Mysore
25
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಹತ್ತು ತೆಂಗಿನ ಗಿಡಗಳ ಆರ್ಥಿಕತೆ

ಎನ್.ಕೇಶವಮೂರ್ತಿ

small is beautiful ಎಂಬ ಇಂಗ್ಲಿಷ್ ನಾಣ್ಣುಡಿಯಂತೆ ಸಣ್ಣದು ಎಂಬುದು ಸುಂದರ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಏಕೆ ಈ ಮಾತು ನನಗೆ ನೆನಪಿಗೆ ಬಂತು ಎಂದರೆ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಅತ್ಯಂತ ಸಣ್ಣ ಹಿಡುವಳಿ ರೈತನನ್ನು ಭೇಟಿಯಾಗಿದ್ದೆ. ಅವರ ಬಳಿ ಇದ್ದದ್ದು ಕೇವಲ ನಲವತ್ತು ಸೆಂಟ್ಸ್ ಜಮೀನು. (ಎಕರೆಗೆ ನೂರು ಸೆಂಟ್ಸ್) ಅಂದರೆ, ಅರ್ಧ ಎಕರೆಗಿಂತ ಕಡಿಮೆ ಜಮೀನು. ಅದರಲ್ಲಿಯೇ ಅವರ ಪುಟ್ಟ ಮನೆಯೂ ಇತ್ತು. ಐದು ಜನರಿರುವ ಸುಂದರ ಕುಟುಂಬ. ಇದೆಲ್ಲವೂ ಆ ಪುಟ್ಟ ಜಮೀನಿನಲ್ಲಿಯೇ ನಡೆಯುತ್ತಿತ್ತು. ಆ ಕುಟುಂಬದವರು ಯಾರು? ಎಲ್ಲಿದ್ದಾರೆ? ಆ ವಿವರ ಈಗ ಬೇಡ. ಅವರು ಏನು ಮಾಡುತ್ತಿದ್ದಾರೆ ಎಂಬುದಷ್ಟೇ ಮುಖ್ಯ.

ಅವರ ಜಮೀನಿನಲ್ಲಿ ಹತ್ತು ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಅವು ಸುಮಾರು ೨೦ ವರ್ಷಗಳ ಮರಗಳು. ಎಲ್ಲವೂ ಆರೋಗ್ಯದಿಂದ ನಳನಳಿಸುತ್ತಿದ್ದವು. ಒಂದೊಂದು ಮರದ ಇಳುವರಿ ಮುನ್ನೂರು ತೆಂಗಿನಕಾಯಿ. ಇವರು ಎಳನೀರು ಮಾರುವುದಿಲ್ಲ, ಕೊಬ್ಬರಿಗೂ ಹಾಕುವುದಿಲ್ಲ. ನೇರವಾಗಿ ಗ್ರಾಹಕರಿಗೆ ತೆಂಗಿನಕಾಯಿ ಮಾರುತ್ತಾರೆ. ಪ್ರತಿ ಕಾಯಿಗೆ ಇಪ್ಪತ್ತು ರೂಪಾಯಿ. ಅಲ್ಲಿಗೆ ಹತ್ತು ತೆಂಗಿನಮರಗಳಿಂದ ಮೂರು ಸಾವಿರ ಕಾಯಿ, ಅದರ ಮಾರಾಟದಿಂದ ಏನಿಲ್ಲವೆಂದರೂ ೬೦ ಸಾವಿರ ರೂ. ಆದಾಯ ಬರುತ್ತಿದೆ.

ತೆಂಗಿನಮರಗಳಿಂದ ಪಡೆದದ್ದೆಲ್ಲ ಆದಾಯವೇ. ಏಕೆಂದರೆ ಅವರು ತೆಂಗಿನಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ನೀಡುವುದಿಲ್ಲ. ಯಾವುದೇ ಔಷಧಗಳನ್ನು ಸಿಂಪಡಣೆ ಮಾಡುವುದಿಲ್ಲ. ಸಂಪೂರ್ಣ ಸಾವಯವ ಗೊಬ್ಬರದಿಂದಲೇ ನಿರ್ವಹಣೆ ಮಾಡುತ್ತಿದ್ದಾರೆ. ಇವುಗಳೊಂದಿಗೆ ಅವರ ಜಮೀನಿನಲ್ಲಿ ಎರಡು ಕ್ರಾಸ್ ಬ್ರೀಡ್ ಹಸುಗಳಿವೆ. ಅವುಗಳಿಗೆ ಬೇಕಾದಷ್ಟು ಮೇವನ್ನು ಜಮೀನಿನಲ್ಲಿಯೇ ಬೆಳೆದಿದ್ದಾರೆ. ತಮ್ಮ ಮನೆಗೆ ಬೇಕಾದಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ೧೫ ಲೀ. ಹಾಲನ್ನು ಮಾರಾಟ ಮಾಡುತ್ತಾರೆ. ಅದೂ ಸಹ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಇದರೊಂದಿಗೆ ಇವರಪ್ರಮುಖ ಆರ್ಥಿಕ ಬೆಲೆ ಉಡುಪಿಯ ಶಂಕರಪುರ ಮಲ್ಲಿಗೆ. ಮನೆ ಮಂದಿಯೆಲ್ಲಾ ಸೇರಿ ಇದರ ಬೇಸಾಯ ಮಾಡುತ್ತಾರೆ. ಹೂ ಬಿಡಿಸಿ, ಕಟ್ಟಿ ಮಾರುವುದರಲ್ಲಿ ಇವರ ಕುಟುಂಬ ನಿಸ್ಸೀಮತೆ ಹೊಂದಿದೆ. ಇದಷ್ಟೇ ಅಲ್ಲದೇ ತಮ್ಮ ಬೇಕಾದ ತರಕಾರಿಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತಾರೆ. ಒಟ್ಟಾರೆ ಇವರದ್ದು ಸಂತೃಪ್ತಿಯ ಕೃಷಿ ಬದುಕು. ಇವರ ಬಗ್ಗೆ ಏಕಿಷ್ಟು ಹೇಳುತ್ತಿದ್ದೇನೆ ಎಂದುಕೊಳ್ಳುತ್ತಿದ್ದೀರಾ. ನನ್ನನ್ನು ತುಂಬ ಆಕರ್ಷಿಸಿದ ಕೃಷಿಕ ಇವರು. ಇವರ ಸರಳ ಜೀವನ ಹಾಗೂ ಹತ್ತು ತೆಂಗಿನಮರಗಳು ನನಗೆ ಇವರ ಮೇಲೆ ಕೂತೂಹಲ ಮೂಡಲು ಕಾರಣವಾಯಿತು. ನಮ್ಮ ಭಾಗಗಳಲ್ಲಿಯೂ ತೆಂಗಿನಮರಗಳನ್ನು ಬೆಳೆಯುತ್ತಾರೆ. ಎಷ್ಟೋ ರೈತರಿಗೆ ಎಕರೆಗೆ ೫ ಸಾವಿರ ತೆಂಗಿನಕಾಯಿಗಳನ್ನು ತೆಗೆಯುವುದೂ ಕಷ್ಟ.

ಹೀಗಿರುವಾಗ ಇವರು ಕೇವಲ ೧೦ ಗಿಡಗಳಿಂದ ಮೂರು ಸಾವಿರ ತೆಂಗಿನ ಕಾಯಿಗಳನ್ನು ಪಡೆಯುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾದರೂ ಇದು ಸತ್ಯ. ಹಿರಿಯರು ಹೇಳುವ ಹಾಗೆ ‘ಅಗಲವಾಗಿ ಬೇಸಾಯ ಮಾಡುವ ಬದಲು ಆಳವಾಗಿ ಬೇಸಾಯ ಮಾಡಬೇಕು’. ಇರುವ ಅಲ್ಪ ಜಮೀನಿನಲ್ಲಿಯೇ ಸ್ವಲ್ಪವೇ ಬೆಳೆ ಬೆಳೆದು ಅದಕ್ಕೆ ನಮ್ಮ ಎಲ್ಲ ಒಳಸುಳಿ ಬಳಸಿ, ಖರ್ಚನ್ನು ಮಿತಗೊಳಿಸಿ, ಕನಿಷ್ಠ ಅಗತ್ಯತೆಗಳೊಂದಿಗೆ ಬದುಕಿದರೆ ಬದುಕು ಸುಂದರವಾಗಲಿದೆ. ಆದರೆ ಹಾಗೆ ಬದುಕಲು ಬೇಸಾಯ ಮಾಡುವ ದೃಢ ಸಂಕಲ್ಪಬೇಕು. ಎಲ್ಲರಿಗೂ ಇದು ಸಾಧ್ಯವಾಗದಿರಬಹುದು. ಸಾಧ್ಯವಾಗಿಸಿದರೆಸಣ್ಣ ಕೃಷಿ ಬದುಕು ಸಹನೀಯವಾಗುತ್ತದೆ. ಸುಂದರವೂ ಆಗುತ್ತದೆ.

(ಲೇಖಕರು ಮೈಸೂರಿನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ)

Tags:
error: Content is protected !!