Mysore
36
few clouds

Social Media

ಸೋಮವಾರ, 20 ಏಪ್ರಿಲ 2026
Light
Dark

ಏರುತ್ತಿರುವ ತಾಪಮಾನ; ತಂಪು ಪಾನೀಯಗಳಿಗೆ ಮೊರೆ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆಯಲ್ಲಿ ೩೫ರಿಂದ ೪೦ ಡಿಗ್ರಿ ಉಷ್ಣಾಂಶ, ಬಿಸಿಗಾಳಿಗೆ ಹೈರಾಣಾದ ಜನರು

ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿದ್ದು, ಜನರು ಉಷ್ಣಾಂಶದ ಏರಿಕೆಯಿಂದ ಹೈರಾಣಾಗಿದ್ದು, ಬಿಸಿಲ ಬೇಗೆಯಿಂದ ಪಾರಾಗಲು ನೆರಳಿನ ಆಸರೆ ಬಯಸುತ್ತಾ, ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗುವ ಬಿಸಿಲಿನ ತಾಪ ಸಂಜೆ ೬ರತನಕವೂ ಕಡಿಮೆಯಾಗುವುದೇ ಇಲ್ಲ. ಪ್ರತಿನಿತ್ಯ ಪಟ್ಟಣಕ್ಕೆ ಬರುವ ಜನತೆ ಮರದ ನೆರಳನ್ನು ಅರಸಿ ವಿರಮಿಸುತ್ತಾರೆ. ರಸ್ತೆಯಲ್ಲಿ ತೆರಳಿದರೆ ಬಿಸಿ ಗಾಳಿಯಿಂದ ತತ್ತರಿಸುವಂತಾಗಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣು, ಜ್ಯೂಸ್‌ಗಳು, ಮಜ್ಜಿಗೆ, ಐಸ್ ಕ್ರೀಂ, ಎಳನೀರು, ಕಬ್ಬಿನ ಹಾಲಿನತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ತಂಪು ಪಾನೀಯಗಳಿಗೆ ಹಾಗೂ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕು ರಾಜ್ಯದಲ್ಲಿ ಅತ್ಯಧಿಕ ಅರಣ್ಯ ಪ್ರದೇಶವನ್ನು ಹೊಂದಿದ್ದರೂ ಬಿಸಿಲಿನ ತಾಪಮಾನ ಮಾತ್ರ ಕಡಿಮೆಯಾಗಿಲ್ಲ. ಸೂರ್ಯನ ಧಗೆ ಜನರ ನೆತ್ತಿ ಸುಡುತ್ತಿದೆ. ಮನೆಯಿಂದ ಮಕ್ಕಳು, ಮಹಿಳೆಯರು, ವಯೋವೃದ್ಧರು ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಧ್ಯಾಹ್ನದ ವೇಳೆಯಂತೂ ಬಿಸಿಲಿನ ಝಳದಿಂದಾಗಿ ಜನರು ಹೊರಗೆ ಓಡಾಡುವುದನ್ನು ಕಡಿಮೆ ಮಾಡಿದ್ದಾರೆ. ಹೊರಗಿನ ಸುತ್ತಾಟಕ್ಕೆ ಜನರು ಬ್ರೇಕ್ ಹಾಕಿದ್ದಾರೆ.

ವಿವಿಧ ಕೆಲಸಗಳ ನಿಮಿತ್ತ ಹೊರಬರುವ ಜನರು ಛತ್ರಿಯ ಮೊರೆ ಹೋಗಿದ್ದಾರೆ. ಗ್ರಾಮೀಣ ಪ್ರದೇಶದ ಜನರು ನೆರಳಿಗೆ ಮರಗಳನ್ನು ಆಶ್ರಯಿಸುತ್ತಿದ್ದಾರೆ. ಹೆಚ್ಚಾದ ಎಳನೀರಿನ ಬೆಲೆ: ನಾಗರಿಕರು ಬಿಸಿಲಿನ ತಾಪದಿಂದ ಬಾಯಾರಿಕೆ ನೀಗಿಸಲು ಎಳನೀರು ಸೇವನೆ ಮಾಡಲು ಮುಂದಾಗುತ್ತಿದ್ದಾರೆ. ಈ ಮೊದಲು ೩೦-೪೦ ರೂ. ಇದ್ದ ಎಳನೀರಿನ ಬೆಲೆ ಈಗ ೭೦ ರೂ.ಗೆ ಏರಿಕೆಯಾಗಿದೆ. ಇನ್ನೂ ಕೆಲವರು ತಂಪು ಪಾನೀಯ ಹಾಗೂ ಕಬ್ಬಿನ ಹಾಲಿಗೆ ಮೊರೆ ಹೋಗುತ್ತಿದ್ದಾರೆ.

ಹೀಗಾಗಿ ಬೇಕರಿ, ಹೋಟೆಲ್‌ಗಳಲ್ಲಿ ತಂಪು ಪಾನೀಯಗಳ ಮಾರಾಟ ಗಣನೀಯವಾಗಿ ಹೆಚ್ಚುತ್ತಿದೆ. ಅಲ್ಲದೆ, ಮಜ್ಜಿಗೆಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಕಲ್ಲಂಗಡಿ ಹಣ್ಣು, ಸೋಡಾ, ನಿಂಬೆ ಹಣ್ಣಿನ ಶರಬತ್ತು, ಹಣ್ಣಿನ ಜ್ಯೂಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

” ತಾಪಮಾನ ಏರಿಕೆಯಿಂದಾಗಿ ಮಧ್ಯಾಹ್ನದ ವೇಳೆ ಯಂತೂ ಮರದ ನೆರಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನ ತಾಪಕ್ಕೆ ತಲೆನೋವು ಬರುವ ಸಾಧ್ಯತೆ ಹೆಚ್ಚಿದೆ.ರಾಸಾಯನಿಕ ಮಿಶ್ರಿತತಂಪು ಪಾನೀಯ ಕುಡಿಯುವು ದರ ಬದಲು ಆರೋ ಗ್ಯದ ದೃಷ್ಟಿಯಿಂದ ಉತ್ತಮವಾಗಿರುವ ಎಳನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ಜ್ಯೂಸ್ ಸೇವನೆ ಒಳ್ಳೆಯದು.”

-ಕೆ.ಎಂ.ಮಹದೇವಸ್ವಾಮಿ, ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕ

” ಬಿಸಿಲು ಹೆಚ್ಚಾಗುತ್ತಿದ್ದು ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಿದರೆ ಕ್ಷಣಾರ್ಧದಲ್ಲೇ ಭೂಮಿ ಒಣಗುತ್ತಿದೆ. ಆದಷ್ಟು ಬೇಗ ಮಳೆಯಾದರೆ ರೈತರಿಗೆ ಬಿತ್ತನೆ ಕೆಲಸ ಆರಂಭಿಸಲು ಸಾಧ್ಯವಾಗುತ್ತದೆ. ಜೊತೆಗೆ ನೀರಾವರಿ ರೈತರಿಗೆ ಅಂತರ್ಜಲ ವೃದ್ಧಿಯಾಗಿ ಅನುಕೂಲವಾಗುತ್ತದೆ. ಬಿಸಿಲಿನ ತಾಪಕ್ಕೆ ಕೂಲಿಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗದಂತಾಗಿದೆ. ಈ ವರ್ಷದ ಬಿಸಿಲು ಹಿಂದಿನ ವರ್ಷಗಳಿಗಿಂತ ಹೆಚ್ಚು ತೀವ್ರವಾಗಿದೆ.”

-ಎಚ್.ಎಂ.ನಂದೀಶ್, ಪ್ರಗತಿಪರ ರೈತ

 

 

Tags:
error: Content is protected !!