ಕೃಷ್ಣ ಸಿದ್ದಾಪುರ
ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ರೈತರಿಗೆ ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ, ದರ ಕುಸಿತದಂತಹ ಹತ್ತಾರು ಸಮಸ್ಯೆಗಳೊಂದಿಗೆ ವಿದ್ಯುತ್ ಸಮಸ್ಯೆ ಕೂಡ ಕಾಡುತ್ತದೆ. ಇದೀಗ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಸೋಲಾರ್ ಬಳಸಲಾಗುತ್ತಿದ್ದು, ಕೃಷಿಕರು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಕಾಡು ಪ್ರಾಣಿಗಳ ಭಯದ ನಡುವೆ ಕೃಷಿ ಫಸಲುಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರಿನ ವ್ಯವಸ್ಥೆ ಇಲ್ಲದೆ ಅದೆಷ್ಟೋ ರೈತರು ಕೃಷಿಯಿಂದ ವಿಮುಖರಾಗಿ ದೂರ ಉಳಿದಿದ್ದಾರೆ. ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲದೆ ನೀರಿನ ಅಭಾವದಿಂದಾಗಿ ಕೃಷಿ ಫಸಲು ತೆಗೆಯಲು ಸಾಧ್ಯವಾಗದಂತಹ ಸ್ಥಿತಿ ಬಹುತೇಕ ಕಡೆಗಳಲ್ಲಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ದುಬಾರಿ ವೆಚ್ಚದೊಂದಿಗೆ ಡೀಸೆಲ್ ಪಂಪ್‌ಗಳನ್ನು ಬಳಸಿ ಕೃಷಿ ಫಸಲಿಗೆ ನೀರು ಹಾಯಿಸಲಾಗುತ್ತಿದೆ. ರೈತರು ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕಡಿಮೆ ಖರ್ಚಿನಲ್ಲಿ ಸೋಲಾರ್ ಪಂಪುಗಳನ್ನು ಅಳವಡಿಸುವುದರೊಂದಿಗೆ ಇದೀಗ ಸ್ವಂತ ಸೋಲಾರ್ ಬಳಕೆಯಿಂದ ದಿನವಿಡೀ ತೋಟಕ್ಕೆ ನೀರು ಹಾಯಿಸುವ ಮೂಲಕ ಕೃಷಿ ಫಸಲಿನ ಫಲವತ್ತತೆಯೊಂದಿಗೆ ಉತ್ತಮ ಇಳುವರಿ ಪಡೆಯುವ ಮೂಲಕ ವಿದ್ಯುತ್ ಸಮಸ್ಯೆಗಳಿಂದ ದೂರವಾಗಿ ನೆಮ್ಮದಿಯ ಜೀವನ ನಡೆಸಲು ಮುಂದಾಗಿದ್ದಾರೆ.
ವಿದ್ಯುತ್ ಸಂಪರ್ಕವೇ ಇಲ್ಲದೆ ಕಾಫಿ ತೋಟದಲ್ಲೇ ಸೋಲಾರ್ ಪ್ಯಾನೆಲ್‌ನೊಂದಿಗೆ ಕೊಳವೆ ಬಾವಿಗೆ ಮೋಟರ್ ಅಳವಡಿಸಿ ಕೃಷಿ ಬೆಳೆಗಳಿಗೆ ದಿನನಿತ್ಯ ನೀರು ಹಾಯಿಸುವ ಮೂಲಕ ಬೆಳೆಗಾರ ಸೂದನ ಸತೀಶ್ ಯಶಸ್ವಿಯಾಗಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿಯಲ್ಲಿ ೨ ಎಕರೆ ಕಾಫಿತೋಟಕ್ಕೆ ಸೋಲಾರ್ ಪಂಪ್‌ಸೆಟ್‌ನ್ನು ಅಳವಡಿಸಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಮೊಬೈಲ್‌ನಲ್ಲೂ ನಿಯಂತ್ರಿಸಬಹುದಾದ ೫ ಹೆಚ್‌ಪಿ ಪಂಪ್‌ಸೆಟ್‌ನಲ್ಲಿ ಮೂರು ಜೆಟ್ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಬೆಳಿಗ್ಗೆಯಿಂದ ಸಂಜೆವರೆಗೆ ಕೃಷಿ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿದೆ. ಈ ಹೊಸ ಸೋಲಾರ್ ವಿದ್ಯುತ್ ಆವಿಷ್ಕಾರವನ್ನು ಮೈಸೂರಿನ ಎಸ್ಸಾರ್ ಸೋಲಾರ್ ಕಂಪೆನಿ ಪರಿಚಯಿಸಿದ್ದು, ಈಗಾಗಲೇ ಪಾಲಿಬೆಟ್ಟ, ಗೋಣಿಕೊಪ್ಪ, ಸಿದ್ದಾಪುರ, ಚಟ್ಟಳ್ಳಿ, ಕುಶಾಲನಗರ ಸೇರಿದಂತೆ ಹಲವೆಡೆ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿ ಯಶಸ್ಸು ಕಂಡಿದೆ.
ಕೊಡಗಿನಲ್ಲಿ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಕೊಯ್ಲಿನ ನಂತರ ತೋಟಗಳಿಗೆ ನೀರು ಹಾಯಿಸ ಬೇಕಾಗುತ್ತದೆ. ಗುಡ್ಡಗಾಡು ಪ್ರದೇಶವಾದ ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದ್ದು, ವೋಲ್ಟೇಜ್ ಸಮಸ್ಯೆಯು ರೈತರನ್ನು ಕಾಡುತ್ತಿದೆ. ಇದರೊಂದಿಗೆ ಪೈಪ್‌ಲೈನ್ ಅಳವಡಿಕೆ ಕಾರ್ಯಕ್ಕೆ ರಾತ್ರಿ ವೇಳೆಯಲ್ಲಿ ಕಾರ್ಮಿಕರು ಕಾಡು ಪ್ರಾಣಿಗಳ ಭಯ ದಿಂದ ತೋಟಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಮೂಲಕವೂ ಆನ್ ಅಂಡ್ ಆಫ್ ಮಾಡುವ ಮೂಲಕ ನೀರು ಹಾಯಿಸುವ ಹೊಸ ತಂತ್ರಜ್ಞಾನವನ್ನು ಪರಿಚಯಿಸಿ ಸಮಸ್ಯೆಗೆ ಪರಿಹಾರ ಒದಗಿಸಿದೆ.
ಕಾಫಿ ತೋಟ ದೂರದಲ್ಲಿರುವುದರಿಂದ ವಿದ್ಯುತ್ ಅಳವಡಿಕೆ ಮಾಡಲು ಅಂದಾಜು ಹತ್ತು ಲಕ್ಷ ರೂ. ಗಳಷ್ಟು ಖರ್ಚು ಮಾಡಬೇಕಾಗಿತ್ತು. ಆದರೆ ಕಡಿಮೆ ಖರ್ಚಿನಲ್ಲಿ ಎಸ್ಸಾರ್ ಸೋಲಾರ್ ಕಂಪೆನಿಯಿಂದ ತೋಟದಲ್ಲೇ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಜೊತೆಗೆ ಕೊಳವೆ ಬಾವಿಯಿಂದ ತೋಟಕ್ಕೆ ನೀರು ಹಾಯಿಸುವ ಪಂಪ್‌ಸೆಟ್ ಅಳವಡಿಸಿ ಮೊಬೈಲ್ ಫೋನ್‌ನಿಂದಲೂ ನಿಯಂತ್ರಿಸ ಬಹುದಾದ ಹೊಸ ತಂತ್ರಜ್ಞಾನವನ್ನು ರೂಪಿಸಿ ಬೆಳೆಗಳಿಗೆ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಗ್ರಾಮೀಣ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುವ ಈ ಸೋಲಾರ್ ಪಂಪ್ ಅಳವಡಿಕೆಗೆ ಸರ್ಕಾರ ಸಬ್ಸಿಡಿ ಪ್ರೋತ್ಸಾಹ ನೀಡಬೇಕಾಗಿದೆ. -ನಟರಾಜ್ ಗೌಡ, ವ್ಯವಸ್ಥಾಪಕ , ವಿಸ್ತಾರ್ ಸೋಲಾರ್ ಸಂಸ್ಥೆ