆಲಸ ದಣಿದವನಿಗೆ ಸಮಯ ಎಂದರೆ ವಿಶ್ರಾಂತಿ ರೋಗಿಗೆ ಸಮಯ ಎಂದರೆ ಚಲಿಸದ ಜಡವಸ್ತು ವೃದ್ಧರಿಗೆ ಸಮಯ ಎಂದರೆ ಮೆಲುಕು ಯುವ ಪೀಳಿಗೆಗೆ ಸಮಯ ಎಂದರೆ. . . ? ಈ ಪ್ರಶ್ನೆಗೆ ಯುವ ಜನರು ಬೇರೆ ಬೇರೆ ಉತ್ತರ ತುಂಬಿಕೊಳ್ಳಬಹುದು. ಆದರೆ ಯಾವುದೇ ಉತ್ತರವಾದರೂ ಸಮಯವೆಂಬುದು ‘ಕಳೆದುಕೊಳ್ಳಬಾರದಂತಹ ಸಂಪತ್ತು’ ಎಂಬುದನ್ನು ಮರೆಯಬಾರದು. ಸಮಯಕ್ಕಾಗಿ ಕಾಯುವವರು, ಸಮಯ ಉಳಿಸುವವರು, ಸಮಯ ನೀಡುವವರು, ಸಮಯ ಕಳೆಯುವವರು ಹೀಗೆ ಹಲವು ಬಗೆಯ ಜನರಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ರೀತಿಯಲ್ಲಿ ಸಮಯವನ್ನು ನಿರ್ವಹಿಸುವ ಸ್ವಾತಂತ್ರ್ಯವಿದೆ, ಜವಾಬ್ದಾರಿಯೂ ಇದೆ. ಸಮಯದ ಒತ್ತಡದ ನಡುವೆ ಬದುಕುತ್ತಿರುವ ನಮ್ಮ ಶಾಂತಿ, ನೆಮ್ಮದಿ ಕೂಡ ಇದನ್ನೇ ಅವಲಂಬಿಸಿದೆ.

‘ಸಮಯ ಇಲ್ಲ’ ಎನ್ನುವವರ ಸಾಲಿಗೆ ಬೇರಾವ ಹೆಚ್ಚಿನ ಹೊಣೆಗಾರಿಕೆಯೂ ಇಲ್ಲದ ವಿದ್ಯಾರ್ಥಿಗಳು ಸೇರಬಾರದಷ್ಟೇ. ಏಕೆಂದರೆ, ಉತ್ತಮ ವಿದ್ಯಾರ್ಥಿಗೆ ಅಧ್ಯಯನಕ್ಕಿಂತ ಮಿಗಿಲಾದುದು ಬೇರಾವುದೂ ಇರಬಾರದು. ಇರುವ ಸಮಯವನ್ನು ಯೋಜಿತವಾಗಿ ಬಳಸಿಕೊಳ್ಳುವುದರಲ್ಲೇ ಅವನ ಯಶಸ್ಸು ಅಡಗಿರುತ್ತದೆ. ಇರುವ ಸಮಯವನ್ನು ಅನಗತ್ಯವಾದ ಕೆಲಸಗಳಿಗೆ ಬಳಸಿ ಪರೀಕ್ಷೆ ಹತ್ತಿರವಾದಾಗ ಸಮಯಕ್ಕಾಗಿ ಹುಡುಕಾಡಿದರೆ ಪ್ರಯೋಜನವಿಲ್ಲ. ಪರೀಕ್ಷೆಗಳು ದೂರವಿದ್ದಾಗ ದಿನಗಳ ಲೆಕ್ಕದಲ್ಲಿಯೂ ಪರೀಕ್ಷೆ ಹತ್ತಿರವಿದ್ದಾಗ ಗಂಟೆಗಳ ಲೆಕ್ಕದಲ್ಲಿಯೂ ಸಮಯವನ್ನು ಯೋಜನೆ ಮಾಡಿ ಬಳಸುವುದು ಯಶಸ್ವೀ ವಿದ್ಯಾರ್ಥಿಯ ಲಕ್ಷಣ. ಮುಖ್ಯವಾದ ಪರೀಕ್ಷೆಗೆ ಇನ್ನೂ ಮೂರು ತಿಂಗಳು ಸಮಯವಿದೆ ಎನ್ನುವುದಕ್ಕೂ ೯೦ ದಿನಗಳು ಮಾತ್ರ ಇವೆ ಎಂದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ! ಇದನ್ನು ಅರಿತುಕೊಳ್ಳಬೇಕು.

ಇನ್ನೊಂದು ಮಾತು: ಸಮಯ ಇಲ್ಲ ಎಂಬುದೇ ಒಂದು ಹಿತವಾದ ಸುಳ್ಳು. ಅದೊಂದು ರಕ್ಷಣಾತ್ಮಕ ನೆಪ. ಎಷ್ಟೋ ಬಾರಿ ಅದು ನಮ್ಮನ್ನು ಹಲವು ಇಕ್ಕಟ್ಟುಗಳಿಂದ ಪಾರಾಗಿಸುವುದಂತೂ ನಿಜ. ಆದರೆ ಎಲ್ಲರಿಗೂ ಅನ್ವಯವಾಗುವ ಒಂದು ಮಾತೆಂದರೆ, ‘ನಮಗೆ ಬೇಕಾದುದಕ್ಕೆ ನಾವು ಹೇಗಾದರೂ ಸಮಯ ಹೊಂದಿಸುತ್ತೇವೆ, ನಮಗೆ ಬೇಡವಾದುದಕ್ಕೆ ಸಮಯ ಇಲ್ಲ ಎಂಬ ಸುಂದರವಾದ ಸುಳ್ಳುನೆಪ ಹೇಳುತ್ತೇವೆ!

Tags: