Mysore
23
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಿತಿ ಮೀರಿದ ಮೊಬೈಲ್‌ ವ್ಯಸನ

article

ಡಾ. ನೀಗೂ ರಮೇಶ್

‘ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ ದಿನಕ್ಕೆ ಮನರಂಜನೆ’ ಎಂಬ ಮಾತಿದೆ. ಅಂದರೆ ನಮ್ಮ ದಿನಚರಿಯಲ್ಲಿ ನಿರ್ವಹಿಸಬೇಕಾದ ಬೇರೆ ಬೇರೆ ಕರ್ತವ್ಯಗಳಿವೆ, ಅವುಗಳ ನಂತರದ ಕೊನೆಯ ಸ್ಥಾನ ಮನರಂಜನೆಗೆ ಎಂಬುದು ಇದರ ಅರ್ಥ. ಆದರೆ ಇಂದು ಮನರಂಜನೆಯ ಸಾಧನಗಳ ವೈಪರೀತ್ಯದಿಂದಾಗಿ ಇಡೀ ದಿನವನ್ನು ಮನರಂಜನೆಯೇ ಆವರಿಸಿಕೊಂಡಿದ್ದು, ಅದರ ನಡುವೆ ಬಿಡುವಾದಾಗ ಉಳಿದ ಕೆಲಸ ಕಾರ್ಯಗಳನ್ನು ಮಾಡುವ ಪರಿಸ್ಥಿತಿ ಉಂಟಾಗಿದೆ.

ನಮ್ಮ ಪರಂಪರೆಯಲ್ಲಿ ಮನರಂಜನೆಗೆ ವಿಶಿಷ್ಟವಾದ ಅರ್ಥ ಮತ್ತು ಸ್ಥಾನವಿದೆ. ನಮ್ಮ ಪೂರ್ವಿಕರ ದಿನಚರಿ ಅದಕ್ಕೆ ಉತ್ಕೃಷ್ಟವಾದ ಮಾದರಿ. ಮುಂಜಾನೆ ಏಳುತ್ತಲೇ ಬೌದ್ಧಿಕ ಅಥವಾ ದೈಹಿಕ ಚಟುವಟಿಕೆ ಎರಡಕ್ಕೂ ಪ್ರಶಸ್ತ ಸಮಯ. ಮನಸ್ಸಿಗೆ ತುಂಬಾ ಏಕಾಗ್ರತೆ ಸಿಗುವ ಸಮಯ. ಏಕೆಂದರೆ, ಮುಂಜಾನೆಯಲ್ಲಿ ಮನಸ್ಸು ಬೇರೆ ಬೇರೆ ವಿಷಯಗಳ ಕಡೆಗೆ ಚದುರಿ ಹೋಗಿರುವು ದಿಲ್ಲ. ಅಂತಹ ಸಮಯದಲ್ಲಿ ವಿದ್ಯಾರ್ಥಿಗಳು ಓದಲು ಕುಳಿತರಂತೂ ಒಂದು ಗಂಟೆ ಓದಿ ಅರ್ಥೈಸಿಕೊಳ್ಳುವಷ್ಟು ವಿಷಯಗಳನ್ನು ಐದತ್ತು ನಿಮಿಷಗಳಲ್ಲಿ ಗ್ರಹಿಸಿಕೊಳ್ಳಬಹುದು. ಹಾಗಾಗಿ, ಯೋಗ, ಧ್ಯಾನಗಳಿಗೂ ಇದೇ ಸಮಯವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಂತಹ ಸಮಯದಲ್ಲಿ ದೇಹ ಕೂಡ ಪ್ರಫುಲ್ಲವಾಗಿರುತ್ತದೆ. ಏಳೆಂಟು ಗಂಟೆಗಳ ವಿಶ್ರಾಂತಿಯ ನಂತರ ಎಂತಹ ಕಠಿಣ ಕೆಲಸವಾದರೂ ಮಾಡಿ ಮುಗಿಸಿಬಿಡೋಣ ಎನ್ನುವಷ್ಟು ಸನ್ನದ್ಧವಾಗಿರುತ್ತದೆ. ಈ ಸಮಯವನ್ನು ವಿದ್ಯಾರ್ಥಿಗಳು, ವಿವಿಧ ಪರೀಕ್ಷೆಗಳಿಗೆ ಸಿದ್ಧವಾಗುವವರು, ಏಕಾಗ್ರತೆಯಿಂದ ಕಲೆ, ಸಾಹಿತ್ಯವನ್ನು ಸೃಷ್ಟಿಸುವವರು ತಮ್ಮ ಸಾಧನೆಗೆ ಉಪಯೋಗಿಸಿಕೊಳ್ಳುತ್ತಾರೆ. ಜೊತೆಗೆ, ಮುಂಜಾನೆ ಪ್ರಕೃತಿಯಲ್ಲಿನ ಸಂಭ್ರಮವನ್ನು ಪ್ರತಿದಿನ ಸವಿದರೂ ಮನಸ್ಸು ತಣಿಯುವುದಿಲ್ಲ. ಪ್ರಾಣಿಪಕ್ಷಿಗಳ ಚಲನ ವಲನಗಳು, ತಂಗಾಳಿಯ ಸೊಬಗು, ಸಸ್ಯರಾಶಿಗಳು, ನೀಲ ಆಕಾಶ, ಮೋಡಗಳ ಚಿತ್ತಾರ, ತುಂತುರು ಇಬ್ಬನಿಯ ಹನಿಗಳು ಯಾವುದರಿಂದಲೂ ಸಿಗಲಾರದ ಆನಂದವನ್ನು ನೀಡುತ್ತವೆ. ಇಂತಹ ಪ್ರಕೃತಿಯನ್ನು ನೋಡುವುದ ಕ್ಕಿಂತ ದೊಡ್ಡ ಮನರಂಜನೆ ಮತ್ತೊಂದಿಲ್ಲ. ನಮ್ಮ ನಿತ್ಯದ ಕೆಲಸ ಕಾರ್ಯಗಳ ಕೊನೆಗೆ ಸಂಜೆ ಗೆಳೆಯರ ಜೊತೆ, ಕುಟುಂಬದ ಸದಸ್ಯರ ಜೊತೆ, ಸಮಾನ ಮನಸ್ಕರ ಜೊತೆ ಕಳೆಯುವ ಸಮಯ ನಮ್ಮ ಬದುಕಿನ ಶ್ರೇಷ್ಠ ಮನರಂಜನೆಯ ಸಮಯ. ಆದರೆ, ಇಂದು ಈ ಎಲ್ಲ ಸಂಭ್ರಮಗಳನ್ನೂ ಕೇವಲ ಟಿವಿ, ಮೊಬೈಲ್ ಪರದೆಗಳು ಅಳಿಸಿಹಾಕಿವೆ ಎಂಬುದು ದೊಡ್ಡ ದುರಂತ.

ನಮ್ಮ ಬಾಲ್ಯದ ದಿನಗಳಿಂದಲೂ ಗ್ರಾಮೀಣ ಭಾಗದಲ್ಲಿ ಮನರಂಜನೆ ಎಂಬುದು ಕೆಲಸ ಕಾರ್ಯಗಳ ಜೊತೆಗೇ ಮೇಳೈಸಿರುತ್ತಿತ್ತು. ನಾಟಿ ಮಾಡುವಾಗ, ಕೊಯ್ಲು ಮಾಡುವಾಗ, ಕಣದ ಕೆಲಸ ಮಾಡುವಾಗ, ರಾಗಿ ಬೀಸುವಾಗ, ಭತ್ತ ಕುಟ್ಟುವಾಗ ಹಾಡುವ ಹಾಡುಗಳೇ ಅವರ ಪಾಲಿನ ದೊಡ್ಡ ಮನರಂಜನೆಗಳಾಗಿದ್ದವು. ಇನ್ನು ಹಬ್ಬಗಳು, ಶುಭಕಾರ್ಯಗಳು, ಸಂಬಂಽಕರನ್ನು ಭೇಟಿಯಾಗುವ, ಬೇಸರ ಕಳೆಯುವ ಅಮೂಲ್ಯ ಸಮಯಗಳಾಗಿರುತ್ತಿದ್ದವು.

ವರ್ಷದಲ್ಲಿ ಒಂದೆರಡು ಬಾರಿ ಊರಿನ ಎಲ್ಲರೂ ಸೇರಿ ಕಲಿಯುತ್ತಿದ್ದ ಪೌರಾಣಿಕ ನಾಟಕಗಳು, ಆಗಾಗ ಊರೂರುಗಳ ಮೇಲೆ ಬರುತ್ತಿದ್ದ ತೊಗಲು ಗೊಂಬೆಯಾಟ ಪ್ರದರ್ಶನ, ಸರ್ಕಸ್ (ದೊಂಬರಾಟ) ಇವು ಊರಿನ ಪ್ರತಿಯೊಬ್ಬರಿಗೂ ದೊರೆಯುತ್ತಿದ್ದ ಸಾರ್ವಜನಿಕ ಮನರಂಜನೆಗಳು. ಹಾಗೆಯೇ ಮನೆಯೊಳಗೆ ಸಣ್ಣ ಮಕ್ಕಳ ತೊದಲು ನಡೆನುಡಿಗಳು ಎಲ್ಲದಕ್ಕಿಂತ ದೊಡ್ಡ ಮನರಂಜನೆಯ ಮೂಲವಾಗಿದ್ದವು. ‘ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ’ ಎಂಬುದು ಜಾನಪದರು ಕಂಡುಕೊಂಡ ಸತ್ಯ. ಅದಕ್ಕೂ ಮೀರಿ ಪ್ರತೀ ದಿನ ಇಳಿ ಸಂಜೆಯಲ್ಲಿ ಊರಿನ ಮಕ್ಕಳು ಆಡುತ್ತಿದ್ದ ಆಟಗಳನ್ನು ನೋಡುತ್ತಾ ಕೂರುವುದು, ಒಳಾಂಗಣ ಆಟಗಳಲ್ಲಿ ಮಕ್ಕಳೊಂದಿಗೆ ಸೇರಿಕೊಳ್ಳುವುದು, ಹಬ್ಬ ಹರಿದಿನಗಳಲ್ಲಿ ಊಟದ ಜೊತೆಗೆ ಒಂದಿಷ್ಟು ಆಟ, ಆಚರಣೆಗಳು ದೊಡ್ಡ ಮನರಂಜನೆಯ ಮೂಲವಾಗಿದ್ದವು. ಇಲ್ಲಿ ಎಲ್ಲದರಲ್ಲೂ ಬೇರೆಯವರನ್ನು ನೋಡಿ ಪಡೆಯುವ ಮನರಂಜನೆಗಿಂತ ತಾವೂ ಅದರಲ್ಲಿ ಭಾಗಿಯಾಗಿ ಆಡಿ, ಮಾಡಿ ಪಡೆಯುವ ಮನರಂಜನೆಯ ಪಾಲು ಜಾಸ್ತಿ ಇರುತ್ತಿತ್ತು.

ಆದರೆ, ಆಧುನಿಕತೆಯು ನೀಡಿದ ಹಲವು ಸಾಧನಗಳು ಈ ಮನರಂಜನೆಯ ಅರ್ಥವನ್ನೇ ಬದಲಿಸಿವೆ, ದೈಹಿಕ ಮತ್ತು ಮಾನಸಿಕ ಕ್ರಿಯಾಶೀಲತೆಯನ್ನೇ ಕಿತ್ತುಕೊಂಡಿವೆ. ಮಾಡಿ ಪಡೆಯುವ ಮನರಂಜನೆಗಿಂತ ನೋಡಿ ಪಡೆಯುವ ಮನರಂಜನೆ ಮನುಷ್ಯನನ್ನು ಮೂಕರನ್ನಾಗಿಸಿದೆ, ಆಲಸಿಗಳಾಗಿಸಿದೆ. ಮೊದಲು ರೇಡಿಯೋ ಬಂತು. ರೇಡಿಯೋ ಕೇಳಿಸಿಕೊಳ್ಳುತ್ತಾ ಕೂತಾಗ ಮನೆಯ ಇತರರೊಡನೆ ಮಾತನಾಡುವ ಅವಕಾಶ ಕಡಿಮೆಯಾಯಿತು. ಮುಂದೆ ದೂರದರ್ಶನ ಬಂತು. ಕೆಲಸವನ್ನೂ ಬಿಟ್ಟು, ಆಟೋಟಗಳನ್ನೂ ಬಿಟ್ಟು, ಮಾತನ್ನೂ ನಿಲ್ಲಿಸಿ, ಟಿವಿಯ ಮುಂದೆ ಕೂರುವ ಮೂಕಸ್ಥಿತಿ ಬಂತು. ಮುಂದೆ ಕಂಪ್ಯೂಟರ್ ಕೈಗೆ ಸಿಗುತ್ತಲೇ ಕಲಿತವರು ಕಲಿಯದವರ ಮನರಂಜನೆಯ ಮೂಲಗಳು ಬೇರೆ ಬೇರೆಯಾದವು. ಇದೀಗ ಮೊಬೈಲ್ ಎಂಬ ಮಾಯದ ವಸ್ತು ಬಹುತೇಕ ಎಲ್ಲರ ಕೈಸೇರಿದೆ. ಮನರಂಜನೆ ದಿನವಿಡೀ ತುಂಬಿ ತುಳುಕುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂಗಳು ಬಂದ ಮೇಲಂತೂ ದಿನವಿಡೀ ತೋಡಿದರೂ ತೀರದಷ್ಟು ವಿಡಿಯೋಗಳು, ರೀಲ್ಸ್‌ಗಳು ಪ್ರತೀದಿನ ಬಂದು ಬಂದು ತುಂಬಿಕೊಳ್ಳುತ್ತಿವೆ. ಮಕ್ಕಳು, ಯುವಕರು, ಮುದುಕರು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ. ಒಂದು ದಿನ ಇಂಟರ್ ನೆಟ್ ಇಲ್ಲದೆ ಬದುಕಬಹುದೇ ಎಂಬ ಆತಂಕದಲ್ಲಿದ್ದಾರೆ! ದೊಡ್ಡವರ ಕಣ್ತಪ್ಪಿಸಿ ಮಕ್ಕಳು, ಯುವಕರು ವಿಡಿಯೋಗಳನ್ನು ರೀಲ್ಸ್ ಗಳನ್ನು ತಳ್ಳಿ ತಳ್ಳಿ ದಣಿದಿದ್ದಾರೆ! ಈ ನಿರಂತರವಾಗಿ ಮೊಬೈಲ್ ನೋಡುವ ಕ್ರಿಯೆಯಿಂದ ಪಡೆದಿರುವ ಪ್ರಯೋಜನವಾದರೂ ಏನು ಎಂಬುದು ಯಕ್ಷಪ್ರಶ್ನೆಯಾಗಿ ಹೋಗಿದೆ.

ಮದ್ಯಪಾನ, ಧೂಮಪಾನ ವ್ಯಸನಗಳಿಗಿಂತ ಈ ಟಿವಿ, ಮೊಬೈಲ್ ವ್ಯಸನವೇ ಅಪಾಯಕಾರಿ ಎನಿಸಿದೆ. ಈ ಮನರಂಜನೆಯ ಮಾಟದಲ್ಲಿ ಮೈಮರೆತ ಮಕ್ಕಳಿಗೆ, ಕಳೆದುಕೊಂಡ ಏಕಾಗ್ರತೆಯ ಅರಿವಿಲ್ಲ, ಯುವಕರಿಗೆ ದಿನೇ ದಿನೆ ಕರಗಿಹೋಗು ತ್ತಿರುವ ಕಣ್ಣುದೃಷ್ಟಿಯ ಚಿಂತೆಯಿಲ್ಲ, ವಯಸ್ಕರಿಗೆ ದುರ್ಬಲವಾಗುತ್ತಿರುವ ನರಗಳಿಂದಾಗಿ ಬರುತ್ತಿರುವ ಸಮಸ್ಯೆಯ ಅರಿವು ಇಲ್ಲವೇ ಇಲ್ಲ.

ಇನ್ನೊಂದು ಮಾತು: ಈಗಿರುವ ನಾವೆಲ್ಲರೂ ಮನರಂಜನೆ ಮಿತಿಮೀರಿದ ಕಾಲದ ಬಲಿಪಶುಗಳು. ಟಿವಿ, ಕಂಪ್ಯೂಟರ್ ಮತ್ತು ಮೊಬೈಲ್ ಪರದೆಗಳಿಂದ ಮುಂದೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಯಾರಿಗೂ ಸ್ಪಷ್ಟತೆಯಿಲ್ಲ. ಆ ಪ್ರಯೋಗ ಇದೀಗ ನಮ್ಮ ತಲೆಮಾರುಗಳ ಮೇಲೆ ನಡೆಯುತ್ತಿದೆ. ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಯುವಕರು, ಮಕ್ಕಳು ದಿನದ ಬಹುಪಾಲು ಸಮಯ ಮೊಬೈಲ್‌ಗೆ ಅಂಟಿಕೊಂಡೇ ಇರುವ ಇಂದಿನ ಪರಿಸ್ಥಿತಿಯಲ್ಲಿ ಮನರಂಜನೆ ಇಡೀ ದಿನವನ್ನು ಆವರಿಸಿಕೊಂಡಿದೆ. ದಿನದ ಕೆಲಸ ಕಾರ್ಯಗಳ ಕೊನೆಗೆ ಆಯಾಸ ಮರೆಯಲು ಬೇಸರ ಕಳೆಯಲು ಸ್ವಲ್ಪ ಸಮಯ ಮಾತ್ರ ಇರಬೇಕಾಗಿದ್ದ ಮನರಂಜನೆ ಮಕ್ಕಳ ಪಾಲಿನ ಅಮೂಲ್ಯ ಸಮಯವನ್ನು ಕಬಳಿಸಿದೆ. ಭವಿಷ್ಯಕ್ಕಿಂತ ಇವತ್ತಿನ ಮೊಬೈಲ್‌ನಲ್ಲಿ ದೊರೆಯುವ ಮೋಜು ಅವರಿಗೆ ಮುಖ್ಯವಾಗಿದೆ. ಟಿವಿ ಚಾನಲ್‌ಗಳ ಸ್ಪರ್ಧೆಯಲ್ಲಿ ದಿನವಿಡೀ ದೊರೆಯುವ ಮನರಂಜನೆಯ ರಸದೂಟ ಒಂದೆಡೆಯಾದರೆ, ಶೌಚಾಲಯವನ್ನೂ ಬಿಡದೆ ಆವರಿಸಿಕೊಂಡಿರುವ ಮೊಬೈಲ್‌ಗಳ ಹುಚ್ಚಾಟ ಮತ್ತೊಂದೆಡೆಯಾಗಿದೆ. ಈ ರೀತಿ ಪರದೆಗಳ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಅರಿವು ಯಾರಿಗೂ ಬೇಕಾಗಿಲ್ಲ.

Tags:
error: Content is protected !!