Mysore
31
scattered clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಕೊಡಗು ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಹತ್ತಾರು ಸಮಸ್ಯೆ

ನವೀನ್ ಡಿಸೋಜ

ನಿಗದಿತ ದಿನದಲ್ಲಿ ಪಡಿತರ ದೊರೆಯದೆ ಫಲಾನುಭವಿಗಳ ಪರದಾಟ; ಬೇಕಿದೆ ಶಾಶ್ವತ ಪರಿಹಾರ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಜೊತೆಗೆ ಹತ್ತಾರು ಸಮಸ್ಯೆಗಳು ಫಲಾನುಭವಿಗಳಿಗೆ ಸಂಕಷ್ಟವನ್ನುಂಟು ಮಾಡಿದ್ದು, ಸಮಸ್ಯೆಗಳನ್ನು ಬಗೆಹರಿ ಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಲವು ತಿಂಗಳುಗಳಿಂದ ಸರ್ವರ್ ಸಮಸ್ಯೆಯ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದರಿಂದ ಫಲಾನುಭವಿಗಳು ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದರೊಂದಿಗೆ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇಂಟರ್‌ನೆಟ್ ಸೇವೆ ಕಡಿಮೆ ಇದೆ. ಕೆಲವೆಡೆ ಮೊಬೈಲ್‌ನಿಂದಲೇ ಇಂಟರ್‌ನೆಟ್ ಬಳಸಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರಿಂದಲೂ ಪಡಿತರ ವಿತರಣೆ ತಡವಾಗುತ್ತಿದೆ ಎಂದು ಹೇಳಲಾಗಿದೆ.

ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹಳೆಯದಾದ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತಿದೆ. ಅದರಲ್ಲಿಯೂ ಹಿಸ್ಟರಿ, ಟೆಂಪ್ರರಿ ಫೈಲ್‌ಗಳು ತುಂಬಿ ಮತ್ತಷ್ಟು ನಿಧಾನವಾಗಿ ಕೆಲಸ ಆಗುತ್ತಿವೆ. ಇದರಿಂದಾಗಿಯೂ ಪಡಿತರ ವಿತರಣೆ ವಿಳಂಬವಾಗುತ್ತಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿರುವ ಕಂಪ್ಯೂಟರ್‌ಗಳ ದೋಷ ಸರಿಪಡಿಸುವ ಕೆಲಸವನ್ನು ಆಹಾರ ಇಲಾಖೆ ಯಲ್ಲಿರುವ ಐಟಿ ತಜ್ಞರು ಮಾಡುತ್ತಿದ್ದಾರೆ.

ಇದರೊಂದಿಗೆ ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಕಾಲದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುತ್ತಿಲ್ಲವೆನ್ನುವ ಅರೋಪ ಕೂಡ ಕೇಳಿಬಂದಿದೆ. ಗ್ರಾಮೀಣ ಭಾಗಗಳಲ್ಲಿ ನ್ಯಾಯಬೆಲೆ ಅಂಗಡಿಗೆ ಹತ್ತಾರು ಕಿ.ಮೀ. ದೂರ ಬರಬೇಕಿದೆ. ಸಂತೆ ದಿನ ಸಮೀಪದ ಪಟ್ಟಣಕ್ಕೆ ತೆರಳುವ ಜನರು, ಅದೇ ದಿನ ಪಡಿತರ ದೊರೆತರೆ ಪಡೆದುಕೊಳ್ಳಲು  ಸುಲಭವಾಗುತ್ತದೆ. ಆದರೆ, ಜಿಲ್ಲೆಯ ಕೆಲವು ಭಾಗಗಳಲ್ಲಿ ಸಕಾಲದಲ್ಲಿ ನ್ಯಾಯಬೆಲೆ ಅಂಗಡಿ ತೆರೆದಿರುವುದಿಲ್ಲ ಎನ್ನಲಾಗಿದೆ. ಇದರಿಂದ ದುಬಾರಿ ಬಾಡಿಗೆ ಹಣ ನೀಡಿ ಬಾಡಿಗೆ ವಾಹನದಲ್ಲಿ ಪಡಿತರ ಕೊಂಡೊಯ್ಯಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಎಲ್ಲ ಸಮಸ್ಯೆಗಳ ನಡುವೆಯೂ ಪ್ರತಿ ತಿಂಗಳು ಶೇ. ೮೨ರಿಂದ ೮೫ರಷ್ಟು ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ತಿಂಗಳು ಇಲ್ಲಿಯವರೆಗೆ ಶೇ.೬೦ರಷ್ಟು ಪಡಿತರ ವಿತರಣೆ ಮಾಡಲಾಗಿದ್ದು, ಇನ್ನು ೩ ದಿನಗಳಲ್ಲಿ ಶೇ.೮೦ರಷ್ಟು ಪೂರ್ಣಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಭೀಮರಾಯ ಮಾಹಿತಿ ನೀಡಿದ್ದಾರೆ.

” ಇತ್ತೀಚೆಗಷ್ಟೆ ೧೦-೧೫ ನ್ಯಾಯಬೆಲೆ ಅಂಗಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸರ್ವರ್ ಸಮಸ್ಯೆ ಇಲ್ಲ. ಕೆಲವೆಡೆ ಹಳೇ ಕಂಪ್ಯೂಟರ್ ಬಳಸುತ್ತಿದ್ದು, ಹಿಸ್ಟರಿ ಡಿಲಿಟ್ ಮಾಡದೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ನಿಧಾನವಾಗುತ್ತಿದೆ. ಐಟಿ ತಂಡ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದೆ. ಮತ್ತೆ ಕೆಲವರು ಮೊಬೈಲ್‌ನಿಂದ ಇಂಟರ್‌ನೆಟ್ ಬಳಸುವುದರಿಂದಲೂ ಸಮಸ್ಯೆಯಾಗುತ್ತಿದೆ. ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಿದರೆ ಬಹುತೇಕ ಸಮಸ್ಯೆ ಬಗೆಹರಿಯಲಿದೆ.”

-ಭೀಮರಾಯ, ಉಪನಿರ್ದೇಶಕರು, ಆಹಾರ ಇಲಾಖೆ 

” ಅವರೆಗುಂದ ಹಾಡಿಯಿಂದ ಪಡಿತರ ಅಂಗಡಿಯು ಸುಮಾರು ೮ ಕಿ.ಮೀ. ದೂರ ಇದೆ. ತಿಂಗಳ ೨೦ನೇ ತಾರೀಖಿನಿಂದ ನಮಗೆ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಭಾನುವಾರದಂದು ಪಡಿತರ ಪಡೆಯಲು ತೆರಳುತ್ತೇವೆ. ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಉಳಿದ ದಿನಗಳಲ್ಲಿ ೮೦೦ ರೂ. ಬಾಡಿಗೆ ನೀಡಿ ಪಡಿತರ ಪಡೆಯಬೇಕಿದೆ. ಅರಣ್ಯ ಪ್ರದೇಶವಾಗಿರುವುದರಿಂದ ವನ್ಯಮ ಜೀವಿಗಳ ದಾಳಿಗೆ ಹೆದರಿಕೊಂಡು ಪಡಿತರ ಹೊಂದಿಸಿಕೊಳ್ಳಬೇಕಿದೆ.”

-ಸಂಪತ್, ಹಾಡಿ ನಿವಾಸಿ, ಅವರೆಗುಂದ 

” ಕರಡಿಗೋಡು ೧, ೪ನೇ ವಾರ್ಡ್ ಹಾಗೂ ಸಿದ್ದಾಪುರ ನಗರದ ಸುಮಾರು ೯೦೦ ಕುಟುಂಬಗಳಿಗೆ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸಲಾಗುತ್ತಿದ್ದು, ಕಳೆದ ನಾಲ್ಕೈದು ತಿಂಗಳಿಂದ ಸರ್ವರ್ ಸಮಸ್ಯೆ ಕಾಡುತ್ತಿರು ವುದರಿಂದ ಸಕಾಲದಲ್ಲಿ ಸ್ಪಂದಿಸಲು ಕಷ್ಟವಾಗುತ್ತಿದೆ. ಸಾರ್ವಜನಿಕರು ಕೆಲಸಕ್ಕೆ ರಜೆ ಹಾಕಿ ಪಡಿತರಕ್ಕೆ ಬಂದು ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಸಂಸ್ಥೆಯು ಸದಾ ತೆರೆದಿರುವುದರಿಂದ ಹಾಗೂ ಸಿಬ್ಬಂದಿಗಳು ಹೆಚ್ಚುವರಿ ಸಮಯ ಕಾರ್ಯನಿರ್ವಹಿಸುತ್ತಿರುವುದರಿಂದ ಸರ್ವರಿಗೂ ಪಡಿತರ ವಿತರಿಸಲಾಗುತ್ತಿದೆ.”

-ಎಂ.ಎಸ್. ವೆಂಕಟೇಶ್, ಅಧ್ಯಕ್ಷರು, ಗುಹ್ಯ ಕೃಷಿ ಪತ್ತಿನ ಸಹಕಾರ ಸಂಘ

” ಕೊಡಗು ಜಿಲ್ಲೆಯಲ್ಲಿ ಪಡಿತರ ವಿತರಣಾ ಕೇಂದ್ರಗಳು ಸಾಮಾನ್ಯ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದರೂ ಇತ್ತೀಚೆಗೆ ಹಲವಾರು ಸಮಸ್ಯೆಗಳು ತಲೆದೋರಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಡಿಜಿಟಲ್ ವ್ಯವಸ್ಥೆ ಜಾರಿಗೆ ಬಂದ ನಂತರ, ಬಯೋಮೆಟ್ರಿಕ್ ಯಂತ್ರಗಳ ದೋಷವೂ ಹೊಸ ತಲೆನೋ ವಾಗಿ ಪರಿಣಮಿಸಿದೆ. ಬೆರಳಚ್ಚು ಸರಿಯಾಗಿ ಸ್ಕ್ಯಾನ್ ಆಗದಿರುವುದು, ಇಂಟರ್‌ನೆಟ್ ಸಮಸ್ಯೆ ಇತ್ಯಾದಿಗಳಿಂದ ಹಲವರು ತಮ್ಮ ಹಕ್ಕಿನ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಹಿರಿಯ ನಾಗರಿಕರು ಹಾಗೂ ಶ್ರಮಜೀವಿಗಳು ಇದರಿಂದ ಹೆಚ್ಚು ಬಳಲುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.”

-ಪಿ.ವಿ.ಅಂತೋಣಿ, ಸಾಮಾಜಿಕ ಹೋರಾಟಗಾರ, ಮಾಲ್ದಾರೆ

 

 

Tags:
error: Content is protected !!