Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ವರ್ತೂರು ಸಂತೋಷ್​ಗೆ ಸನ್ಮಾನ ಮಾಡಿದ ಇನ್​ಸ್ಪೆಕ್ಟರ್​ ವರ್ಗಾವಣೆ!

ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರ್‌ ಸಂತೋಷ್‌ಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದೆ. ಬಿಗ್‌ ಬಾಸ್‌ ವಿನ್ನರ್‌ಗಿಂತಲೂ ಹೆಚ್ಚಿನ ಪ್ರೀತಿಗೆ ವರ್ತೂರ್‌ ಪಾತ್ರರಾಗಿದ್ದಾರೆ. ರಾಜ್ಯಾದ್ಯಂತ ವಿವಿಧ ಸಂಘ-ಸಂಸ್ಥೆಗಳು ವರ್ತೂರ್‌ಗೆ ಸನ್ಮಾನ ಮಾಡುತ್ತಾ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿ ವರ್ತೂರ್‌ ಅವರಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಸನ್ಮಾನ ಮಾಡಿದ್ದು ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಿಎಸ್​ಐ ತಿಮ್ಮರಾಯಪ್ಪ ಎಂಬುವರು ಪೊಲೀಸ್ ಸಮವಸ್ತ್ರದಲ್ಲಿಯೇ ವರ್ತೂರು ಸಂತೋಷ್ ಅವರಿಗೆ ಸನ್ಮಾನ ಮಾಡಿದ್ದರು. ತಿಮ್ಮರಾಯಪ್ಪ, ವರ್ತೂರು ಸಂತೋಷ್​ಗೆ ಪೇಟ, ಶಾಲು ತೊಡಿಸಿ ಸನ್ಮಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ತಿಮ್ಮರಾಯಪ್ಪ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ವರ್ತೂರು ಸಂತೋಷ್ ಬಿಗ್​ಬಾಸ್ ಮನೆಗೆ ಹೋದಾಗ, ಹುಲಿ ಉಗುರು ಧರಿಸಿದ್ದಾರೆಂಬ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿ ಅವರನ್ನು ಬಿಗ್​ಬಾಸ್ ಮನೆಯಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದ ವರ್ತೂರು ಸಂತೋಷ್ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿ ಹೊರಬಂದರು. ಅದಾದ ಬಳಿಕ ಮತ್ತೆ ಬಿಗ್​ಬಾಸ್​ ಮನೆಗೆ ಬಂದು ಅದ್ಭುತವಾಗಿ ಆಟವಾಡಿ ಫೈನಲಿಸ್ಟ್ ಆದರು. ಫೈನಲಿಸ್ಟ್ ಆಗಿ ಹೊರಬಂದ ಬಳಿಕ ವರ್ತೂರು ಅವರು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಯೊಬ್ಬರು ಅವರಿಗೆ ಸನ್ಮಾನ ಮಾಡಿ ವರ್ಗಾವಣೆಯಾಗಿರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!