Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಸಿರಿಧಾನ್ಯದ ಹಲವು ವರಗಳು

ಜನವರಿ ೨೩,೨೪,೨೫ ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಾವಯುವ ಸಿರಿಧಾನ್ಯ ವಾಣಿಜ್ಯ ಮೇಳ

ರಮೇಶ್‌ ಪಿ.ರಂಗಸಮುದ್ರ

ಬರ ನಿರೋಧಕವಾಗಿರುವ ಸಿರಿಧಾನ್ಯಗಳನ್ನು ಯಾವುದೇ ರೀತಿಯ ರಾಸಾಯನಿಕಗಳನ್ನು, ವಿಷಕಾರಿ ಕೀಟನಾಶಕಗಳನ್ನು ಬಳಸದೆ ಕಡಿಮೆ ತೇವಾಂಶ ಹಾಗೂ ಕನಿಷ್ಠ ಕೃಷಿ ವೆಚ್ಚದಲ್ಲಿ ತುಂಡು ಭೂಮಿ ಹೊಂದಿರುವ ರೈತರೂ ಬೆಳೆದು ಕೊಳ್ಳಬಹುದು. ಸಿರಿಧಾನ್ಯಗಳ ಬೇಸಾಯವನ್ನು ಉತ್ತೇಜಿಸಿ, ದೇಶಕ್ಕೆ ಭದ್ರತೆಯನ್ನು ಹೆಚ್ಚಿಸಲು ಭಾರತವು ೨೦೧೮ರ ವರ್ಷವನ್ನು ‘ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಣೆ ಮಾಡಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕವು ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾನಿಲಯಗಳು, ರಾಜ್ಯ ಕೃಷಿ ಇಲಾಖೆಯ ಮೂಲಕ ದೊಡ್ಡಮಟ್ಟದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳಗಳನ್ನು ಹಾಗೂ ಅಭಿಯಾನಗಳು, ತರಬೇತಿ ಪ್ರದರ್ಶನಗಳನ್ನು ಆಯೋಜಿಸಿ ಉತ್ತೇಜಿಸುವ ಮೂಲಕ ಸಿರಿಧಾನ್ಯ ಶಕ್ತಿ ಮತ್ತು ಪ್ರಯೋಜನಗಳನ್ನು ವಿಶ್ವಕ್ಕೆ ಪರಿಚಯಿಸಿತು. ಇದರ ಫಲವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ತನ್ನ ೭೫ ಅಽವೇಶನ ದಲ್ಲಿ ೨೦೨೩ನೇ ವರ್ಷವನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಣೆ ಮಾಡಿತು. ಅಲ್ಲದೆ ಆಹಾರ ಭದ್ರತೆ ಪೋಷಣೆ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳ ಬಳಕೆಯಾಗದ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದು ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವದಾದ್ಯಂತ ಸಿರಿಧಾನ್ಯಗಳ ಅರಿವು ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿತು.

ಸಿರಿಧಾನ್ಯಗಳ ಮೂಲ
ಏಷ್ಯಾ ಖಂಡದಲ್ಲಿ ಕ್ರಿ. ಪೂ. ೪,೦೦೦ ವರ್ಷಗಳಿಗೂ ಹಿಂದಿನಿಂದಲೂ ಸಿರಿಧಾನ್ಯಗಳನ್ನು ಬೆಳೆದು ಬಳಸಲಾಗುತ್ತಿತ್ತು. ಇಂದಿಗೂ ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳಲ್ಲಿ ಸಿರಿಧಾನ್ಯಗಳು ಪ್ರಮುಖ ಆಹಾರ ಬೆಳೆಯಾಗಿ ಉಳಿದಿವೆ. ಭಾರತದಲ್ಲಿ ಸಿರಿಧಾನ್ಯ ಬೇಸಾಯ ಕಡಿಮೆಯಾಗಲು ಅನೇಕ ಕಾರಣಗಳಿವೆ. ಹೆಚ್ಚಿನ ಪೌಷ್ಟಿಕಾಂಶವುಳ್ಳ, ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಿರಿಧಾನ್ಯಗಳ ಕೃಷಿ ಕುಸಿಯಲು ಪ್ರಮುಖ ಕಾರಣಗಳೆಂದರೆ

  • ಸಿರಿಧಾನ್ಯಗಳ ಬೇಸಾಯ ಶ್ರಮದಾಯಕ ಹಾಗೂ ಕಡಿಮೆ ಲಾಭದಾಯಕವಾಗಿರುವುದರಿಂದ ವಾಣಿಜ್ಯ ಬೆಳೆಗಳ ಆಕರ್ಷಣೆಗೆ ಒಳಗಾದ ರೈತರು ಸಿರಿಧಾನ್ಯಗಳ ಬೇಸಾಯವನ್ನು ರೈತರು ಕೈಬಿಟ್ಟರು.
  • ಅಕ್ಕಿ, ಗೋಧಿಗಳಂತಹ ಸಂಸ್ಕರಿಸಿದ ಆಹಾರ ಕ್ರಮೇಣ ಸುಲಭವಾಗಿ ಸಿಕ್ಕಿದ್ದರಿಂದ ಸಿರಿಧಾನ್ಯಗಳು ಒರಟು ಆಹಾರವೆಂದು ಭಾವಿಸಿ ಅವುಗಳನ್ನು ತ್ಯಜಿಸಿ ಸಂಸ್ಕರಿಸಿದ ಆಹಾರಗಳತ್ತ ಮುಖ ಮಾಡಿದರು.
  • ಉದ್ಯೋಗಸ್ಥ ಮಹಿಳೆಯರು, ಹುಸಿ ನಾಗರಿಕರು ಎನಿಸಿಕೊಂಡವರು ಸಮಯದ ಅಭಾವದಿಂದ ಹಾಗೂ ಆಧುನಿಕ ಆಹಾರಗಳ ಬಳಕೆಗೆ ಹೆಚ್ಚು ಆದ್ಯತೆ ನೀಡಿದರು.
  • ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಸುಲಭವಾಗಿ ಸಿಗುವ ಅಕ್ಕಿ-ಗೋಧಿಗಳನ್ನು ಮಾತ್ರ ಬೆಂಬಲಿಸುವ ಸರ್ಕಾರದ ನೀತಿಯಿಂದ ಸಿರಿಧಾನ್ಯಗಳ ಬೇಡಿಕೆ ಕುಸಿಯಿತು.
  • ಪಾಶ್ಚಿಮಾತ್ಯ ಸಂಸ್ಕತಿ, ಕೈಗಾರಿಕೀಕರಣ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಸಿರಿಧಾನ್ಯಗಳು ಬೇಡಿಕೆ ಕಳೆದುಕೊಳ್ಳುವಂತೆ ಮಾಡಿತು.
  • ಕೃಷಿಕರು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಅರಿಶಿನ, ಮೆಣಸಿನಕಾಯಿ ಮುಂತಾದ ಸಾಂಬಾರ ಪದಾರ್ಥಗಳನ್ನು ಕೊಳವೆ ಬಾವಿ ಹಾಕಿಸಿ ಬೆಳೆಯತೊಡಗಿ ದ್ದರಿಂದ ಸಿರಿಧಾನ್ಯ ಬೆಳೆಗಳ ಕೃಷಿ ಕಡಿಮೆಯಾಯಿತು.

 

  • ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳು

ಗಾತ್ರದಲ್ಲಿ ಕಿರಿದಾದರೂ ನವಣೆ, ಸಾಮೆ, ಬರಗು, ಊದಲು, ಕೊರಲೆ, ಸಜ್ಜೆ, ಜೋಳ, ರಾಗಿ ಮುಂತಾದ ಕಿರುಧಾನ್ಯಗಳನ್ನು ಅವುಗಳಲ್ಲಿರುವ ಪೌಷ್ಟಿಕಾಂಶ ಗುಣಗಳ ದೃಷ್ಟಿಯಿಂದ ಸಿರಿಧಾನ್ಯಗಳು ಸಂಪದ್ಭಭರಿತ ಧಾನ್ಯಗಳು ಎಂದು ಪ್ರಸಿದ್ಧಿ ಪಡೆದವು. ಭಾರತ ವಿಶ್ವದಲ್ಲೇ ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದನೆ ಮಾಡಿ, ವಿಶ್ವ ಮಾರುಕಟ್ಟೆಯಲ್ಲಿ ತನ್ನ ರಫ್ತನ್ನು ಹೆಚ್ಚಿಸಿಕೊಂಡು ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಭರವಸೆಯ ಬೆಳೆಯಾಗಿ ಸಿರಿಧಾನ್ಯಗಳು ರೂಪುಗೊಂಡಿವೆ.

ಸಿರಿಧಾನ್ಯಗಳು ಹೃದಯ ರೋಗಗಳನ್ನು ದೂರ ಮಾಡಿ, ತೂಕ ಕಡಿಮೆ ಮಾಡಿ ಬೊಜ್ಜು ಬಾರದಂತೆ ತಡೆಗಟ್ಟುತ್ತವೆ.

ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತವೆ.

ಶರೀರದ ಮೂಳೆ ಮತ್ತು ಸ್ನಾಯುಗಳನ್ನು ಬಲಗೊಳಿಸಿ ಬೇಗ ಮುಪ್ಪು ಬರದಂತೆ ತಡೆಯುತ್ತವೆ.

ಮಹಿಳೆಯರಿಗೆ ಗರ್ಭ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ.

ಹಾಲುಣಿಸುವ ತಾಯಂದಿರಿಗೆ ಉತ್ತಮ ಆಹಾರ ಮತ್ತು ಶಿಶುಗಳ ಆರೋಗ್ಯಕ್ಕೂ ಪೂರಕವಾಗಿದೆ.

ಚರ್ಮದ ಕಾಂತಿಯನ್ನು ಸುಧಾರಿಸುತ್ತದೆ

ಸಿರಿಧಾನ್ಯಗಳು ಆಮ್ಲ ವಿರೋಧಿ ಗುಣ ಹಾಗೂ ಗ್ಲುಟೋನ್ ಮುಕ್ತವಾಗಿದ್ದು, ಸಕ್ಕರೆ ಕಾಯಿಲೆ, ಸ್ತನ ಕ್ಯಾನ್ಸರ್, ಅಲ್ಸರ್, ಕ್ಯಾನ್ಸರ್, ಜಠರದ ಆರೋಗ್ಯವನ್ನು ಹಾಗೂ ರಕ್ತಹೀನತೆಯನ್ನು ತಡೆಗಟ್ಟುತ್ತದೆ.

ಸಿರಿಧಾನ್ಯಗಳನ್ನು ಬಳಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು

ಸಿರಿಧಾನ್ಯಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ನಂತರ ಅನ್ನ, ಇತರೆ ಪದಾರ್ಥಗಳನ್ನು ಮಾಡಬಹುದು.

ಸಿರಿಧಾನ್ಯಗಳನ್ನು ಮೊಳಕೆ ಬರಿಸಿ ಬಳಸುವುದರಿಂದ ಪೌಷ್ಟಿಕಾಂಶದ ಗುಣವು ಮತ್ತಷ್ಟು ಹೆಚ್ಚಾಗುತ್ತದೆ.

ವಯಸ್ಕರು ಪ್ರತಿ ದಿನ ತಮ್ಮ ಆಹಾರದಲ್ಲಿ ೪೦ ರಿಂದ ೫೦ ಗ್ರಾಂನಷ್ಟು ಸಿರಿಧಾನ್ಯಗಳನ್ನು ಬಳಸಬಹುದು.

ರಾಗಿ, ಜೋಳದಂತಹ ಸಿರಿಧಾನ್ಯಗಳನ್ನು ಮುಖ್ಯ ಆಹಾರವಾಗಿ ಪ್ರತಿದಿನ ಬಳಸಬಹುದು.

ಸಿರಿಧಾನ್ಯ ಆಹಾರ ತಿನಿಸುಗಳನ್ನು ಬಳಸಿದಾಗ ಸಾಕಷ್ಟು ನೀರನ್ನು ಸೇವಿಸಬೇಕು.

Tags: