- ಮಾರುತಿ ಗೋಪಿಕುಂಟೆ
ಹಲವು ವರ್ಷಗಳ ನಂತರ ಭೇಟಿಯಾಗಲು ಬಂದಿದ್ದೇನೆ. ಅವಳಿಂದ ಯಾವುದನ್ನೂ ನಿರೀಕ್ಷಿಸದೆ ಅಥವಾ ನಿರೀಕ್ಷಿಸಿ ನನಗೆ ಆಗಬೇಕಾದದ್ದು ಏನೂ ಇಲ್ಲ. ಬದುಕಿನ ಅರ್ಧ ಆಯಸ್ಸು ಮುಗಿದಾಗಿದೆ. ಈಗಾಗಲೇ ಬೆಳೆದು ಬಲಿತ ಮರ ನಾನು. ಮರದ ಬಡ್ಡೆಗಳಲ್ಲಿ ಕೆಲವು ಒಣಗಿ ಬರಡಾಗಿದೆ. ಅವಳ ಭೇಟಿ ನನ್ನಲ್ಲೇನೂ ಹೊಸ ಬದುಕನಂತು ಕೊಡುವುದಿಲ್ಲ. ಅದನ್ನು ಬಯಸಿ ಬಂದವನು ನಾನಲ್ಲ. ಇಷ್ಟಕ್ಕೂ ನಾನೇ ಬಯಸಿ ಬಂದಿದ್ದು ಅಲ್ಲ, ಯಾರಿಂದಲೋ ನನ್ನ ಮೊಬೈಲ್ ನಂಬರ್ ಕಲೆ ಹಾಕಿ ನಿನ್ನಲ್ಲಿ ನನ್ನ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಬೇಕು ಎನಿಸಿತು. ಹಾಗಾಗಿ ಒಮ್ಮೆ ಭೇಟಿಯಾಗೋಣ ಎಂಬ ಅವಳ ಕರೆ ನನ್ನನ್ನು ಹೀಗೆ ಬೆಂಗಳೂರಿಗೆ ಬರಮಾಡಿಕೊಂಡಿತು. ಅವಳು ಊರು ಬಿಟ್ಟು ಬದುಕು ಕಟ್ಟಿಕೊಂಡ ಕಥೆ ಕೇಳುವ ಕಾತುರವಷ್ಟೆ. ಅವಳನ್ನು ಭೇಟಿಯಾಗುವುದು ನನ್ನಲ್ಲಿ ರೋಮಾಂಚನವನ್ನುಂಟು ಮಾಡುವ ಆತುರತೆ ಕಾತುರ ನನಗಿತ್ತು ಎಂದು ಖಂಡಿತ ಹೇಳಲಾರೆ. ಅವಳನ್ನು ಮರೆತೇ ಹತ್ತಾರು ವರ್ಷಗಳಾಗಿತ್ತು. ಹತ್ತಾರು ವರ್ಷಗಳ ಹಿಂದಿನ ಕಥೆ ಹೇಳುವುದಾದರೆ ನಾವಿಬ್ಬರೂ ಒಳ್ಳೆಯ ಸ್ನೇಹ ಸಂಬಂಧ ಇರುವ ವ್ಯಕ್ತಿತ್ವಗಳಾಗಿದ್ದವು. ಆಕರ್ಷಣೆ ಅಲ್ಲಲ್ಲಿ ನುಸುಳಿರಬಹುದು, ವಯಸ್ಸಲ್ಲವೇ? ಅದನ್ನು ಹಿಡಿಯುವವರು ಯಾರು? ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುವ ಸಾಮರ್ಥ್ಯ ಇಬ್ಬರಲ್ಲಿಯೂ ಇತ್ತು. ಆದರೆ ನಡೆದದ್ದೇ ಬೇರೆ. ಯಾವ ಶಾಸ್ತ್ರಕ್ಕೂ ಚಿಂತನೆಗೂ ಚೌಕಟ್ಟಿಗೂ ಸಿಗದ ಮುಗಿಲ ಹಕ್ಕಿ ಬದುಕು. ಅದನ್ನು ಬಂದಂತೆ ಸ್ವೀಕರಿಸಬೇಕು ಎಂಬುದಷ್ಟೇ ನಮಗೆ ತಿಳಿದ ಸತ್ಯ.
ಹೌದು ಹೆಸರೇ ಹೇಳಲಿಲ್ಲವಲ್ಲ? ಶ್ರಾವಣಿ ಗತಿಸಿಹೋದ ಕಾಲಘಟ್ಟದ ಗೆಳತಿ. ಅವಳನ್ನೇ ನಾನೀಗ ಭೇಟಿಯಾಗುವುದು. ಮನೆಯಿಂದ ಹೊರಡುವಾಗ ಬೆಳಗಿನ ಜಾವದ ಸಮಯ ಬಸ್ಸಿಡಿದು ಬೆಂಗಳೂರಿಗೆ ಬಂದಿದ್ದೆ. ಹೆಂಡತಿ ಎಲ್ಲಿಗೆ ಎಂದು ಕೇಳಿದ್ದಳಷ್ಟೆ. ಬೆಂಗಳೂರಿಗೆ ಎಂದಿದ್ದೆ. ಯಾವ ವಿಚಾರವನ್ನು ಹೇಳಬೇಕೆಂದು ನನಗೂ ಅನಿಸಲಿಲ್ಲ. ಅವಳೂ ಕೇಳಲಿಲ್ಲ. ಮೆಜೆಸ್ಟಿಕ್‌ಗೆ ಬಂದು ಇಳಿದು ಬೆಳಗಿನ ಚುಮುಚುಮು ಚಳಿಗೆ ಒಂದು ಕಪ್ಪು ಕಾಫಿ ಕುಡಿದು ಮೆಜೆಸ್ಟಿಕ್‌ನ ಪ್ಲಾಟ್‌ಫಾರಂ ಒಂದರಲ್ಲಿ ಕಾಯುತ್ತಾ ಕುಳಿತೆ. ಬೆಂಗಳೂರು ಎಷ್ಟು ಬ್ಯುಸಿ.. ತರಾವರಿ ಬಸ್ಸುಗಳು? ಜನರ ಓಡಾಟ? ಬಸ್ಸಿಗಾಗಿ ಕಾಯುತ್ತಾ ನಿಂತವರೆಷ್ಟು ಜನ… ಕೆಲಸಕ್ಕಾಗಿ ಸರಿಯಾದ ಸಮಯಕ್ಕೆ ಹೋಗಬೇಕೆಂಬ ಧಾವಂತದಲ್ಲಿ ಓಡಿಹೋಗಿ ಬಸ್ಸು ಹಿಡಿಯುವವರು ಅಬ್ಬಬ್ಬಾ… ಬೆಂಗಳೂರು ಬದುಕು ನೀಡುತ್ತದೆ. ಓಡುತ್ತಿದ್ದರಷ್ಟೇ ಬದುಕು. ನಿಂತರೆ ಬದುಕಿಗೆ ತುಕ್ಕು ಹಿಡಿಯುತ್ತದೆ. ಬದುಕಿಗೆ ಇಷ್ಟೊಂದು ವೇಗ ಬೇಕೇ? ಎನಿಸಿತು. ವಾತಾಡುವಷ್ಟು ವ್ಯವಧಾನವೂ ಯಾರಲ್ಲೂ ಇರಲಿಲ್ಲ. ನನಗೆ ಇನ್ನೂ ನೆನಪಿದೆ. ನಾನು ಮೊದಲು ಬೆಂಗಳೂರಿಗೆ ಬರಬೇಕು ಅಲ್ಲಿ ದುಡಿಯುವುದಕ್ಕೆ ಬಹಳಷ್ಟು ಅವಕಾಶ ಇವೆ ಎಂದು ತಿಳಿದು ಬೆಂಗಳೂರಿನಲ್ಲಿ ದುಡಿಯುತ್ತಿದ್ದವರನ್ನು ಕೇಳಿದರೆ, ಅದೊಂದು ಸಮುದ್ರ ಈಜಬೇಕು ಈಜಬೇಕು ಈಜುತ್ತಲೇ ಇರಬೇಕು. ಆಚೆಯ ದಡವನ್ನು ಮುಟ್ಟಲಾಗದು ವಾಪಸ್ ದಡವನ್ನೇ ಸೇರಬೇಕು ಎಂದು ರೂಪಕವಾಗಿ ವಿವರಿಸಿದಾಗ ಬೆಂಗಳೂರಿಗೆ ಹೋಗುವ ಆಸೆಯನ್ನೇ ಈ ಹಿಂದೆ ಬಿಟ್ಟಿದ್ದೆ. ನಂತರದ ದಿನಗಳಲ್ಲಿ ಓದಿ ಒಂದು ಶಾಲೆಯ ಮೇಷ್ಟ್ರು ಆಗಿ ನನಗೂ ಒಂದು ಬದುಕು ಅಂತ ಆದದ್ದು ಸಾಹಿತ್ಯ ಅಭಿರುಚಿಯುಳ್ಳ ನಾನು ಅಲ್ಲೊಂದು ಇಲ್ಲೊಂದು ಕಥೆ ಬರೆಯಲು ಪ್ರಾರಂಭಿಸಿದ್ದು. ನಾನು ಇನ್ನಷ್ಟು ಬರೆಯಬಲ್ಲೆ ಎಂಬ ವಿಶ್ವಾಸವನ್ನು ನನ್ನಲ್ಲಿ ಮೂಡಿಸಿದ್ದು ಬಾಲ್ಯದ ಗೆಳತಿ ಶ್ರಾವಣಿ. ಭೇಟಿ ವಾಡುವ ಮನಸ್ಸು ಬಂದಿದ್ದು ಕಥೆಗೊಂದು ವಸ್ತು ಸಿಗಬಹುದೆಂದು ಬೆಂಗಳೂರಿಗೆ ಬಂದಿದ್ದು. ಇಲ್ಲಿ ಸ್ವಾರ್ಥವಿದೆ ಎಂದುಕೊಳ್ಳಬೇಡಿ. ನಡೆದ ನಡೆಯದ ಜೀವನದ ಅನುಭವಗಳಲ್ಲವೇ ಕಥೆಗಳು. ಅವಳಿಗೂ ಅದು ವೇದ್ಯವೇ. ನಾನು ಅನುಭವಿಸಿದ ನನ್ನ ಮನಸ್ಸಿನ ಪದಗಳನ್ನೆಲ್ಲ ಹೇಳಿಬಿಡಬೇಕು. ನಾನು ಹಗುರಾಗಬೇಕು. ಅದಕ್ಕಾಗಿಯೇ ನಿನ್ನನ್ನು ಭೇಟಿಯಾಗಬೇಕೆಂದು ನಾನೇ ಫೋನ್ ಮಾಡಿದ್ದು ಎಂದು ಅವಳೇ ಹೇಳಿದ್ದಳು. ಬರುವುದು ತಡವಾದದ್ದಕ್ಕೆ ಫೋನ್ ಮಾಡಿಯೇ ಬಿಡೋಣ ಅನ್ನೋವಷ್ಟರಲ್ಲಿ ದೂರದಲ್ಲಿ ಶ್ರಾವಣಿ ಕಾಣಿಸಿದಳು. ವರ್ಷಗಳೇ ಕಳೆದಿದ್ದರೂ ಮರೆಯುವಂತಹ ಮುಖವು ಅವಳದಾಗಿರಲಿಲ್ಲ. ಅವಳಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಅವಳ ನಡಿಗೆಯಲ್ಲಿ ಅದೇ ಕಾನ್ಛಿಡೆನ್ಸ್. ಆತ್ಮವಿಶ್ವಾಸದ ಕಣ್ಣುಗಳು. ಅವಳು ಎಂದಿಗೂ ಬದಲಾಗುವುದಿಲ್ಲ ಎನಿಸಿತು. ಅವಳು ಹತ್ತಿರವಾಗುತ್ತಿದ್ದಂತೆ ಅವಳ ನಗುವೆ ಮುನ್ನುಡಿಯಾಗಿತ್ತು. ನನ್ನಲ್ಲಿಯೂ ಯಾವ ಬದಲಾವಣೆಯೂ ಅವಳಿಗೆ ಕಾಣಿಸಲಿಲ್ಲ. ಯಾಕೆಂದರೆ ಇಬ್ಬರ ವ್ಯಕ್ತಿತ್ವಗಳು ಹಾಗೆ ಇದ್ದವು. ಎಲ್ಲಿ ಕುಳಿತುಕೊಳ್ಳುವುದು ಎಂದು ಯೋಚಿಸಿ ಹತ್ತಿರದ ಕಬ್ಬನ್ ಪಾರ್ಕ್ ಹೋಗುವುದೆಂದು ತೀರ್ಮಾನಿಸಿ ಕಬ್ಬನ್ ಪಾರ್ಕ್‌ಗೆ ಹೋದೆವು. ಕಬ್ಬನ್ ಪಾರ್ಕ್‌ನ ಮೂಲೆಯೊಂದರಲ್ಲಿ ಹಾಕಿದ್ದ ಬೆಂಚ್ ಮೇಲೆ ಕುಳಿತುಕೊಂಡೆವು. ಯಾವ ಕಟ್ಟುಪಾಡಿಗೂ ಒಳಪಡದ ತಿಳಿ ನೀರ ಸ್ವಚ್ಛಂದ ಗೆಳೆತನ ನಮ್ಮದು. ಯಾವ ಔಪಚಾರಿಕ ಮಾತುಕತೆಯೂ ನಡೆಯದೆ ನೇರವಾಗಿ ವಿಷಯಕ್ಕೆ ಬಂದು ಅವಳು ಊರು ಬಿಟ್ಟ ಮೇಲೆ ಅವಳ ಮೇಲೆ ಅನೇಕ ಕಥೆಗಳು ಊರಲ್ಲಿ ಹುಟ್ಟಿಕೊಂಡಿದ್ದವು. ಅವಳು ಇನ್ನೊಂದು ಮದುವೆಯಾಗಿದ್ದಾಳೆ. ಅವನು ಬೇರೆ ಜಾತಿ. ಇವನು ಅವಳಲ್ಲಿ ಇರುವುದನ್ನೆಲ್ಲ ಕಸಿದುಕೊಂಡು ಬಿಟ್ಟು ಹೋಗುತ್ತಾನೆ ಎಂದು ಅಸಹ್ಯವಾಗಿ ವಾತಾಡಿಕೊಂಡಿದ್ದನ್ನು ಕೇಳಿ ಅವಳು ಸರಿಯಾಗಿ ತೀರ್ಮಾನ ತೆಗೆದುಕೊಂಡಿರುತ್ತಾಳೆ ಎಂದು ಸುಮ್ಮನಾಗಿದ್ದೆ. ಅವಳನ್ನು ನೋಡಿದಾಗ ನನ್ನ ಊಹೆ ನಿಜವೆಂದು ಅಂದುಕೊಂಡಿದ್ದೆ. ಆದರೆ ಅವಳು ಹೇಳಿದ ವಿಷಯ ಕೇಳಿ ನನ್ನ ಊಹೆ ತಪ್ಪು ಎನಿಸಿತು. ನಿಜ ನನ್ನ ಬದುಕಿನ ಅರ್ಧ ಸತ್ಯ ಮಾತ್ರ ನಿಮಗೆ ತಿಳಿದಿದೆ. ಪಿಯುಸಿ ಮುಗಿದ ನಂತರ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡಿದರು. ಆಗ ನೀನು ಊರಲ್ಲಿರಲಿಲ್ಲ. ಓದುವುದಕ್ಕಿಂತ ಮಾತಾಡುವುದಕ್ಕೂ ನನಗೆ ಸಾಧ್ಯವೂ ಇರಲಿಲ್ಲ. ಏಕೆಂದರೆ ಮನೆಯ ಕಟ್ಟುಪಾಡುಗಳೇ ಹಾಗಿದ್ದವು, ಮದುವೆಯ ಪ್ರಸ್ತಾಪ ಬಂದಾಗ ಅದನ್ನು ತಿರಸ್ಕರಿಸುವುದು ಹೇಗೆ ಎಂದು ಯೋಚಿಸಿದೆ. ಆದರೆ ಅದನ್ನು ತಿರಸ್ಕರಿಸುವಷ್ಟು ಯಾವ ಅವಕಾಶವೂ ನನಗಿರಲಿಲ್ಲ. ಯಾಕೆಂದರೆ ನನ್ನ ನಿರ್ಧಾರದ ಹಿಂದೆ ನನ್ನ ತಂಗಿ ಹಾಗೂ ತಾಯಿಯ ಬದುಕು ಸೇರಿಕೊಂಡಿತ್ತು.
ಈ ಮದುವೆಗೆ ಒಪ್ಪಿದರೆ ಎಲ್ಲರೂ ಸುಖವಾಗಿ ಇರುತ್ತಾರೆ ಎಂಬ ಕಾರಣಕ್ಕೆ ಸೋದರ ಮಾವನಾದ ಮಂಜೇಶನನ್ನು ಮದುವೆಯಾಗಲು ಒಪ್ಪಿದೆ. ವಯಸ್ಸಿನ ಅಂತರ ಇದ್ದರೂ ಬದುಕಿನ ಅನಿವಾರ್ಯತೆಗೆ ಹೊಂದಿಕೊಳ್ಳಲೇಬೇಕಾಯಿತು. ನಿನಗೂ ತಿಳಿದ ಹಾಗೆ ಹುಟ್ಟಿಸಿದ ಅಪ್ಪ ಯಾರೆಂದು ತಿಳಿಯಲೇ ನನಗೆ ಹತ್ತಾರು ವರ್ಷಗಳು ಬೇಕಾಗಿದ್ದವು. ಆಸರೆ ಇಲ್ಲದ ಮರ ಹೇಗೆ ಬೆಳೆದೀತು. ನಿಟ್ಟುಸಿರು ಬಿಟ್ಟಳು… ನನ್ನ ಕೈಯನ್ನೊಮ್ಮೆ ಬಲವಾಗಿ ಹಿಡಿದಳು. ಸಾಂತ್ವನದ ಅವಶ್ಯಕತೆಯೂ ಇತ್ತು. ನಾನು ಅವಳ ಮುಖವನ್ನು ನೋಡಿದೆ. ಕಣ್ಣುಗಳಲ್ಲಿ ಆತ್ಮವಿಶ್ವಾಸವಿತ್ತು. ಮದುವೆ ಆಯಿತು ವರ್ಷವಾಯಿತು. ಆದರೆ ದಾಂಪತ್ಯದ ಯಾವ ಸುಖವೂ ನನಗೆ ಸಿಗಲಿಲ್ಲ, ಕುಡಿತವೇ ನನ್ನ ಕೆಲಸ ಎಂಬಂತೆ ಕುಡಿದು ಕುಡಿದೆ. ನನ್ನ ಮಾವ ಮಂಜೇಶ ಕೃಶನಾದನು. ಮೂರ್ನಾಲ್ಕು ವರ್ಷಗಳಾದರೂ ಯಾವ ದಾಂಪತ್ಯ ಸುಖ ಕಾಣದ ನಾನು ಯಾವುದೋ ಗಳಿಗೆಯಲ್ಲಿ ಕೂಡಿಕೊಂಡ ನನ್ನಲ್ಲಿ ಬದಲಾವಣೆ ತಂದಿತ್ತು. ಮುಟ್ಟು ನಿಂತು ಬಸಿರಾಗಿದ್ದೆ. ಮಾವ ನನ್ನ ಬಸಿರ ಸುದ್ದಿಯನ್ನು ಕೇಳಿ ಇನ್ನಷ್ಟು ಕುಡಿುಂಲು ಆರಂಭಿಸಿದ. ಏಕೆ ಎಂದು ಎಷ್ಟು ಯೋಚಿಸಿದರೂ ನನಗೆ ತಿಳಿಯಲಿಲ್ಲ. ನಾನು ಕೇಳುವ ಗೋಜಿಗೆ ಹೋಗಲಿಲ್ಲ. ಕುಡಿದು ಕುಡಿದೆ ವರ್ಷ ತುಂಬುವುದರೊಳಗೆ ಸತ್ತು ಹೋದನು. ಊರಲ್ಲಿ ನನ್ನನ್ನ ಇವಳೇ ಸಾಯಿಸಿರಬೇಕು ಅವನನ್ನ ಎಂದುಕೊಂಡರು. ನಾನು ಯಾವುದಕ್ಕೂ ಪ್ರತಿ ಆಡಿರಲಿಲ್ಲ. ಇಷ್ಟೆಲ್ಲ ಆದರೂ ನನ್ನಲ್ಲಿನ ಜೀವನ ಪ್ರೀತಿ ಕಡಿಮೆಾಂಗಿರಲಿಲ್ಲ. ಬದುಕನ್ನು ಪ್ರೀತಿಸುವುದಕ್ಕೆ ನನ್ನ ಬಸಿರು ಕಾರಣವಾಗಿತ್ತು. ನಾನು ಊರು ಬಿಡುವುದು ಅವಶ್ಯವಾಗಿತ್ತು. ನಿಂದಕರ ನಿಂದನೆಗಳೇ ನನ್ನನ್ನು ಬದುಕುವಂತೆ ಮಾಡುತ್ತಿದ್ದವು. ಆದ್ದರಿಂದ ಬದುಕು ಕಟ್ಟಿಕೊಳ್ಳಲು ಊರು ಬಿಟ್ಟೆ ಎಂದು ನಿಟ್ಟುಸಿರಾದಳು. ಎದೆಯ ನೋವು ಜಾಸ್ತಿಯಾಗಿ ಬಸವಳಿದ ದೇಹಕ್ಕೆ ನೀರು ಬೇಕೆಂದೆನಿಸಿರಬೇಕು. ತನ್ನ ಬ್ಯಾಗಿನಿಂದ ಬಾಟಲ್ ತೆಗೆದು ನೀರನ್ನು ಕುಡಿದಳು. ಸಾವರಿಸಿಕೊಳ್ಳಲಿ ಎಂದು ಸುಮ್ಮನಾದೆ.
ಮತ್ತೆ ಪ್ರಾರಂಭಿಸಿದಳು ತನ್ನ ಗಂಡನ ಆಸ್ತಿಯಲ್ಲಿ ಒಂದು ಅರ್ಧ ಮಾರಿ ಬಿಡಬೇಕೆಂದು ತೀರ್ಮಾನಿಸಿ ಅದನ್ನು ಮಾರಿದ್ದಾಯಿತು. ಹಣವನ್ನು ತಂದು ಒಂದಷ್ಟು ನನ್ನ ಹೆಸರಿನಲ್ಲಿ ಡೆಪಾಸಿಟ್ ಮಾಡಿದೆ. ಜೀವನಕ್ಕೆ ಆಧಾರವಾಗಿರಲಿ ಎಂದು ಬ್ಯೂಟಿ ಪಾರ್ಲರ್ ಟ್ರೈನಿಂಗ್ ಮಾಡಿದೆ. ಒಂದು ಅಂಗಡಿಯನ್ನು ತೆರೆದು ಜೀವನ ನಡೆಸುತ್ತಿದ್ದೆ. ಅದಕ್ಕೂ ನಿಂದನೆಯನ್ನೇ ಕೇಳಬೇಕಾಯಿತು. ಕೊನೆಗೆ ನನಗೂ ಬೇಸರವಾಗಿ ಆ ಕೆಲಸವನ್ನು ಬಿಟ್ಟೆ. ಇಷ್ಟೆಲ್ಲ ಕಷ್ಟಗಳ ಮಧ್ಯೆ ಮಗಳು ಹುಟ್ಟಿದಳು. ಅವಳಿಗೆ ಆಸರೆ ಎಂದೆ ಹೆಸರಿಟ್ಟಿದ್ದೆ. ಭವಿಷ್ಯದಲ್ಲಿ ನನ್ನ ಬದುಕಿಗೆ ಆಸರೆಯಾದಾಳೆಂಬ ಸಣ್ಣ ಆಸೆ ಇತ್ತು. ಮಗಳನ್ನು ಚೆನ್ನಾಗಿ ಓದಿಸಬೇಕೆಂದು ನನ್ನ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಪ್ರತಿಷ್ಠಿತ ಶಾಲೆಗೆ ಸೇರಿಸಿದೆ. ಮಗಳು ಚೆನ್ನಾಗಿಯೇ ಓದುತ್ತಿದ್ದಳು. ನನ್ನ ತಾಯಿ ಇದ್ದೊಬ್ಬ ತಂಗಿ ಬೇರೆ ಮನೆ ಮಾಡಿ ವಾಸವಾಗಿದ್ದರು. ಅವಳಿಗೊಂದು ಸರ್ಕಾರಿ ಕಚೇರಿಯಲ್ಲಿ ಕೆಲಸವೂ ಸಿಕ್ಕಿ ಅವರ ಬದುಕು ಚೆನ್ನಾಗಿಯೇ ನಡೆಯುತ್ತಿತ್ತು. ನನ್ನ ಬದುಕು ಮಾತ್ರ ಬೆಳಕಿಲ್ಲದ ಕತ್ತಲೆ. ಒಮ್ಮೊಮ್ಮೆ ಯೋಚಿಸುತ್ತಿದ್ದೆ, ದೇವರು ನನ್ನಂಥವರಿಗೆ ಮಾತ್ರ ಕಷ್ಟ ಕೊಡುವುದು. ದೇವರಿಗೂ ನಾನೇ ಸಿಕ್ಕಿದ್ದೇನೆ. ಕಷ್ಟ ಸಹಿಸುವವರಿಗಷ್ಟೇ ಕಷ್ಟಗಳನ್ನು ಕೊಡುತ್ತಾನೆ ಎಂದು ನನ್ನ ತಾತ ಯಾವಾಗಲೂ ಹೇಳುತ್ತಿದ್ದರು. ಆದರೆ ತಡೆಯುವವರಾದರು ಎಷ್ಟು ತಡೆದಾರು? ಸ್ವಲ್ಪವೂ ಕರುಣೆ ಇಲ್ಲವೇ? ಅಥವಾ ದೇವರೇ ಇಲ್ಲವಾ ಎನಿಸಿದ್ದುಂಟು ಎಂದು ನನ್ನ ಕೈಗಳನ್ನು ಸುಮ್ಮನೆ ಹಿಡಿದುಕೊಂಡಳು. ಅದು ಎದೆಯಾಳದ ನೋವಿಗೆ ಪ್ರತಿಕ್ರಿಯೆ ಆಗಿತ್ತು. ಒಂದು ಕ್ಷಣ ನಿಟ್ಟುಸಿರುಬಿಟ್ಟು ಕುಳಿತುಕೊಂಡಳು.
ನಾನು ಚೆನ್ನಾಗಿ ಆಗಿತ್ತಲ್ಲ ನಿನ್ನ ಬದುಕು ಕೊರಗುವುದಕ್ಕೆ ಯಾವ ಕಾರಣವೂ ಇಲ್ಲ ಜಮೀನಿನ ಹಣವನ್ನು ಪೋಲು ಮಾಡಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಮುಗಿಸುತ್ತಿದ್ದೇನೆ. ಬದುಕು, ಚಂದವಾಗಿತ್ತಲ್ಲ? ಕೊರಗುವುದಕ್ಕೆ ಯಾವ ಕಾರಣವೂ ಇಲ್ಲವಲ್ಲ ಎಂದು ಸುಮ್ಮನೆ ಕುಳಿತಿದ್ದಳು. ನಾವು ಕುಳಿತಿದ್ದ ಬೆಂಚಿನ ಹಿಂದೆ ಒಂದು ಮರವಿತ್ತು. ಮರದಲ್ಲಿ ಗುಬ್ಬಚ್ಚಿ ಗೂಡು ಇತ್ತು. ತಾಯಿ ಗುಬ್ಬಿ ಜನರು ಅಲ್ಲಲ್ಲಿ ತಿಂದು ಬಿಸಾಡಿದ ಪ್ಯಾಕೆಟ್‌ನಲ್ಲಿ ಉಳಿದಿದ್ದ ಆಹಾರವನ್ನು ಒಂದೊಂದೇ ಕಾಳನ್ನು ಜತನವಾಗಿ ತೆಗೆದುಕೊಂಡು ತನ್ನ ಮರಿಗಳಿಗೆ ನೀಡುತ್ತಿದ್ದನ್ನು ಗಮನಿಸಿದಳು. ಹೀಗೇ? ಹೀಗೇ…. ನಾನು ಮಗಳನ್ನು ಕಾಪಾಡಿದೆ. ಸಾಕಿದೆ. ಅವಳೇನೋ ಚೆನ್ನಾಗಿ ಓದಿದಳು. ಇಂಜಿನಿಯರಿಂಗ್ ಓದಲಿ ಎಂದು ಉಳಿದ ಅರ್ಧ ಜಮೀನನ್ನು ಮಾರಿದೆ. ನನ್ನ ಬದುಕೆ ಅವಳಲ್ಲವೇ. ಇನ್ಯಾರಿಗೆ ಖರ್ಚು ಮಾಡಲಿ ಎಂದವಳು ಒಮ್ಮೆ ನನ್ನ ಮುಖವನ್ನು ನೋಡಿದಳು. ಮುಂದೇನು ಎಂದು ನಾನು ಅವಳನ್ನೇ ನೋಡುತ್ತಿದ್ದೆ. ಶ್ರಾವಣಿಯ ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದನ್ನು ನೋಡಿದೆ. ಅವಳೇ ಮಾತಾಡಲಿ ಎಂದು ಸುಮ್ಮನಾದೆ. ಒಂದು ಕ್ಷಣ ನಿಶ್ಯಬ್ದವಾದಳು. ಏನು ಹೇಳಬಹುದು ಎಂಬ ಕುತೂಹಲ ನನಗಿತ್ತು. ನಾನೀಗ ಒಬ್ಬಂಟಿ, ನಾನು ಒಬ್ಬಳೇ ಇದ್ದೇನೆ ಎಂದಳು.
ಆಸರೆಯಾಗಬೇಕಾದ ಮಗಳು ಸಹ ಇವಳಿಗೆ ಆಸರೆಯಾಗಲಿಲ್ಲ. ಶ್ರಾವಣಿಯೇ ಮುಂದುವರಿಸಿದಳು. ಮಗಳು ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ಆದರೆ ಇಂಜಿನಿಯರಿಂಗ್ ಪದವಿ ಎರಡನೇ ವರ್ಷದಲ್ಲಿ ಮಗಳ ವರ್ತನೆ ನನ್ನಲ್ಲಿ ಅನುಮಾನವನ್ನು ಮೂಡಿಸಿತು. ಮೊದಲಿನಂತೆ ನನಗೆ ಮುಖ ಕೊಟ್ಟು ಮಾತಾಡಿಸುತ್ತಿರಲಿಲ್ಲ. ಪ್ರತಿಯೊಂದಕ್ಕೂ ಬೇಸರ ಪಟ್ಟುಕೊಳ್ಳುತ್ತಿದ್ದಳು. ಒಂದು ದಿನ ಬಂದವಳೇ ಅಮ್ಮ ನಾನು ನನ್ನದೇ ವಿಭಾಗದ ಪ್ರಕಾಶನನ್ನು ಪ್ರೀತಿಸುತ್ತಿದ್ದೇನೆ. ನಾನು ಅವನು ಮದುವೆಯಾಗಬೇಕೆಂದಿದ್ದೇವೆ. ನಿನ್ನ ಬಗ್ಗೆ ಪ್ರಕಾಶ್‌ಗೆ ಒಳ್ಳೆಯ ಅಭಿಪ್ರಾುಂವಿಲ್ಲ. ಆದ್ದರಿಂದ ನೀನು ಮದುವೆಗೆ ಬರುವುದು ಬೇಡ. ನನ್ನ ಬದುಕು ಚೆನ್ನಾಗಿ ಇರಬೇಕೆಂದರೆ ನೀನು ಬರಬೇಡ ಎಂದಳು. ಆಕಾಶವೇ ಕಳಚಿಬಿದ್ದಂತಾಯಿತು. ನನ್ನ ಬದುಕಿಗೆ ಆಸರೆಯಾಗುತ್ತಾಳೆ ಎಂದು ಆಸರೆ ಎಂದು ಅವಳಿಗೆ ಹೆಸರಿಟ್ಟಿದ್ದೆ. ಹೆಸರಿಗೂ ಬದುಕಿಗೂ ನಡವಳಿಕೆಗೂ ಸಂಬಂಧವೇ ಇಲ್ಲ ಅನಿಸಿತು ಎಂದಾಗ ಅವಳ ಕಣ್ಣಿನಿಂದ ನೀರು ಗಳಗಳನೆ ಹರಿದು ಹೋಗುತ್ತಿತ್ತು. ನಾನು ತಡೆಯುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅವಳ ದುಃಖವೆಲ್ಲಾ ಬಸಿದು ಹೋಗಲಿ ಎಂದು ಸುಮ್ಮನಾದೆನು. ಅತ್ತಳು ಅತ್ತಳು. ಅಳುತ್ತಲೇ ಇದ್ದಳು.. ಅತ್ತತ್ತು ನಿರಾಳವಾದಳು. ಮಹೇಶ ಎಂದಾಗಲೇ ನಾನು ಅವಳತ್ತ ತಿರುಗಿ ಈಗ ಏನು ವಾಡಬೇಕೆಂದುಕೊಂಡಿದ್ದೀಯಾ? ಬದುಕು ನಡೆಯಬೇಕಲ್ಲ… ಎಂದು ಕೇಳಿದಾಗ ಜೀವನಕ್ಕಾಗಿ ಒಂದು ಹೋಟೆಲ್ ನಡೆಸುತ್ತಿದ್ದೇನೆ. ಇಬ್ಬರಿಗೆ ಕೆಲಸ ಕೊಟ್ಟಿದ್ದೇನೆ. ಚೆನ್ನಾಗಿ ನಡೆಯುತ್ತಿದೆ ಎಂದ ಅವಳ ಆತ್ಮವಿಶ್ವಾಸದ ನುಡಿ ನನ್ನಲ್ಲಿ ಅವಳ ಬದುಕಿನ ಬಗೆಗಿನ ಪ್ರೀತಿ, ಬದುಕನ್ನು ಬದುಕಿದ ರೀತಿ ನನ್ನೊಳಗೊಂದು ಬೆರಗು ಮೂಡಿಸಿತ್ತು. ಬರುತ್ತೇನೆ ಮತ್ತೆಂದಾದರೂ ಭೇಟಿಯಾಗೋಣ? ಎಂದು ಅವಳು ಎದ್ದು ನಡೆದುಹೋಗುವಾಗ ಅವಳ ನಡಿಗೆಯಲ್ಲಿನ ಆತ್ಮವಿಶ್ವಾಸ ಮತ್ತೆ ಮತ್ತೆ ನನ್ನನ್ನು ಅವಳನ್ನು ಮೆಚ್ಚುವಂತೆ ವಾಡಿತು. ಅವಳು ಬದುಕನ್ನು ಬದುಕಬೇಕು ಅಷ್ಟೇ. ಅದಕ್ಕೆ ಯಾವ ಆಸರೆಯೂ ಬೇಕಿಲ್ಲ. ನಾವು ನಡೆಯುತ್ತಿರಬೇಕು. ಈ ಜೀವಕ್ಕೆ ಬದುಕೇ ಒಂದು ಆಸರೆ ಎಂದ ಅವಳ ವಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ನಾನು ಮೂಕವಿಸ್ಮಿತನಾಗಿ ನಿಂತೆ. ಸಂಜೆಯ ಸೂರ್ಯ ಇನ್ನೊಂದು ದಿಕ್ಕಿಗೆ ಹೊರಳುತ್ತಿದ್ದ. ಬದುಕೆಂದರೆ ಇಷ್ಟೆ ಅಲ್ಲವೆ ಅನಿಸಿತು.