Mysore
25
overcast clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಸರ್ಕಾರಿ ಶಾಲೆ ಉಳಿಸಲು1295 ಕಿ.ಮೀ. ಪಾದಯಾತ್ರೆ

ಹೇಮಂತ್‌ಕುಮಾರ್

ರೈತ ಸಂಘ-ಕೆಆರ್‌ಎಸ್ ಪಕ್ಷ, ಎಸ್‌ಡಿಎಂಸಿ ಸಹಯೋಗದಲ್ಲಿ ಜಾಗೃತಿ

ಮಂಡ್ಯ: ಸರ್ಕಾರಿ ಶಾಲೆ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಮಂಡ್ಯ ಜಿಲ್ಲಾ ರೈತ ಸಂಘದ ಸಾರಥ್ಯದಲ್ಲಿ ಹಾಗೂ ರಾಜ್ಯ ಶಾಲಾಭಿವೃದ್ಧಿ ಸಮಿತಿ ಸಂಘಗಳ ಸಹಯೋಗದಲ್ಲಿ ಏ.೧೧ರಂದು ನಗರದಿಂದ ಆರಂಭವಾಗಿರುವ ಐತಿಹಾಸಿಕ ೧,೨೯೫ ಕಿ.ಮೀ. ಪಾದಯಾತ್ರೆಯು ೧೭ ದಿನಗಳನ್ನು ಪೂರೈಸಿದ್ದು, ಸುಮಾರು ೪೫೦ ಕಿ.ಮೀ.ಗಳನ್ನು ಕ್ರಮಿಸಿದೆ.

ಈಗಾಗಲೇ ೨೫೦ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಪರಾಮರ್ಶಿಸಿ, ಗ್ರಾಮಸ್ಥರ ಸಲಹೆ, ಅವರ ಬೇಡಿಕೆಗಳು ಹಾಗೂ ಶಿಕ್ಷಣ ಇಲಾಖೆ ಹೇಗೆ ಸ್ಪಂದಿಸುತ್ತಿದೆ ಎಂಬುದರ ಮಾಹಿತಿ ಕಲೆಹಾಕಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ.

ಏಕರೂಪ ಸಮಾನ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ೫ನೇ ತರಗತಿಯವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್‌ಇ ಶಿಕ್ಷಣ, ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೬ನೇ ತರಗತಿಯಿಂದ ಪಿಯುಸಿವರೆಗೆ ನವೋದಯ ಮಾದರಿ ಸಿಬಿಎಸ್‌ಇ ವಸತಿ ಶಿಕ್ಷಣ ನೀಡಬೇಕು ಎನ್ನುವ ವಿಚಾರಗಳನ್ನು ಸ್ಥಳೀಯರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಗುಣಮಟ್ಟದ ಶಿಕ್ಷಣದ ಹುಡುಕಾಟದಲ್ಲಿ ಜನಸಾಮಾನ್ಯರಿಗೆ, ರೈತಾಪಿ ವರ್ಗದವರಿಗೆ ಅನಗತ್ಯವಾಗಿ ಆಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಇರುವ ಏಕೈಕ ಮಾರ್ಗ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿರುವ ಅಗತ್ಯಗಳನ್ನು ತಿಳಿಹೇಳಲಾಗುತ್ತಿದೆ.

ಉತ್ತಮ ಶಾಲೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಮೂಲಕ ಹಾಗೂ ಕುಂದುಕೊರತೆ ಇರುವ ಶಾಲೆಗಳ ಚಿತ್ರಣವನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರುವುದರಿಂದ ಅಗತ್ಯ ಸೌಕರ್ಯಗಳನ್ನು ಒದಗಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಈ ಒಂದು ಐತಿಹಾಸಿಕ ಪಾದಯಾತ್ರೆ ಮಾಡಲಾಗುತ್ತಿದೆ. ಇನ್ನೂ ೩೦ಕ್ಕೂ ಹೆಚ್ಚು ದಿನಗಳ ಪಾದಯಾತ್ರೆ ಬಾಕಿ ಇದೆ. ಹಾಗಾಗಿ ಈ ತಂಡ ನಿಮ್ಮ ಊರುಗಳನ್ನು ಹಾದು ಹೋಗುವ ಸಂದರ್ಭದಲ್ಲಿ ವಾಸ್ತವ್ಯ, ದೇಣಿಗೆ, ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ನಮ್ಮ ಜವಾಬ್ದಾರಿ ನಿಭಾಯಿಸಲು ಸಹಕರಿಸಬೇಕು ಎಂದು ಹಿರಿಯ ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ಮನವಿ ಮಾಡುತ್ತ ಸಾಗಿದರೆ, ಪಾದಯಾತ್ರೆಯ ನೇತೃತ್ವ ವಹಿಸಿರುವ ಧನುಷ್‌ಗೌಡ, ಸಂತೋಷ್ ಮಂಡ್ಯ ಗೌಡ ಮತ್ತಿತರರು ಸರ್ಕಾರಿ ಶಾಲೆಗಳ ಅಗತ್ಯತೆ ಕುರಿತು ಗ್ರಾಮಸ್ಥರುಗಳ ಅಭಿಪ್ರಾಯ ದಾಖಲಿಸುತ್ತ ಸಾಗಿದ್ದಾರೆ.

ಪಾದಯಾತ್ರೆ ತಂಡದಲ್ಲಿ ಸಂತೋಷ್ ಮಂಡ್ಯಗೌಡ, ಇಂಡುವಾಳು ಚಂದ್ರಶೇಖರ್, ಧನುಷ್‌ಗೌಡ, ತೇಜಸ್, ಹುಬ್ಬಳ್ಳಿಯ ರವಿಚಂದ್ರ, ಪ್ರಚಾರ ವಾಹನದ ಸಾರಥಿ ಕೃಷ್ಣೇಗೌಡ, ಕೆ.ಆರ್. ಎಸ್. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್, ಮಲ್ಲೇಗೌಡ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ, ತಾಲ್ಲೂಕು ಕಾರ್ಯದರ್ಶಿ ಮಲ್ಲೇಶ ಇದ್ದಾರೆ.

” ಪಾದಯಾತ್ರೆಯ ನೇತೃತ್ವ ವಹಿಸಿದ್ದ ಸಂತೋಷ್ ಮಂಡ್ಯಗೌಡ ಹಾಗೂ ಧನುಷ್ ಗೌಡ ಅವರು, ಗ್ರಾಮಸ್ಥರಿಂದ ಮುಂದಿನ ಯಾವುದೇ ಚುನಾವಣೆಗಳಲ್ಲಿ ‘ಖಾಸಗಿ ಶಾಲೆ ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿರುವ ಅಭ್ಯರ್ಥಿಗಳಿಗೆ ನನ್ನ ಮತ ಹಾಕುವುದಿಲ್ಲ’ ಎಂಬ ಪ್ರತಿಜ್ಞೆಯನ್ನು ಮಾಡಿಸಿದರು.”

ರಸ್ತೆಯಲ್ಲೇ ಮಲಗಿದ್ದ ಪಾದಯಾತ್ರಿಗಳು: 

ಮಳವಳ್ಳಿ ತಾಲ್ಲೂಕಿನ ನಿಢಗಟ್ಟ ಶಾಲೆಯಲ್ಲಿ ವಾಸ್ತವ್ಯ ಬಯಸಿ ಶಾಲೆಯ ಗೇಟ್ ತೆರೆಯಲು ಮನವಿ ಮಾಡಿದ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕಿನ ಬಿಇಒ ಉಮಾ ಅವರು ಸಕಾರಾತ್ಮಕವಾಗಿ ಸ್ಪಂದಿಸದ ಪರಿಣಾಮ ಪಾದಯಾತ್ರಿಗಳು ರಸ್ತೆಯಲ್ಲೇ ಮಲಗಬೇಕಾಯಿತು. ಇದನ್ನು ಖಂಡಿಸಿ, ಮರುದಿನದಂದೇ ಅರುಣ್‌ಕುಮಾರ್ ಅವರು ಮಂಡ್ಯ ಜಿಲ್ಲಾ ಡಿಡಿಪಿಐ ಲೋಕೇಶ್ ಅವರಿಗೆ ಕರೆ ಮಾಡಿ ಈ ಪಾದಯಾತ್ರೆಯ ಉದ್ದೇಶಗಳ ಬಗ್ಗೆ ತಿಳಿಸಿ, ಇಂತಹ ಘಟನೆಗಳು ಮರುಕಳುಹಿಸದಿರಲು ಜಿಲ್ಲೆಯ ಎಲ್ಲಾ ತಾಲ್ಲೂಕು ಬಿಇಒಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಕೋರಿದರು.

” ಕಳೆದ ಐದು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಕೆಲವೊಂದು ಶಾಲೆಗಳು ಕೆಲವು ಕಾರಣಕ್ಕೆ ಮುಚ್ಚಿವೆ. ಉಳಿದವು ಅಕ್ಕ ಪಕ್ಕದ ಶಾಲೆಗಳೊಂ ದಿಗೆ ವಿಲೀನಗೊಂಡಿವೆ. ಮಂಡ್ಯ ಜಿಲ್ಲೆ ಯಾದ್ಯಂತ ಹತ್ತು ವರ್ಷಗಳಲ್ಲಿ ೩೫೪ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿರುವುದು ಅತ್ಯಂತ ನೋವಿನ ಸಂಗತಿ.”

 -ಇಂಡುವಾಳು ಚಂದ್ರಶೇಖರ್, ಜಿಲ್ಲಾಧ್ಯಕ್ಷರು, ರೈತ ಸಂಘ, ಮಂಡ್ಯ

 

 

Tags:
error: Content is protected !!