Mysore
25
overcast clouds
Light
Dark

ಬಿದಿರು ಪಿಟೀಲಿನ ಸಯ್ಯದ್ ಮೌಲಾ

• ಹನಿ ಉತ್ತಪ್ಪ
ಕಲೆಯನ್ನು ನಂಬಿದರೆ ಕೈ ಹಿಡಿಯುತ್ತದೆ ಎಂಬುದಕ್ಕೆ ಕಲೆಯನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಮೈಸೂರಿನ ಸಯ್ಯದ್ ಮೌಲಾ ಅವರ ಬದುಕೇ ಸಾಕ್ಷಿ. ಬಿದಿರು ಪಿಟೀಲು ನುಡಿಸುವ, ಜನರನ್ನು ಸೆಳೆಯಬಲ್ಲ ಮ್ಯಾಜಿಕ್ ವಿದ್ಯೆಗಳೆಲ್ಲದರ ಮಧ್ಯೆ, ಸರಳತೆ ಮತ್ತು ನಗು ಇವರ ಜೊತೆಗಾರರು. ಯಾವುದೇ ಹಾಡನ್ನು ಹೊಸ ಚೈತನ್ಯದೊಂದಿಗೆ ಇವರು ನುಡಿಸುತ್ತಿರುವುದನ್ನು ಆಲಿಸುವಾಗ ಜೀವ ತುಂಬುತ್ತಿದ್ದಾರೇನೊ ಎಂದೆನಿಸುವುದು. ಹಾಸನ ಮೂಲದವರಾದ ಸಯ್ಯದ್ ಅವರಿಗೆ ಅಕ್ಷರ ತಿಳಿದಿಲ್ಲ. ಆದರೆ, ಯಾವುದೇ ಹಾಡಿರಲಿ ಸಾಹಿತ್ಯವನ್ನು ಅಷ್ಟು ಸರಾಗವಾಗಿ ನಾದದಿಂದಲೇ ಕೇಳುಗರಿಗೆ ತಿಳಿಸುತ್ತಾರೆ. ಕಲೆಯೆಂದರೆ ಅಕ್ಷರ ಕಲಿಸಿದ ತಾಯಿ ಎಂಬ ಭಾವ ಅವರಿಗೆ ಸಂಗೀತದ ಶಕ್ತಿ ಎಂಥದ್ದು ನೋಡಿ!

ಪಿಟೀಲು ನುಡಿಸುವುದು ಇವರಾಗೇ ಕಲಿತದ್ದಲ್ಲ. ಸಯ್ಯದ್ ಅವರ ಕುಟುಂಬ ಕಲಾ ಬದುಕನ್ನು ಪರಂಪರೆಯಾಗಿ ಮುಂದುವರಿಸಿತ್ತು. ಇವರ ತಂದೆ ಸಯ್ಯದ್ ಹುಸೇನ್, ತಾತ ಕೂಡ ಪಿಟೀಲು ನುಡಿಸುವುದರ ಜೊತೆಗೆ ಮ್ಯಾಜಿಕ್ ವಿದ್ಯೆಗಳನ್ನು ಬಲ್ಲವರಾಗಿದ್ದರು. ಇಂದಿರಾ ಗಾಂಧಿ ಅವರ ಕಾಲಕ್ಕೆ ದೆಹಲಿಯಲ್ಲಿ ಇವರ ತಂದೆ ಬಿದಿರು ಪಿಟೀಲು ನುಡಿಸಿದರು. ತಾತ ಮತ್ತು ತಂದೆಯ ಈ ನಿತ್ಯ ಬದುಕನ್ನು ಕಂಡ ಮೇಲೆ, ತಾನು ಕಲಿಯಲೇಬೇಕು ಎಂದು ಪಟ್ಟುಹಿಡಿದು ಕೂತಿದ್ದೂ ಆಯಿತು. ತಂದೆ- ತಾಯಿ ಇಬ್ಬರೂ ಓದು, ಶಾಲೆಯ ಮಹತ್ವದ ಬಗ್ಗೆ ಎಷ್ಟು ಹೇಳಿದರೂ, ಇವರ ಮನಸ್ಸು ಮಾತ್ರ ಪಿಟೀಲಿನ ಬಳಿಯೇ ಸುಳಿದಾಡುತ್ತಿತ್ತು. 12ನೇ ವರ್ಷಕ್ಕೆ ಪಿಟೀಲು ನುಡಿಸುವುದಕ್ಕೆ ಸಮರ್ಥರಾದರು. ಅಂದಿನ ಹಠ, ಓದನ್ನು ದಕ್ಕಿಸಿಕೊಳ್ಳುವುದಕ್ಕೆ ಅಡ್ಡಿಯಾಗಿದ್ದೇನೋ ಹೌದು. ಆದರೆ, ಇಂದು ಪಿಟೀಲೇ ಬದುಕಾಗಿದೆ; ದುಡಿಮೆ, ಜನಪ್ರೀತಿಯ ದಾರಿಯೂ ಆಗಿದೆ.

22ನೇ ವಯಸ್ಸಿಗೆ ಅಮೀನಾ ಅವರನ್ನು ಮದುವೆಯಾದರು. ಇವರ ತಂದೆಯವರ ಆಪ್ತ ಸ್ನೇಹಿತರಾದ ಮೈಸೂರಿನ ಪಂಚತಾರಾ ಹೊಟೇಲಿನ ಮಾಲೀಕರು, ಹಾಸನದ ಹೊಟೇಲೊಂದರಲ್ಲಿ ಇವರು ಪಿಟೀಲು ನುಡಿಸುತ್ತಿರುವುದನ್ನು ಕಂಡಮೇಲೆ, ಮಗನನ್ನು ತಮ್ಮಲ್ಲಿಗೆ ಕಳಿಸಿಕೊಡುವಂತೆ ಕೇಳಿದರು. ಒಪ್ಪಿ, ಕುಟುಂಬ ಸಮೇತವಾಗಿ ಇವರು ಮೈಸೂರಿಗೆ ಹೊರಟರು. ಮೈಸೂರಿನ ನಂಟು ಬೆಳೆದು, ಇವತ್ತಿಗೆ 34 ವರ್ಷಗಳೇ ಕಳೆದಿವೆ. ಇವರ ಭಾಷಾ ಪರಿಣತಿ ಕೇಳಿದರೆ ಅಚ್ಚರಿ! ಕನ್ನಡ, ಹಿಂದಿ, ತಮಿಳು, ತೆಲುಗು ಎನ್ನುವ ಸರಾಗ ಧಾಟಿಯಲ್ಲಿ ಇಂಗ್ಲಿಷ್‌ಗೆ ಮಾತ್ರ ‘ಬಟ್ಲರ್ ಸೇರಿಸಿ’ ಎಂದು ನಗುತ್ತಾರೆ.

ಮೈಸೂರಿಗೆ ಬಂದಮೇಲೆ ಸಯ್ಯದ್ ಅವರ ಕಲಾ ಬದುಕಿನ ಹೊಸ ಅಧ್ಯಾಯ ಆರಂಭವಾಯಿತು. ಆಗ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪ ಅವರು ಬಿದಿರು ಪಿಟೀಲು ಮತ್ತು ಮ್ಯಾಜಿಕ್ ವಿದ್ಯೆಗಳನ್ನು ಕಂಡು ಶಹಭಾಷ್ ಎಂದಿದ್ದರು. ಈಗಲೂ ಇವರ ಬಳಿ, ಯಾವ ಹಾಡನ್ನು ಬಿದಿರು ಪಿಟೀಲು ನುಡಿಸುವುದೆಂದರೆ ಇವರಿಗೆ ‘ಸರಸ್ವತಿಯನ್ನು ಆರಾಧಿಸಿದಂತೆ’. ಅವರು ಅನ್ನುವುದು ‘ಅಲ್ಲಾಹು ದೇವರು. ಆದರೆ, ಕಲೆ ಯಾವತ್ತಿಗೂ ಸರಸ್ವತಿಯೆ’, ಕಲೆ ಸೌಹಾರ್ದತೆಯನ್ನು ಹೇಗೆಲ್ಲ ಬೆಸೆಯುತ್ತದೆ ನೋಡಿ!

ನುಡಿಸಲು ಇಷ್ಟವಾಗುತ್ತದೆ ಎಂದರೆ, ಅರೆಕ್ಷಣ ಯೋಚಿಸದೆ ‘ಕಸ್ತೂರಿ ನಿವಾಸ’ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು” ಹಾಡು ಎಂದುಬಿಡುತ್ತಾರೆ. ಕಾರ್ಯಕ್ರಮ ಯಾವುದಿರಲಿ ಕನ್ನಡದ ಈ ಹಾಡನ್ನು ಮಾತ್ರ ತಪ್ಪದೇ ನುಡಿಸುತ್ತೇನೆ ಎನ್ನುವಲ್ಲಿ ಕನ್ನಡ ಪ್ರೀತಿ ಕಾಣಿಸುತ್ತದೆ. ತಮ್ಮ ಪಿಟೀಲು ನುಡಿಸುವುದನ್ನು ಆಲಿಸಿದ ಚಿತ್ರರಂಗದ ಗಣ್ಯರನ್ನು ಸ್ಮರಿಸುವಾಗ ಇವರು ಮೊದಲು ನೆನಪಿಸಿಕೊಳ್ಳುವುದೇ ಅಣ್ಣಾವ್ರನ್ನು. ‘ಅಣ್ಣಾವು ಎಂದರೆ ಇವರಿಗೆ ವಿಶೇಷ ಅಭಿಮಾನ, ರಾಜ್‌ಕುಮಾರ್ ಅವರ ಕುಟುಂಬ ಪ್ರೀತಿಯೂ ಇವರಿಗೆ ದಕ್ಕಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಮ್ಮೆ ಚಿತ್ರವೊಂದರಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದರು. ಆದರೆ, ಅಸಾಧ್ಯತೆಗೆ ತಮ್ಮ ದುರದೃಷ್ಟ ನೆನೆದು ಬೇಸರಿಸುತ್ತಾರೆ.

ಹಂಸಲೇಖ, ರವಿಚಂದ್ರನ್, ರಜನೀಕಾಂತ್, ಸಲ್ಮಾನ್‌ಖಾನ್… ಹೀಗೆ ಚಿತ್ರರಂಗದ ಅನೇಕ ಗಣ್ಯರೆಲ್ಲರ ಕಿವಿಗಳು ತಮ್ಮ ಬಿದಿರಿನ ಪಿಟೀಲಿನ ಸ್ವರವನ್ನು ಆಲಿಸಿವೆ ಎನ್ನುವುದನ್ನು ನೆನೆದು ಇವರು ಸಂಭ್ರಮಿಸುತ್ತಾರೆ.
ಸಯ್ಯದ್ ಅವರ ಬದುಕಿನ ವಿಶೇಷತೆ ಎಂದರೆ, ನಿನ್ನೆಯ ಬಗೆಗೆ ತೃಪ್ತಿಪಡುತ್ತಾ, ಇವತ್ತನ್ನು ಆನಂದಿಸುತ್ತಾ, ನಾಳೆಯ ಬಗೆಗೆ ಕನಸು ಕಟ್ಟುತ್ತಿರುವುದು. ಮೊಬೈಲ್, ಯೂಟ್ಯೂಬ್, ಇನ್ಸಾ ಗ್ರಾಂ ಯುಗದಲ್ಲಿ ಜನರ ಸ್ಪಂದನೆ ಹೇಗಿದೆ ಎಂಬ ಪ್ರಶ್ನೆಗೆ ಇವರು ನೀಡಿದ್ದು ಮಾತ್ರ, ಭರವಸೆಯ ಉತ್ತರ. “ಬೇರೆಡೆ ಪಿಟೀಲು ನುಡಿಸುತ್ತಿರುವಾಗ ಇಲ್ಲಾ ಮ್ಯಾಜಿಕ್ ಶೋ ಮಾಡುವಾಗೆಲ್ಲ ಜನರು ಖುಷಿಪಟ್ಟಿದ್ದನ್ನು ಬಂದು ತಿಳಿಸುತ್ತಾರೆ. ಸಾಕಲ್ಲಾ?’, ಅವರ ಮಾತಿನಲ್ಲಿ ಹೇಳುವುದಾದರೆ ಕಲೆ ನೀಡುವ ಈ ಭರವಸೆಯೇ ಬದುಕಿಗಾಧಾರ. ಸರಕಾರದಿಂದ ಸಿಗುವ ವಿಶೇಷ ಸವಲತ್ತಿನ ನಿರೀಕ್ಷೆಗಳಿದ್ದರೂ ಜೀವನ ಸಾಗಿಸುವಷ್ಟು ಆದಾಯದ ಬಗ್ಗೆ ತೃಪ್ತಿಯಿದೆ.

ಪಿಟೀಲನ್ನು ಇವರೇ ಸ್ವತಃ ತಯಾರು ಮಾಡುತ್ತಾರೆ. ಬಿದಿರು, ತಂತಿ, ಗೆರಟೆ (ತೆಂಗಿನ ಚಿಪ್ಪು), ಕುರಿಯ ಚರ್ಮ – ಇವಿಷ್ಟೇ ಪರಿಕರವನ್ನು ಬಳಸಿ, ಪಿಟೀಲೊಂದು ತಯಾರಾಗುವುದಕ್ಕೆ ಸುಮಾರು ನಾಲೈದು ಗಂಟೆಗಳು ಬೇಕು. ಪಿಟೀಲಿನ ಬೆಲೆ 350 ರೂಪಾಯಿಗಳು. ತಯಾರಿಸಿದ ಪಿಟೀಲನ್ನು ತಮ್ಮ ಪ್ರದರ್ಶನದ ವೇಳೆ ಮಾರಾಟಕ್ಕಿಡುತ್ತಾರೆ.

ಸಯ್ಯದ್ ಅವರೇ ಕುಟುಂಬಕ್ಕೆ ದುಡಿಮೆಯ ಆಧಾರ. ಮಗಳ ಮದುವೆಯಾಯಿತು. ಹತ್ತನೇ ತರಗತಿ ಓದುತ್ತಿರುವ ಮಗನಿಗೆ, ಈ ಕಲೆಯನ್ನು ಕಲಿಸಬೇಕೆಂಬ ಹಂಬಲವಿದೆ. ಕಾಲಕ್ಕಾಗಿ ಕಾಯುತ್ತಿದ್ದಾರೆ. ಬೆಳಿಗ್ಗೆ 9.30ಕ್ಕೆ ಹೊಟೇಲಿಗೆ ಹಾಜರಾದರೆ, ಸಂಜೆ 6.30ರ ತನಕವೂ ಜನರನ್ನು ಮನರಂಜಿಸುತ್ತಲೇ ಇರುತ್ತಾರೆ. ವರ್ಷ 56 ಆದರೂ, ಸಯ್ಯದ್ ಅವರು ಕಲಾ ಹುರುಪಿನ ಜೊತೆಗೆ ಜೀವನಪ್ರೀತಿಯ ಮೂರ್ತರೂಪ.
honeyuttappacoorg@gmail.com