Mysore
24
clear sky

Social Media

ಭಾನುವಾರ, 28 ಜೂನ್ 2026
Light
Dark

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ

ಪೃಥ್ವಿ ಸುಧೀಂದ್ರ

ಓದು, ನನಗೆ ಬಾಲ್ಯದಲ್ಲೇ ದಕ್ಕಿದ ಸುಖ. ಮನೆಯಲ್ಲಿ ಪುಸ್ತಕಗಳು ಎಲ್ಲರ ಜೀವನದ ಸಹಜ ಭಾಗವಾದ್ದರಿಂದ ಅವುಗಳ ಕುರಿತಾದ ಮಾತುಕತೆ ನನಗೆ ಹೊಸತೇನೂ ಆಗಿರಲಿಲ್ಲ. ಪರಿಚಿತ ಲೇಖಕರ ಪುಸ್ತಕಗಳು, ವಿವಿಧ ಪ್ರಕಾರಗಳ ಕೃತಿಗಳ ಸಂಗ್ರಹದಲ್ಲಿ ಇದ್ದುದರಿಂದ ಓದು ದಿನಚರಿಯ ಒಂದು ಅಂಗವಾಯಿತು. ಇದೇ ಹವ್ಯಾಸ ನಾನು ಬುಕ್ ಕ್ಲಬ್ ಅಂಗಳಕ್ಕೆ ಬರುವಂತೆ ಮಾಡಿತು.

ಹದಿನಾರರ ಹರಯದ ‘ಮೈಸೂರು ಬುಕ್ ಕ್ಲಬ್ಸ್ ಚಾರಿಟೆಬಲ್ ಟ್ರಸ್ಟ್’ ನನ್ನ ಓದಿನ ಪ್ರೀತಿ ನಂತರದ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲು ಕಾರಣರಾದವರು ಶುಭಾ ಸಂಜಯ್ ಅರಸ್. ೨೦೧೦ರಲ್ಲಿ ‘ಮೈಸೂರು ಬುಕ್ ಕ್ಲಬ್ಸ್ ಚಾರಿಟೆಬಲ್ ಟ್ರಸ್ಟ್’ ಹುಟ್ಟುಹಾಕಿ ನನ್ನಂತಹ ಇನ್ನೂ ಕೆಲವರು ಪುಸ್ತಕ ಪ್ರೇಮಿಗಳನ್ನು ಸೇರಿಸಿಕೊಂಡರು. ಪುಸ್ತಕ ಪ್ರೀತಿಯಿದ್ದ ಹಲವು ಓದುಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದರು. ಅಲ್ಲಿಯತನಕ ಸಾಮಾನ್ಯ ಓದುಗರಾಗಿದ್ದ ನಮಗೆ ಓದಿನ ಅಭಿರುಚಿಯಾಚೆಗಿನ ಸಾಹಿತ್ಯದ ವಿವಿಧ ಪ್ರಕಾರಗಳನ್ನು, ಲೇಖಕರು ಮತ್ತು ಅವರ ದೃಷ್ಟಿಕೋನಗಳನ್ನು ತಿಳಿದುಕೊಳ್ಳಲು “ಮೈಸೂರು ಬುಕ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್” ಸೇತುವಾಯಿತು. ಪ್ರತೀ ತಿಂಗಳ ಓದಿಗೆ ಕೃತಿಯನ್ನು ಆಯ್ಕೆ ಮಾಡಿ ಸ್ಥಳೀಯ ಲೇಖಕರನ್ನು ಪರಿಚಯಿಸುವ ಮುಖೇನ ಓದುಗ ಹಾಗೂ ಲೇಖಕನ ನಡುವೆ ಸಂಬಂಧ ಬೆಸೆಯುವಲ್ಲಿ ಶುಭಾ ಸಂಜಯ್ ಅರಸ್ ಅವರು ಯಶಸ್ವಿಯಾದವರು. ಈ ಕಾರಣಕ್ಕೆ ಅವರನ್ನು ‘ಸಾಹಿತ್ಯ ಮೂಲಕ ಮನಸ್ಸುಗಳ ನಡುವೆ ಸಂಬಂಧ ಬೆಸೆದವರು’ ಎಂದು ಹೇಳಬಹುದು.

ಆರಂಭದಲ್ಲಿ ಬುಕ್ ಕ್ಲಬ್ ಸಭೆಗಳು ಶುಭಾ ಸಂಜಯ್ ಅರಸ್ ಹಾಗೂ ಕ್ಲಬ್ಬಿನ ಇತರೆ ಸದಸ್ಯರ ಮನೆಗಳಲ್ಲಿ ನಡೆಯುತ್ತಿತ್ತು. ಮೊದಲ ಗುಂಪಿನಲ್ಲಿ ನಾವು ಸರಿಸುಮಾರು ಇಪ್ಪತ್ತು ಸದಸ್ಯರು ಇದ್ದೆವು. ಅಂದಿನ ನಮ್ಮ ಸಭೆಗೆ ಆಯ್ಕೆಯಾದ ಮೊದಲ ಪುಸ್ತಕಗಳು ಖಾಲಿದ್ ಹೊಸೈನಿಯವರ ‘ ’ ಮತ್ತು ಕನ್ನಡದ ಚದುರಂಗರ ‘ಉಯ್ಯಾಲೆ’. ಆ ಎರಡು ಪುಸ್ತಕಗಳನ್ನು ಇಪ್ಪತ್ತು ಜನರು ಓದಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೆವು. ಪ್ರತಿಯೊಬ್ಬರ ಅಭಿಪ್ರಾಯವೂ ಭಿನ್ನವಾಗಿತ್ತು. ಕಾಫಿ, ಪಕೋಡದೊಡನೆ ಶುರುವಾಗುತ್ತಿದ್ದ ಪುಸ್ತಕ ಮಾತುಕತೆ ಕೆಲವೊಮ್ಮೆ ತೀವ್ರವಾದ ಚರ್ಚೆಗಳಿಂದ ಕೂಡಿರುತ್ತಿತ್ತು. ತಿಳಿದುಕೊಳ್ಳುವ ಬಗೆ ಓದಿನ ಜೀವಾಳವೆಂಬುದು ಮೈಸೂರು ಬುಕ್ ಕ್ಲಬ್ಸ್ ಚಾರಿಟೆಬಲ್ ಟ್ರಸ್ಟ್‌ನಿಂದ ತಿಳಿದುಕೊಂಡ ಬಹುಮುಖ್ಯ ಪಾಠ. ಪ್ರತಿಯೊಬ್ಬರ ಓದಿನ ಅರ್ಥೈಸುವಿಕೆಯಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿದೆ ಹಾಗೂ ‘ಪುಸ್ತಕ ನಿರ್ದಿಷ್ಟ ವ್ಯಾಖ್ಯಾನಕ್ಕೆ ಮೀರಿದ ಸತ್ಯ’ ಎಂಬುದು ತಿಳಿಯಿತು. ಕುಟುಂಬದೊಳಗೆ ಸೀಮಿತವಾಗಿದ್ದ ನನ್ನ ಪುಸ್ತಕ ಚರ್ಚೆಯನ್ನು ವಿಭಿನ್ನ ಅಭಿಪ್ರಾಯ ಮತ್ತು ಅನುಭವಗಳ ಜಗತ್ತಿಗೆ ಪರಿಚಯಿಸಿದ್ದು ಬುಕ್ ಕ್ಲಬ್. ಬುಕ್ ಕ್ಲಬ್‌ನಲ್ಲಿ ನಡೆಯುವ ಚರ್ಚೆಗಳು ನನ್ನ ಓದಿನ ಅನುಭವವನ್ನು ಶ್ರೀಮಂತಗೊಳಿಸಿದೆ. ಓದಿನ ಪ್ರೀತಿಯಿಂದ ಆರಂಭವಾದ ಕ್ಲಬ್ ಕ್ರಮೇಣ ‘ಓದು ಕುಟುಂಬ’ವಾಗಿ ರೂಪುಗೊಂಡಿತು.

೨೦೧೨ರಲ್ಲಿ ಶುಭಾ ಸಂಜಯ್ ಅರಸ್ ಅವರು ಕ್ಲಬ್ ಮೂಲಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದರು. ನಾವು ಮೆಚ್ಚಿದ ಲೇಖಕ ನಮ್ಮೆದುರೇ ನಿಂತು ಮಾತನಾಡುವ ಕ್ಷಣ ರೋಮಾಂಚನಕಾರಿ. ನಂತರದ ದಿನಗಳಲ್ಲಿ ಲೇಖಕರ ಭೇಟಿ ಕಾರ್ಯಕ್ರಮ ಆರಂಭವಾಯಿತು.

ಬುಕ್ ಕ್ಲಬ್ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿ ವಿಶೇಷ ಚೇತನರ ಶಾಲೆಗಳಲ್ಲಿ, ಹಿರಿಯ ನಾಗರಿಕರ ನಿವಾಸಗಳಲ್ಲಿ ಬುಕ್ ಕ್ಲಬ್ ಸದಸ್ಯ ಸಂಘಗಳನ್ನು ಆರಂಭಿಸಿ ಅವರನ್ನೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆವು. ಕೋವಿಡ್ ಅವಧಿಯಲ್ಲಿ ಆಸ್ಪತ್ರೆಗಳಿಗೆ, ಮೈಸೂರು ಕಾರಾಗೃಹದ ಮಹಿಳಾ ಸೆಲ್‌ಗೆ ಅಗತ್ಯ ಕಿಟ್ ಒದಗಿಸುವ ಮೂಲಕ ಬುಕ್ ಕ್ಲಬ್ ಸಹಾಯ ಹಸ್ತ ಚಾಚಿತು.

ಬುಕ್ ಕ್ಲಬ್ ಮೊದಲ ‘ಮೈಸೂರು ಸಾಹಿತ್ಯ ಸಂಭ್ರಮ’ ನೆನಪು
ದೂರದರ್ಶಿತ್ವ ಹೊಂದಿರುವ ಶುಭಾ ಸಂಜಯ್ ಅರಸ್, ೨೦೧೭ರಲ್ಲಿ ಸಾಹಿತ್ಯ ಸಂಭ್ರಮದ ಪರಿಕಲ್ಪನೆಯನ್ನು ಕ್ಲಬ್ ಮುಂದಿಟ್ಟಾಗ ಪುಸ್ತಕ ಪ್ರೇಮಿಗಳ ಬುಕ್ ಕ್ಲಬ್‌ಗೆ ಇದು ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿ ಕಂಡಿತು. ಅವರ ಆಲೋಚನೆಗೆ ಎಲ್ಲರೂ ಒಟ್ಟಾಗಿ ದುಡಿದ ಫಲವೇ ಮೊದಲ ‘ಮೈಸೂರು ಸಾಹಿತ್ಯ ಸಂಭ್ರಮ’ದ ಯಶಸ್ಸು. ಇದು ಮೈಸೂರಿನಲ್ಲೇ ಒಂದು ಮಹತ್ವದ ಕಾರ್ಯಕ್ರಮವಾಗಿ ರೂಪುಗೊಂಡಿತು.

ಬುಕ್ ಕ್ಲಬ್ ಮತ್ತು ನಾನು
ಬುಕ್ ಕ್ಲಬ್ ನನ್ನ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿರುವುದನ್ನು ಮರೆಯುವುದಿಲ್ಲ. ಆ ವೇಳೆಗಾಗಲೇ ತಂದೆ ನನ್ನನ್ನು ‘ಮೈತ್ರಿ ಚಾರಿಟೆಬಲ್ ಟ್ರಸ್ಟ್’ನ ಟ್ರಸ್ಟಿಯನ್ನಾಗಿ ಮಾಡಿದ್ದರು. ಬುಕ್ ಕ್ಲಬ್ ಹಾಗೂ ಸಾಹಿತ್ಯ ಸಂಭ್ರಮದ ಅನುಭವಗಳು ನನ್ನಲ್ಲಿ ನಾಯಕತ್ವ ಗುಣವನ್ನು ಬೆಳೆಯಿಸಿತು. ನಿರ್ಧಾರ ಹಾಗೂ ಅನುಷ್ಠಾನಗೊಳಿಸುವಲ್ಲಿ ಆತ್ಮವಿಶ್ವಾಸ ಹುಟ್ಟಿಸಿದ ಬುಕ್ ಕ್ಲಬ್ ಬಹುಜನರ ಸ್ನೇಹ, ಬೌದ್ಧಿಕ ಸಹವಾಸ ಮತ್ತು ನೂತನ ದೃಷ್ಟಿಕೋನವನ್ನು ಉಡುಗೊರೆಯಾಗಿ ಕೊಟ್ಟಿದೆ.

Tags:
error: Content is protected !!