Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನೀವೇ ತಯಾರಿಸಬಹುದಾದ ನೈಸರ್ಗಿಕ ಕೀಟನಾಶಕಗಳು

• ರಮೇಶ್ ಪಿ. ರಂಗಸಮುದ್ರ
ಇತ್ತೀಚಿನ ವರ್ಷಗಳಲ್ಲಿ ಕೃಷಿ ದುಬಾರಿಯಾಗುತ್ತಿದೆ. ಕೃಷಿಯಲ್ಲಿ ಆದಾಯ ಕಡಿಮೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಾವಾಗ ಕೃಷಿಯಲ್ಲಿ ಅನೈಸರ್ಗಿಕವಾಗಿ ಒಳಸೂರಿಗಳನ್ನು ಬಳಸಲು ಪ್ರಾರಂಭವಾದ ಮೇಲೆ ಕೃಷಿಯ ಉತ್ಪಾದನಾ ವೆಚ್ಚ ಏರಿಕೆಯಾಗಿದ್ದು, ದವಸ -ಧಾನ್ಯಗಳು ಹಣ್ಣು- ತರಕಾರಿಗಳ ಗುಣಮಟ್ಟವು ಕುಸಿದು ಪರಿಸರದ ಆರೋಗ್ಯವೂ ಹಾಳಾಗುತ್ತಿದೆ.

ಹುಳು-ಕೀಟಗಳು ಹೆಚ್ಚಾಗಿ ಕೃಷಿ ವಾರದ ಬೆಳೆಗಳ ಮೇಲೆ ದಾಳಿ ಇಡುವುದು ಸಾಮಾನ್ಯ. ಈ ಕೀಟ, ರೋಗಗಳಿಂದ ಬೆಳೆಯನ್ನು ರಕ್ಷಿಸುವುದಕ್ಕಾಗಿ ದುಷ್ಪರಿಣಾಮಕಾರಿಯಾದ
ಕೀಟನಾಶಕಗಳನ್ನು ಬಳಸದ ಕಡಿಮೆ ವೆಚ್ಚದಲ್ಲಿ ನೈಸರ್ಗಿಕ ಕೀಟನಾಶಕಗಳನ್ನು ಬಳಸುವುದನ್ನು ರೈತರು ರೂಢಿಸಿಕೊಳ್ಳಬೇಕು. ನೈಸರ್ಗಿಕ ಕೀಟನಾಶಕಗಳ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ. ಜತೆಗೆ ಮಿತ್ರ ಕೀಟಗಳಾದ ಜೇನು ನೊಣ, ಗೆದ್ದಲು ಹುಳು, ಎರೆ ಹುಳುಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಹಾಗೂ ಮಣ್ಣಿನ ಆರೋಗ್ಯ ವೃದ್ಧಿಯಾಗುವ ಜತೆಗೆ ಸಾವಯವ ಇಂಗಳ ವೃದ್ಧಿಯಾಗುತ್ತದೆ.

1) ಜೂನ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಕಾಡುವ ಎಲೆ ಜಿಗಿ ಹುಳು, ಬಿಳಿ ನೊಣ ಮತ್ತು ಎಲೆ ತಿನ್ನುವ ಇತರ ಕೀಟಗಳನ್ನು ನಿಯಂತ್ರಿಸಲು ಒಂದು ಕೆ.ಜಿ. ಖಾರದ ಮೆಣಸಿನಕಾಯಿ, 10 ಬೆಳ್ಳುಳ್ಳಿ, 3 ದಪ್ಪ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ರಾತ್ರಿ ನೀರಿನಲ್ಲಿ ನೆನೆಸಿ ನಂತರ ಆ ದ್ರಾವಣವನ್ನು ಶೋಧಿಸಿ 20 ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗಳಿಗೆ ಸಿಂಪಡಿಸಬಹುದು.

2) ಕಾಯಿಕೊರಕ ಹುಳು ಮತ್ತು ಕಂಬಳಿ ಹುಳುಗಳನ್ನು ನಿಯಂತ್ರಿಸಲು, 100 ಗ್ರಾಂ ಮೆಣಸಿನ ಕಾಯಿ, 120 ಗ್ರಾಂ ಉಪ್ಪನ್ನು ಅರೆದು 12 ಗಂಟೆಗಳ ಕಾಲ ನೆನೆಸಿ ನಂತರ ಶೋಧಿಸಿ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದು.

3) ಬೆಳೆ ವರ್ಧಕ ಹಾಗೂ ಸೊರಗು ರೋಗಕ್ಕೆ, 100 ಗ್ರಾಂ ಅರಿಶಿನ ಪುಡಿ, 10 ಲವಂಗ, 10 ಚಕ್ಕೆ ತುಂಡುಗಳನ್ನು ನೀರಿನಲ್ಲಿ ಕುದಿಸಿ 10 ಲೀಟರ್ ನೀರಿಗೆ ಸೇರಿಸಿ ನೇರವಾಗಿ ಬೆಳಗಳಿಗೆ ಸಿಂಪಡಣೆ ಮಾಡಿದರೆ ತರಕಾರಿ ಸೊಪ್ಪು ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಬೆಳೆಯು ವರ್ಧಕವಾಗಿ ಇಳುವರಿ ಹೆಚ್ಚುತ್ತದೆ.

4) ಬೆಳಿ ಹೇನು, ಕಂಬಳಿ ಹುಳ ನಿಯಂತ್ರಣಕ್ಕೆ ಅರ್ಧ ಕೆಜಿ ಹರಳು ಬೀಜಗಳನ್ನು ಕುಟ್ಟಿಕೊಂಡು ಹತ್ತು ನಿಮಿಷಗಳ ಕಾಲ ಎರಡು ಲೀಟರ್ ನೀರಿನಲ್ಲಿ ಕುದಿಸಿ 200 ಎಂ.ಎಲ್. ಬೇವಿನ ಎಣ್ಣೆಯನ್ನು ಸೇರಿಸಿ ಶೋಧಿಸಿಕೊಂಡು ಈ ಮಿಶ್ರಣವನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

‌5) ಥ್ರಿಪ್ಸ್ ದುಂಡು ಹುಳು, ಶಿಲೀಂಧ್ರ ನಾಶಕಗಳು, ಹೇನುಗಳು ಬಾಲದ ಹುಳು ಮೊದಲಾದವುಗಳ ನಿಯಂತ್ರಣಕ್ಕೆ 500 ಗ್ರಾಂ ಬೆಳ್ಳುಳ್ಳಿ, 250 ಗ್ರಾಂ ಹಸಿಮೆಣಸಿನಕಾಯಿ, 250 ಗ್ರಾಂ ಹಸಿ ಶುಂಠಿ, 2 ಕೆಜಿ ಹೊಂಗೆ ಸೊಪ್ಪು, ನೂರು ಗ್ರಾಂ ಅಡುಗೆ ಹಿಂಗನ್ನು ನೀರಿನಲ್ಲಿ ಸೇರಿಸಿ ಆರು ಲೀಟರ್ ಹಸುವಿನ ಸಗಣಿಯಲ್ಲಿ ಸೇರಿಸಿ 60 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದು.

6) 5 ಕೆಜಿ ಸಗಣಿ, 5 ಲೀಟರ್ ಹಸುವಿನ ಗಂಜಲ, ಅರ್ಧ ಲೀಟರ್ ಹೊಂಗೆ ಅಥವಾ ಬೇವಿನ ಎಣ್ಣೆಯನ್ನು 50 ಲೀಟರ್ ನೀರಿನಲ್ಲಿ ಬೆರೆಸಿ ಎಲ್ಲ ರೀತಿಯ ಹಣ್ಣಿನ ಗಿಡಗಳ ಎಲೆಯ ಮೇಲೆ ಸಿಂಪಡಣೆ ಮಾಡುವುದರಿಂದ ಮಸಿ ರೋಗ ನಿವಾರಣೆಯಾಗುತ್ತದೆ.

7) ಹಾಲು ಬರುವ 10 ಎಕ್ಕದ ಎಲೆಗಳನ್ನು ಸೇರಿಸಿ ದಶಪರಣ ಕಷಾಯವನ್ನು ತಯಾರಿಸಿಕೊಳ್ಳುವುದು. 10 ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ 100 ಗ್ರಾಂ ಕರ್ಪೂರ 100 ಗ್ರಾಂ ಮೆಣಸನ್ನು ಸೇರಿಸಿ ನೂರು ಲೀಟರ್ ನೀರಿಗೆ ಸೇರಿಸಿ ಭತ್ತದ ಗದ್ದೆಗೆ ತರಕಾರಿ ಬೆಳೆಗಳಿಗೆ ನೇರವಾಗಿ ಭೂಮಿಗೆ ಸೇರಿಸಿದರೆ ಅನೇಕ ಕಾಂಡ ಕೊರಕ ಹುಳುಗಳು ನಾಶವಾಗುತ್ತವೆ.

8) ರೆಕ್ಕೆ ಇರುವ ಸಣ್ಣ ಕೀಟಗಳ ನಿಯಂತ್ರಣಕ್ಕೆ 100 ಗ್ರಾಂ ಶುಂಠಿ, 100 ಗ್ರಾಂ ಮೆಣಸಿನ ಕಾಯಿ, 100 ಗ್ರಾಂ ಬೆಳ್ಳುಳ್ಳಿ, 100 ಗ್ರಾಂ ಮೆಣಸನ್ನು ಚೆನ್ನಾಗಿ ಅರೆದು ನೀರಿನಲ್ಲಿ ಕುದಿಸಿ 50 ಲೀಟರ್ ನೀರಿಗೆ ಸೇರಿಸಿ ನೇರವಾಗಿ ತರಕಾರಿ ಬೆಳೆಗಳಿಗೆ ಹೂ ಬರುವ ಮುನ್ನ ಮತ್ತು ಕಾಯಿ ಬಂದ ನಂತರ ಸಿಂಪಡಿಸಬೇಕು.

9) ಬೇವಿನ ಬೀಜ, ಎಕ್ಕದ ಎಲೆ, ಲಕ್ಕಿ ಸೊಪ್ಪು, ಲೋಳೆಸರ ಮತ್ತು ವಿಷಂಪಾರಿ ಸೊಪ್ಪು ತಲಾ ಒಂದು ಕೆಜಿಯಂತೆ ಪ್ರತ್ಯೇಕವಾಗಿ ರುಬ್ಬಿ ನಂತರ ಒಟ್ಟಿಗೆ ಇರಿಸಿ ನಂತರ ಏಳು ದಿನಗಳ ಕಾಲ ಇರಿಸಿದ ನಂತರ ಶೋಧಿಸಿ ಶೇಖರಿಸಿ ಪ್ರತಿ ಲೀಟರ್ ನೀರಿಗೆ 60 ಮಿ.ಲೀ. ಮಿಶ್ರಣವನ್ನು ಬೆರೆಸಿ ಎಲ್ಲ ಬೆಳೆಗಳಲ್ಲಿಯೂ ಪ್ರಾರಂಭದಿಂದ ಅಂತ್ಯದವರೆಗೂ ಸಿಂಪಡಿಸಬಹುದು.

Tags:
error: Content is protected !!