ಪ್ರೊ.ರವಿವರ್ಮಕುಮಾರ್,
ಸಮಾಜವಾದಿ ಚಿಂತಕರು ಹಾಗೂ
ಮಾಜಿ ಅಡ್ವೋಕೇಟ್ ಜನರಲ್
ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ. ಕಿಶನ್ ಚಿಂತನೆ ಮುಂದೆಯೂ ಕರ್ನಾಟಕದ ಎಲ್ಲಾ ಪ್ರಗತಿಪರ ಚಳವಳಿಗಳಿಗೆ, ವಿಶೇಷವಾಗಿ ಇಂದಿನ ಪೀಳಿಗೆಯ ಯುವಕರಿಗೆ ಮಾರ್ಗದರ್ಶನವಾಗಿರಲಿ ಎಂಬ ಆಶಯದಲ್ಲಿ…
೧೯೭೨ರಲ್ಲಿ ಡಿಎಂಎಸ್ ಲಾ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಲು ಸೇರಿದಾಗ ನನ್ನ ಜೀವನದ ಅತ್ಯಂತ ನಿರ್ಣಾಯಕ ಬೆಳವಣಿಗೆಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ನಮಗೆ ಸಂವಿಧಾನ ಪಾಠ ಮಾಡಲು ಬಂದರು. ಸಂವಿಧಾನದ ಜೊತೆಗೆ ಸಮಾಜವಾದ, ರಾಮಮನೋಹರ ಲೋಹಿಯಾ, ಅಂಬೇಡ್ಕರ್, ಜ್ಯೋತಿ ಬಾಫುಲೆ, ಪೆರಿಯಾರ್ ಮತ್ತು ಹಾವನೂರು ಅವರ ಬಗ್ಗೆಯೂ ನನಗೆ ದೀಕ್ಷೆಕೊಡುತ್ತಾ ಹೋದರು. ಅವರ ಕೊನೆಯುಸಿರಿರುವವರೆಗೆ ಅವರ ಮಾರ್ಗ ದರ್ಶನ ಪ್ರೇರಣೆ, ಮತ್ತು ಬೆಂಬಲ ನನಗೆ ನಿರಂತರವಾದ ಶ್ರೀರಕ್ಷೆ.
ಈಗಿರುವಾಗ ೧೯೭೫ರ ಎಮರ್ಜೆನ್ಸಿ ಸಮಯದಲ್ಲಿ ನಾನು ಸುಮಾರು ಎರಡು ತಿಂಗಳುಗಳ ಕಾಲ ಭೂಗತನಾಗಿ ಪೂರ್ಣಚಂದ್ರ ತೇಜಸ್ವಿ ಅವರ ‘ಚಿತ್ರಕೂಟ’ ಕಾಫಿ ತೋಟದಲ್ಲಿ ಅಡಗಿಕೊಂಡಿದ್ದೆ. ಆ ಜೀವನ ಸಾಕಾಗಿ, ಅರೆಸ್ಟ್ ಆದರೂ ಚಿಂತೆಯಿಲ್ಲ ಎಂದು ಬೆಂಗಳೂರಿಗೆ ವಾಪಸ್ ಆದ ಕೂಡಲೇ ಪ್ರೊ.ನಂಜುಂಡಸ್ವಾಮಿ ಒಂದು ಟೆಲಿಗ್ರಾಂ ಅನ್ನು ನನ್ನ ಮುಂದೆ ಇಟ್ಟು ಕೃಷ್ಣಪ್ರಸಾದ್ ಅನ್ನೋ ವ್ಯಕ್ತಿ ಬರ್ತಾ ಇದ್ದಾರೆ. ಹೈದ್ರಾಬಾದ್‌ನಿಂದ ಬಂದಿಳಿಯಲಿದ್ದಾರೆ. ಬಸ್‌ಸ್ಟ್ಯಾಂಡಲ್ಲಿ ನೀನು ಕಾಯ್ದಿದ್ದು ಅವರನ್ನು ರಿಸೀವ್ ಮಾಡ್ಕೋಬೇಕು ಅಂತ ಅಪ್ಪಣೆ ಮಾಡಿದರು. ನಾನು ಅದುವರೆಗೆ ಕಿಶನ್ ಪಟ್ನಾಯಕ್ ಅವರನ್ನು ನೋಡಿರಲಿಲ್ಲ. ಎಮರ್ಜೆನ್ಸಿ ಬೇರೆ. ಎಲ್ಲ ಕಡೆ ಭಯದ ವಾತಾವರಣ ಇತ್ತು, ನನ್ನ ಮೇಲೆ ಅರೆಸ್ಟ್ ವಾರೆಂಟ್ ಇದ್ದುದರಿಂದ ನಾನೆಲ್ಲಿ ಸಿಕ್ಕಾಕಿಕೊಳ್ಳುತ್ತೇನೋ ಎಂಬ ಆತಂಕ ಬೇರೆ. ಈ ಸನ್ನಿವೇಶದಲ್ಲಿ ಟೆಲಿಗ್ರಾಂ ಜೇಬಲ್ಲಿಟ್ಟುಕೊಂಡು ಕೃಷ್ಣಪ್ರಸಾದ್ ಅವರನ್ನು ಹುಡುಕಿಕೊಂಡು ಹೋದೆ. ಪ್ರೊ-ಸರ್ ಕೊಟ್ಟ ಮಾಹಿತಿ ಆಧಾರದ ಮೇಲೆ ಹೈದ್ರಾಬಾದ್‌ನಿಂದ ಬರುವ ಎಲ್ಲಾ ಬಸ್‌ಗಳ ತಪಾಸಣೆ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ‘ಹಾಯ್ ರವಿ’ ಅಂತ ನನ್ನ ಭುಜವನ್ನು ಹಿಡಿದರು. ಅವರೇ ಕಿಶನ್ ಪಟ್ನಾಯಕ್ ಅಂತ ಮನವರಿಕೆ ಆಯಿತು. ಅಲ್ಲಿಂದ ಅವರನ್ನು ಕರೆದುಕೊಂಡು ನನ್ನ ಮೋಟಾರ್ ಸೈಕಲ್ ಮೇಲೆ ನೇರವಾಗಿ ಬಸವನಗುಡಿಯಲ್ಲಿದ್ದ ನನ್ನ ಮನೆಗೆ ಕರೆದುಕೊಂಡು ಹೋದೆ. ಅಲ್ಲಿ ಪ್ರೊಫೆಸರ್ ನಮಗೋಸ್ಕರ ಕಾಯ್ತಾ ಇದ್ರು. ನಂತರ ನಾವು ಯಾವ ರೀತಿ ಕಿಶನ್ ಅವರನ್ನು ಭೂಗತ ಕರ್ನಾಟಕದಲ್ಲಿ ಅಡಗಿಸಿ ಇಟ್ಟುಕೊಳ್ಳಬಹುದು ಎಂಬ ಹಲವು ಸಾಧ್ಯತೆಗಳನ್ನು ಯೋಚಿಸಿ ನಾನು, ಪ್ರೊಫೆಸರ್, ಕಿಶನ್ ಟ್ಯಾಕ್ಸಿ ಅಥವಾ ಸ್ನೇಹಿತರ ಕಾರುಗಳಲ್ಲಿ ಪ್ರಯಾಣ ಮಾಡುತ್ತಾ ಕೊನೆಗೆ ಒಂದು ದಿವಸ ತೇಜಸ್ವಿ ಅವರ ಮನೆಗೆ ಹೋದ್ವಿ. ಅಲ್ಲಿ ಸುಮಾರು ೧೫ ದಿವಸ ತಂಗಿದ್ದಾಗ ತೇಜಸ್ವಿ ಅವರ ಆತಿಥ್ಯ ಅಭೂತಪೂರ್ವವಾದದ್ದು. ಆವಾಗ ಅವರು ಕರ್ವಾಲೋ ಬರೆಯುತ್ತಿದ್ದ ಕಾಲ. ಆ ವೇಳೆ ಪ್ರತಿ ನಿತ್ಯ ‘ಕರ್ವಾಲೋ’ ಮ್ಯಾನುಸ್ಕ್ರಿಪ್ಟ್ ಓದುವ ಅವಕಾಶ ನನಗೆ ದೊರೆಯಿತು.
ಪ್ರತಿ ನಿತ್ಯ ರಾತ್ರಿ ೨ ಗಂಟೆ, ಮೂರು ಗಂಟೆಯವರೆಗೆ ಬರೆಯುತ್ತಿದ್ದರು. ರಾಜೇಶ್ವರಿ ಅವರು ತುಂಬಾ ಉತ್ಸಾಹದಿಂದ ಪ್ರತಿ ನಿತ್ಯ ರಸದೌತಣ ಮಾಡಿ ಬಡಿಸುತ್ತಿದ್ದರು. ಆ ಹೊತ್ತಿನಲ್ಲಿ ನಮ್ಮೊಡನೆ ಕಡಿದಾಳ್ ಶಾಮಣ್ಣ, ಸುಂದರೇಶ್ ಬಂದು ಸೇರಿದ್ದರು. ಹಾಗಾಗಿ, ಅವರ ಭೂಗತ ಜೀವನ ದಿನನಿತ್ಯದ ಪಾರ್ಟಿ ಆಗಿ ಕನ್ವರ್ಟ್ ಆಗಿ ಹೋಯ್ತು. ತೇಜಸ್ವಿ ಅವರು ಒಂದು ಹದಿನೈದು ದಿವಸ ಆದ ಮೇಲೆ ‘ರೀ, ನೀವು ಮಾಡೋ ಗಲಾಟೆಗಳು ಇಲ್ಲಿ ಎಲ್ಲಾ ಸುದ್ದಿಯಾಗ್ತಾ ಇದೆ. ನಡೀರಿ, ಇನ್ನೆಲ್ಲಾದ್ರೂ ಹೋಗೋಣ’ ಎಂದು ಅವರು ಕೂಡ ನಮ್ಮ ಜತೆ ಬಂದರು. ಅವರದು ಸೆಕೆಂಡ್ ವರ್ಲ್ಡ್ ವಾರ್ ಕಾಲದ ಒಂದು ಜೀಪ್ ಇತ್ತು. ಆ ಜೀಪ್‌ನಲ್ಲಿ ನಾವೆಲ್ಲರೂ ಭಗವತಿ ಕೆರೆಯ ಶಾಮಣ್ಣನವರ ಮನೆಗೆ ಹೋದೆವು. ಅಲ್ಲಿ ಒಂದು ವಾರ ಇದ್ದು, ನಂತರ ಸುಂದರೇಶ್ ಅವರ ಮನೆ. ಅಲ್ಲಿ ಒಂದು ವಾರ ಕಳೆಯುವಷ್ಟರ ಹೊತ್ತಿಗೆ ಕಿಶನ್ ಜೀ ಅವರು ಹೇಳಿದ್ರು, ‘ನಿಮ್ಮಗಳ ಜತೆಗೆ ಇದ್ರೆ ನನಗೆ ಎಲ್ಲಾ ಸೀರಿಯಸ್‌ನೆಸ್ ಕೂಡ ಹೊರಟು ಹೋಗುತ್ತೆ. ಎಮರ್ಜೆನ್ಸಿಯಲ್ಲಿ ನಾನು ಅರೆಸ್ಟ್ ಆದ್ರೂ ಚಿಂತೆಯಿಲ್ಲ. ನಾನು ದಿಲ್ಲಿಗೆ ವಾಪಸ್ ಹೋಗಿ ನನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ತೀನಿ’ ಅಂತ ಹೇಳಿ, ನನ್ನನ್ನು ಕರೆದುಕೊಂಡು ಹೋಗಿ ರೈಲು ಹತ್ತಿಸಿ ಎಂದರು. ನಾನು ಅವರನ್ನು ಕರೆದೊಯ್ದು ರೈಲು ಹತ್ತಿಸಿದೆ. ಅವರು ಹೋದ ಮಾರನೇ ದಿನವೇ ಅರೆಸ್ಟ್ ಆದ್ರು. ಹೀಗೆ, ಕಿಶನ್ ಜೀ ಅವರು ನಮ್ಮ ಜತೆಗೆ ಸೇರಿದ್ದರು.
ಸಮತಾ ಸಂಘಟನೆ ಹುಟ್ಟು ಹಾಕಲು ಪ್ರೇರಣೆ:
ತದನಂತರ, ಕಿಶನ್ ಭೇಟಿಯಾಗಿದ್ದು ಎಮರ್ಜೆನ್ಸಿ ಮುಗಿದಾಗ ೦೧-೦೫-೧೯೭೭ರಂದು. ಅಂದು ಭಾರತದ ಇತಿಹಾಸದಲ್ಲಿ ಚಾರಿತ್ರಿಕ ದಿನ. ಏಕೆಂದರೆ ನಾವೆಲ್ಲ ಸದಸ್ಯರಾಗಿದ್ದಂತಹ ಸೋಷಲಿಸ್ಟ್ ಪಕ್ಷವು ಹಳೆಯ ಕಾಂಗ್ರೆಸ್ ಜತೆ ಕೈಜೋಡಿಸಿ ಸ್ವತಂತ್ರ ಪಾರ್ಟಿ ಮತ್ತು ಜನಸಂಘದ ಜತೆ ಮರ್ಜ್ ಆಗಿ ಜನತಾ ಪಾರ್ಟಿ ಎನ್ನುವ ಹೊಸ ಪಕ್ಷವನ್ನು ಜಯಪ್ರಕಾಶ್ ನಾರಾಯಣ್ ಆದೇಶದ ಮೇರೆಗೆ ಘೋಷಿಸಿದ ದಿನ. ಅಂದು ಕಿಶನ್ ‘ಮತೀಯವಾದಿ ಮತ್ತು ಪ್ರಜಾತಂತ್ರದ ಗಂಧ-ಗಾಳಿ ಇಲ್ಲದ ಆರ್‌ಎಸ್ ಎಸ್ ಜತೆ ಯಾವ ಕಾರಣಕ್ಕೂ ಸೋಷಲಿಸ್ಟ್ ಪಾರ್ಟಿಯನ್ನು ಸೇರಿಸಬಾರದು. ಅವರಿಂದ ದೂರವೇ ಇರಬೇಕು’ ಎಂದು ಘಂಟಾಘೋಷವಾಗಿ ಹೇಳಿದರು. ಅವರ ಮಾತು ನಡೆಯದಿದ್ದಾಗ ಅಲ್ಲಿಂದ ಹೊರಹೋದರು. ಕಿಶನ್ ತೀರ್ಮಾನದಂತೆ ಕರ್ನಾಟಕದ ಬಹುತೇಕ ಸಮಾಜವಾದಿಗಳು ಜನತಾ ಪಾರ್ಟಿಯನ್ನು ಸೇರಲಿಲ್ಲ. ಆದರೆ, ಒಂದು ರೀತಿಯ ನಿಷ್ಕ್ರಿಯತೆ ನಮ್ಮ ಸಾರ್ವಜನಿಕ ಜೀವನದಲ್ಲಿ ಆವರಿಸಿತ್ತು. ಆಗ ಕಿಶನ್ ಅಭಿಪ್ರಾಯದ ಮೇರೆಗೆ ಪ್ರೊ.ನಂಜುಂಡಸ್ವಾಮಿ, ನಾನು ಕರ್ನಾಟಕದ ಉದ್ದಗಲಕ್ಕೆ ಸಂಚರಿಸಿ ಸಮತಾ ಸಂಘಟನೆಯನ್ನು ೧೯೮೦ರ ಜೂನ್‌ನಲ್ಲಿ ಹುಟ್ಟುಹಾಕಿ, ಬೆಂಗಳೂರಿನಲ್ಲಿ ಒಂದು ರಾಷ್ಟ್ರೀಯ ಸಮ್ಮೇಳನ ಮಾಡಿದೆವು. ಹಿಂದಿನ ಲೋಹಿಯಾ ವಿಚಾರ್ ಮಂಚ್, ಸಮಾಜವಾದಿ ಯುವಜನ ಸಭಾ ಮತ್ತು ಜನತಾ ಪಾರ್ಟಿಗೆ ಸೇರ್ಪಡೆ ಆಗದಂತಹ ಎಲ್ಲಾ ಸಮಾಜವಾದಿಗಳ ಒಕ್ಕೂಟ ಆ ಸಮ್ಮೇಳನವಾಗಿತ್ತು. ವಿಶೇಷವಾಗಿ ಪ್ರೊ.ನಂಜುಂಡಸ್ವಾಮಿ, ಕೆ. ರಾಮದಾಸ್, ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಯು.ಆರ್. ಅನಂತಮೂರ್ತಿ ಎಲ್ಲರೂ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಬಹಳಷ್ಟು ಚಟುವಟಿಕೆಗಳು ಎಲ್ಲ ಜಿಲ್ಲೆಗಳಲ್ಲೂ ಪ್ರಾರಂಭವಾದವು. ನರಗುಂದ-ನವಲಗುಂದ ರೈತರ ಮೇಲಿನ ಗೋಲಿಬಾರ್, ಪ್ರೊ.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಅಕ್ಟೋಬರ್ ೨, ೧೯೮೦ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉದಯ. ಈ ಎಲ್ಲ ಚಾರಿತ್ರಿಕ ಬೆಳವಣಿಗೆಗಳ ಹಿಂದೆ ಕಿಶನ್ ಜೀ ಅವರ ಪ್ರೇರಣಾ ಶಕ್ತಿ ನಿರಂತರವಾಗಿ ಕೆಲಸ ಮಾಡ್ತಾ ಇತ್ತು. ನಂತರ ೧೯೮೧ರಲ್ಲಿ ಚನ್ನಪಟ್ಟಣ ತಾಲ್ಲೂಕಿನ ಅರಳಾಳಸಂದ್ರದಲ್ಲಿ ದೇವನೂರ ಮಹಾದೇವ, ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಕಿಶನ್ ಪಟ್ನಾಯಕ್, ಅನಸೂಯಮ್ಮ, ಕಡಿದಾಳ್ ಶಾಮಣ್ಣ, ನಿಸಾರ್ ಅಹಮ್ಮದ್ ಮತ್ತು ನಾನು (ಪ್ರೊ. ರವಿವರ್ಮಕುಮಾರ್) ಸೇರಿ ಡಾ.ರಾಮ ಮನೋಹರ್ ಲೋಹಿಯಾ ಸಮತಾ ವಿದ್ಯಾಲಯವನ್ನು ಪ್ರಾರಂಭಿಸಿದೆವು. ತದನಂತರ ನಿರಂತರವಾಗಿ ಸಮತಾ ವಿದ್ಯಾಲಯದ ಜತೆ ಸಂಪರ್ಕ ಇಟ್ಟುಕೊಂಡು ಕರ್ನಾಟಕದ ಎಲ್ಲಾ ಪ್ರಗತಿಪರ ಚಳವಳಿಗಳು ಭಾಷಾ ಚಳವಳಿ, ರೈತ ಸಂಘ, ದಲಿತ ಸಂಘರ್ಷ ಸಮಿತಿಗೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡಿದರು.
ಕರ್ನಾಟಕದಲ್ಲಿ ಅತ್ಯುತ್ತಮ ಶಿಷ್ಯಪಡೆ ಹೊಂದಿದ್ದರು: ಕರ್ನಾಟಕದ ಹೆಮ್ಮೆಯ ವಿಚಾರವೆಂದರೆ ಕಿಶನ್ ಪಟ್ನಾಯಕ್ ಅವರು ನಿರಂತರವಾಗಿ ಕರ್ನಾಟಕದ ಒಡನಾಟ ಇಟ್ಟುಕೊಂಡಿದ್ದರು. ಇಲ್ಲಿ ಅತ್ಯುತ್ತಮ ಶಿಷ್ಯ ಪಡೆಯನ್ನು ಹೊಂದಿದ್ದರು. ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್, ಎನ್.ಡಿ.ಸುಂದರೇಶ್, ಕಡಿದಾಳ್ ಶಾಮಣ್ಣ, ಪಿ.ಲಂಕೇಶ್ ಮುಂತಾದ ದೊಡ್ಡ ಸಮಾಜವಾದಿ ಪಡೆಯನ್ನೇ ಕಟ್ಟಿ ಬೆಳೆಸಿದ್ದರು. ಇವರೆಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿ ಕೊನೆಯುಸಿರಿರುವವರೆಗೂ ಶ್ರಮಿಸಿದರು. ಕರ್ನಾಟಕದ ಎಲ್ಲ ಪ್ರಗತಿಪರ ಚಳವಳಿಗಳಾದ ಸಮಾಜವಾದಿ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಮತ್ತು ದಲಿತ ಚಳವಳಿಗಳಿಗೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡಿದರು. ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದರು. ಇದು ಕರ್ನಾಟಕದ ಬಗ್ಗೆ ಅವರಿಗೆ ಇದ್ದಂತಹ ಒಲವಿಗೆ ನಿದರ್ಶನವಾಗಿದೆ. ಹಿಂದೆಂದೂ ಕಾಣದಂತಹ ಅಪರೂಪದ ಸೈದ್ಧಾಂತಿಕ ಸ್ಪಷ್ಟತೆಯನ್ನು ಇಟ್ಟುಕೊಂಡಂತಹ ವ್ಯಕ್ತಿಯಾಗಿದ್ದರು ಕಿಶನ್. ಎಂತಹ ಸನ್ನಿವೇಶಗಳಲ್ಲೂ ರಾಜೀ ಮಾಡಿಕೊಳ್ಳದೇ, ನಾಡಿನ ಉದ್ದಗಲಕ್ಕೆ ಸಂಚರಿಸಿ ದೊಡ್ಡ ಸಮಾಜವಾದಿ ಪಡೆಯನ್ನೇ ಪ್ರತಿನಿಧಿಸಿದರು. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ದಿಲ್ಲಿ ಮುಂತಾದೆಡೆ ಸಾವಿರಾರು ಯುವಕರನ್ನು ಸಿದ್ಧಗೊ ಳಿಸಿ ಸಮಾಜವಾದಿ ಚಳವಳಿಗೆ ತೊಡಗಿಸಿದವರು ಕಿಶನ್. ಜವಾಹರಲಾಲ್ ನೆಹರು ವಿವಿಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ನಿಡುತ್ತಾ ಸಮಾಜ ವಾದದ ಗಟ್ಟಿ ನೆಲೆಯಾಗಿ ಜವಾಹರಲಾಲ್ ನೆಹರು ವಿವಿಯನ್ನು ಸಿದ್ಧಗೊಳಿಸಿದ್ದರಲ್ಲಿ ಕಿಶನ್ ಪಾತ್ರ ಬಹಳ ದೊಡ್ಡದು. ಕಿಶನ್ ಜೀ ಅವರಿಗೆ ೭೫ ವರ್ಷ ತುಂಬಿದ ಸಂದರ್ಭದಲ್ಲಿ ಕರ್ನಾಟಕದ ಗೆಳೆಯರಾದ ಡಿ.ಎಸ್.ನಾಗಭೂಷಣ್ ನೇತೃತ್ವದಲ್ಲಿ ಒಂದು ವಿಚಾರಸಂಕಿರಣದ ಮೂಲಕ ಕಿಶನ್ ಜೀ ಅವರ ಅಮೃತ ಮಹೋತ್ಸವವನ್ನು ಶಿವಮೊಗ್ಗದಲ್ಲಿ ಆಚರಣೆ ಮಾಡಲಾಯಿತು. ಗೆಳೆಯರೆಲ್ಲ ಕೂಡಿ ಹಣ ಸಂಗ್ರಹಿಸಿ ಒಂದು ಪುಟ್ಟ ನಿಧಿಯನ್ನು ಕೊಟ್ಟಾಗ ಅವರು ಸ್ಪಷ್ಟವಾಗಿ ನಿರಾಕರಿಸಿದರು. ನಮ್ಮ ಒತ್ತಾಯದ ಮೇರೆಗೆ ಕೊನೆಗೆ ಸ್ವೀಕರಿಸಿದರು. ನಾನು ಆ ನಿಧಿಯನ್ನು ತೆಗೆದುಕೊಂಡು ಹೋಗಿ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ ಅಂದುಕೊಂಡಿದ್ದೆ. ಆದರೆ ಅವರು ನಿಧನರಾದಾಗ ಅವರ ಅಂತ್ಯಕ್ರಿಯೆಗೆ ಭುವನೇಶ್ವರ್‌ಗೆ ಹೋಗಿದ್ದ ವೇಳೆ ಅಂತ್ಯಕ್ರಿಯೆ ಮುಗಿದ ನಂತರ ಅವರ ಪತ್ನಿ ವಾಣಿಜೀ ಅವರನ್ನು ಇದರ ಬಗ್ಗೆ ಪ್ರಶ್ನೆ ಮಾಡಿದರೆ, ‘ನೀವು ನಿಜವಾಗಲೂ ನಿಧಿ ಸಂಗ್ರಹಿಸಿ ಕೊಟ್ಟಿದ್ರಾ?’ ಅಂತ ಆಶ್ಚರ್ಯ ವ್ಯಕ್ತಪಡಿಸಿದರು. ನಂತರ ಈ ಬಗ್ಗೆ ಅವರ ಸ್ನೇಹಿತರನ್ನು ಕೇಳಿದಾಗ ಎಲ್ಲ ಹಣವನ್ನು ಸಮಾಜವಾದಿ ಚಳವಳಿಯಲ್ಲಿ ತೊಡಗಿಸಿಕೊಂಡ ಸ್ನೇಹಿತರಿಗೆ ಹಂಚಿಬಿಟ್ಟರು ಅಂತ ಹೇಳಿದರು’ ಎಂದು ವಿವರಿಸಿದರು. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದ ವಾಣಿಜೀ ಅವರ ದುಡಿಮೆಯಿಂದ ಕಿಶನ್‌ಜೀ ಅವರು ಮನೆಗೆ ಹೋದಾಗ ಊಟ ಹಾಕುವಂತಹ ಒಂದು ವ್ಯವಸ್ಥೆ ಇತ್ತು. ಇಲ್ಲದೆ ಇದ್ದರೆ ಬಹುಶಃ ಕಿಶನ್ ಅವರು ಭೈರಾಗಿಯಂತೆ ಉಪವಾಸ, ಮನವಾಸದಲ್ಲಿ ದೇಶ ಸುತ್ತುತ್ತಾ ಇದ್ದರು.
ಸಮಾಜವಾದಿ ಯುವಜನ ಸಭಾ ಕಟ್ಟಿ ಬೆಳೆಸಿದ ಕಿಶನ್:
ಕಿಶನ್ ಪಟ್ನಾಯಕ್ ಅವರು ಸಮಾಜವಾದಿ ಯುವಜನ ಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಪ್ರೊ.ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಸಮಾಜವಾದಿ ಯುವಜನ ಸಭಾ ಕಟ್ಟಿ, ಬೆಳೆಸಿದರು. ಈ ವೇಳೆ ಪ್ರೊ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್, ಪಿ.ಲಂಕೇಶ್, ಬಿ.ಎನ್.ಶ್ರೀರಾಮ್, ಕಡಿದಾಳ್ ಶಾಮಣ್ಣ ಹೀಗೆ ಸಾವಿರಾರು ಯುವಕರು ಸಮಾಜವಾದಿ ಚಳವಳಿಯಲ್ಲಿ ತೊಡಗಿಸಿಕೊಂಡು ಕರ್ನಾಟಕದ ರಾಜಕೀಯದಲ್ಲಿ ವಿಶೇಷವಾಗಿ ಎಲ್ಲ ರೀತಿಯ ಅನ್ಯಾಯಗಳ ವಿರುದ್ಧದ ಚಳವಳಿಗಲ್ಲಿ ಮುಂಚೂಣಿಯಲ್ಲಿದ್ದರು. ಆ ವೇಳೆ ಸಮಾಜವಾದಿ ಯುವಜನ ಸಭಾವು ರಾಜ್ಯದ ಉದ್ದಗಲಕ್ಕೂ ವಿರೋಧ ಪಕ್ಷದಂತೆ ಕೆಲಸ ಮಾಡಿ, ನಿರಂತರವಾಗಿ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಮಾಡಿ ಬಹಳ ದೊಡ್ಡ ಸಾಧನೆಯನ್ನೇ ಮಾಡಿತು. ಇಂಗ್ಲಿಷ್ ತೊಲಗಿಸಿ ಚಳವಳಿ, ಜಾತಿ ವಿನಾಶ ಚಳವಳಿ, ಬ್ರಿಟಿಷ್ ಪಳೆಯುಳಿಕೆಯಾದ ಕೋಟ್ ಮತ್ತು ಗೌನ್ ಅನ್ನು ವಿಶ್ವವಿದ್ಯಾಲಯಗಳ ಕಾನ್ವೋಕೇಶನ್‌ಗಳಲ್ಲಿ ತೊಲಗಿಸಿದ ಕೀರ್ತಿ, ಹೋಟೆಲ್ ತಿಂಡಿಗಳ ದರವನ್ನು ನಿಯಂತ್ರಿಸುವ ಕಾನೂನು ಜಾರಿ, ಋಣ ಪರಿಹಾರ ಕಾಯ್ದೆ, ಎಲ್ಲಕ್ಕಿಂತಲೂ ಮಿಗಿಲಾಗಿ ಉಳುವವನೇ ಭೂ ಒಡೆಯನನ್ನಾಗಿ ಮಾಡುವ ಭೂ ಸುಧಾರಣೆ ಹಾಗೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಮತ್ತು ಸರ್ಕಾರಿ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪದೋನ್ನತಿ ನೀಡುವಲ್ಲೂ ಮೀಸಲಾತಿಯನ್ನು ಜಾರಿ ಗೊಳಿಸುವುದರಲ್ಲಿ ಈ ಸಮಾಜವಾದಿ ಪಡೆಯ ಕಾರ್ಯಶೀಲತೆ ಮುಖ್ಯ ಪಾತ್ರ ವಹಿಸಿದೆ. ಈ ಎಲ್ಲ ಸನ್ನಿವೇಶಗಳಲ್ಲೂ ಬೆನ್ನೆಲುಬಾಗಿ ನಿಂತವರು ಕಿಶನ್ ಪಟ್ನಾಯಕ್. ಅವರ ಭಾಷಣಗಳನ್ನು ಕೇಳುವುದೇ ಒಂದು ಸಂಭ್ರಮ. ಏಕೆಂದರೆ, ಅವರು ಒಬ್ಬ ರಾಜಕಾರಣಿಯಂತೆ ಮಾತನಾಡುತ್ತಲೇ ಇರಲಿಲ್ಲ. ಒಬ್ಬ ಶಿಕ್ಷಕ ಮಕ್ಕಳಿಗೆ ಪಾಠ ಹೇಳಿಕೊಡು ವಂತೆ ಅಂದಿನ ಉದಾಹರಣೆಗಳನ್ನು ತೆಗೆದುಕೊಂಡು ಪ್ರಸ್ತುತ ವಿಷಯವನ್ನು ವಿಷದೀಕರಿಸಿ ಅದಕ್ಕೆ ಸಮಾಜವಾದಿ ಹಿನ್ನೆಲೆಯನ್ನು ಮತ್ತು ತಾತ್ವಿಕ ಪರಿಹಾರಗಳನ್ನೂ ಸೂಚಿಸುತ್ತಾ ಇದ್ದರು. ಇದಕ್ಕೆ ಉದಾಹರಣೆ-ಶ್ರೀನಿವಾಸ್ ಕುಮಾರ್ ಅವರ ನೇತೃತ್ವದಲ್ಲಿ ಚಾಮರಾಜನಗರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿನ ಅವರ ಅಮೋಘ ಭಾಷಣ. ಅದರಲ್ಲಿ ಅವರು ಯಾವ ರೀತಿ ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡಿದೆ? ಎಂಬುದನ್ನು, ಅದರಿಂದ ಆಗುವ ಅನಾಹುತಗಳನ್ನು ಚೆನ್ನಾಗಿ ವಿವರಿಸಿದ್ದರು.
ಎಂದೂ ರಾಜೀ ಮಾಡಿಕೊಳ್ಳದ ಸಮಾಜವಾದಿ:
೧೯೬೭ರ ಚುನಾವಣೆಯಲ್ಲಿ ಸೋತ ನಂತರ ಕಿಶನ್ ಅವರು ಚುನಾವಣಾ ರಾಜಕೀಯದಿಂದ ಸಂಪೂರ್ಣ ದೂರವಾದರು. ಅವರ ಗೆಳೆಯರಾದ ಜಾರ್ಜ್ ಫರ್ನಾಂಡಿಸ್, ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್ ಮತ್ತು ಮಧು ಲಿಮಯೇ ಎಲ್ಲರೂ ಸಹ ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಉನ್ನತ ಅಧಿಕಾರದ ರಾಜಕೀಯ ನಡೆಸುತ್ತಿದ್ದಾಗಲೂ ಕಿಶನ್ ಅಧಿಕಾರದಿಂದ ದೂರ ಉಳಿದು ನಿರಂತರ ಹೋರಾಟದಲ್ಲಿ ತೊಡಗಿಕೊಂಡರು. ೧೯೮೯ರ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿಗಳು ಒಡಿಶಾದ ಸಂಭಾಲ್ ಪುರ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಲು ಕಿಶನ್ ಅವರನ್ನು ಆಹ್ವಾನಿಸಿದಾಗ ಯಾವುದೇ ಕಾರಣಕ್ಕೂ ಜನತಾ ಪಕ್ಷದ ಚಿಹ್ನೆಯ ಮೇಲೆ ಎಲೆಕ್ಷನ್‌ಗೆ ನಿಲ್ಲೋದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದರು. ಆ ಆಹ್ವಾನವನ್ನು ಅವರು ಒಪ್ಪಿಕೊಂಡಿದ್ದರೆ ನಾವು ಮತ್ತೆ ಕಿಶನ್ ಪಟ್ನಾಯಕ್ ಅವರು ಸಂಸತ್ತಿನಲ್ಲಿ ಮಿಂಚುವುದನ್ನು ನೋಡ್ತಾ ಇದ್ವಿ. ಅದೊಂದು ದೊಡ್ಡ ಇತಿಹಾಸವೇ ಸೃಷ್ಟಿಯಾಗ್ತಾ ಇತ್ತು. ಹೀಗೆ, ಎಂತಹ ಸಮಯದಲ್ಲೂ ರಾಜೀ ಮಾಡಿ ಕೊಳ್ಳದೇ ಬದುಕಿದ ಕಿಶನ್ ಪಟ್ನಾಯಕ್ ಅವರು ಆರ್‌ಎಸ್ ಎಸ್‌ನ್ನು ವಿಶೇಷವಾಗಿ ತರಾಟೆಗೆ ತೆಗೆದುಕೊಂಡ ರೀತಿ ಬಹಳವೈಶಿಷ್ಟ್ಯಪೂರ್ಣವಾದದ್ದು. ಕಿಶನ್ ಪಟ್ನಾಯಕ್ ಆರ್‌ಎಸ್‌ಎಸ್ ಬಗ್ಗೆ ಬಹಳ ಸರಳವಾಗಿ ಎಷ್ಟು ಸ್ಪಷ್ಟತೆಯಿಂದ ಮಾತನಾಡುತ್ತಿದ್ದರು ಎಂದರೆ: ‘ಆರ್‌ಎಸ್‌ಎಸ್‌ನವರು ಏಕೆ ಬಸವೇಶ್ವರರ ಮಾತನ್ನು ಹೇಳೋದಿಲ್ಲ? ಕಬೀರನ ಮಾತು ಹೇಳೋದಿಲ್ಲ? ಏಕೆ ಸಮಾಜವನ್ನು ವಿಭಜನೆ ಮಾಡುವಂತಹ ಕೆಲಸಗಳಿಗೆ ಕೈ ಹಾಕ್ತಾರೆ? ಸಮಾಜವನ್ನು ಜೋಡಿಸುವ ಕೆಲಸಕ್ಕೆ, ವಿಚಾರಗಳಿಗೆ ಏಕೆ ಸ್ಪಂದಿಸೋದಿಲ್ಲ? ಬುದ್ಧನನ್ನು ಯಾಕೆ ಜ್ಞಾಪಿಸಿಕೊಳ್ಳೋದಿಲ್ಲ? ಅಂಬೇಡ್ಕರ್ ಅವರನ್ನು ಯಾಕೆ ಜ್ಞಾಪಿಸಿಕೊಳ್ಳೋ ದಿಲ್ಲ?’ ಈ ರೀತಿ ಕೇಳುವ ಮೂಲಕ ಎಮೋಷನಲ್ ವಿಚಾರಗಳಿಗೆ ಸ್ಪಂದಿಸುತ್ತಿದ್ದ ದಲಿತ ಮತ್ತು ಶೂದ್ರ ಸಮುದಾಯಗಳಿಗೆ ಸ್ಪಷ್ಟವಾಗಿ ಅವರು ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾಗಳ ಬಗ್ಗೆ ವಿವರವಾಗಿ ತಿಳಿಸುತ್ತಾ ಇದ್ದದ್ದು ಅತ್ಯಂತ ವೈಶಿಷ್ಟ್ಯಪೂರ್ಣವಾದ ವಿಚಾರ. ಅಂತಹ ಒಂದು ಸ್ಪಷ್ಟತೆಯನ್ನು ಇಟ್ಟುಕೊಂಡಂತಹ ಬಹು ದೊಡ್ಡ ನಾಯಕ ಕಿಶನ್ ಪಟ್ನಾಯಕ್ ಜನ್ಮದಿನದಂದು ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ. ಅವರ ಚಿಂತನೆ ಮುಂದೆಯೂ ಕರ್ನಾಟಕದ ಎಲ್ಲಾ ಪ್ರಗತಿ ಪರ ಚಳವಳಿಗಳಿಗೆ, ವಿಶೇಷ ವಾಗಿ ಇಂದಿನ ಪೀಳಿಗೆಯ ಯುವಕರಿಗೆ ಮಾರ್ಗದರ್ಶನವಾಗಿರಲಿ ಅಂತ ಹಾರೈಸುತ್ತೇನೆ.
ಕೊನೆಯ ಉಸಿರಿರುವವರೆಗೂ ಸರಳ ಜೀವನ ನಡೆಸಿದ ಸಮಾಜವಾದಿ:
ಕಿಶನ್ ಪಟ್ನಾಯಕ್ ಅವರು ತಮ್ಮ ಜೀವಮಾನದಲ್ಲಿ ಅತ್ಯಂತ ಕಷ್ಟಜೀವನವನ್ನು ನಡೆಸಿ, ಕೊನೆಯುಸಿರಿರುವವರೆಗೂ ಸರಳವಾಗಿ ಬದುಕಿದ ಅಪರೂಪದ ಸಮಾಜವಾದಿ. ೨೧ನೇ ಶತಮಾನದಲ್ಲಿ ಇಂತಹ ಸಮಾಜವಾದಿಯನ್ನು ದುರ್ಬಿನು ಹಾಕಿ ಹುಡುಕಿದರೂ ಸಿಕ್ಕುವುದಿಲ್ಲ. ಸಂಸತ್ಪಟುಗಳಿಗೆ ನೀಡುತ್ತಿದ್ದ ಪೆನ್ಶನ್‌ಗೆ ಕಿಶನ್ ಪಟ್ನಾಯಕ್ ಅವರ ವೈಯಕ್ತಿಕ ವಿರೋಧ ಇದ್ದುದರಿಂದ ಸಂಸತ್ ಸದಸ್ಯರಿಗೆ ನೀಡುವ ಪೆನ್ಶನ್ ಅಥವಾ ನಿವೃತ್ತಿಯ ಸವಲತ್ತುಗಳಲ್ಲಿ ಅವರು ಒಂದೇ ಒಂದು ಪೈಸೆಯನ್ನೂ ಪಡೆದವರಲ್ಲ. ಅಂತೆಯೇ ಅವರು ಕೊನೆಯ ಉಸಿರಿರುವವರೆಗೂ ಸ್ವಂತಕ್ಕೆ ಯಾವುದೇ ಆಸ್ತಿಯನ್ನೂ ಮಾಡದೇ, ಕನಿಷ್ಠ ಒಂದು ಮನೆಯನ್ನೂ ಮಾಡಿಕೊಳ್ಳದೇ, ಒಂದು ಗುಡಿಸಲೂ ಇರದೇ ಇದ್ದ ಜೋಗಿ ಎಂದರೆ ಕಿಶನ್ ಪಟ್ನಾಯಕ್.
ಮಕ್ಕಳನ್ನು ಪಡೆಯದಿರುವ ಕಟು ನಿರ್ಧಾರ:
ವೈಯಕ್ತಿಕ ಜೀವನದಲ್ಲಿ ವಾಣಿ ಮಂಜರಿದಾಸ್ ಅವರನ್ನು ಮದುವೆಯಾದರು. ಆದರೆ ತಾವೇನಾದರೂ ಮಕ್ಕಳನ್ನು ಪಡೆದರೆ ತಮ್ಮ ಕಾಯಸ್ಥ ಜಾತಿಯ ಸದಸ್ಯತ್ವ ಹೆಚ್ಚಿಸಿದಂತಾಗುತ್ತದೆ ಎನ್ನುವ ಕಾರಣಕ್ಕಾಗಿ ದಂಪತಿಯು ಸ್ವ-ಇಚ್ಛೆಯಿಂದ ಮಕ್ಕಳನ್ನು ಪಡೆಯಲಿಲ್ಲ. ಕಿಶನ್ ಸ್ವಂತಕ್ಕಾಗಿ ಯಾವುದೇ ವರಮಾನ ಬರು ವಂತಹ ಕೆಲಸವನ್ನೂ ಮಾಡುತ್ತಿರಲಿಲ್ಲ. ಸಮಾಜವಾದಿ ಚಳವಳಿಯಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತಿದ್ದ ಸಂಘ-ಸಂಸ್ಥೆಗಳು ಅವರ ಖರ್ಚು- ವೆಚ್ಚವನ್ನು ನಿಭಾಯಿಸಿದರೆ ಉಂಟು. ಇಲ್ಲದಿದ್ದರೆ ಸಾಲ ಮಾಡಿಯಾದರೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುವ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು. ಮೇಧಾ ಪಾಟ್ಕರ್ ಅವರ ನ್ಯಾಷನಲ್ ಅಲೈಯನ್ಸ್ ಫರ್ ಪೀಪಲ್ಸ್ ಮೂವ್‌ಮೆಂಟ್ ರೂವಾರಿಗಳಾದ ಕಿಶನ್ ನರ್ಮದಾ ಬಚಾವೋ ಆಂದೋಲನ ಮತ್ತಿತರ ಚಳವಳಿಗಳಲ್ಲೂ ತೀವ್ರವಾಗಿ ತೊಡಗಿಸಿಕೊಂಡಿದ್ದರು.
ಚಿಕ್ಕ ವಯಸ್ಸಿಗೇ ಲೋಕಸಭೆಗೆ ಆಯ್ಕೆ:
ಕಿಶನ್ ಪಟ್ನಾಯಕ್ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಮೂರನೆಯ ಲೋಕಸಭೆಗೆ ಆಯ್ಕೆಯಾದರು. ಆ ವೇಳೆಗೆ ಲೋಹಿಯಾ ಇನ್ನೂ ಎಲೆಕ್ಟ್ ಆಗಿರಲಿಲ್ಲ. ಲೋಹಿಯಾನೇ ಮೆಚ್ಚುವ ರೀತಿಯಲ್ಲಿ ಒಬ್ಬ ಸಂಸದೀಯ ಪಟುವಾಗಿ ಪಟ್ನಾಯಕ್ ಗಮನ ಸೆಳೆದರು. ತದನಂತರ ನಡೆದ ಬೈ ಎಲೆಕ್ಷನ್‌ನಲ್ಲಿ ಲೋಹಿಯಾ ಕೂಡ ಲೋಕಸಭೆಗೆ ಪ್ರವೇಶ ಮಾಡಿದರು. ಆ ನಂತರ ಅವರಿಬ್ಬರೂ ಸೇರಿಕೊಂಡು ಭಾರತದ ಪ್ರಪ್ರಥಮ ನೋ ಕಾನಿಡೆನ್ಸ್ ಮೋಷನ್ ತರುವಲ್ಲಿ ಯಶಸ್ವಿಯಾದರು. ಅದುವರೆಗೆ ಸಂಸದೀಯ ಇತಿಹಾಸದಲ್ಲಿ ನೋ ಕಾನಿಡೆನ್ಸ್ ಮೋಷನ್ ಅನ್ನುವ ಪ್ರಯೋಗವೇ ಆಗಿರಲಿಲ್ಲ. ಹಾಗಾಗಿ, ಲೋಹಿಯಾ ಸಂಸತ್ ಪ್ರವೇಶದಿಂದ ಒಂದು ಕ್ಷಣ ಇಡೀ ಸಂಸದೀಯ ಕಲಾಪಗಳಿಗೆ ಒಂದು ವಿದ್ಯುತ್ ಸಂಚಾರವಾದಂತಾಯಿತು. ಅದರಲ್ಲಿ ಕಿಶನ್ ಅವರ ಪಾತ್ರ ಬಹಳ ದೊಡ್ಡದು. ಲೋಹಿಯಾ ಕಿಶನ್ ಪಟ್ನಾಯಕ್ ಅವರನ್ನು ತಮ್ಮ ಉತ್ತರಾಧಿಕಾರಿಯಂತೆಯೇ ನಡೆಸಿಕೊಂಡಿದ್ದರು. ಮುಖ್ಯವಾಗಿ ಲೋಹಿಯಾ ಅವರು ಗತಿಸಿದ ನಂತರ ಲೋಹಿಯಾರವರ ಉತ್ತರಾಧಿಕಾರಿ ಅಂತನೇ ಸಮಾಜವಾದಿ ಪಕ್ಷದಲ್ಲಿ, ಸಮಾಜವಾದಿ ಚಟುವಟಿಕೆಗಳಲ್ಲಿ ಕಿಶನ್ ಪಟ್ನಾಯಕ್ ತೊಡಗಿಸಿಕೊಳ್ಳುತ್ತಾರೆ.




