‘ನಿಂಗೂ ಊರಿಗೆ ಬರುವ ಯೋಚನೆಯಿದ್ಯಾ?’ ಅಂತ ಇಸ್ರೇಲ್‌ನಲ್ಲಿದ್ದ ಆಕೆಯನ್ನು ಕಳೆದ ವಾರ ನಾನು ಕೇಳಿದಾಗ, ಅವಳು ತಾನು ಬಂಕರ್‌ನಿಂದ ಹೊರ ಬರ್ತಾ ಇದ್ದೇನಷ್ಟೇ ಎಂದು ಮೆಸೇಜ್ ಮಾಡಿದ್ದಳು.
ಪ್ರಸ್ತುತ ಇಸ್ರೇಲ್‌ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಆಕೆ ನನ್ನ ಆತ್ಮೀಯಳಾದ ಪೂರ್ವ- ವಿದ್ಯಾರ್ಥಿನಿ ರೊಲಿಟಾ. ಆಗಾಗ್ಗೆ ಅವಳು ಅಲ್ಲಿಯ ಅತ್ಯುತ್ತಮ ತಂತ್ರಜ್ಞಾನಾಧಾರಿತ ಸುರಕ್ಷಿತ, ಸಮರ ಸಿದ್ಧತಾ ವಿಧಾನಗಳ ಬಗ್ಗೆ ವರದಿ ನೀಡುತ್ತಿದ್ದಳು. ಪಿ.ಯು.ಸಿ ಓದುತ್ತಿದ್ದ ದಿನಗಳಿಂದಲೂ ಇತರರಿಗೆ ಸಣ್ಣ ಪುಟ್ಟ ಸಹಾಯ ಮಾಡುವುದು, ಚಿಕಿತ್ಸೆಯ ನೆರವಿಗೆ ಧಾವಿಸುವುದು ಅವಳ ದಿನಚರಿಯ ಭಾಗವೇನೋ ಎಂಬಂತೆ ಇರುತ್ತಿದ್ದಳು.
ಜೀವನದಲ್ಲಿ ಮುಂದೆ ಏನಾಗ ಬೇಕೆಂಬ ಗುರಿಯ ಮಾತು ಬಂದಾಗೆಲ್ಲ ಹೊರದೇಶಕ್ಕೆ ಹೋಗಿ ನರ್ಸ್ ಆಗಬೇಕು ಅಂತ ಹೇಳುತ್ತಿದ್ದಳು.
ನಾಲ್ಕೈದು ವರ್ಷಗಳಿಂದ ಇಸ್ರೇಲ್‌ನಲ್ಲಿ ಪಾರ್ಕಿನ್‌ಸನ್ ಕಾಯಿಲೆಯಿರುವ ಹಿರಿಯರೊಬ್ಬರ ಆರೈಕೆ ಮಾಡಿಕೊಂಡಿರುವ ಆಕೆಗೆ ಅಲ್ಲಿನ ಸ್ಥಳೀಯರು ಯುದ್ಧದ ಹಿಂಸೆ, ವಿನಾಶಕಾರಿ ಮಿಲಿಟರಿ ಕಾರ್ಯಾಚರಣೆ ಗಳನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದೇ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ರೀತಿ ವಿಶೇಷವೆನಿಸುತ್ತದೆ. ಹಾಗಂತ ಅದೆಷ್ಟೋ ಮಂದಿಗೆ ಗಾಯಗಳಾಗಿದ್ದು, ಪ್ರಾಣಹಾನಿ ಸಂಭವಿಸಿದ್ದಿದೆ. ಸಂಕಟದ ಸಮಯ ಒಂದೆಡೆ; ಬಹುಸಂಖ್ಯಾತ ಯಹೂದಿಯರು ತೀರಾ ಎದೆಗುಂದದೇ, ಮೂಲೆ ಸೇರದೇ ಎರಗುತ್ತಿರುವ ಶತ್ರುವನ್ನೆದುರಿಸಲು ಒಳಗೊಳಗೆ ಒಗ್ಗೂಡುತ್ತಿರುವ ರೀತಿ ಅಚ್ಚರಿ ಅವಳಿಗೆ. ದೇಶಗಳ ನಡುವಿನ ಸಂಘರ್ಷದ ಪರಿಸ್ಥಿತಿ ತಿಳಿಯಾದಾಗಲೆಲ್ಲ ವಿಶಾಲ ಡೈನಿಂಗ್ ಟೇಬಲ್ ಮೇಲೆ ಹರಡಿದ ಮೃಷ್ಟಾನ್ನ ಭೋಜನ, ಅಲಂಕರಿತ ಪಾತ್ರೆಗಳಲ್ಲಿ ತಿಂಡಿ ತಿನಿಸುಗಳ ಫೋಟೊ ಹಾಗೂ ಅಲ್ಲಿಯ ಮನೆ ಮಾಲೀಕರ ಕುಟುಂಬದವರೊಂದಿಗೆ ಸವಿಯುತ್ತಾ ಅದೆಷ್ಟೋ ಫೋಟೋಗಳನ್ನು ಸ್ಟೇಟಸ್‌ನಲ್ಲಿ ಹಾಕುತ್ತಿದ್ದ ರೊಲಿಟಾಳ ಹತ್ರ ಅಲ್ಲಿಯ ಜೀವನ ಹೇಗಿದೆ ಎಂದು ಕೇಳಿದರೆ ‘ಮಸ್ತ್ ಖುಷಿಯಲ್ಲಿದ್ದೆ ನಾನ್, ಲಾಯ್ಕ್ ಆತ್ತ್… ಎಲ್ಲ ತುಂಬ ಆಸಿ ಮಾಡ್ತ್ರ’ ಅಂತ ನೆಮ್ಮದಿಯಿಂದ ಹೇಳುತ್ತಿದ್ದಳು. ವಿದೇಶಿ ನೆಲ ಇಷ್ಟವಾದರೂ ಯುದ್ಧಪೀಡಿತ ಕಾಯಕ ಕ್ಷೇತ್ರದಲ್ಲಿ ಸವಾಲು, ಆತಂಕಗಳಿಗೇನೂ ಕಡಿಮೆಯಿಲ್ಲ. ಅಲ್ಲಿಯ ಸರ್ಕಾರ ಜನರಿಗೆ ಸಕಾಲದಲ್ಲಿ ನಿಖರವಾಗಿ ನೀಡುವ ರಕ್ಷಣಾ ತಂತ್ರದ ಮುನ್ಸೂಚನೆಗೆ ಮಾರುಹೋಗಿ ಹೊಗಳುತ್ತಿದ್ದಳು. ಪ್ರತಿ ಸಲ ಶತ್ರುದಾಳಿಯ ಅಪಾಯದ ಮುಂಜಾಗರೂಕತೆಯ ರೆಡ್ ಅಲರ್ಟ್ ಘೋಷಣೆ ಮತ್ತು ಹೋಮ್ ಕಮಾಂಡ್‌ನ ಎಚ್ಚರಿಕೆಯ ಘಂಟೆ ಮೊಳಗಿದ ಕೂಡಲೇ ಕ್ಷಿಪಣಿ ಅಪ್ಪಳಿಸಬಹುದಾದ ಸಾಧ್ಯತೆಯನ್ನು ಆಯಾ ಲೊಕೇಶನ್‌ಗಳಲ್ಲಿ ಒಂದು ಆಪ್ ಮೂಲಕ ವ್ಯಾಪಕವಾಗಿ ಹೊರಡಿಸಿದ ದೊಡ್ಡ ಸೈರನ್ ಕೇಳುತ್ತದೆ. ಆಗ ಅಲ್ಲಲ್ಲಿ ನಿರ್ಮಿಸಿರುವ ಲೋಹದ ಭದ್ರ ಸುರಕ್ಷಿತ ಬಂಕರ್‌ಗಳತ್ತ ಧಾವಿಸಿ ಆಶ್ರಯ ಪಡೆದರಾಯಿತು ಎಂಬ ಸಹಜ ಸ್ಥೈರ್ಯದಿಂದಲೇ ಜನ ರಸ್ತೆಗಿಳಿಯುತ್ತಾರೆ.
ಹೊಸದಾಗಿ ಕಟ್ಟುವ ಮನೆಗೆಲ್ಲ ಬಂಕರ್ ಕಡ್ಡಾಯಗೊಳಿಸಿಯೇ ಪರವಾನಗಿ ನೀಡುವಷ್ಟು ಯುದ್ಧಸನ್ನದ್ಧವಾಗಿದೆ, ಇಸ್ರೇಲ್. ಸ್ವತಃ ಇಸ್ರೇಲ್‌ನಲ್ಲಿ ಬಂಕರ್‌ಗಳನ್ನು ಸಿಡಿಸುವ ಮಹಾಬಾಂಬ್‌ಗಳಿದ್ದರೂ ವೈರಿ ರಾಷ್ಟ್ರದಲ್ಲಿ ಇನ್ನೂ ಅಂಥದ್ದು ಉತ್ಪಾದನೆಯಾಗಿಲ್ಲವೆಂಬ ವಿಶ್ವಾಸ. ಮುಂಚೆ ಗಾಝಾ ದಾಳಿಯ ಸಮಯದಲ್ಲಿ ಸಿಡಿಯುತ್ತಿದ್ದ ಕಡಿಮೆ ತೀವ್ರತೆಯ ಕ್ಷಿಪಣಿ, ಬಾಂಬ್‌ಗಳನ್ನು ಸುಲಭ ಡಿಫೆನ್ಸ್( ರಕ್ಷಣಾ ತಂತ್ರ) ಮೂಲಕ ಸದೆಬಡಿಯುತ್ತಿದ್ದ ಇಸ್ರೇಲಿ ಪಡೆಗಳಿಗೆನವಾವೇಶದಿಂದ ಅಬ್ಬರಿಸುತ್ತಿ ರುವ ಈಗಿನ ಇರಾನ್ ದೇಶದ ಸ್ಛೋಟಕಗಳಿಂದ ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿರುವುದು ನಿಜ!
ಅಲ್ಲಿ ತಲುಪಿದ ಆರಂಭದಿಂದಲೇ ಯಹೂದಿ ಕುಟುಂಬದ ಸದಸ್ಯಳಂತೇ ಇರುತ್ತಿದ್ದ ರೊಲಿಟಾ ಫೋಟೋ ಕ್ಲಿಕ್ಕಿಸುವುದು ಮತ್ತು ರೀಲ್ಸ್‌ಗಳನ್ನು ಮಾಡುವುದರಲ್ಲಿ ನಿಷ್ಣಾತೆ. ಈಗೀಗ ಅಲ್ಲಿಯ ತರುಣ ಪ್ರಾಯದವರು ಅವೇಳೆಯಲ್ಲಿ ಮಾಡುವ ರೀಲ್ಸ್‌ಗಳಲ್ಲಿ ದಿಢೀರನೇ ಸೈರನ್ ಮೊಳಗಿ ದಾಗಿನ ಫಜೀತಿ, ಹೋಮ್ ಕಮಾಂಡ್ ಜಾಗೃತಿಯ ಕರೆಘಂಟೆಯಿಂದ ಕಂಗಾಲಾಗುವ ಜನರ ಬಗ್ಗೆ ಟ್ರೋಲ್‌ಗಳೇ ಜಾಸ್ತಿ ಎಂದು ಆಪತ್ತಿನಲ್ಲೂ ಗಮ್ಮತ್ತನ್ನು ಅರಸುವ ಇಸ್ರೇಲಿಗರ ರೀಲ್ಸ್ ಕಳುಹಿಸುತ್ತಾಳೆ.
ಇಸ್ರೇಲ್ ದೇಶಕ್ಕೆ ದುಡಿಮೆಗೆ ಹೋದ ಬಹಳಷ್ಟು ಮಂದಿ ಸರಿಸುಮಾರು ಇಂಥ ಸಾಮಾಜಿಕ ನಂಟನ್ನು ಬೆಳೆಸಿಕೊಂಡು ಹೆಚ್ಚಿನೆಡೆ ತೃಪ್ತಿಯಿಂದಿರಲು ಸಾಧ್ಯವಾಗಿದೆ. ಹಾಗೆಯೇ, ಅಲ್ಲಿ ಹಿಂಸಾತ್ಮಕ ವಿಷಮ ವಾತಾವರಣವನ್ನು ಸಹಿಸಲಾಗದೇ ಸ್ವದೇಶಕ್ಕೆ ಮರಳಲು ಸಜ್ಜಾದ ದೊಡ್ಡ ದಂಡೇ ಇದೆ. ಇರಾನ್ ದಾಳಿಯ ಸಂಭಾವ್ಯ ಗುರಿಗಳಾದ ರಾಜಧಾನಿ ಟೆಲ್‌ಅವೀವ್ ಮತ್ತು ಅತ್ಯಾಧುನಿಕ ಪ್ರಸಿದ್ಧ ಪ್ರವಾಸಿ ತಾಣ ಹಾಯ್ಛಾದಿಂದಲೂ ಸುರಕ್ಷಿತ ಅಂತರದಲ್ಲಿರುವ ಆಕೆಯ ಅಂತರಾಳದ ಮಾತು, ‘ನನಗೆ ಅವರು ಅತಿ ಅಗತ್ಯವಿರುವಾಗ ಕೈತುಂಬಾ ಸಂಬಳದ ಕೆಲಸ ನೀಡಿ ಸಲಹಿದ್ದಾರೆ. ಈಗ ಅವರ ಕಷ್ಟಕಾಲದಲ್ಲಿ ನಾನು ಅವರನ್ನು ಬಿಟ್ಟು ಸ್ವದೇಶಕ್ಕೆ ಮರಳಲಾರೆ. ಏನಾದ್ರೂ ಆಗಲಿ’ ಎಂದು. ಅಲ್ಲಿ ಶುಶ್ರೂಷಕ ವೃತ್ತಿಯಲ್ಲಿರುವ ಹೆಚ್ಚಿನವರು ಇದೇ ಅಚಲ ನಿಷ್ಠೆ ಹೊಂದಿರುತ್ತಾರೆ ಅಂತ ಅವಳೊಮ್ಮೆ ವಿವರಿಸಿದ್ದಳು. ಸ್ವಾಭಿಮಾನದ ವಿಷಯ ಬಂದಾಗ ಎಂದೂ ರಾಜಿಯಾಗುವುದಿಲ್ಲ. ಈಗೀಗ ರಷ್ಯಾದವರನ್ನು ರಾಜತಾಂತ್ರಿಕ ಕಾರಣಗಳಿಂದ ದೂರವಿರಿಸಿ, ಏಷ್ಯಾದ ದೇಶಗಳಿಂದಲೇ ಹೋಮ್ ನರ್ಸ್‌ಗಳನ್ನು ನೇಮಿಸಿಕೊಳ್ಳುವ ಯಹೂದಿ ಕುಟುಂಬಗಳ ಅಕ್ಕರೆ ಈ ಏಷ್ಯನ್ – ಇಸ್ರೇಲಿ ಪ್ರೀತಿ- ಬಾಂಧವ್ಯಕ್ಕೆ ಕಾರಣ ಎಂದು ಅವಳ ಧಾಟಿಯಲ್ಲೇ ಮತ್ತಷ್ಟು ಹೇಳುತ್ತಾ ಹೋಗುತ್ತಾಳೆ.
“ನನಗೆ ಅವರು ಅತಿ ಅಗತ್ಯವಿರುವಾಗ ಕೈತುಂಬಾ ಸಂಬಳದ ಕೆಲಸ ನೀಡಿ ಸಲಹಿದ್ದಾರೆ. ಈಗ ಅವರ ಕಷ್ಟಕಾಲದಲ್ಲಿ ನಾನು ಅವರನ್ನು ಬಿಟ್ಟು ಸ್ವದೇಶಕ್ಕೆ ಮರಳಲಾರೆ.”
– ಸುಮತಿ ಶಣೈ