Mysore
36
few clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಆಂದೋಲನ ಹಾಡುಪಾಡು | ಸ್ಟೀಲು ಪ್ಲೇಟುಗಳ ಸಾಲ ಕೊಡುವ ಬ್ಯಾಂಕು

ಚಂದ್ರಶೇಖರ್ ಮೂರ್ತಿ ಕೆ.ಎಸ್.

ಮೈಸೂರಿನಲ್ಲಿ ಅನೇಕ ಬ್ಯಾಂಕ್‌ಗಳಿವೆ. ಅವು ಹಣಕಾಸು ವ್ಯವಹಾರ ಮಾಡುವ ಬ್ಯಾಂಕ್. ಆದರೆ ಮೈಸೂರಿನ ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆಯ ಅಕ್ಕಮಹಾದೇವಿ ಪ್ರತಿಮೆ ಎದುರು ಇರುವ ಪ್ಲೇಟ್ ಬ್ಯಾಂಕ್ ಇದೆ. ಈ ಪ್ಲೇಟ್ (ಬಟ್ಟಲು)ಬ್ಯಾಂಕ್ ಬಗ್ಗೆ ನಿಮಗೆಷ್ಟು ಗೊತ್ತು? ಅರೇ ಇದೇನಪ್ಪಾ! ಪ್ಲೇಟ್ ಅಥವಾ ಬಟ್ಟಲು ಬ್ಯಾಂಕಾ? ಇದೇನಿದು, ಇದ್ಯಾವ ಬ್ಯಾಂಕು, ಇದರಲ್ಲಿ ಏನು ಕೊಡುತ್ತಿದ್ದಾರೆ ಎಂಬ ಪ್ರಶ್ನೆಗಳ ಸುರಿಮಳೆ ನಿಮ್ಮ ತಲೆಯಲ್ಲಿ ಎದ್ದಿರಬಹುದು.

ಈ ಪ್ಲೇಟ್ ಬ್ಯಾಂಕ್‌ನಲ್ಲಿ ಶುಭ ಸಮಾರಂಭಗಳಿಗೆ ಯಾವುದೇ ಬಾಡಿಗೆ ಶುಲ್ಕ ಇಲ್ಲದೆ ಉಚಿತವಾಗಿ ತಟ್ಟೆ, ಲೋಟ, ಚಮಚ, ಕಠೋರಿಯನ್ನು ಕೊಡಲಾಗುತ್ತಿದೆ. ಈ ಒಂದು ಪ್ಲೇಟ್ ಬ್ಯಾಂಕ್ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಎಲ್ಲ ಕಡೆ ಯಾವುದೇ ಜಯಂತಿ ಇರಲಿ, ಹಬ್ಬ – ಹರಿದಿನ, ಸಮಾರಂಭಗಳಿರಲಿ ಸಾಮಾನ್ಯವಾಗಿ ಅಲ್ಲಿ ಅನ್ನ ಸಂತರ್ಪಣೆ ಕಾರ್ಯ ಕ್ರಮ ಇದ್ದೇ ಇರುತ್ತದೆ. ಈ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಬಹುತೇಕವಾಗಿ ಪ್ಲಾಸ್ಟಿಕ್ ತಟ್ಟೆ ಮತ್ತು ಪ್ಲಾಸ್ಟಿಕ್ ಲೋಟವನ್ನು ಬಳಸಲಾಗುತ್ತದೆ.

ತಿಂದುಂಡು ಬಳಸಿದ ಈ ಪ್ಲಾಸ್ಟಿಕ್ ಪ್ಲೇಟ್ ಮತ್ತು ಲೋಟಗಳು ಅದೇ ಕಾರ್ಯಕ್ರಮದ ಮೂಲೆಯೊಂದರಲ್ಲಿ ಕಸದ ರಾಶಿಯಾಗಿ ಬೀಳುವ ಅನೇಕ ಸನ್ನಿವೇಶಗಳನ್ನು ಕಾಣುತ್ತೇವೆ. ಇದು ಪರಿಸರಕ್ಕೆ ಹಾನಿಕಾರಕ. ಹೀಗೆ ಒಮ್ಮೆ ಬಳಸಿ ಬಿಸಾಡುವ ಪರಿಸರ ಹಾನಿಕಾರಕವಾಗಿರುವ ಈ ಪ್ಲಾಸ್ಟಿಕ್ ಪದಾರ್ಥಗಳಿಗೆ ಮುಕ್ತಿ ನೀಡಿ ಮೈಸೂರು ನಗರವನ್ನು ಸದಾ ಪರಿಸರ ಸ್ನೇಹಿ ವಾತಾವರಣವನ್ನಾಗಿ ನಿರ್ಮಾಣ ಮಾಡಲು ಈ ಒಂದು ಪ್ಲೇಟ್ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದೆ.

ನೀವು ಯಾವುದೇ ಕಾರ್ಯಕ್ರಮಗಳಿಗೆ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಸುವ ಬದಲು ಈ ಪ್ಲೇಟ್ ಬ್ಯಾಂಕ್ ನಲ್ಲಿ ಉಚಿತವಾಗಿ ನೀಡುವ ಸ್ಟೀಲ್ ತಟ್ಟೆ, ಲೋಟ ಗಳನ್ನು ಬಳಸಿಕೊಳ್ಳಬಹುದು. ಈ ಪ್ಲೇಟ್ ಬ್ಯಾಂಕ್ ನಲ್ಲಿ ನೀವು ತಟ್ಟೆ ಲೋಟ ಪರಿಕರಗಳನ್ನು ಪಡೆಯ ಬೇಕಾದರೆ ಒಂದಿಷ್ಟು ಸರಳ ನಿಯಮಗಳಿವೆ. ಮೊದಲನೆಯದಾಗಿ ನೀವು ಪ್ಲೇಟ್ ಬ್ಯಾಂಕ್‌ನಲ್ಲಿ ತಟ್ಟೆ ಲೋಟ ಪಡೆಯಬೇಕಾದರೆ ವಾರದ ಮುಂಚೆಯೇ ಮನವಿ ಕೊಟ್ಟು, ನೋಂದಾಯಿಸಿಕೊಳ್ಳಬೇಕು. ಎಷ್ಟು ತಟ್ಟೆ, ಲೋಟಗಳು ಬೇಕಾದರೂ ಪಡೆಯಬಹುದು. ಸಾವಿರ ತಟ್ಟೆ ಲೋಟ ಬೇಕಾದರು ಕೂಡ ಕೊಡಲಾಗುತ್ತದೆ. ಇದಕ್ಕೆ ಸುರಕ್ಷಿತ ದೃಷ್ಟಿಯಿಂದ ಠೇವಣಿ ಮೊತ್ತವನ್ನು ಪಡೆಯಲಾಗುತ್ತದೆ. ವಸ್ತುಗಳನ್ನು ಹಿಂದಿರುಗಿಸಿದ ನಂತರ ಆ ಮೊತ್ತವನ್ನ ವಾಪಸ್ ನೀಡಲಾಗುತ್ತದೆ.

ಪ್ಲೇಟ್ ಬ್ಯಾಂಕ್ ನಲ್ಲಿ ತಟ್ಟೆ, ಲೋಟ, ಚಮಚ, ಕಠೋರಿ ಇತ್ಯಾದಿಗಳನ್ನು ನಿಶುಲ್ಕವಾಗಿ ನೀಡಲಾಗುತ್ತದೆ. ವಸ್ತುಗಳನ್ನು ನೀಡುವ ವೇಳೆ ನೀಡಲಾಗುವ ವಸ್ತುಗಳನ್ನು ತೂಕ ಮಾಡಿ ನಂತರ ಪಡೆಯುವ ವೇಳೆ ಕೂಡ ವಸ್ತುಗಳನ್ನು ತೂಕ ಮಾಡಲಾಗುತ್ತದೆ. ವ್ಯತ್ಯಾಸ ಕಂಡುಬಂದಲ್ಲಿ ಅದರ ವೆಚ್ಚವನ್ನು ಭರಿಸಬೇಕಾಗುತ್ತದೆ. ಒಂದು ವೇಳೆ ಪಾತ್ರೆಗಳನ್ನ ಸ್ವಚ್ಛವಾಗಿ ಹಿಂದಿರುಗಿಸದೇ ಹೋದಲ್ಲಿ ಒಂದು ವಸ್ತು ಅಥವಾ ಒಂದು ಪಾತ್ರೆಗೆ ೧ ರೂ. ಅಥವಾ ೫೦ ಪೈಸೆಯಂತೆ ಠೇವಣಿ ಇರಿಸಿದ ಮೊತ್ತದಲ್ಲಿ ಕಡಿತ ಗೊಳಿಸಲಾಗುತ್ತದೆ. ಪಡೆದ ಎಲ್ಲ ವಸ್ತುಗಳ ವಿವರ ಗಳನ್ನು ಅರ್ಜಿಯಲ್ಲಿ ನಮೂದು ಮಾಡಲಾಗಿರುತ್ತದೆ. ವಸ್ತುಗಳನ್ನು ಪಡೆಯಲು ಸಹಾಯಕರನ್ನು ನೀವೇ ಕರೆದುಕೊಂಡು ಬರಬೇಕು ಮತ್ತು ತೆಗೆದು ಕೊಂಡು ಹೋದ ವಸ್ತುಗಳು ಸ್ಕ್ರಾಚ್ ಆಗದೇ ಇರುವ ಹಾಗೇ ನೋಡಿಕೊಳ್ಳಬೇಕು. ವಸ್ತುಗಳನ್ನು ಪಡೆಯಲು ಮತ್ತು ಹಿಂದಿರುಗಿಸಲು, ಸೋಮವಾರ ದಿಂದ ಶನಿವಾರದವರೆಗೆ ಸಂಜೆ ೪ರಿಂದ ೬ ಗಂಟೆ ಯವರೆಗೆ ಸಮಯ ನಿಗದಿ ಮಾಡಲಾಗಿರುತ್ತದೆ. ಪ್ರತಿ ಭಾನುವಾರ ರಜೆ ಇರುತ್ತದೆ. ಹೀಗೆ ಒಂದಷ್ಟು ನಿಯಮಗಳಿವೆ ಹೆಚ್ಚಿನ ವಿವರಗಳಿಗೆ ೯೪೪೮೩೧ ೫೭೭೩, ೯೭೪೨೦೨೦೨೦೧ ಸಂಪರ್ಕಿಸಬಹುದು.

ಈ ಪ್ಲೇಟ್ ಬ್ಯಾಂಕ್ ಪರಿಕಲ್ಪನೆಯನ್ನು ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಲಯನ್ಸ್ ಕ್ಲಬ್ ಆಫ್ ಮೈಸೂರು ಮಯೂರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅದಮ್ಯ ಚೇತನ ಸಂಸ್ಥೆ ಮತ್ತು ಲಯನ್ಸ್ ಪ್ಲೇಟ್ ಬ್ಯಾಂಕ್ ಆರಂಭ ಮಾಡಿದೆ.

ಈ ಯೋಜನೆಗೆ ಪ್ರೇರಣೆ ಆಗಿದ್ದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ತೇಜಸ್ವಿನಿ ಅನಂತ್‌ಕುಮಾರ್ ಅವರು ಎಂದು ಹೇಳುತ್ತಾರೆ ಎಸ್. ಮೂರ್ತಿ ಅವರು. ಎಸ್. ಮೂರ್ತಿ ಅವರು ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಪ್ಲೇಟ್ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಜೊತೆಗೆ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರು ಕೂಡ ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ತಡೆಗಟ್ಟಬೇಕು, ಮರು ಬಳಕೆ ಮಾಡುವ ವಸ್ತುಗಳನ್ನು ಬಳಸಬೇಕು, ಪರಿಸರಸ್ನೇಹಿ ವಾತಾವರಣ ನಮ್ಮ ಸುತ್ತಮುತ್ತ ಇರಬೇಕು ಎಂಬ ಸದುದ್ದೇಶದಿಂದ ಈ ಪ್ಲೇಟ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಯಿತು. ಇಲ್ಲಿ ಉತ್ತಮ ಗುಣಮಟ್ಟದ ಸ್ಟೀಲ್ ತಟ್ಟೆ, ಲೋಟ, ಟೀ ಕಾಫಿ ಲೋಟಗಳನ್ನು ಇಟ್ಟಿದ್ದು, ಸರಿ ಸುಮಾರು ಒಂದೂವರೆ ಸಾವಿರ ಟೀ ಲೋಟ ಇದ್ದು, ಸಾರ್ವಜನಿಕರು ಶುಭ ಸಮಾರಂಭಗಳಿಗೆ ಉಪಯೋಗಿಸಿಕೊಳ್ಳಬಹುದು.

ಕಳೆದ ತಿಂಗಳು ತಿಂಗಳುಗಟ್ಟಲೇ ನಡೆದ ಕಪ್ಪಡಿ ಜಾತ್ರೆಯಲ್ಲಿ ಎರಡು ಸಾವಿರ ಐನೂರು ತಟ್ಟೆ ಲೋಟಗಳನ್ನು ಉಚಿತವಾಗಿ ದಾಸೋಹ ಕಾರ್ಯಕ್ರಮಕ್ಕೆ ನೀಡಿದ್ದೆವು. ಇದರಿಂದ ಜಾತ್ರೆಯಲ್ಲಿ ಪ್ಲಾಸ್ಟಿಕ್ ಕಸ ತಡೆಗಟ್ಟಲು ಅನುಕೂಲವಾಯಿತು, ಕಸಮುಕ್ತ ಮೈಸೂರು, ಪರಿಸರ ಸ್ನೇಹಿ ಮೈಸೂರು ನಿರ್ಮಾಣ ಮಾಡಲು ಮೈಸೂರು ಮಹಾನಗರ ಪಾಲಿಕೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಹೇಳುತ್ತಾರೆ ಪ್ಲೇಟ್ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಮೂರ್ತಿ.

ಇದೇ ಪ್ಲೇಟ್ ಬ್ಯಾಂಕ್ ಮಳಿಗೆಯಲ್ಲಿ ಅಕ್ಷಯ ಆಹಾರ ಫೌಂಡೇಶನ್ ಅವರು ಪ್ರತಿ ನಿತ್ಯ ಮಧ್ಯಾಹ್ನ ‘ಅನ್ನ ಹಸಿದವರ ಪಾಲಿನ ಚಿನ್ನ’ ಎಂಬ ಪರಿಕಲ್ಪನೆಯಡಿಯಲ್ಲಿ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಅನ್ನ ಸಂತರ್ಪಣೆಯಿಂದ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರು ಸೇರಿದಂತೆ ಸ್ಥಳೀಯ ಕೆಲಸಗಾರರಿಗೆ ಒಂದ್ಹೊತ್ತಿನ ಹೊಟ್ಟೆ ತುಂಬಿದಂತಾಗುತ್ತಿದೆ.

ಕೆಲವೊಮ್ಮೆ ಮದುವೆ ಮಂಟಪದಲ್ಲಿ ಹೆಚ್ಚುವರಿಯಾಗಿ ಉಳಿದ ಆಹಾರವನ್ನು ಕೂಡ ಈ ಪ್ಲೇಟ್ ಬ್ಯಾಂಕ್ ಅಗತ್ಯ ಇರುವವರಿಗೆ ನೀಡುವಲ್ಲಿ ನೆರವಾಗುತ್ತಿದೆ. ಆದರೆ ಮದುವೆ ಮನೆಯವರು ರಾತ್ರಿ ಸಂದರ್ಭದಲ್ಲಿ ಉಳಿದ ಆಹಾರವನ್ನು ಕೊಟ್ಟಾಗ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಎಸ್ ಮೂರ್ತಿ.
chandira2095@gmail.com

Tags:
error: Content is protected !!