ಒಂದು ಅಂಕಿ ಅಂಶದ ಪ್ರಕಾರ ಸರ್ಕಾರಿ ಉದ್ಯೋಗಿಗಳಲ್ಲಿ ಶೇಕಡಾ ೪೦ರಷ್ಟು ಕೆಲಸಗಾರರು ಗುತ್ತಿಗೆ ಆಧಾರದಲ್ಲಿ ಸೇವೆ ನೀಡುತ್ತಿದ್ದಾರೆ. ಅದರಲ್ಲೂ ಆರ್ಥಿಕ ಸಬಲತೆಗಾಗಿ, ಕುಟುಂಬ ನಿರ್ವಹಣೆ ಗಾಗಿ, ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ ಸಂದರ್ಭಗಳನ್ನು ಎದುರಿಸುತ್ತಿರುವ ಮಹಿಳೆಯರು ಏಜೆನ್ಸಿಗಳ ಮೂಲಕ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿ ಕೊಂಡಿರುತ್ತಾರೆ. ಖಾಯಂ ಉದ್ಯೋಗಿಗಳಿಗೆ ಸಿಗುವ ಎಲ್ಲಾ ಔದ್ಯೋಗಿಕ ಸುರಕ್ಷತೆಯಿಂದ ಹೊರತಾಗಿ, ಅಭದ್ರತೆ ಯಲ್ಲಿಯೇ ಕೆಲಸ ಮಾಡುವ ಅನಿವಾರ್ಯತೆಯೂ ಇದೆ. ಹೂವಿನಹಡಗಲಿಯಲ್ಲಿ ಬಾಳಿಗಾರ್ ಚಾಂದ್ ಬೀಬಿ ಎನ್ನುವಾಕೆ ರೈತ ಸಂಪರ್ಕ ಕೇಂದ್ರದಲ್ಲಿ ಲೆಕ್ಕಿಗಳಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿರುತ್ತಾರೆ. ೧೦ ವರ್ಷಗಳ ನಂತರ ಅವರ ಎರಡನೆಯ ಬಸಿರಿನಲ್ಲಿ ಆರೋಗ್ಯದ ಕಾರಣದಿಂದ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿರುತ್ತಾರೆ.
ಆಕೆಯು ತಮಗೆ ಹೆರಿಗೆ ರಜೆಯನ್ನುನೀಡಬೇಕೆಂದು ಕಚೇರಿಗೆ ಮನವಿ ನೀಡುತ್ತಾರೆ. ಮಾನವೀಯತೆ ಆಧಾರದ ಮೇಲೆ ಆಕೆಗೆ ೩ ತಿಂಗಳುಗಳ ರಜೆಯನ್ನು ನೀಡಲಾಗಿರುತ್ತದೆ. ಆಕೆಯು ಕೆಲಸಕ್ಕೆ ಹಿಂದಿರುಗಿದಾಗ ಆಕೆಯ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡ ಲಾಗಿರುತ್ತದೆ. ಮತ್ತು ಆಕೆಗೆ ರಜೆಯ ನಂತರದ ಸಂಬಳವನ್ನು ಕೂಡ ಕೊಟ್ಟಿರುವುದಿಲ್ಲ. ಮೇಲಧಿಕಾರಿಗಳು ತಮ್ಮ ಮನವಿಯನ್ನು ಪುರಸ್ಕರಿಸದಿದ್ದಾಗ ಹೆರಿಗೆ ಸೌಲಭ್ಯ ಕಾನೂನು ೧೯೬೧ರ ಅಡಿಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ : ೧೦೨೦೬೦/೨೦೨೪ ದಾವೆ ಹೂಡುತ್ತಾರೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ದತಿ ) ೧೯೭೦ ಹಾಗೂ ಇನ್ನೂ ಕೆಲವು ಕಾಯಿದೆಗಳನ್ನುಉಲ್ಲೇಖಿಸಿ, ಸರ್ವೋಚ್ಚ ನ್ಯಾಯಾಲಯದ ಕೆಲವು ತೀರ್ಪುಗಳನ್ನೂಗಮನಿಸಿ
ಸಂವಿಧಾನದ ಆರ್ಟಿಕಲ್೨೨೬ ರಲ್ಲಿ ಖಚಿತ ಪಡಿಸಿರುವ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನಿಗದಿಗೊಂಡಿರುವ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ಮತ್ತು ಸೌಲಭ್ಯಗಳು ಖಾಯಂ ಉದ್ಯೋಗಿಗಳಿಗೆ ಇರುವಂತೆಯೇ ಲಭ್ಯವಿರುತ್ತದೆ ಮತ್ತು ಸಂಬಳವೂ ಅನ್ವಯವಾಗುತ್ತದೆ ಎನ್ನುವ ತೀರ್ಪು ಕೊಟ್ಟಿದೆ.
ಬಂಕಾಪುರ ಪಟ್ಟಣ ಪಂಚಾಯ್ತಿಯ ಮಿತಿಯಲ್ಲಿ ಸರ್ಕಾರದ ಬೋರ್ ವೆಲ್ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನ್ನಾಗಿ ಕೆಲಸಮಾಡುತ್ತಿದ್ದ ನಿಂಗಪ್ಪ ಬಡಿಗೇರ್‌ಅವರು ಕೆಲಸ ಮಾಡುತ್ತಿರುವಾಗಲೇ ತೀರಿಕೊಳ್ಳುತ್ತಾರೆ. ಅವರ ಮಗನಿಗೆ ಅನುಕಂಪದ ಆಧಾರದ ಮೇಲೆ ಆ ಕೆಲಸ ವನ್ನು ನೀಡಬೇಕು ಎನ್ನುವ ಮನವಿಯನ್ನು ಸರ್ಕಾರಕ್ಕೆ ನೀಡುತ್ತಾರೆ. ಸಕಾಲದಲ್ಲಿ ಸರ್ಕಾರ ಉತ್ತರ ನೀಡದೆ ಇದ್ದಾಗ ಆತನ ಹೆಂಡತಿ ಕಾಶಾವ್ವ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಂಖ್ಯೆ:೧೦೪೧೬/೨೦೨೧ ರಿಟ್ ದಾವೆಯನ್ನು ಹಾಕುತ್ತಾರೆ.
ನಿಯಮಿತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯು ಕೆಲಸ ಮಾಡುವಾಗ ಮೃತಪಟ್ಟರೆ, ಇತರೆ ಖಾಯಂ ಸರ್ಕಾರಿ ನೌಕರರ ವಿಷಯದಲ್ಲಿ ಅನುಸರಿಸುವ ನಿಯಮಗಳನ್ನೇ ಅನುಸರಿಸಿ ಆ ಕೆಲಸಗಾರನ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು ಎಂದು ಉಚ್ಚನ್ಯಾಯಾಲಯವು ಆದೇಶಿಸಿದೆ. ಅನುಕಂಪದ ಆಧಾರದ ಮೇಲಿನ ನೌಕರಿಗೆ ಹೆಂಡತಿ, ಮಗಳು ಮತ್ತು ಮೊಮ್ಮಗಳು ಕೂಡ ಅರ್ಹರಾಗಿರುತ್ತಾರೆ.
– ಅಂಜಲಿ ರಾಮಣ್ಣ
(ಲೇಖಕರು: ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ವಕೀಲರು.)