- ಶಿವಕುಮಾರ ಮಾವಲಿ
ಇಂಡಿಯಾ ದೇಶದಲ್ಲಿ ಓದುಗರಿಗಿಂತ ಬರಹಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಆಂಗ್ಲ ಲೇಖಕ ರಸ್ಕಿನ್ ಬಾಂಡ್ ಹೇಳಿದಾಗ ನನಗೇನೂ ಗೊಂದಲವಾಗಿರಲಿಲ್ಲ. ಹೇಳಿಕೇಳಿ ಇದು ಬಾಹುಳ್ಯದ ಕಾಲ. ಯಾವುದನ್ನು ಕೊಳ್ಳಬೇಕು ಎಂಬುದಕ್ಕೆ ಗ್ರಾಹಕನಿಗೆ ಅವನದೇ ಒಂದು ಲೆಕ್ಕಾಚಾರವಿರುತ್ತದೆ. ಪುಸ್ತಕ ಕೊಳ್ಳುವವರನ್ನು ಓದುಗ ಎನ್ನದೆ ಗ್ರಾಹಕ ಎಂದರೆ ಹೇಗೆ ಸ್ವಾಮಿ? ಲೇಖಕರೇ ಸ್ವತಃ ಬೀದಿಯಲ್ಲಿ ನಿಂತು ತಮ್ಮ ಪುಸ್ತಕಗಳನ್ನು ಮಾರುವ “ಬಾ ಗುರು ಬುಕ್ ತಗೋ” ಅಭಿಯಾನದಲ್ಲಿ ನಾನು ಒಮ್ಮೆ ಭಾಗಿಯಾಗಿದ್ದೆ. ಹಾಗೆ ನೋಡಿದರೆ ನನಗೆ ಇದು ಮೊದಲು ವಿಪರೀತ ನಾಚಿಕೆಯ ಕೆಲಸ ಅನ್ನಿಸಿತು. ಅದ್ಹೇಗೆ ನಮ್ಮ ಪುಸ್ತಕದ ಬಗ್ಗೆ ನಾವೇ ಅಡ್ವರ್ಟೈಸ್ ಮಾಡಿಕೊಳ್ಳೋದು ಎಂದು. ಆದರೆ ಹೊಸದೊಂದು ಪ್ರಯೋಗದ ಭಾಗವಾಗುವ ಅವಕಾಶ ಇದ್ದ ಕಾರಣಕ್ಕೆ ಅಲ್ಲಿಗೆ ಹೋದೆ.
ಬನಶಂಕರಿಯ ಎಸ್‌ಎಲ್‌ವಿ ಹೋಟೆಲ್‌ನ ಎದುರು ಎರಡು ಸ್ಕೂಟಿಗಳ ಮಿರರ್‌ಗಳಿಗೆ ಬ್ಯಾನರ್ ಕಟ್ಟಿ ನಾವು ಬರಲಿರುವ ಗಿರಾಕಿಗಳಿಗಾಗಿ ಕಾದು ನಿಂತೆವು. ಸುಮಾರು ಮೊದಲ ಒಂದೂ ಕಾಲು ತಾಸಿನಲ್ಲಿ, ಎರಡು ಬಾರಿ ನಾವೇ ಹೋಗಿ ಟಿ ಕುಡಿದದ್ದಾಯಿತೇ ಹೊರತು, ಒಂದು ಪುಸ್ತಕವೂ ವಾರಾಟವಾಗಿರಲಿಲ್ಲ. ಹೋಟೆಲ್‌ಗೆ ಬಂದವರಿಗೆಲ್ಲಾ ನಾವು ಮತ್ತು ಪುಸ್ತಕಗಳು ನೇರವಾಗಿ ಕಾಣುತ್ತಿದ್ದರೂ ಯಾರೊಬ್ಬರೂ ಆ ಕಡೆ ಸುಳಿಯಲಿಲ್ಲ. ಆಮೇಲೆ ಶಶಿಯವರ ಸಲಹೆಯ ಮೇರೆಗೆ ಅಲ್ಲೇ ಸ್ವಲ್ಪ ಬೇರೆ ಜಾಗದಲ್ಲಿ ಫುಟ್‌ಪಾತ್ ಮೇಲೆ ಇಟ್ಟು ನಿಂತಾಗ ನಾಲ್ಕೈದು ಜನ ಪುಸ್ತಕ ಕೊಂಡರು. ಅದರಲ್ಲಿ ಕೆಲವರು ನಾವೇ ಅವುಗಳ ಲೇಖಕರು ಎಂದಾಗ ಎಕ್ಸೈಟ್ ಆದರೆ, ಮತ್ತೆ ಕೆಲವರು ಪುಸ್ತಕ ಬರೆದು ಹೀಗೆ ಬೀದಿಗೆ ಬಂದಿದ್ದೀವಾ ನಾವು ಎನ್ನುವ ಹಾಗೆಯೂ ನೋಡಿದರು. ನಾನು ಸ್ಪಿರಿಚ್ಯುಯಲ್ ಪುಸ್ತಕಗಳನ್ನು ಮಾತ್ರ ಓದುವುದು ಎಂದು ಹೇಳಿಕೊಂಡು ಬಂದ ಓದುಗರು ನನ್ನ ದೇವರು ಅರೆಸ್ಟ್ ಆದ ಕೊಂಡು ಹೋದಾಗ ನಾನು ಆಶ್ಚರ್ಯಕ್ಕೊಳಗಾದೆ. ನಂತರ ಸುಚಿತ್ರ ಫಿಲ್ಮ್ ಸೊಸೈಟಿುಂ ಬಳಿ ಹೋಗಿ ಅಲ್ಲೊಂದು ಕಾರ್ಯಕ್ರಮ ನಡೆಯುತ್ತಿದ್ದ ಜಾಗದಲ್ಲಿ ಪುಸ್ತಕ ಹರಡಿಕೊಂಡೆವು. ಅಲ್ಲಿ ಬಹಳ ಬೇಗ ನಾಲ್ಕೂ ಜನರ ಪುಸ್ತಕಗಳು ಮಾರಾಟವಾದವು.
ನನ್ನ ಮೂರು ಟೈಟಲ್‌ಗಳಲ್ಲಿ ಒಟ್ಟು 23 ಪುಸ್ತಕಗಳು ಮಾರಾಟವಾದವು. ಜಯರಾಮ್ ನನಗೆ ನೀವೇ ಇವತ್ತಿನ ಮ್ಯಾನ್ ಆಫ್ ದ ಮ್ಯಾಚ್ ಎಂದು ಕಿಚಾಯಿಸಿದರು. ಆದರೆ ನಾನು ಗಮನಿಸಿದಂತೆ ಅಲ್ಲಿ ಕೊಳ್ಳುವವರ ಆಯ್ಕೆ ಬಹಳ ಕುತೂಹಲಭರಿತವಾಗಿರುತ್ತದೆ. ನೀವು ದೊಡ್ಡ ಲೇಖಕರೋ ಅಥವಾ ಸಣ್ಣ ಲೇಖಕರೋ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಒಂಥರಾ ಹಾವು ಏಣಿ ಆಟದಂತೆ ಅವರ ಆಯ್ಕೆ ಬದಲಾದಂತೆ ನಿಮ್ಮ ಅಹಂ, ಆಸೆ ಎಲ್ಲಾ ಏರುಪೇರಾಗುತ್ತದೆ. ಅಯ್ಯೋ ನಿಮ್ ಪುಸ್ತಕ ಹೋಗೋದೇ ಇಲ್ಲ ಕಣ್ರಿ ಎಂದು ಗೋಳಾಡುವ ಪ್ರಕಾಶಕರ ನೋವು ಲೇಖಕರಾದ ನಮಗೂ ಇಲ್ಲಿ ಅನುಭವಕ್ಕೆ ಬರುವುದರ ಜೊತೆಗೆ, ಹಾಗೆ ಹೇಳುವ ಪ್ರಕಾಶಕರು ಪುಸ್ತಕಕ್ಕೆ ಎಷ್ಟು ವಿಸಿಬಲಿಟಿ ಒದಗಿಸಿದ್ದಾರೆ ಎಂಬುದನ್ನೂ ಅವಲೋಕಿಸಬಹುದು. ಇದು ಕೆಲವು ಬರಹಗಾರರಿಗೆ ಇಷ್ಟವಿಲ್ಲದಿರಬಹುದು. ಲೇಖಕನಾದವನಿಗೆ ಒಂಚೂರು ನಾಚಿಕೆ, ವಿನಯ ಇದ್ದರೆ ಒಳ್ಳೆಯದೇ. ಆದರೆ ತನ್ನ ಬರಹವನ್ನು ಹೆಚ್ಚಿನ ಓದುಗರಿಗೆ, ಒಂದಷ್ಟು ಹೊಸ ಓದುಗರಿಗೆ ತಲುಪಿಸಲು ಆತ ಇಂಥ ಯಾವುದೇ ಸರ್ಕಸ್ ಮಾಡಿದರೂ ತಪ್ಪಲ್ಲ ಎಂಬುದು ನನ್ನ ಅಭಿಮತ. ತಿಳಿಸಾರು ವಾಡುವುದಕ್ಕೂ ಯೂಟ್ಯೂಬ್ ವಿಡಿಯೋಗಳಿರುವ ಡೈನಾಮಿಕ್ ಕಾಲದಲ್ಲಿ, ಪುಸ್ತಕಗಳಿಗೆ ಹೆಚ್ಚು ವಿಸಿಬಲಿಟಿ ಒದಗಿಸಲು ಇಂಥದ್ದೇನೇ ಮಾಡಿದರೂ ಒಳ್ಳೆಯದೇ. ಕಾಲಗರ್ಭದಲ್ಲಿ ಓದಿಸಿಕೊಳ್ಳಬೇಕಾದದ್ದು ಉಳಿಯುತ್ತದೆ, ಅರ್ಹವಲ್ಲದ್ದು ಕಣ್ಮರೆಯಾಗುತ್ತದೆ. ಲೇಖಕ ನಾನೇ ಎಂದು ಪೋಸು ಕೊಟ್ಟು ಪುಸ್ತಕ ಮಾರಿರುತ್ತೇವೆ ಎಂದಮೇಲೆ, ಓದುಗ ಅದರ ಬಗ್ಗೆ ಯಾವ ಅಭಿಪ್ರಾಯ ಕೊಟ್ಟರೂ ಸ್ವೀಕರಿಸಲು ಸಿದ್ಧರಿರಬೇಕು. ಡಿ ಮಾರ್ಟ್‌ನಂಥ ಸ್ಥಳಗಳಲ್ಲಿ ಚಡ್ಡಿಯಿಂದ ಚಪ್ಪಲಿವರೆಗೆ ವಸ್ತುಗಳು ಲಭ್ಯವಿರುವಾಗ ಅಲ್ಲಿ ಪುಸ್ತಕಗಳು ಬಂದರೂ ಸ್ವಾಗತಿಸೋಣ. ಪುಸ್ತಕಗಳು ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳಲ್ಲದ ಕಾರಣ ಅವುಗಳನ್ನು ಮತ್ತೆ ಮತ್ತೆ ಜನರ ಮುಂದಿಟ್ಟರೆ, ಅವೇ ಅವರನ್ನು ಪ್ರಚೋದಿಸುವಂತಾಗಬಹುದು. ಹಾಗೆ ರುಚಿ ಹತ್ತಿಸಿಕೊಂಡವರಲ್ಲಿ ಕೆಲವರಾದರೂ ಓದಿನ ಗೀಳಿಗೆ ಬೀಳಬಹುದು. ಆಮೇಲೆ ಅವರೇ ಪುಸ್ತಕ ಹುಡುಕಿಕೊಂಡು ಹೋಗುತ್ತಾರೆ. ಸೋಷಿಯಲ್ ಮೀಡಿಯಾಗಳ ಹಾವಳಿಯಿರುವ ಈ ಕಾಲದಲ್ಲಿ, ಲೇಖಕರೇನು ಅಜ್ಞಾತರಾಗಿ ಉಳಿದಿಲ್ಲ. ಐದು ಸಾವಿರ ಜನ ಫ್ರೆಂಡ್ ಲಿಸ್ಟಿನಲ್ಲಿದ್ದರೂ ಹೊಸ ಪುಸ್ತಕ ಬಂದಿರುವುದನ್ನು ತಿಳಿಸಿದಾಗ ಕನಿಷ್ಠ ಐನೂರು ಪ್ರತಿ ಮಾರಾಟವಾಗುವುದಿಲ್ಲ. ಹಾಗಾಗಿ ಹಮ್ಮು ಬಿಮ್ಮು ಬಿಟ್ಟು ಹೊಸ ಓದುಗರೆಡೆಗೆ ಹೊಸ-ಹಳೆಯ, ವಿಚಾರ ಪ್ರಧಾನವಾದ ಮತ್ತು ಫಿಕ್ಷನ್ ಬರೆಯುವ, ಭಾವನಾತ್ಮಕವಾಗಿ ಬರೆಯುವ ಎಲ್ಲಾ ಲೇಖಕರೂ ಇದರ ಜೊತೆಗೂಡಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕುಗಳಲ್ಲಿ ಮಾಡುತ್ತಾ ಹೋದರೆ, ಈ ಅಭಿಯಾನ ಏನು ಫಲಿತಾಂಶ ಕೊಟ್ಟೀತು ಎಂದು ತಿಳಿದೀತು. ಏಕಾಂತದಲ್ಲಿ ಕೂತು ಬರೆಯಯುವ ಲೇಖಕರು ಲೋಕಾಂತದಲ್ಲಿ ಬೆರೆಯಲು ಇದೊಂದು ಅವಕಾಶ.