ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ
ರಾಜೇಂದ್ರ ಚೆನ್ನಿ
೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ ಪುಟಗಳಷ್ಟು ಇವೆ ಎಂದು ಸ್ವತಃ ಮಹಾದೇವರೇ ಆಶ್ಚರ್ಯಪಟ್ಟಿದ್ದಾರೆ. ಆದರೆ ಕನ್ನಡ ಸಂವೇದನೆಯ ಎದೆಗೆ ಬಿದ್ದ ಅಕ್ಷರಗಳಂತೆ ಅವು ಪ್ರಕಟವಾದ ದಿನದಿಂದಲೇ ಫಲ ಕೊಡುತ್ತಾ ಬಂದಿವೆ. ಕಾರಣವೆಂದರೆ ‘ದ್ಯಾವನೂರು’ ಸಂಕಲನದಲ್ಲಿ ಒಂದು ಕತೆಯನ್ನು ಬಿಟ್ಟರೆ ಇನ್ನೆಲ್ಲವೂ ವಾಸ್ತವವಾದದ ಇಕ್ಕಟ್ಟನ್ನು ದಾಟಿಕೊಂಡು ಭಾಷೆ, ರೂಪಕಗಳು, ನಿರೂಪಣೆಯ ಪ್ರಯೋಗಶೀಲತೆಯಿಂದ ಕನ್ನಡ ಕಥನ ಪರಂಪರೆಯಲ್ಲಿ ಹೊಸ ಸಂಚಲನವನ್ನೇ ತಂದಿವೆ. ಕಥನದ ಸಾಧ್ಯತೆಗಳನ್ನು ಹಿಗ್ಗಿಸಿವೆ. ಅವುಗಳಿಗೆ ಇರುವ ಚೈತನ್ಯವು ಬಂದಿರುವುದು ಅನನ್ಯವಾದ ಸೃಜನಶೀಲ ಲೋಕದೃಷ್ಟಿಯಿಂದ. ಒಂದು ಕಡೆಗೆ ದಲಿತ ಸಮುದಾಯಗಳು ಅನುಭವಿಸುವ ಸೋಲು, ಅವಮಾನ, ಶೋಷಣೆ ಇವುಗಳನ್ನು ಗುರುತಿಸುತ್ತಲೇ ದಲಿತ ವ್ಯಕ್ತಿಗಳನ್ನು, ಆತ್ಮಗಳನ್ನು ಕೇವಲ “ಶೋಷಿತ ಬಲಿಪಶು” ಎನ್ನುವ ಸ್ಥಗಿತ ಪ್ರತಿಮೆಗೆ ಇಳಿಸದೆ ಅವರ ಅದಮ್ಯ ಚೈತನ್ಯವನ್ನೂ, ಜೀವಪರ ತುಡಿತಗಳನ್ನೂ ಈ ಲೋಕದೃಷ್ಟಿ ಆತ್ಮೀಯವಾಗಿ ಕಂಡರಿಸುತ್ತದೆ. ಆದ್ದರಿಂದಲೇ ‘ಒಡಲಾಳ’ದಲ್ಲಿ ಯಾರ ಜಪ್ತಿಗೂ ಸಿಗದ ನವಿಲುಗಳು ಪುಟ್ಟ ಗೌರಿಯ ಕೈಯಿಂದ ಮೂಡಿಬರುತ್ತವೆ. ಸಾಕವ್ವ ಮೂರನೇ ಕ್ಲಾಸ್ ಶಿವೂನ ಕಲ್ಪನೆಯಲ್ಲಿ ಯಕ್ಷಿಯಂತೆ ಆಕಾಶದಲ್ಲಿ ಹಾರಿ ಸಾಕ್ಷಾತ್ ಯಮರಾಜನ ಜೊತೆಗೆ ವ್ಯವಹರಿಸುತ್ತಾಳೆ. ‘ಕುಸುಮಬಾಲೆ’ಯಲ್ಲಿ ಕೊಲೆಯಾಗಿರುವ ಚನ್ನ ಮುಂಬಯಿಯ ಹೋಟೆಲ್‌ನಲ್ಲಿ ಜಬರ್ದಸ್ತಾಗಿ ಇದ್ದಾನೆ, ಅವನ ತಂದೆ ತಾಯಿ ಕಣ್ಣಲ್ಲಿ.
ಒಂದು ಕಾಲದಲ್ಲಿ ಅಮಾಸನಂತೆಯೆ ಹುಲಿಯಾಸದಲ್ಲಿ ಕುಣಿಯುತ್ತಿದ್ದ ಕುರಿಯಯ್ಯ ಈಗ ಅಮಾಸ ಗೌಡರ ಕಣ್ಣಿನಲ್ಲಿ ಕುಣಿಯುತ್ತಲಿದ್ದ. ‘ಎದೆಗೆ ಬಿದ್ದ ಅಕ್ಷರ’ದಲ್ಲಿನ ಬರಹಗಳು “gnostic” ಎಂದು ಕರೆಯುವ ವಚನಗಳಂತೆ ಅಥವಾ ಝೆನ್ ಕತೆಗಳಂತೆ ಇವೆ. ಅವುಗಳಿಗೆ ಅಗಾಧವಾದ ರೂಪಕ ಶಕ್ತಿಯೂ ಇದೆ. ಗಾಢವಾಗಿ ಚಿಂತಿಸಿ, ಧ್ಯಾನಿಸಿ ಕಣಿ ಹೇಳಿದಂತೆ ಹೇಳಿಬಿಡುವುದು ಈ ಬರಹಗಳ ಗುಣ. ೨ “ಇಂದಿನ ವ್ಯಾಪಾರೀ ಜಾಗತೀಕರಣ ಯುದ್ಧವಲ್ಲದೇ ಮತ್ತೇನಲ್ಲ. ಇದೊಂದು ನವ ಯುದ್ಧ. ಆಯುಧವನ್ನೂ ಬಳಸದೇ ಇರುವ ಯುದ್ಧ”. “ಇವರು ಬಲಿಷ್ಠರು, ನಿಜ. ಎಷ್ಟು ಬಲಿಷ್ಠರು ಎಂದರೆ ಈ ಇರಾಕ್ ಯುದ್ಧದಿಂದಾಗಿ ಚರಿತ್ರೆಯನ್ನೇ ತುಂಬಾ ಹಿಂದಕ್ಕೆ ತಳ್ಳಿಬಿಟ್ಟರು….
ಒಂದು ಕಿಡಿನುಡಿ: “ಬಲಿಷ್ಠ ರಾಷ್ಟ್ರಗಳು ಗೂಂಡಾಗಳಂತೆ ವರ್ತಿಸುತ್ತಿವೆ. ಬಡ ರಾಷ್ಟ್ರಗಳು ಬೆಲೆವೆಣ್ಣುಗಳಂತೆ ವರ್ತಿಸುತ್ತಿವೆ… ಆಕಾಶದಲ್ಲಿ ರಣಹದ್ದುಗಳು ಹಾರಾಡದೆ ಮತ್ತೇನು ಮಾಡಬೇಕು” Wಈಗ ೨೦೨೬ರ ಇರಾನ್ ಯುದ್ಧದ ಬಗ್ಗೆ ಈ ಪುಟ್ಟ ಲೇಖನದ ಪ್ರತಿಯೊಂದು ಪದವೂ ಇದ್ದಂತಿದೆಶ್ರಿ.
“ಭಾರತ ಸಂವಿಧಾನಕ್ಕೆ ‘ಭೂತ ಚೇಷ್ಟೆ’ ಎನ್ನುವ ಲೇಖನವೂ ಕೂಡ ಇಂದಿನ ಅತ್ಯಂತ ಸಮರ್ಪಕವಾದ ವರ್ಣನೆಯಾಗಿದೆ. “ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿ ಧಾನದ ಆಸೆಗಳು ತೆವಳುತ್ತಿವೆ”. ಇಷ್ಟು ಕರಾರುವಾಕ್ಕಾಗಿ ನಮ್ಮ ಕಾಲದ ವಾಸ್ತವಗಳನ್ನು ಮಹಾದೇವ ತೋರಿಸು ತ್ತಾರೆ. ಆದ್ದರಿಂದಲೇ ಯಾವುದೇ ಬಿಕ್ಕಟ್ಟು ಎದುರಾದರೂ ಮಹಾದೇವರ ನುಡಿಗಾಗಿ ಎಲ್ಲರೂ ಕಾಯುತ್ತಾರೆ. ಅಂಥ ವಿಶ್ವಾಸಾರ್ಹತೆ ಅವರ ಬರಹ ಮತ್ತು ಮಾತುಗಳಿಗಿವೆ. ಸುದೀರ್ಘವಾದ ಕನ್ನಡ ಪರಂಪರೆಯಲ್ಲಿ ಸ್ಥಾಯಿಯಾಗಿ ಉಳಿದುಕೊಂಡಿರುವಸಮಾನತೆಯ ಆಶಯಗಳು ಈ ಬರಹಗಳನ್ನು ರೂಪಿಸಿವೆ. ಹೊರಳಿ ನೋಡಿದರೆ ೧೯೭೦ರ ದಶಕದಿಂದೀಚೆಗೆ ಕನ್ನಡ ಪ್ರಜ್ಞೆಯನ್ನು ರೂಪಿಸಿರುವ ಎಲ್ಲಾ ಚಿಂತನೆ ಹಾಗೂ ಹೋರಾಟಗಳು ಈ ಬರಹಗಳನ್ನು ರೂಪಿಸಿವೆ. ಮಹಾದೇವರ ಕ್ರಿಯಾಶೀಲತೆ (activism) ವಿಭಿನ್ನವಾದದು. ಅಪಾರವಾದ ಅರ್ಥವಂತಿಕೆ ಇರುವ ಸಾಂಕೇತಿಕ ಕ್ರಿಯೆಗಳಾಗಿ ಸಾರ್ವಜನಿಕ ವಲಯವನ್ನು ಸಹಚರ್ಚೆಗೆ ಹಚ್ಚಿಸುವ ಗುಣ ಈ ಕ್ರಿಯಾಶೀಲತೆಗೆ ಇದೆ. ‘ಗಾಂಧಿ’ ಸಿನಿಮಾ ನೋಡಿ ಬರೆದದ್ದು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಿರಸ್ಕರಿಸಿದ್ದು ಇತ್ಯಾದಿ ಒಬ್ಬ ‘public intellectua’ ಮಾಡಬಹುದಾದ ಪ್ರಭಾವಿ ಕೆಲಸವಿದಾಗಿದೆ. ಅಂಬೇಡ್ಕರ್ ವಿರುದ್ಧ ಗಾಂಧಿ ಎನ್ನುವ ವೈಚಾರಿಕ ಆಕೃತಿಯನ್ನು ಬದಲಾಯಿಸ ಬಹುದಾದ ಚಿಂತನೆಯೂ ಅವರದ್ದಾಗಿದೆ.
ಪ್ರೊ.ನಂಜುಂಡಸ್ವಾಮಿಯವರಿಗೆ ರೈತ ಚಳವಳಿಯ ಬಗ್ಗೆ ದಶಕಗಳ ಹಿಂದೆ ಕೇಳಿದ್ದ ಮಹಾದೇವರ ಯಕ್ಷಪ್ರಶ್ನೆಗಳು ಹಾಗೇ ಇವೆ. ಇಂದು ಶಿವಸುಂದರ್ ಅವರ ಲೇಖನವನ್ನು ಓದುತ್ತಿದ್ದೆ. ಬೇರೆ ರೂಢಿಗತ ಮಾರ್ಗ ಗಳಲ್ಲಿ ಅಂಬೇಡ್ಕರ್ ಅವರ ಸವಾಲನ್ನು ಎದುರಿಸಲಾರದೆ ಈಗ ಆರ್.ಎಸ್.ಎಸ್. ಅವರನ್ನು ಹಿಂದುತ್ವದ ಚೌಕಟ್ಟಿನಲ್ಲಿ ತೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಬರೆದಿದ್ದಾರೆ. ಈ ಪ್ರಯತ್ನವು ಎಷ್ಟು ದುಷ್ಟವೋ ಅಷ್ಟೇ ಅಸಂಗತವೂ ಕೂಡ ಎಂದು ಮಹಾದೇವ ಬಹಳ ಹಿಂದೆ ಬರೆದಿದ್ದರು. “ಬಸವ, ಅಂಬೇಡ್ಕರ್‌ರ ಹೆಸರನ್ನು ಉಚ್ಛಾರ ಮಾಡಿದರೂ ಅದು ಸಮಾನತೆ ಯನ್ನೇ ಉಸಿರಾಡುತ್ತದೆ. ಇಂಥವರ ಜೊತೆ ಮೇಲು- ಕೀಳಿನ ಗೋಲ್ವಾಳ್ಕರ್‌ರನ್ನು ಕೂಡಿಸಿರುವುದು” ಎಂದು ಅವರು ಬರೆದಿದ್ದರು. ಈಗ ಪ್ರಬಲವಾಗಿ ನಡೆಯುತ್ತಿರುವ ಪ್ರಯತ್ನವು ನಾವು ಎಚ್ಚರವಾಗಿರದಿದ್ದರೆ ಸಮಸ್ಯಾತ್ಮಕವಾಗಬಲ್ಲದು. ಮಹಾದೇವರ ಖಚಿತತೆ ಈಗಲೂ ದಾರಿದೀಪವಾಗಬಲ್ಲದು. ಬಾಬಾ ಸಾಹೇಬರ ಚಿಂತನೆಯ ಬುನಾದಿಯಲ್ಲಿರುವುದು ‘”radical equality’’ ಎಂದು ಕರೆಯಲಾಗಿರುವ, ಯಾವ ಸಮಜಾಯಿಷಿಯೂ ಇಲ್ಲದ ಸಮಾನತೆಯ ಪರಿಕಲ್ಪನೆ. ಅದನ್ನು ಮೂಲತಃ ಅಸಮಾನತೆಯನ್ನೇ ಬೆಂಬಲಿಸುವ ಸಿದ್ಧಾಂತಗಳಲ್ಲಿ ಸೇರಿಸಲಾಗದು. ಇವು ಪರಸ್ಪರ ವಿರೋಽ ವೈಚಾರಿಕ ಆಕೃತಿಗಳು ಹಾಗೂ ಲೋಕದೃಷ್ಟಿಗಳು. ಇದನ್ನು ಮಹಾದೇವ ಹೇಳುತ್ತಾ ಬಂದಿದ್ದಾರೆ. ಇದನ್ನು ಅರ್ಥಮಾಡಿಸುವುದು ಈಗಿನ ಜವಾಬ್ದಾರಿಯಾಗಿದೆ.
೩ ‘ಕುಸುಮಬಾಲೆ’ ಕೃತಿಯನ್ನು ಪೂರ್ವಿಕ ಮಾದಾರ ‘ಮಲೆ ಮಾದೇಶ್ವರಂಗೆ’ ಅರ್ಪಿಸಲಾಗಿದೆ. ಈ ಅರ್ಪಣೆಯ ಮೂಲಕ ಈ ಕೃತಿಯು ಮೌಖಿಕ ಕಥನ-ಕಾವ್ಯ ಪರಂಪರೆಗಳೊಂದಿಗೆ ತನ್ನ ಸಂಬಂಧವನ್ನು ದಾಖಲಿಸುತ್ತದೆ. ಇದು ನಮ್ಮ ಓದಿಗೆ ಅತ್ಯಂತ ಅವಶ್ಯವಾಗಿದೆ. ಮುದ್ರಣ ಮಾದರಿಯ ಪ್ರಕಟಿತ ಕೃತಿಯೊಳಗೆ ಗದ್ಯ, ಕಾವ್ಯ, ನಿರೂಪಣೆ, ಪುರಾಣ ಇವೆಲ್ಲವೂ ಮಿಳಿತವಾಗಿವೆ. ಹೀಗಾಗಿಯೇ ‘ಒಡಲಾಳ’, ‘ಕುಸುಮ ಬಾಲೆ’ ಇವುಗಳು ಹೆಚ್ಚಾಗಿ ತಲುಪಿದ್ದು ಪಠ್ಯದ ಓದುವಿಕೆಯಿಂದ, ಅಂದರೆ ಅವುಗಳ ಧ್ವನಿಯನ್ನು ಕೇಳಿಸಿಕೊಳ್ಳುವುದರ ಮೂಲಕ. ಇಂಥ ಪ್ರಯೋಗ ಗಳಿಗೆ ಕಿ.ರಂ. ನಾಗರಾಜರ ಮಾರ್ಗದರ್ಶನವಿತ್ತು, ನಂತರ ಎಲ್.ಬಸವರಾಜು ಅವರು ಮಾಡಿದ ಮುದ್ರಿತ ಕೃತಿಯ ಮರು ಜೋಡಣೆಯೂ ಬಹು ಅರ್ಥಪೂರ್ಣವಾಗಿತ್ತು.
ಅಂತೆಯೇ ರಂಗಪ್ರದರ್ಶನಗಳು ಕೂಡ. ಹೀಗೆ ಈ ಕೃತಿಗಳು ಕನ್ನಡ ಮನಸ್ಸುಗಳನ್ನು ತಲುಪುವ ವಿಭಿನ್ನ ದಾರಿಗಳನ್ನು ತಾವೇ ತೋರಿದವು. ಕುವೆಂಪು, ಲಂಕೇಶ್ ತಮ್ಮ ಬರಹ ಗಳಿಂದ ಸಮುದಾಯದೊಂದಿಗೆ ನಿರಂತರ ಸಂಭಾಷಣೆಯಲ್ಲಿದ್ದರು. ಸ್ವೀಕೃತವಾದ, ಪರೀಕ್ಷೆಗೆ ಒಳಗಾಗದ ಸಿದ್ಧಾಂತಗಳನ್ನು, ಮೌಲ್ಯಗಳನ್ನು, ನಂಬಿಕೆಗಳನ್ನು ಪ್ರಶ್ನಿಸುವುದು ಈ ಸಂಭಾಷಣೆಯ ಪ್ರಮುಖ ಗುಣವಾಗಿತ್ತು. ಈ ಸಂಪ್ರದಾಯವನ್ನು ಮುಂದುವರಿಸಿದ ಮಹಾದೇವರು ಒಂದು ಹೆಜ್ಜೆ ಮುಂದೆ ಹೋಗಿ ಈ ಸಂಭಾಷಣೆಗೆ ಕಾವ್ಯದಲಯವನ್ನು, ಕಥನದ ಕುತೂಹಲವನ್ನು ಮತ್ತು ರೂಪಕಗಳನ್ನು ಸೇರಿಸಿದ್ದಾರೆ. ಮುಖ್ಯವಾಗಿ ಅವರದು ಉಪದೇಶ ಮಾಡದೆಯೇ ಮನಸ್ಸುಗಳನ್ನು ತಿದ್ದುವ ಸಂಭಾಷಣೆ. ಇದು ಪರಿಣಾಮಕಾರಿಯಾಗುವುದಕ್ಕೆ ಕಾರಣವೆಂದರೆ ಅದರಲ್ಲಿರುವ ವೈಯಕ್ತಿಕ ತುರ್ತು ಮತ್ತು ಸಮಾಜವನ್ನು ಹಸನಾಗಿಸುವುದರ ಬಗ್ಗೆ ಇರುವ ಅದರ ಆರ್ತತೆಯಿಂದಾಗಿ
” ದೇವನೂರರದು ಉಪದೇಶ ಮಾಡದೆಯೇ ಮನಸ್ಸುಗಳನ್ನುತಿದ್ದುವ ಸಂಭಾಷಣೆ. ಇದು ಪರಿಣಾಮಕಾರಿಯಾಗುವುದಕ್ಕೆ ಕಾರಣವೆಂದರೆ, ಅದರಲ್ಲಿರುವ ವೈಯಕ್ತಿಕ ತುರ್ತು ಮತ್ತು ಸಮಾಜವನ್ನು ಹಸನಾಗಿಸುವುದರ ಬಗ್ಗೆ ಇರುವ ಅದರ ಆರ್ತತೆ ”
ದೇಮ ಎಂಬ ನೈತಿಕ ಕೈಮರ
ಸುರೇಶ ಕಂಜರ್ಪಣೆ
ಅಂದಕಾಲತ್ತಿಲೇ ನಾನು ಅರಕಲಗೂಡಲ್ಲಿ ಪಾಠ ಮಾಡುತ್ತಿದ್ದಾಗ ಅಲ್ಲಿನ ದೇವಸ್ಥಾನದಲ್ಲಿ ಶಿವರಾತ್ರಿಯಂದು ನಡೆದ ಸಾಂಪ್ರದಾಯಿಕ ಪ್ರಸಾದ ವಿತರಣೆಯಲ್ಲಿ ಜಾತಿಭಿನ್ನತೆ ಮಾಡಿದ ಬಗ್ಗೆ ಜನತಾ ಮಾಧ್ಯಮಕ್ಕೆ ನಾನೊಂದು ಪತ್ರ ಬರೆದಿದ್ದೆ. ಅದರಲ್ಲಿ ಒಂದೂರು ಹೆಸರು “ಅ” ಎಂದಿರಲಿ ಎಂದು ಶುರು ಮಾಡಿದ್ದೆ. ಅದು ಗಲಾಟೆ ಆಯಿತು. ಮೈಸೂರಿಗೆ ಬಂದಾಗ ಯು.ಆರ್.ಎ. ಅವರಲ್ಲಿ ಇದರ ಬಗ್ಗೆ ಹೇಳಿದೆ. ಅವರು ಇದನ್ನು ಎದುರಿಸು ಅಂದರು. ದೇಮ ಅಲ್ಲಿದ್ದರು. ಅವರು ನನ್ನ ಪತ್ರ ಇಸಕೊಂಡು ಓದಿ, “ಸುರೇಶ್, ಹೆಸರು ಅ ಎಂದಿರಲಿ ಎಂದು ಬರೆದಿದೀರಿ. ಇದು ಎಸ್ಕೇಪಾಗುವ ಹಾದಿ.
ಯಾವೂರು ಅಂದರೆ ಇದಲ್ಲ ಅನ್ನಬೋದು. ಹಾಗಲ್ಲ, ನೇರ ಹೆಸರು ಹಾಕಿ ಬರಿಬೇಕು. ಇಲ್ಲದಿದ್ದರೆ ಗಾಸಿಪ್ ಆಗುತ್ತೆ. ಧೈರ್ಯ ಇರೋದು ಸತ್ಯ ಬರೆಯೋದರಲ್ಲಿ. ಅದನ್ನ ಸೂಚ್ಯವಾಗಿ ಹೇಳಿದರೆ ಸಾಲದು” ಅಂದಿದ್ದರು. ಇಂದಿನವರೆಗೂ ನಾನು “ಯಾರೋ ಒಬ್ಬ” ಅಂತ ಬರೆದೇ ಇಲ್ಲ!! ಅದಕ್ಕೂ ಮೊದಲು ನಾವು ಓದುವಾಗ ದಸಂಸ ಆತ್ಮ ವಿಮರ್ಶೆಯ ಭಾಗವಾಗಿ ದಲಿತ ಮಂತ್ರಿ ಶಾಸಕರ ಮನೆ ಎದುರು ಧರಣಿ ಎಂಬೋ ಕಾರ್ಯಕ್ರಮ ಸಂಘಟಿಸಿದ್ದರು. ಒಂದಷ್ಟು ಹುಡುಗರು (ನನ್ನ ಸಹಿತ) ಶ್ರೀನಿ ವಾಸ್ ಪ್ರಸಾದ್ ಮನೆ ಎದುರು ಧರಣಿ ಕೂತು ಹೋರಾಟದ ಹಾಡು ಹಾಡುತ್ತಿದ್ದೆವು. ಪ್ರಸಾದ್ ಮನೆಯಲ್ಲಿ ಆ ದಿನ ಅದೇನೋ ಪೂಜೆ. ಅವರ ದಿಂಡಾಳುಗಳಿಗೆ ಸಿಟ್ಟು ಬಂದು ಕೋಲಿಗೆ ಕಟ್ಟಿದ್ದ ನಮ್ಮ ಪ್ಲಾಸ್ಟಿಕ್ ಗೋಣಿಯ ಶಾಮಿಯಾನಾ ಕಿತ್ತು ನಮ್ಮನ್ನು ಓಡಿಸಿದರು. ನಾವು ಸೈಕಲ್ ಹತ್ತಿ ದೇಮ ಅವರಲ್ಲಿಗೆ ಬಂದು ಅರುಹಿದೆವು.
ದೇಮ ಎರಡು ನಿಮಿಷ ಮೌನವಾಗಿದ್ದು, ಹೋಗಿ ನಾನು ಬರ್ತೀನಿ ಎಂದರು. ನಾವು ಮತ್ತೆ ಸ್ಥಾಪನೆಯಾ ಗುವ ವೇಳೆಗೆ ದೇಮ ಬಂದು ನಮ್ಮ ಜೊತೆ ಕೂತರು. ಭೀಕರ ಬಿಸಿಲು, ಶ್ರೀನಿವಾಸ್ ಪ್ರಸಾದ್ ಮನೆಯಿಂದ ಓಡಿ ಬಂದು ದೇಮ ಅವರ ಬಳಿ ವಾದಿಸುತ್ತಾ, “ನಾನೇನೂ ಮಾಡಿಲ್ವಾ? ಹೀಂಗೆ ಇನ್ಸಲ್ಟ್ ಮಾಡಿದರೆ ಬೇಜಾರಾಗಲ್ವಾ?” ಅನ್ನುತ್ತಿದ್ದರು. ದೇಮ ಶಾಂತವಾಗಿ, “ಇದು ಸಾಂಕೇತಿಕ ನಿಮಗೆ ಗೊತ್ತಿರಬೇಕಿತ್ತು. ನಮ್ಮ ಹುಡುಗರಿಗೆ ಹೊಡೆದಿದ್ದಾರೆ, ನಾನು ಏಳಲ್ಲ” ಅಂದರು. ಒಂದಷ್ಟು ನಿಮಿಷ ಏನೋ ವಾದಿಸುತ್ತಾ ಪ್ರಸಾದ್ ಅತ್ತೇ ಬಿಟ್ಟಿದ್ದರು. ಆ ದಿನ ಅವರ ಮನೆಯಲ್ಲಿ ಯಾರೂ ಆ ಹಬ್ಬದ ಊಟ ಮಾಡಲಿಲ್ಲ. ದೇಮ ಸಾರ್ವಜನಿಕ ಭಾಷ್ಯದ ಬಗ್ಗೆ, ಹೋರಾಟದ ನಿಲುವಿನ ಬಗ್ಗೆ ನಮಗೆ ಕಲಿಸಿದ ಪಾಠ ಇಂದೂ ಎದೆಯೊಳಗೆ ಊರಿದೆ.
ಕೇವಲ ಆಕ್ರೋಶದ ಪ್ರತಿಭಟನೆ ಬಗ್ಗೆ ದೇಮ ಕೊಂಚ ಕಸಿವಿಸಿಪಟ್ಟದ್ದಿದೆ. ನಿರ್ದಿಷ್ಟ ಕೇಸುಗಳಾದರೆ ಸರಿ. ಸೈದ್ಧಾಂತಿಕವಾದರೆ ಅದು ನಿಮ್ಮ ಎದುರಾಳಿಯನ್ನು ಬದಲಾಯಿಸುವಂತಿರಬೇಕು ಎಂದು ದೇಮ ಹೇಳುತ್ತಿದ್ದರು.
ಒಂದು ಹಿರಿಯ ತಲೆಮಾರು ಅಂತ ಈಗ ಕರೆಯಬಹುದಾದ ಲಂಕೇಶ್, ತೇಜಸ್ವಿ, ಯು.ಆರ್.ಎ, ಕೃಷ್ಣಪ್ಪ ಅವರು ಕನ್ನಡದಲ್ಲಿ ಸೃಷ್ಟಿಸಿದ ತಾತ್ವಿಕ ಚರ್ಚೆ ಮತ್ತು ಒಳನೋಟಗಳನ್ನು ಹೀರಿಕೊಂಡ ತಲೆಮಾರು ನಮ್ಮದು. ದೇಮ ಅದರ ಕೊನೆಯ ಕೊಂಡಿ. ಕತೆ, ಕಾದಂಬರಿಗಳಲ್ಲಿ ದೇಮ ಸೃಷ್ಟಿಸಿದ ಕಲಾ ಜಗತ್ತನ್ನು ಬಶೀರ್ ಅವರ ಜೊತೆ ಹೋಲಿಸಬಹುದೇನೋ. ಏಕಕಾಲಕ್ಕೆ ಈ ಜಗತ್ತಿನ ಜೊತೆ ಬೆರೆತೂ ಅದನ್ನು ಹೊರಳಿಸುವ ಬರಹ ಅದು. ಅದರಾಚೆಗೆ ದೇಮ ಈ ತಲ್ಲಣದ ಕಾಲದಲ್ಲಿ ಅಂತಸ್ಸಾಕ್ಷಿಯ ದನಿಯಾಗಿ ಮಾತಾಡುತ್ತಲೇ ಬಂದಿದ್ದಾರೆ. ಒಂದು ಫ್ಯಾಸಿಸ್ಟ್ ಎಂದು ಕರೆಯಬಹುದಾದ ಲಕ್ಷಣಗಳನ್ನು ಢಾಳಾಗಿ ಹೊಂದಿರುವ ಪ್ರಭುತ್ವದ ವಿರುದ್ಧ ಪ್ರತಿರೋಧವನ್ನು ಹೇಗೆ ಸೃಷ್ಟಿಸುವುದು ಎಂಬ ಪ್ರಶ್ನೆ ಅದು. ದೇಮ ಅದರ ಸೂಚಿಗಳನ್ನು ಮುಂದಿಡುತ್ತಲೇ ಬಂದಿದ್ದಾರೆ. ಲೌಕಿಕದ ಸುಖಗಳನ್ನು ಗಾಳದಂತೆ ಹಿಡಿವ ಜಾಗತೀಕರಣದ ಹವಣಿಕೆಗೆ ಎಲ್ಲರೂ ಬಲಿ ಬೀಳುವಾಗ ಅದನ್ನೇ ವಿರೋಧಿಸುವುದು ಹೇಗೆ?
ಒಬ್ಬ ಸಾಂಸ್ಕ ತಿಕ ಚಿಂತಕನಾಗಿ ದೇಮ ಆಗಾಗ್ಗೆ ಮುಂದಿಡುವ ಸೂಚಿಗಳನ್ನು ಎತ್ತಿಕೊಂಡು ನಾಡಿನಾದ್ಯಂತ ಪ್ರತಿರೋಧ ಕಟ್ಟುವ ಕಸುವೂ ಇಲ್ಲ. ಸಂಖ್ಯಾಬಲವೂ ಇಲ್ಲದ ದುಸ್ಥಿತಿಯಲ್ಲಿ ನಾವಿದ್ದೇವೆ. ಅಂಬೇಡ್ಕರ್ ಅವರನ್ನು ಆಪೋಶನ ತೆಗೆದುಕೊಂಡು ಗಾಂಧಿಯನ್ನು ಹೂತು ಹಾಕುವ ಅಜೆಂಡಾ ಒಂದರ್ಥದಲ್ಲಿ ಸಾಂಕೇತಿಕ. ಸ್ಪೈನಿನಲ್ಲಿ ಎರಡು ತಲೆಮಾರು ಹೀಗೆ ವಿಸ್ಮೃತಿಯಲ್ಲಿ ಕೂತಿತ್ತು. ಮೊನ್ನೆ ಮೊನ್ನೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನೂ ಇಷ್ಟಿಷ್ಟೇ ಟೊಳ್ಳು ಮಾಡಿ ಹಂಗೇರಿಯಲ್ಲಿ ಸಾಂವಿಧಾನಿಕ ಸರ್ವಾಧಿಕಾರಿಯಾಗಿ ಮೆರೆದಿದ್ದ ಒಬ್ಬನನ್ನು ಅಲ್ಲಿನ ಜನ ಪುಣ್ಯವಶಾತ್ ಕಿತ್ತೆಸೆದರು.
ಆದರೆ ಆತ ಬಳಸಿದ ಒಂದು ನುಡಿಗಟ್ಟು ಉಲ್ಲೇಖನೀಯ iliberal Democracy & – ಉದಾರವಾದಿಯಲ್ಲದ ಪ್ರಜಾಸತ್ತೆ. ಬಹುಸಂಖ್ಯಾತರ ರಾಷ್ಟ್ರೀಯವಾದಿ ಯಜಮಾನಿಕೆ, ಅಲ್ಪ ಸಂಖ್ಯಾತರು, ಚಿಂತಕರ ಬಗ್ಗೆ ಅಸಹನೆ- ಹೀಗೆ ಈ ಪ್ರಜಾಸತ್ತೆಯ ಸೂಚಿಗಳ ಪಟ್ಟಿ ಬೆಳೆಯುತ್ತದೆ.
ದೇಮ ಎದುರಾಗಿರುವುದು ಅಂಥ ಒಂದು ಪ್ರಭುತ್ವಕ್ಕೆ. ಇದರ ಒಂದು ದುರಂತದ ಬಗ್ಗೆ ಅವರು ಇತ್ತೀಚೆಗೆ ನನ್ನನ್ನು ಎಚ್ಚರಿಸಿದರು. ಬ್ರಹ್ಮಸೂತ್ರದ ಒಂದು ಭಾಗದಲ್ಲಿ ಜನ್ಮತಃ ಶೂದ್ರರಿಗೆ ವೇದಾಧ್ಯಯನದ ಹಕ್ಕಿಲ್ಲ ಎಂಬ ಕರ್ಮಠರ ವಾದವನ್ನು ಶಂಕರಾಚಾರ್ಯ ಆತ್ಮವಂಚನೆಯಲ್ಲಿ ಎಂಡೋರ್ಸ್ ಮಾಡಿದ್ದನ್ನು ದೇಮ ತೋರಿಸಿ. ಇಲ್ಲಿಂದ ಅಧಃಪತನ ಶುರುವಾಯಿತು” ಎಂದರು. ಆಮೇಲೆ. “ಶ್ರೇಷ್ಠತೆಯ ಪ್ರತ್ಯೇಕತಾ ಭ್ರಮೆಯಲ್ಲಿ ಬ್ರಾಹ್ಮಣರನ್ನು ನಿಮ್ಮ ಮಠ, ಪುರೋಹಿತರು ಬಂಧಿಸಿದ್ದಾರೆ. ಅವರಿಗೆ ಎಲ್ಲರೊಳ ಗೊಂದಾಗುವ ನಿಜ ಅದ್ವೈತದ ಅರಿವು ನಿಮ್ಮಂಥವರು ಮೂಡಿಸಬೇಕು ಸುರೇಶ್. ಅವರು ವಿಮೋಚನೆಗೊಳ್ಳಬೇಕಾಗಿದೆ” ಎಂದರು.
ದೇಮ ಹೀಗೆ ತೋರುಬೆರಳು ತೋರಿದಲ್ಲಿ ಒಂದು ಹಾದಿಯಿರುತ್ತದೆ. ಒಂದು ಕೈಮರ ಇರುತ್ತದೆ. ಅರಿವಿನ, ವಿವೇಕದ, ನೈತಿಕ ಸ್ಥೈರ್ಯದ ಕೈಮರ ಅದು. ಪಂಪ ಪ್ರಶಸ್ತಿ ದೇಮ ಅವರಿಗೆ ನೀಡಿ ಸರ್ಕಾರ, ನಾಡು ತನ್ನನ್ನು ತಾನೇ ಗೌರವಿಸಿಕೊಂಡಿದೆ. ಆದರೆ ದೇಮ ಈಜುವವನು ನೀರನ್ನು ಹಿಂದೆ ತಳ್ಳಿಮುಂದೆ ಸಾಗುವಂತೆ ಇನ್ನೇನೋ ನಮ್ಮನ್ನು ಬಾಧಿಸುವ ಸಂಸ್ಕ ತಿಯ, ರಾಜಕೀಯದ ಪ್ರಶ್ನೆ ಎದುರಿಗಿಟ್ಟುಕೊಂಡು ಚಡಪಡಿಸುತ್ತಿರುತ್ತಾರೆ. ಅವರು ಹಾಗೇ ಇರಲಿ! ಆರೋಗ್ಯದಿಂದಿರಲಿ
” ದೇಮ ತೋರುಬೆರಳು ತೋರಿದಲ್ಲಿ ಒಂದು ಹಾದಿಯಿರುತ್ತದೆ. ಒಂದು ಕೈಮರ ಇರುತ್ತದೆ. ಅರಿವಿನ, ವಿವೇಕದ, ನೈತಿಕ ಸ್ಥೈರ್ಯದ ಕೈಮರ ಅದು”
ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು
ಓ.ಎಲ್.ನಾಗಭೂಷಣ ಸ್ವಾಮಿ
ದೇವನೂರ ಮಹಾದೇವ ಕನ್ನಡಿಗರ ಮನಸಿನಲ್ಲಿ ಮನೆ ಮಾಡಿರುವವರು. ಒಬ್ಬೊಬ್ಬರೂ ಮಹಾದೇವರ ತಮ್ಮದೇ ಬಿಂಬಗಳನ್ನು ಮೂಡಿಸಿಕೊಂಡಿದ್ದಾರೆ. ಕನ್ನಡದ ಬರಹಗಾರರು ಮತ್ತು ಓದುಗರ ಗ್ರಹಿಕೆಗಳನ್ನು ಮತ್ತೆ ಮೊದಲಿನ ದಾರಿಗೆ ಹೊರಳಲಾಗದಂತೆ ಬದಲಿಸಿದ ಪ್ರೀತಿಯ ದೇವನೂರ ಮಹಾದೇವರಿಗೆ ಕನ್ನಡದ ಮೊದಲ ಮಹಾಕವಿಯ ಹೆಸರಿನ ಮನ್ನಣೆ ದೊರೆತದ್ದು ನಮ್ಮ ಕಾಲಮಾನದವ ರೆಲ್ಲರಿಗೂ ದೊರೆತ ಮನ್ನಣೆ ಅನ್ನುವಷ್ಟು ಖುಷಿಯಾಗಿದೆ. ಈ ಪುಟ್ಟ ಬರವಣಿಗೆ ನನ್ನ ಮನಸಿನಲ್ಲಿ ಹುಟ್ಟಿದ ನೆನಪುಗಳ ಮೆರವಣಿಗೆಯ ನುಡಿಚಿತ್ರ ಮಾತ್ರ.
ಮಹಾದೇವ ಅವರನ್ನು ರಾಮುವಿನಿಂದ ಬೇರೆಯಾಗಿ ನೆನೆಯಲಾರೆ. ರಾಮು, ದೇವನೂರು ಮಹಾದೇವ ಮತ್ತೆ ನಾನು ಸುಮಾರಾಗಿ ಒಂದೇ ಸಮಯದಲ್ಲಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಂಪನನ್ನು, ಬಸವಣ್ಣ, ಕುಮಾರವ್ಯಾಸ ನನ್ನು ಓದಿದವರು. ಪಂಪನೆಂದರೆ ನನಗೆ ಗೌರವ, ರಾಮು ನನಗೆ ಕನ್ನಡಿ, ದೇವ ನೂರ ನನಗೆ ಬೆರಗು, ಪ್ರೀತಿ, ಗೌರವ. ಹೆಮ್ಮೆ. ಅವರ ‘ದ್ಯಾವನೂರು’ ಸಂಕಲನ ಪ್ರಕಟವಾದ ಮೇಲೆ ಮೈಸೂರು ಬಿಟ್ಟವನು ಮತ್ತೆ ಅವರನ್ನು ಹೆಚ್ಚು ನಿಕಟವಾಗಿ ಕಂಡದ್ದು ೨೦೦೫ರ ನಂತರ, ಮೈಸೂರಿಗೆ ಮರಳಿದ ಮೇಲೆಯೇ.
ಈಗ ನೆನೆದರೆ ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು ಮನಸಿಗೆ ಬರುತ್ತಿವೆ. ಬೆಳಗಿನ ಜಾವದ ಹೊತ್ತಿನಲ್ಲಿ, ಸಣ್ಣಗೆ ಸುರಿಯುವ ಇಬ್ಬನಿ ಮಬ್ಬಿನಲ್ಲಿ, ಮೈಸೂರಿನ ದೊಡ್ಡ ಕೆರೆಯ ಏರಿಯ ಮೇಲೆ ಮಿಣುಕು ಲಾಟೀನು ಹಚ್ಚಿಕೊಂಡ ಎತ್ತಿನ ಗಾಡಿಗಳು ಕಡಕೊಳ, ನಂಜನಗೂಡು ದಿಕ್ಕಿನಿಂದ ಸಾಲಾಗಿ ಬರುತಿದ್ದ ಕಾಲ; ಏರಿಯ ಪಕ್ಕದಲ್ಲೇ ಇದ್ದ ನಮ್ಮ ಮನೆಯ ಹಿತ್ತಿಲಿನಲ್ಲಿ ನಿಂತರೆ ಸಿಮೆಂಟು ರಸ್ತೆಯ ಮೇಲೆ ಗಾಡಿಯ ಚಕ್ರದ ಕೀಲಿ ಕಿರುಗುಟ್ಟುವ ಸದ್ದು, ಎತ್ತುಗಳ ಕೊರಳ ಕಿರು ಗಂಟೆಯ ಕಿಣಿಕಿಣಿ ಕೂಡ ಕೇಳಿಸುವಷ್ಟು ಊರು ನಿಶ್ಶಬ್ದವಾಗಿದ್ದ ಕಾಲ. ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಝೂನ ಸಿಂಹಗಳ ಗರ‍್ಜನೆ ನೂರಡಿ ರಸ್ತೆಯವರೆಗೂ ಕೇಳುವಷ್ಟು ನಿಶ್ಶಬ್ದವಿದ್ದ ಕಾಲ.
ಹಾಗೆಯೇ ಅದು “ಅರಿವಿನ ಸ್ಛೋಟ”ದ ಕಾಲವೂ ಹೌದು. ಪ್ರತಿಷ್ಠೆಗೊಂಡಿದ್ದ ನವೋದಯ-ನವ್ಯಗಳ ಘರ್ಷಣೆ; ಮೊದಲ ಬಾರಿಗೆ ಮುದ್ರಣಗೊಂಡು ಓದು ಗರಿಗೆ ದೊರೆಯುವಂತಾದ ಮಲೆಮಾದಪ್ಪ, ಮಂಟೇಸ್ವಾಮಿ ಕಥೆ; ಎಡಪಂಥದ ವಿವಿಧ ಟಿಸಿಲು ಮತ್ತು ಸಮಾಜವಾದಿ ಚಿಂತನೆಗಳ ಹಾಸುಹೊಕ್ಕು; ಮಹಾ ರಾಜರ ನೆನಪು ಹೊತ್ತ ಮೈಸೂರು ರಾಜ್ಯ ಕರ್ನಾಟಕವಾದದ್ದು; ವಿದ್ಯಾರ್ಥಿಗಳ ಸಮೂಹವು ಹೋಟೆಲು ತಿಂಡಿಯ ದರಗಳಿಂದ ಹಿಡಿದು ಶಿಕ್ಷಣ ವ್ಯವಸ್ಥೆಯ ಪ್ರಮುಖರನ್ನು ಪ್ರಶ್ನಿಸುವ ಗತ್ತು, ಧೈರ್ಯ ತೋರುತ್ತಿದ್ದದ್ದು; ಬಾಂಗ್ಲಾ ವಿಮೋಚನೆ; ತುರ್ತುಪರಿಸ್ಥಿತಿ; ಉಳುವವರಿಗೆ ಭೂಮಿಯ ಒಡೆತನ– ೧೯೭೦-೮೦ರ ದಶಕ ನೆನೆದರೆ ಕಡಲ ಕುದಿತದ ಎಣ್ಣೆ ಕೊಪ್ಪರಿಗೆ ಕೂಡ ಹೌದು ಆ ಕಾಲ ಅನಿಸುತ್ತದೆ. ಅರ್ಧ ಶತಮಾನದ ಹಿಂದಿನ ಬದುಕನ್ನು ನೆನೆದರೆ ಆ ಕಾಲದ ಅರಿವಿನ ಸ್ಛೋಟದ ಮೂರು ಮುಖ್ಯದನಿಗಳಾಗಿ ಮಹಾದೇವ, ಸಿದ್ದಲಿಂಗಯ್ಯ ಮತ್ತು ಬಿ.ಕೃಷ್ಣಪ್ಪ ಇವರು ಇಂದಿನ ಯುವ ಮನಸುಗಳಲ್ಲೂ ದನಿಯಾಗಿ ಕೇಳಿಸುತ್ತಿದ್ದಾರೆ. ಇವರು ಮೂವರೂ ಕನ್ನಡದ ಕಳೆದ ಐದು ದಶಕಗಳ ಬದುಕನ್ನು ರೂಪಿಸಿದ ಶಕ್ತಿಗಳ ಸಂಕೇತವಾಗಿ ಕಾಣುತ್ತಾರೆ. ದ್ಯಾವನೂರು ಕಥಾ ಸಂಕಲನ ಮೊದಲ ಬಾರಿ ಪುಸ್ತಕವಾಗಿ ಪ್ರಕಟಗೊಂಡಾಗ ಮುಖಪುಟದಲ್ಲಿ ಮಹಾದೇವ ಅವರ ಚಿತ್ರ, ಅದರಲ್ಲೂ ಅವರ ಕಣ್ಣುಗಳು ಎದ್ದು ಕಾಣುತ್ತಿದ್ದವು. ಒಳಪುಟದಲ್ಲಿ ಖಂಡವಿದೆಕೋ ಮಾಂಸವಿದೆಕೋ ಎಂಬ ಕೊಟೇಶನ್ ಇತ್ತು. ಅವರ ಅಕ್ಷರಗಳನ್ನೇ ಬ್ಲಾಕ್ ಮಾಡಿ ಹಾಕಿದ್ದು ಇರಬಹುದು. ನನ್ನ ಜೊತೆಯಲ್ಲಿದ್ದ ಎಂ.ಎ ಹುಡುಗಿಯೊಬ್ಬಾಕೆ ‘ಈ ಕಣ್ಣು ನೋಡೇ ಹೇಗಿದೆ’ ಅಂದಾಗ, ಇನ್ನೊಬ್ಬ ಗೆಳತಿ, ‘ಎಂಥಾ ಅದ್ಭುತ ಕಣ್ಣು, ಎಷ್ಟೊಂದು ಫೀಲಿಂಗ್ ಇವೆ’ ಅಂತ ಪುಸ್ತಕದ ಚಿತ್ರ ನೇವರಿಸಿದ್ದಳು.
ಮಹಾದೇವ ಅವರ ಕಣ್ಣು, ಇಸ್ತ್ರಿ ಮಾಡದ ಬಟ್ಟೆ ಎರಡೂ ವಿಶೇಷ. ಅಂಥ ಡ್ರೆಸ್ಸು ಮಹಾದೇವ ಅವರಿಗಲ್ಲದೆ ಬೇರೆ ಯಾರಿಗೂ ಹೊಂದದು. ಅವರ ಕಣ್ಣು ಕೆಲವೊಮ್ಮೆ ಕೆಂಪಾಗಿರುತ್ತವೆ. ಆದರೂ ಇರುವುದನ್ನೆಲ್ಲ ಮಾತ್ರವಲ್ಲದೆ, ಇಲ್ಲದಿರುವುದನ್ನು ಕೂಡ ಕಾಣುತ್ತಿವೆ ಅನಿಸುತ್ತದೆ. ಹಾಗೆ ಇಲ್ಲದ್ದನ್ನೂ ಕಾಣಬಲ್ಲ ಕಣ್ಣು ಆದ್ದರಿಂದಲೇ ನಿಜ ಹುಡುಗಿಯೊಬ್ಬಳ ಸಿಂಗಲ್ಲು ಕುಸುಮಬಾಲೆಯ ಚೆಲುವನ್ನು ಹಿಡಿದಿಟ್ಟ ರೂಪಕವಾಗಿದೆ. “ಕಿಟ್ಟಪ್ಪ ಕೊಟ್ಟಿರುವ ರಗ್ಗು ಲಚಮೀನ ಕವುಚಿ ಕೊಂಡಿದೆ, ಕಿಟ್ಟಪ್ಪ ಕಟ್ಟಿಸಿಕೊಟ್ಟಿರುವ ಮನೆ ಇಬ್ಬರನ್ನೂ ಕವಿದುಕೊಂಡಿದೆ” ಅಂತ ಹೇಳುವ ವಾಕ್ಯ “ಮಾರಿಕೊಂಡವರು” ಕಥೆಯ ತಿರುಳು ಅನ್ನುವ ಹಾಗೆ ವಾಕ್ಯ ಕಟ್ಟಬಲ್ಲರು. ಜೊತೆಯಲ್ಲಿರುವವರು ಆಡುವ ಮಾತನ್ನು ಮಾತ್ರವಲ್ಲ, ಅದರ ಹಿಂದಿನ ಉದ್ದೇಶ, ಮುಂದಿನ ಗುರಿ ಯನ್ನೂ ಕಾಣುವ ತೀಕ್ಷ್ಣತೆ ಆ ನೋಟಕ್ಕಿದೆ ಅನಿಸುತ್ತದೆ. ಮಂಟೇಸ್ವಾಮಿಯ ಕತೆಯ ಮೊದಲಲ್ಲಿ ಬರುವ ಜ್ಯೋತಿಗಳು ಜೋತಮ್ಮಗಳಾಗಿ ಇಡೀ ಮನುಕುಲದ ಕತೆ ಹೇಳಿಕೊಳ್ಳುವವ ರಾಗಿ ಕಾಣುತ್ತಾರೆ. ಅವರು ಎರಡನೆಯ ಬಿಎಯಲ್ಲಿರು ವಾಗ ಚಿತ್ರವೊಂದನ್ನು ಬಿಡಿಸಿದ್ದರು, ವಿದ್ಯಾರ್ಥಿಗಳ ಎಕ್ಸಿಬಿಶನ್‌ನಲ್ಲಿತ್ತು, ಅದನ್ನು ರಾಮು, ನಾನು ನೋಡಿದ್ದು ನೆನಪಾಗುತ್ತಿದೆ. ಯಾವ ಕಾರಣಕ್ಕೋ ಚಿತ್ರ ಬರೆಯುವುದು ಬಿಟ್ಟರು, ಭಾಷೆಯಲ್ಲಿಯೇ ಜೀವಂತಚಿತ್ರರೇಖೆಗಳನ್ನು ಮೂಡಿಸಿದರು. ಆ ನುಡಿ ಚಿತ್ರಗಳಲ್ಲಿದನಿ ಕೇಳುತ್ತವೆ, ಮಾತು, ನಿಟ್ಟುಸಿರು, ಮೌನ ಕೇಳುತ್ತವೆ, ಅಮಾಸ, ಗಾರಸಿದ್ದ ಮಾವ, ತೂರಮ್ಮ, ಈರಿ, ಯಾಡ ಅಕ್ಕಮಾದೇವಮ್ಮ ಹೀಗೆ ಅವರು ಸೃಷ್ಟಿಸಿದ ಪಾತ್ರಗಳೆಲ್ಲವೂ ಓದುಗರ ಮನೋಲೋಕದ ಶಾಶ್ವತ ಜೀವಿಗಳಾಗಿ, ಅವರ ಬದುಕಿನ ನಿಜದ ಅನುಭವ ನುಡಿಯ ಮೂಲಕವೇ ನಮ್ಮ ಮೈಗೆ ಮನಸಿಗೆ ಸಿಗುವ ಹಾಗೆ ಮಹಾದೇವ ಬರೆಯುತ್ತಾರೆ.
ಹಾಗೆ ಓದಿದ್ದು ಮನಸ್ಸಿನಲ್ಲಿ ಹೇಗೆ ಉಳಿಯುತ್ತದೆ ಅನ್ನುವುದಕ್ಕೆ ಒಂದು ಜೀವಂತ ಉದಾಹರಣೆ ಇದೆ. ಹಂಪಿಯಿಂದ ಹೊಸಪೇಟೆಗೆ ಹೋಗುವ ಬಸ್ಸಿನಲ್ಲಿ ನಾವು ಕೆಲವು ಜನ ಹೀಗೇ ಮಾತಾಡುತ್ತ ಕುಸುಮಬಾಲೆಯ ಪ್ರಸ್ತಾಪ ಬಂದಿತ್ತು. ಆಗ ಮಧ್ಯವಯಸ್ಸಿನ ಹೆಂಗಸೊಬ್ಬರು ತಟ್ಟನೆ, “ಅಲಲಾ ಅಂತ ಗೆಲುಗಾಡುತ್ತಿದ್ದವಲಾ ತೂರಮ್ಮನ ಜೋಪಡಿ ತೆಂಗಿನಗರಿಗಳಾದಿ…” ಅಂತ ನಾಲ್ಕಾರು ಸಾಲು ಹಾಗೇ ನುಡಿದಿದ್ದರು. ಎದೆಗೆ ಬಿದ್ದ ಅಕ್ಷರಗಳು ಓದುಗರನ್ನು ಹೇಗೆ ಹೇಗೆ ಯಾವಾಗ ಸೋಕುವುದೋ, ಬೆಳಕಾಗುವುದೋ ಹೇಳಲಾಗದು.
ಎತ್ತರದ ಆಳು, ಅನುಭವ ವೃದ್ಧಿಸಿರುವ ಮುಖದ ಗೆರೆ ನಿರಿಗೆ, ಉದ್ದನೆ ಕೈಬೆರಳು, ಸಾಮಾನ್ಯವಾಗಿ ಕೆದರಿದ ಹಾಗೆ ಕಾಣುವ ತಲೆ, ಇಸ್ತ್ರಿ ಮಾಡದ ಬಟ್ಟೆ ತೊಟ್ಟ ಹಿರಿಯ ಜೀವ ಕರ್ನಾಟಕದ ನಮ್ಮ ದೇಶದ ಯಾರಿಗೆ ಕಂಡರೂ ಅಪ್ಪಟ ಭಾರತದ ಮಣ್ಣಿನಲ್ಲಿಮಾಗಿದ ಎಲ್ಲರಂಥ ಜೀವ, ಆದರೆ ಎಲ್ಲರಂತಲ್ಲದೆ ವಿವೇಕ, ಒಳನೋಟ, ಎಲ್ಲರ ಒಳಿತು ಬಯಸುವ ಜೀವ ಅನಿಸುತ್ತದೆ. ಎಲ್ಲರಂತಿದ್ದರೂ ಯೇಟ್ಸ್ ಕವಿ ಹೇಳಿದ ಹಾಗೆ ಬರಹದ ದುಡಿಮೆಯನ್ನು ಮನಃಪೂರ್ವಕ ಒಪ್ಪಿದವರು. “ಒಂದು ಸಾಲು ಬರೆಯುವುದಕ್ಕೆ ಗಂಟೆಗಟ್ಟಲೆ ಸಮಯ ಬೇಕು. ಆದರೂ ಓದುವುದಕ್ಕೆ ಕ್ಷಣ ಸಾಕು. ಎಷ್ಟು ಸಲ ಹೊಲಿಗೆ ಹಾಕಿ, ಬಿಚ್ಚಿ, ಹೊಲಿ ದದ್ದು ಈ ವಾಕ್ಯಗಳು ಅಂತ ತಿಳಿಯದು. ನೆಲದ ಮೇಲೆ ಮಂಡಿಯೂರಿ ಅಡುಗೆ ಮನೆಯ ನೆಲ ಸಾರಿಸುತ್ತಾ ಮೂಳೆ ಸವೆಸಿಕೊಳ್ಳುವುದು ಒಳ್ಳೆಯದು. ನುಡಿಯ ಜೋಡಣೆ ಸೋಮಾರಿಗಳ ಕೆಲಸ ಅನ್ನುವ ಬ್ಯಾಂಕರು, ಮೇಷ್ಟರು, ಪಾದ್ರಿಗಳು, ಲೋಕದ ಬದುಕಿಗೆ ತುತ್ತಾದ ಹುತಾತ್ಮರಿಗೇನು ಗೊತ್ತು? ಕವಿತೆ ಬರೆಯುವುದೆಂದರೆ, ರಸ್ತೆಗೆ ಕಲ್ಲಿಟ್ಟಿಗೆ ಕೂರಿಸುವುದಕ್ಕಿಂತ ಮಿಗಿಲು ಕಷ್ಟ” ಎಂದು ಯೇಟ್ ಕವಿಯ “ಆಡಮ್ಸ್ ಕರ್ಸ್” ಅನ್ನೋ ಪದ್ಯ ಹೇಳುತ್ತದೆ. ರಾಮು ಮಾತಲ್ಲಿ ಹೇಳುವುದಾದರೆ “ಮಾದೇವ ಏನಾದರೂ ಬ್ರಹ್ಮ ಆಗಿದ್ದಿದ್ದರೆ ಒಂದು ಚಿಟ್ಟೆ ಸೃಷ್ಟಿ ಮಾಡಕ್ಕೆ ಸಾವಿರ ವರ್ಷ ತಗೋತಿದ್ದ”.
ಹಾಗೆ ಮಾತು ಹೆಕ್ಕಿ ಹೆಕ್ಕಿ ಜೋಡಿಸಿ ಕವಿತೆಯಂಥ ಕಥೆ ಕಟ್ಟುವುದರಿಂದ ಥೇಟುಪಂಪನ ಥರವೇ ಒಂದೊಂದು ನುಡಿಚಿತ್ರವೂ ನೂರಾರು ಅರ್ಥ ಹೊಳೆಯಿಸು ತ್ತವೆ. ನೂರು ಪುಟವೂ ದಾಟದ ಕುಸುಮಬಾಲೆ ಆದಿಪುರಾಣದಂಥ, ಕಾಮದ, ಸಾವಿನ, ಮರುಹುಟ್ಟಿನ ಕಥೆಯಾಗುತ್ತದೆ, ಕುಟುಂಬ ಕಲಹ ಹೇಳುವ ಪಂಪ ಭಾರತದಂತ ಕಥೆಯೂ ಇಂದಿನ ಸಮಸ್ತ ಭಾರತದ ಸಹಜ ಕಥೆಯೂ ಆಗುತ್ತದೆ. ಒಂದೇ ವಾಕ್ಯದಲ್ಲಿ ನಾಟಕವನ್ನೂ ಕಾವ್ಯವನ್ನೂ ಕಥೆಯ ಮುನ್ನಡೆಯನ್ನೂ ಬರೆಯ ಬಲ್ಲ ಅವರ ಶಕ್ತಿಯನ್ನು ಎಲ್.ಬಸವರಾಜು ಅವರು “ಪಂಪನಂತೆ ದೇಸೀ- ಮಾರ್ಗಗಳನ್ನು ಮಿಶ್ರಮಾಡಿದ, ಜಾನಪದೀಯ ಮತ್ತು ಚಾಲ್ತಿ ಮಾತಿನ ರೀತಿಗಳನ್ನು ಮಿಶ್ರ ಮಾಡಿದ “ಪಂಚಲೋಹಪಾಕ” ಅನ್ನುತ್ತಾರೆ. ರಾಮುವಂತೂ ಮಹಾದೇವನಲ್ಲಿ ಪಂಪನ ಆಧುನಿಕ ರೂಪವನ್ನೇ ಕಾಣುತ್ತಿದ್ದ.“ನನ್ನ ಮಾದೇವನ ಸಂಬಂಧ ಯಾರಿಗೂ ಅರ್ಥ ಆಗಲ್ಲ” ಅನ್ನುತ್ತಿದ್ದ. ರಾಮು ಮನೆ ಎಲ್ಲ ಬಗೆಯ ಜನ ಕೂಡಿ ಬಾಳಿದರೆ ಹೇಗೆ ಇರುತ್ತದೆ ಅನ್ನುವುದರ ಮಾದರಿ ಯಾಗಿತ್ತು. ರಾಮುನಷ್ಟೇ ಮಹಾದೇವ ಕೂಡ ಆ ಮನೆಯ ಚೈತನ್ಯವೇ ಆಗಿದ್ದರು.
ರಾಮು ಆರೋಗ್ಯ ಚೆನ್ನಾಗಿರುವವರೆಗೆ ಮಹಾದೇವ ದಿನಕ್ಕೊಮ್ಮೆಯಾದರೂ ಬರುತ್ತಿದ್ದರು. ಯಾವುದೋ ಲೇಖನ, ಇನ್ಯಾವುದೋ ಪ್ರೂಫು ತಿದ್ದುವುದು, ಇನ್ಯಾ ವುದೋ ಪತ್ರ ಮೇಲ್ ಮಾಡುವುದು… ಹೀಗೆ. ಪದ, ವಿಭಕ್ತಿ, ವಾಕ್ಯ ರಚನೆ, ವಾಕ್ಯದೊಳಗಿನ ಪದಜೋಡಣೆ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡಿ, ಒಂದು ವಾಕ್ಯ ತಕ್ಕಮಟ್ಟಿಗೆ ಓಕೆ ಅಂತಾಗುವುದಕ್ಕೆ ಅರ್ಧಗಂಟೆ ಹಿಡಿಯುತ್ತಿತ್ತು. ಮಹಾದೇವರನ್ನು ಟೀಕಿಸುವ ಸಲುಗೆ ಸ್ವಾತಂತ್ರ್ಯ ಇದ್ದದ್ದು ರಾಮುಗೆ ಮಾತ್ರ. ರಾಮು ಮಾಡಿದ ಮಹಾಭಾರತದ ಕನ್ನಡ ಕತೆಗಳನ್ನು ದೇವನೂರ ತಿದ್ದಿ ಸಂಪಾದಿಸಿ ಈಗ ಅದು ಪುಸ್ತಕವಾಗಿ ಬರಲಿದೆ. ಅವರಿಬ್ಬರೊಡನಾಟದ ಕುರುಹಾಗಿ ಉಳಿಯಲಿದೆ. ಸೌಲಭ್ಯಗಳಿರುವ ಮೇಲು ಜಾತಿಯ ಜನ ಬದುಕನ್ನು ನೋಡದೆಯೇ ಇದ್ದದ್ದಕ್ಕೆ, ನೋಡಿದ್ದೇವೆ ಅಂದುಕೊಂಡಿದ್ದರೂ ಅವರಿಗೆ ಅರ್ಥವೇ ಆಗದಿರುವುದಕ್ಕೆ ಲೇಖಕರು, ಓದುಗರು ಸಂಕೋಚ, ಲಜ್ಜೆಪಟ್ಟು ಅಷ್ಟೊಂದು ಹೊಗಳಿದರೇನೋ. ಬಸವಣ್ಣ, ಕುವೆಂಪು, ದೇವನೂರ ಇಂಥ ಜೀವಗಳ ಬಗ್ಗೆ ಅಭಿಮಾನ ವಿರುವುದು ಬೇರೆ, ಅವರ ಬರಹವನ್ನು ನಮ್ಮದಾಗಿಸಿಕೊಳ್ಳುವುದೇ ಬೇರೆ ಅಂತ ರಾಮು, ನಾನು ಹಲವು ಸಲ ಮಾತಾಡಿಕೊಂಡಿದ್ದೆವು.
ಜಿ.ಎಚ್.ನಾಯಕ್, ಅನಂತ ಮೂರ್ತಿ, ಚಿತ್ತಾಲರು, ಚದುರಂಗರಂಥ ಹಿರಿಯರು, ಬಸವರಾಜು ಥರದ ವಿದ್ವಾಂಸರು ದೇವನೂರರ ಬರಹದಿಂದ ಪಡೆದ ನೋಟವನ್ನು ಮನಸಾರೆ ಹೇಳಿ ಕೃತಜ್ಞತೆ ತೋರಿದ್ದಾರೆ. ಮಹಾದೇವ ಕೆಲಸ ಬಿಟ್ಟಿದ್ದು, ತೋಟ ಮಾಡಿದ್ದು, ದಲಿತ ಸಂಘರ್ಷ ಸಮಿತಿಯ ಹೋರಾಟ ಮೊದಲಾದ ಅವರ ಸಾರ್ವಜನಿಕ ಬದುಕು ವಿವರವಾಗಿ ದಾಖಲಾಗಿದೆ. ವಾಗ್ವಾದಗಳು ನಡೆದಿವೆ. ರಾಜನ ಮಿತ್ರನಲ್ಲ, ಜನರೊಡನೆ ಬದುಕಿ, ಜನರ ಬದುಕನ್ನು ಕಂಡು, ಕನ್ನಡದ ಗುಪ್ತಸತ್ವವನ್ನೆಲ್ಲ ಹೀರಿಕೊಂಡು ಬರೆದ, ಕನ್ನಡದ ಸಹಜ ಜನರೊಳಗೇ ಬದುಕಿರುವ ಪಂಪ ದೇವನೂರ ಮಹಾದೇವ. ಈ ಬರಹದಲ್ಲಿ ಹೆಸರಿಸಿ ರುವ ಎಲ್ಲ ಹಿರಿಯರ ಒಡನಾಟ ದೊರೆತದ್ದು ನನ್ನ ಪಾಲಿನ ಸಂತೋಷ.
” ದೇವನೂರ ಮಹಾದೇವರ ಮಾತನ್ನು ಹೆಕ್ಕಿಹೆಕ್ಕಿ ಜೋಡಿಸಿ ಕವಿತೆಯಂಥ ಕಥೆ ಕಟ್ಟುವುದರಿಂದ ಥೇಟು ಪಂಪನ ಥರವೇ ಅವರ ಒಂದೊಂದು ನುಡಿಚಿತ್ರವೂ ನೂರಾರು ಅರ್ಥ ಹೊಳೆಯಿಸುತ್ತವೆ. ನೂರು ಪುಟವೂ ದಾಟದ ಕುಸುಮಬಾಲೆ ಆದಿಪುರಾಣದಂಥ ಕಾಮದ, ಸಾವಿನ, ಮರುಹುಟ್ಟಿನ ಕಥೆಯಾಗುತ್ತದೆ”





