Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಬದಲಾವಣೆ ಜಗದ ನಿಯಮ

sowmya koti article Change is the law of the world

ರಾತ್ರಿಯೆಲ್ಲ ಬಿಟ್ಟೂ ಬಿಡದೆ ಜಿಟಿ ಜಿಟಿ ಮಳೆ ಸುರಿದಿತ್ತು. ಸರಿಸುಮಾರು ನಾಲ್ಕು ಗಂಟೆಯವರೆಗೂ ಮಳೆ ಬರುತ್ತಿತ್ತು. ಮೇಲಾಗಿ ಭಾನುವಾರ ಬೇರೆ ಹಾಗಾಗಿ ಸ್ವಲ್ಪ ತಡವಾಗಿ ಎದ್ದು, ಮನಸ್ಸು ತಡೆಯದೆ ವಾಕಿಂಗ್‌ಗೆ ಹೊರಟೆ. ಪಕ್ಕದಲ್ಲಿ ಇರುವ ಪಾರ್ಕ್ ಹೊಸ ದೃಷ್ಟಿಕೋನದಿಂದ ನೋಡಿದಾಗ ಹೊಸದಾಗಿ ಕಂಡಿತು.

ಆಗತಾನೇ ಸ್ನಾನ ಮಾಡಿಕೊಂಡು ಬಂದ ತರುಣಿಯ ಹಾಗೆ ಕಾಣುತ್ತಿತ್ತು. ರಾತ್ರಿ ಸುರಿದ ಮಳೆಯ ಹನಿಯನ್ನ ಮರ ನನಗಾಗಿ ಹಿಡಿದು ಇಟ್ಟುಕೊಂಡಿದೆ ಏನು ಎಂದ ಹಾಗಿತ್ತು. ನನ್ನ ಮನಸ್ಸಿನಲ್ಲಿರುವ ತುಂಟ ಹುಡುಗಿ ಹೋಗಿ ಆ ಮರವನ್ನ ಅಲ್ಲಾಡಿಸಿದಾಗ ಅದರಿಂದ ಬಿದ್ದ ಮಳೆಹನಿಗೆ ನನ್ನ ಮುಖದಲ್ಲೂ ನಗು ಮೂಡಿತು. ಮಳೆ ಬಂದು ನಿಂತಾಗ ನಾವೇನಾದರೂ ಪಾರ್ಕಿಗೆ ಹೋದರೆ ನಾ ಮಾಡುವ ತುಂಟ ಕೆಲಸ ಇದು. ನನಗೆ ಬಹಳ ಖುಷಿಯನ್ನು ಕೊಡುತ್ತದೆ.

ಸೂರ್ಯ ಕಿರಣಗಳು ಸಹ ಆಗತಾನೆ ಎದ್ದು ಬಂದ ಹಾಗಿತ್ತು. ಆ ಹುಲ್ಲಿನ ಮೇಲೆ ಬಿದ್ದಂತಹ ಮಂಜು ಹನಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದು ರತ್ನಗಳಂತೆ ಕಂಗೊಳಿಸುತ್ತಿತ್ತು. ಬಳ್ಳಿಯ ಮೇಲೆ ಇದ್ದಂತಹ ಮಳೆಹನಿ ಮುತ್ತಿನ ಹಾರದ ಹಾಗೆ ಕಾಣುತ್ತಿತ್ತು. ಸ್ನೇಹಿತರೊಂದಿಗೆ ವಾಕಿಂಗ್ ಟಾಕಿಂಗ್ ಅನ್ನುವ ಹಾಗೆ ಮಾತುಕತೆ ಹಾಗೂ ವಾಕಿಂಗ್ ಎರಡನ್ನೂ ಮುಗಿಸಿ ಧ್ಯಾನಕ್ಕೆ ಎಂದು ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತೆ.

ಧ್ಯಾನ ಮಾಡಿ ಕಣ್ಣು ಬಿಟ್ಟಾಗ ನನ್ನ ಕಣ್ಣಿಗೆ ಬಿದ್ದಿದ್ದು ಆ ಪುಟ್ಟ ಚಿಟ್ಟೆಗಳು ಅದರಲ್ಲಿ ಇದ್ದಂತಹ ಬಣ್ಣಗಳು ಎಂತಹವರನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಅದನ್ನ ನೋಡಿದ ತಕ್ಷಣ ನಾವು ಚಿಕ್ಕವರಿದ್ದಾಗ ಚಿಟ್ಟೆ ಹಿಡಿಯುತ್ತಿದ್ದ ಪ್ರಸಂಗ ಕಣ್ಣ ಮುಂದೆ ಹಾದುಹೋಯಿತು. ಹಾಗೆ ಸ್ವಲ್ಪ ಸಮಯ ಆ ಚಿಟ್ಟೆಯನ್ನು ಗಮನಿಸಿದಾಗ ನನ್ನ ಮನಸ್ಸಿಗೆ ಮೂಡಿದಂತಹ ಮಾತು ಬದಲಾವಣೆ ಜಗದ ನಿಯಮ. ಹೌದು ಮೊಟ್ಟೆಯಾಗಿ ನಂತರ ಹುಳುವಾಗಿ ಸರಿದಾಡುವ ಆ ಹುಳ ತನಗೆ ತಾನೇ ಶಿಕ್ಷೆಯನ್ನು ಕೊಟ್ಟುಕೊಂಡು ತನಗೆ ತಾನೇ ಒಂದು ಕೋಶವನ್ನು ಮಾಡಿಕೊಂಡು ಅದರೊಳಗೆ ಸ್ವಲ್ಪ ದಿನಗಳು ಈ ಪ್ರಪಂಚದಿಂದಲೇ ದೂರವಿದ್ದು ತನ್ನನ್ನ ತಾನು ಬದಲಾಯಿಸಿಕೊಳ್ಳುವಲ್ಲಿ ಪ್ರಯತ್ನಪಡುತ್ತದೆ . ಆ ಪ್ರಯತ್ನ ಪಲಿಸಿದಾಗ ಹೊರಬರುವ ಫಲಿತಾಂಶವೇ ಸುಂದರವಾದ ಚಿಟ್ಟೆ.

ಒಂದು ಕ್ಷಣ ಆ ಚಿಟ್ಟೆ ನಮಗೆ ಜೀವನದ ಪಾಠವನ್ನು ಕಲಿಸುತ್ತಿದೆ ಎಂದು ನನಗನಿಸಿತು. ಹೌದು ಹೇಗೆ ಹುಳವು ತನಗೆ ತಾನೇ ಈ ಪ್ರಪಂಚದಿಂದ ಬಚ್ಚಿಟ್ಟುಕೊಂಡು ಚಿಟ್ಟೆಯಾಗಿ ಹೊರಬಂತೋ ಹಾಗೆ ನಮ್ಮ ಜೀವನದಲ್ಲಿ ನಾವು ಕೂಡ ಉತ್ತಮ ಫಲಿತಾಂಶವನ್ನು ಬಯಸುತ್ತೇವೆ ಎಂದಾಗ ನಮಗೆ ನಾವು ಈ ಪ್ರಪಂಚದಿಂದ ದೂರವಿದ್ದು. ನಮ್ಮ ಸಾಧನೆಯ ಕಡೆ ಗಮನಹರಿಸಬೇಕು. ಇಲ್ಲಿ ಜಯ ಎಂದರೆ ಯಾರನ್ನು ಸೋಲಿಸಬೇಕು ಅನ್ನುವ ಮನಸ್ಥಿತಿ ಅಲ್ಲ. ಹೇಗೆ ಚಿಟ್ಟೆ ತನಗೆ ತಾನು ಉತ್ತಮ ಮಾಡಿಕೊಂಡಿತ್ತೋ ಹಾಗೆ ನಾವು ನಮ್ಮ ಜ್ಞಾನದಿಂದ ನಮ್ಮ ಸಾಧನೆಯಿಂದ ನಮ್ಮನ್ನು ನಾವು ಉತ್ತಮರನ್ನಾಗಿ ಮಾಡಿಕೊಳ್ಳಬೇಕು.

ನಮ್ಮನ್ನ ನಾವು ದೈಹಿಕವಾಗಿ ಮಾನಸಿಕವಾಗಿ ಬೆಳೆಸಿಕೊಳ್ಳುವಲ್ಲಿ ನಮಗೆ ನಾವೇ ಶಿಕ್ಷಕರಾಗಬೇಕು. ನಮಗೆ ನಾವೇ ಶಿಕ್ಷೆಯನ್ನು ಕೊಟ್ಟು ನಮ್ಮನ್ನು ಇನ್ನಷ್ಟು ಉತ್ತಮರನ್ನಾಗಿ ಮಾಡುವ ಕೆಲಸ ನಮ್ಮದಾಗಬೇಕು. ಋತುಗಳು ಬದಲಾದ ಹಾಗೆ ಹೇಗೆ ಪ್ರಕೃತಿ ಹೊಸ ಹೊಸ ಹಣ್ಣನ್ನು ಆ ಋತುವಿಗೆ ತಕ್ಕ ಹಾಗೆ ನಮಗೆ ಕೊಡುತ್ತದೆಯೋ ಹಾಗೆ ವಯಸ್ಸು ಬೆಳೆಯುತ್ತಾ ಬೆಳೆಯುತ್ತಾ ನಮ್ಮನ್ನ ನಾವು ಇನ್ನಷ್ಟು ಪಕ್ವವಾಗಿ ಮಾಡಿಕೊಳ್ಳಬೇಕು. ಪ್ರತಿನಿತ್ಯ ನಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ದೈಹಿಕವಾಗಿ ಕೊನೆ ಪಕ್ಷ ೩೦ ನಿಮಿಷವಾದರೂ ವಾಕಿಂಗ್ ಮಾಡಬೇಕು.

ನಮ್ಮ ಬಗ್ಗೆ ನಾವು ಮೊದಲು ಗಮನಹರಿಸಬೇಕು. ಕೆಲವೇ ದಿನದ ಅತಿಥಿಯಾಗಿ ಬರುವ ಆ ಚಿಟ್ಟೆಯು ತನಗಾಗಿ ತಾನು ಅಷ್ಟೊಂದು ಕಷ್ಟಪಡುವಾಗ ಇನ್ನೂ ನಾವು ಕೆಲವು ವರ್ಷದ ಅತಿಥಿಯಾಗಿ ಬಂದಿರುವವರು ಕಷ್ಟ ಪಡಲೇಬೇಕಲ್ಲವೇ. ಈ ಸುಂದರ ಪಾಠವನ್ನ ನಮಗೆ ಯಾವುದೇ ಶುಲ್ಕವಿಲ್ಲದೆ ಹೇಳಿಕೊಟ್ಟ ಆ ಪಾತರಗಿತ್ತಿಗೆ ನನ್ನದೊಂದು ನಮನ.

– ಸೌಮ್ಯ ಕೋಠಿ

Tags:
error: Content is protected !!