Mysore
26
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಹಾಡು ಪಾಡು: ವಾರದ ಮುಖ

ಇವರು ಮೈಸೂರಿನೊಳಗೇ ಸೇರಿಕೊಂಡಿರುವ ಬನ್ನೂರು ರಸ್ತೆ ಯರಗನಹಳ್ಳಿಯ ಸೋಬಾನೆ ಹಾಡುಗಾರ್ತಿ ನಿಂಗಮ್ಮ. ಉಸಿರೆತ್ತಿದರೆ ಇವರ ಬಾಯಿಂದ ಹಾಡುಗಳು ಬರುತ್ತವೆ. ಒಂದು ಕಾಲದಲ್ಲಿ ಮೈಸೂರಿನ ಸಾರೋಟು ಕುದುರೆಗಳಿಗೆ ಬೇಕಾದ ಹುಲ್ಲು ಕತ್ತರಿಸಿ ಮಾರಿ ಅದರಿಂದ ಬಂದ ಕಾಸಲ್ಲಿ ಭತ್ತ ರಾಗಿ ಕೊಂಡು ಅನ್ನ ಅಂಬಲಿ ಮಾಡಿ ತನ್ನ ಎಂಟು ಮಕ್ಕಳಿಗೂ ಕುಡಿಸಿ ತಾನು ಮಾತ್ರ ಹಸಿದು ಮಲಗಿದಾಕೆ. ಮೈಸೂರು ಸುತ್ತಮುತ್ತ ಹುಟ್ಟು, ಸಾವು, ಮದುವೆ, ಸೀಮಂತಗಳಿಗೆ ಹೋಗಿ ಮದುವೆ ಶಾಸ್ತ್ರದ ಹಾಡು, ಸೂತಕದ ಹಾಡು, ಎಣ್ಣೆ ಎರೆಯುವ ಹಾಡುಗಳನ್ನು ಹಾಡಿ ಅವರು ಇವರು ಕೊಟ್ಟ ಕಾಸು ಕೂಡಿಸಿ ಮೂಗಿಗೆ ಮೂಗುತಿ, ಕಿವಿಗೆ ವಾಲೆ ಮಾಡಿಸಿಕೊಂಡು ಒಂದಿಷ್ಟು ಸಂಭ್ರಮಿಸಿದಾಕೆ. ಬೆಂಗಳೂರು, ರಂಗಾಯಣ, ರಾಮನಗರ ಆಕಾಶವಾಣಿ ಇಲ್ಲೆಲ್ಲ ಹೋಗಿ ಹಾಡು ಹಸೆ ಹೇಳಿ ಒಂದಿಷ್ಟು ಕಾಸು ಕೂಡಿಸಿ ಅದರಲ್ಲೇ ಮಕ್ಕಳು ಮೊಮ್ಮಕ್ಕಳ ಬಾಣಂತನವನ್ನೂ ಮಾಡಿಸಿ ತನ್ನ ಯಜಮಾನಿಕೆ ತೋರಿಸಿದಾಕೆ.
ಈಗ ನಿಂಗಮ್ಮ ಊರು ಬಿಟ್ಟು ನಂಜನಗೂಡು, ಮಾದೇಶ್ವರನ ಬೆಟ್ಟ ಎಂದು ಸಿಟ್ಟಲ್ಲಿ ಕೊರಗಿಕೊಂಡು ಎಲ್ಲೆಲ್ಲೋ ತಿರುಗುತ್ತಿದ್ದಾರೆ. ಸಿಟ್ಟಿಗೆ ಕಾರಣ ಏನು ಎಂದು ಕೇಳಿದರೆ ದೊಡ್ಡ ಕಥೆಯನ್ನೇ ಹೇಳುತ್ತಾರೆ. ಅದು ಬಹಳ ದೊಡ್ಡ ನೋವಿನ ಕತೆ. ನೀವು ಈ ಹಾಡುಗಾರ್ತಿ ತಾಯಿಯನ್ನು ಎಲ್ಲಾದರೂ ದಾರಿಯಲ್ಲಿ ಕಂಡು ಪ್ರೀತಿಯಲ್ಲಿ ಮಾತನಾಡಿಸಿದರೆ ಖುಷಿಪಡುತ್ತಾರೆ. ಮನಸಾರೆ ಅಳುತ್ತಾರೆ ಮತ್ತು ತಮ್ಮ ಬದುಕಿನ ಕಥೆ ಹೇಳಿ ಮುಗಿಸಿ ಸಂಕಟದಲ್ಲಿ ಮುಗುಳ್ನಗುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ