ಡಾ.ಚೈತ್ರ ಸುಖೇಶ್
ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವೊಂದು ಆಯುರ್ವೇದ ಗಿಡಮೂಲಿಕೆಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಂಡು ಸೇವಿಸುವುದು ಅತ್ಯವಶ್ಯ. ಇದು ನಮ್ಮ ದೇಹದ ಯೋಗಕ್ಷೇಮ ವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ತುಳಸಿ: ತುಳಸಿಯನ್ನು ದಿನನಿತ್ಯದ ಆಹಾರದಲ್ಲಿ ಉಪಯೋಗಿಸುವುದು ಉತ್ತಮ. ಇದು ಆರೋಗ್ಯಕ್ಕೆ ಹೆಚ್ಚು ಫಲಕಾರಿಯಾಗಿದೆ. ಇದರಲ್ಲಿ ರೋಗ ನಿರೋಧಕ ಗುಣಗಳಿವೆ. ಇದು ಶೀತ, ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯಕವಾಗಿದ್ದು, ನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ ಕಷಾಯ ಮಾಡುವುದು, ಚಹಾದೊಡನೆ ಕುದಿಸಿ ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗಿದೆ.
ಅಶ್ವಗಂಧ: ಅಶ್ವಗಂಧದ ಬೇರಿನ ಕಷಾಯ, ಅಶ್ವಗಂಧದ ಚೂರ್ಣವನ್ನು ಹಾಲಿಗೆ ಹಾಕಿ ಬೆರೆಸಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಹಾಗೂ ಮಾನಸಿಕ ಒತ್ತಡವನ್ನು ತಗ್ಗಿಸಲು ಸಹಕಾರಿಯಾಗಿದ್ದು, ಇದು ಕೂಡ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅರಿಶಿನ: ಅರಿಶಿನ ಚಳಿಗಾಲದಲ್ಲಿ ನಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಒಂದು ಲೋಟ ಬೆಚ್ಚಗಿನ ಹಾಲಿನೊಂದಿಗೆ ಒಂದು ಚಿಟಿಕೆ ಅರಿಶಿನ ಕಲಸಿ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಸಹಕಾರಿ.
ಅಮೃತಬಳ್ಳಿ: ಅಮೃತ ಬಳ್ಳಿ ಗಿಡಮೂಲಿಕೆಯು ನಮ್ಮ ದೇಹದಲ್ಲಿ ಅಮೃತಕ್ಕೆ ಸಮಾನವಾಗಿ ಕೆಲಸ ಮಾಡುತ್ತದೆ. ಕೆಮ್ಮು, ನೆಗಡಿ, ಜ್ವರ, ವೈರಲ್ ಫೀವರ್ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಇದರ ಕಷಾಯ ಮಾಡಿಕೊಂಡು ದಿನನಿತ್ಯ ಕುಡಿಯುವುದು ಹೆಚ್ಚು ಪರಿಣಾಮಕಾರಿ. ದೇಹವನ್ನು ಪುನರುಜ್ಜೀವನಗೊಳಿಸುವಲ್ಲಿ ಅಮೃತ ಬಳ್ಳಿಯು ಹೆಚ್ಚು ಸಹಕಾರಿಯಾಗಿದೆ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವು ಅಧಿಕ ಪ್ರಮಾಣದಲ್ಲಿದೆ. ನೆಲ್ಲಿಕಾಯಿಯ ತಾಜಾ ರಸ, ಒಣಗಿಸಿ ಕುಟ್ಟಿ ಪುಡಿ ಮಾಡಿದ ಪುಡಿಯನ್ನು ಸೇವಿಸುವುದರಿಂದ ತಲೆ ಕೂದಲಿನ ಸಮಸ್ಯೆ ನಿವಾರಣೆಯಾಗುವ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಶತಾವರಿ: ಚಳಿಗಾಲದಲ್ಲಿ ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು ಚಳಿಗಾಲದಲ್ಲಿ ಉಂಟಾಗುವ ಮಾನಸಿಕ ಒತ್ತಡವನ್ನು ನಿಭಾಯಿಸಲು ಶತಾವರಿ ಹೆಚ್ಚು ಸಹಾಯಕವಾಗಿದೆ. ಇದರ ಪುಡಿಯನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿದೆ.
ತ್ರಿಫಲಾ: ತ್ರಿಫಲಾ ಎಂಬುದು ಆಮ್ಲ, ಹರೀತಕಿ ಮತ್ತು ಬಿಭೀತಕಿ ಎಂಬ ಮೂರು ಗಿಡ ಮೂಲಿಕೆಗಳನ್ನು ಒಳಗೊಂಡಿದೆ. ಇದರ ಸೇವನೆ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದು ಮಲಬದ್ಧತೆಯನ್ನು ತಡೆಗಟ್ಟಲು ಹೆಚ್ಚು ಸಹಕಾರಿ. ಈ ತ್ರಿಫಲಾವನ್ನು ಮಲಗುವ ಮುನ್ನ ಬಿಸಿ ನೀರಿನಲ್ಲಿ ಹಾಕಿಸೇವಿಸುವುದು ಉತ್ತಮ.
ಆಯುರ್ವೇದ ಮೂಲಿಕೆಗಳನ್ನು ನಮ್ಮ ನಿತ್ಯ ಆಹಾರದಲ್ಲಿ ಸೇರಿಸಿ ಸೇವಿಸುವುದರಿಂದ ನಾವು ಆರೋಗ್ಯವಾಗಿರಲು ಹೆಚ್ಚು ಸಹಕಾರಿಯಾಗಲಿವೆ. ಇದರೊಂದಿಗೆ ದಿನನಿತ್ಯ ನಿಯಮಿತವಾದ ವ್ಯಾಯಾಮ, ಯೋಗದ ಅಭ್ಯಾಸ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ಮಾನಸಿಕ ಒತ್ತಡವನ್ನು ಪರಿಹರಿಸುವುದರಲ್ಲಿ ಹೆಚ್ಚು ಸಹಕಾರಿ. ಇದಿಷ್ಟೇ ಅಲ್ಲದೆ ಒಬ್ಬ ಮನುಷ್ಯ ಉತ್ತಮ ನಿದ್ರೆ ಮಾಡುವುದು ಅವನ ಆರೋಗ್ಯಕ್ಕೆ ಹೆಚ್ಚು ಸಹಕಾರಿ. ಸುಖ ನಿದ್ರೆಯ ಸಮಯದಲ್ಲಿ ನಮ್ಮ ದೇಹವು ದುರಸ್ತಿ ಪ್ರಕ್ರಿಯೆಗೆ ಒಳಗಾಗುತ್ತದೆ. ಬೆಳವಣಿಗೆಯ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಉತ್ತಮ ನಿದ್ರೆ ಸಹಕಾರಿಯಾಗಿದೆ. ಆದ್ದರಿಂದ ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ಮನುಷ್ಯನಿಗೆ ಅತ್ಯವಶ್ಯ.