Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ

ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ ಬಾಡಿಗೆ ಸಂಬಂಧ ಸದ್ಯದಲ್ಲಿಯೇ ಪರಿಷ್ಕೃತ ದರಪಟ್ಟಿ ಪ್ರಕಟವಾಗಲಿದೆ. ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸೂಚಿಸಿದಂತೆ ಜಿಲ್ಲೆಯಲ್ಲಿ ಹೊಸ ದರ ನಿಗದಿಪಡಿಸಲಾಗಿದ್ದು, ಆಟೋ ಚಾಲಕರು ಮತ್ತು ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಆಟೋರಿಕ್ಷಾ ಬಾಡಿಗೆ ದರ ಪರಿಷ್ಕರಿಸಿ ವರ್ಷಗಳೇ ಕಳೆದಿವೆ. ಇದರಿಂದ ನಿಗದಿತ ಬಾಡಿಗೆ ದರಪಟ್ಟಿ ಇಲ್ಲದೇ ಸಾರ್ವಜನಿಕರು ಮತ್ತು ಆಟೋ ಚಾಲಕರು ಸಮಸ್ಯೆ ಅನುಭವಿಸುವಂತಾಗಿತ್ತು. ಇದೀಗ ಆಟೋಗಳಿಗೆ ಕನಿಷ್ಠ ಬಾಡಿಗೆ ದರ ನಿಗದಿ ಮಾಡಲು ಸಾರಿಗೆ ಪ್ರಾಧಿಕಾರ ಮುಂದಾಗಿದ್ದು, ಉಪ ಸಮಿತಿಯಿಂದ ಈಗಾಗಲೇ ದರ ಪಟ್ಟಿ ಸಲ್ಲಿಕೆಯಾಗಿದೆ ಎಂದು ಆರ್‌ಟಿಒ ಮೂಲಗಳಿಂದ ತಿಳಿದು  ಬಂದಿದೆ. ಸಾರಿಗೆ ಪ್ರಾಧಿಕಾರದಿಂದ ಹೊಸ ದರ ಪಟ್ಟಿಗೆ ಅನುಮೋದನೆ ಸಿಕ್ಕ ಕೂಡಲೇ ನೂತನ ದರ ಜಾರಿಯಾಗಲಿದೆ. ಆ ಮೂಲಕ ಆಟೋ ರಿಕ್ಷಾ ಬಾಡಿಗೆ ಗೊಂದಲಕ್ಕೆ ಸದ್ಯದಲ್ಲಿಯೇ ತೆರೆ ಬೀಳಲಿದೆ.

ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್, ಆಟೋ ಎಲ್‌ಪಿಜಿ ದರ ಹಲವು ಬಾರಿ ಏರಿಕೆಯಾಗಿದೆ. ಆದರೆ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಕನಿಷ್ಠ ಬಾಡಿಗೆ ದರ ಪರಿಷ್ಕರಣೆ ಯಾಗಿರಲಿಲ್ಲ. ಇದರಿಂದಾಗಿ ಆಟೋ ಚಾಲಕರೇ ಇಂಧನ ದರ ಏರಿಕೆಯ ಆಧಾರದ ಮೇಲೆ ಬಾಡಿಗೆಯನ್ನೂ ಹೆಚ್ಚಿಸುತ್ತಾ ಬಂದಿದ್ದರು. ಇದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಕೆಲವೊಮ್ಮೆ ಪ್ರಯಾಣಿಕರು ಆಟೋ ಚಾಲಕರು ಕೇಳಿದ ದರವನ್ನು ನೀಡಲು ನಿರಾಕರಿಸಿದಾಗ ವಾಗ್ವಾದವಾಗುತ್ತಿತ್ತು. ಹೀಗಾಗಿ ಪರಿಷ್ಕೃತ ಆಟೋ ಬಾಡಿಗೆ ದರ ಪ್ರಕಟಿಸಬೇಕೆಂಬ ಬೇಡಿಕೆ ಹಲವು ಸಮಯದಿಂದ ಕೇಳಿಬರುತ್ತಿತ್ತು.

ಇಂಧನ ದರ ಏರಿಕೆಯಾಗಿದ್ದರೂ ಹಳೆಯ ದರದಲ್ಲಿಯೇ ಬಾಡಿಗೆ ಮಾಡುತ್ತಿರುವ ಕೆಲವು ಪ್ರಾಮಾಣಿಕ ಆಟೋ ಚಾಲಕರು ಜಿಲ್ಲೆಯಾದ್ಯಂತ ಇದ್ದಾರೆ. ಹಲವು ಹಿರಿಯ ಆಟೋ ಚಾಲಕರು ನ್ಯಾಯಯುತವಾಗಿ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಒಂದಿಷ್ಟು ಹೆಚ್ಚಿನ ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಬೆಲೆಯೇರಿಕೆಯನ್ನೇ ಬಂಡವಾಳಮಾಡಿಕೊಂಡು ಗ್ರಾಹಕರಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಹಲವು ಸಮಯದಿಂದ ಕೇಳಿಬರುತ್ತಲೇ ಇದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ಘರ್ಷಣೆಗಳಾದ ಹಲವು ಉದಾಹರಣೆಗಳಿವೆ. ದುಪ್ಪಟ್ಟು ಬಾಡಿಗೆ ಪಡೆಯುತ್ತಿರುವುದು ಗ್ರಾಹಕರಿಗೂ ಹೊರೆಯಾಗಿದ್ದು, ದರ ನಿಗದಿ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಲಿದೆ.

” ಈ ಹಿಂದೆ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಬಾಡಿಗೆ ದರ ಪರಿಷ್ಕರಣೆ ಸಂಬಂಧ ಚರ್ಚೆ ನಡೆದಿತ್ತು. ಅದರಂತೆ ಪರಿಷ್ಕೃತ ದರ ನಿಗದಿ ಪ್ರಕ್ರಿಯೆಗಳು ನಡೆಯುತ್ತಿವೆ. ಸದ್ಯದಲ್ಲಿಯೇ ಪರಿಷ್ಕೃತ ದರ ಜಾರಿಯಾಗಲಿದ್ದು, ಆಟೋ ಚಾಲಕರು ಮತ್ತು ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.”

-ಸತೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ

೨ ಕಿ.ಮೀ.ಗೆ ಕನಿಷ್ಠ ದರ ನಿಗದಿ: 

ಪರಿಷ್ಕೃತ ದರಪಟ್ಟಿಯಲ್ಲಿ ೨ ಕಿ.ಮೀ.ವರೆಗೂ ಕನಿಷ್ಠ ದರ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ೨ ಕಿ.ಮೀ. ಬಳಿಕ ಪ್ರತಿ ಕಿ.ಮೀ.ಗೆ ಇಷ್ಟೆಂದು ದರ ನಿಗದಿ ಮಾಡಲಾಗುತ್ತದೆ. ಅಽಕೃತವಾಗಿ ದರಪಟ್ಟಿ ಪ್ರಕಟವಾದರೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವುದರೊಂದಿಗೆ ಜಿಲ್ಲೆಯಾದ್ಯಂತ ಏಕರೂಪ ದರ ಜಾರಿಯಾಗಲಿದೆ. ಇದರಿಂದ ಆಟೋ ಚಾಲಕರು ಮನಬಂದಂತೆ ಬಾಡಿಗೆ ಕೇಳುವುದು, ಪ್ರಯಾಣಿಕರೊಂದಿಗೆ ವಾಗ್ವಾದಕ್ಕಿಳಿಯುವುದಕ್ಕೂ ಕಡಿವಾಣ ಬೀಳಲಿದೆ.

” ಮಡಿಕೇರಿಯಲ್ಲಿ ಕೆಲವು ಆಟೋ ಚಾಲಕರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಒಂದು ಸ್ಥಳಕ್ಕೆ ೧೦ ಆಟೋ ಚಾಲಕರು ಹತ್ತು ತರಹದ ಬಾಡಿಗೆ ಪಡೆಯುತ್ತಾರೆ. ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ಕೆಲವರು ಬೇಕಾದರೆ ಆಟೋಹತ್ತಿ ಇಲ್ಲ ನಡೆದುಕೊಂಡು ಹೋಗಿ ಎಂದು ದರ್ಪದ ಮಾತುಗಳನ್ನಾಡುತ್ತಾರೆ. ಆರ್‌ಟಿಒ ಮತ್ತು ಜಿಲ್ಲಾಡಳಿತ ಈ ಸಂಬಂಧ ಕ್ರಮ ಕೈಗೊಳ್ಳಬೇಕು.”

ಸಂದೇಶ್,

” ಸ್ಥಳೀಯರು, ಮಡಿಕೇರಿ ಕೊಡಗು ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಆಟೋ ಬಾಡಿಗೆ ದರ ಪರಿಷ್ಕರಣೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯ ವರದಿ ಮೇರೆಗೆ ಈಗ ದರ ಪರಿಷ್ಕರಣೆ ಸಂಬಂಧ ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ. ಆಟೋ ಪ್ರಯಾಣ ದರವನ್ನು ಕನಿಷ್ಠ ೫೦ ರೂ.ಗೆ ಹೆಚ್ಚಿಸಬೇಕೆಂದು ಬೇಡಿಕೆ ಸಲ್ಲಿಸಲಾಗಿದ್ದು, ಆದಷ್ಟು ದರ ಪರಿಷ್ಕರಣೆ ಆಗುವ ಸಾಧ್ಯತೆ ಇದೆ.”

-ಮೇದಪ್ಪ, ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಜಿಲ್ಲಾಧ್ಯಕ್ಷರು

 

 

Tags:
error: Content is protected !!