ಬೆಂಗಳೂರು: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ವಿಜೇತರ ಘೋಷಣೆಯಾಗಿದ್ದು, ಒಟಿಟಿ ಟಾಪರ್ ಆಗಿದ್ದ ನಟ ರೂಪೇಶ್ ಶೆಟ್ಟಿ ವಿಜೇತರಾಗಿದ್ದಾರೆ.
ಗಿರಿಗಿಟ್ ಚಿತ್ರದ ಮೂಲಕ ರೂಪೇಶ್ ಶೆಟ್ಟಿ ತುಳು ಚಿತ್ರಗಳಲ್ಲಿ ನಟಿಸಿ ಕರಾವಳಿ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದರು. ರೇಡಿಯೊ–ವಿಡಿಯೊ ಜಾಕಿಯಾಗಿದ್ದ ಹಾಗೂ ಕನ್ನಡ, ತುಳು, ಕೊಂಕಣಿ ಸಿನಿಮಾಗಳಲ್ಲಿ ನಟಿಸಿ ಮೂಲಕ ಗಮನ ಸೆಳೆದಿದ್ದ ನಟ ರೂಪೇಶ್ ಶೆಟ್ಟಿ ಅವರು ಮೊದಲ ಬಾರಿಗೆ ನಡೆದ ಒಟಿಟಿ ವೇದಿಕೆಯಲ್ಲೂ ಪ್ರಶಸ್ತಿ ಗೆದ್ದಿದ್ದರು. ಈಗ ಟಿವಿ ಶೋನಲ್ಲಿಯೂ ಪ್ರಶಸ್ತಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ರೂಪೇಶ್ ಶೆಟ್ಟಿ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಒಟಿಟಿ ಮೂಲಕ ಬಿಗ್ ಬಾಸ್ ಸ್ಪರ್ಧಿಯಾಗಿ ಆಯ್ಕೆಯಾಗಿ ಮುಖ್ಯ ರಿಯಾಲಿಟಿ ಶೋ ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ, ಉಳಿದ ಎಲ್ಲಾ ಸ್ಪರ್ಧಿಗಳಿಗೆ ಪೈಪೋಟಿ ನೀಡಿದ್ದರು. ಒಟಿಟಿಯಲ್ಲೂ ರೂಪೇಶ್ ಶೆಟ್ಟಿ ಟಾಪರ್ ಆಗಿದ್ದರು.
ಬಿಗ್ ಬಾಸ್ ಟೈಟಲ್ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
100 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳು ಎನಿಸಿದ್ದ ನಟಿ ಅಮೂಲ್ಯ ಗೌಡ, ನಟ ಅರುಣ್ ಸಾಗರ್ 13ನೇ ವಾರ ಹಾಗೂ ಜ್ಯೋತಿಷಿ ಆರ್ಯವರ್ಧನ್ ಗುರೂಜಿ 14ನೇ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಿದ್ದರು. ಕನ್ನಡ ಪರ ಹೋರಾಟಗಳಿಂದ ಗಮನ ಸೆಳೆದಿದ್ದ ರೂಪೇಶ್ ರಾಜಣ್ಣ, ನಟಿಯರಾದ ದಿವ್ಯಾ ಉರುಡುಗ, ದೀಪಿಕಾ ದಾಸ್, ನಟರಾದ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಫೈನಲ್ಗೆ ಎಂಟ್ರಿ ಕೊಟ್ಟಿದ್ದರು.
ಬಿಗ್ ಬಾಸ್ ಕನ್ನಡ 8 ರಲ್ಲಿ 2ನೇ ರನ್ನರ್ ಅಪ್ ಆಗಿದ್ದ ದಿವ್ಯಾ ಉರುಡುಗ ಈ ಬಾರಿ 99ನೇ ದಿನ ಹೊರಬಿದ್ದಿದ್ದರು. ನಂತರ ದೀಪಿಕಾ ದಾಸ್ ಮೂರನೇ ರನ್ನರ್ ಅಪ್ ಆಗಿ ಹೊರನಡೆದಿದ್ದಾರೆ. ಸೀಸನ್ 7ರಲ್ಲಿಯೂ ಫೈನಲ್ ಪ್ರವೇಶಿಸಿದ್ದ ಇವರು ಈ ಬಾರಿಯೂ ಪ್ರಶಸ್ತಿ ಗೆಲ್ಲಲು ಸಾದ್ಯವಾಗಿಲ್ಲ. ಉಳಿದಂತೆ, ರೂಪೇಶ್ ರಾಜಣ್ಣ 2ನೇ ರನ್ನರ್ ಅಪ್ ಆದರೆ, ರೂಪೇಶ್ಗೆ ಕಠಿಣ ಸವಾಲೊಡ್ಡಿದ್ದ ರಾಕೇಶ್ ಅಡಿಗ ಮೊದಲ ರನ್ನರ್ ಅಪ್ ಆದರು.
ಕುಣಿದಾಡಿದ ಸಾನ್ಯಾ ಅಯ್ಯರ್, ಪ್ರಶಾಂತ್ ಸಂಬರಗಿ
ಅಂತಿಮ ಹಂತದಲ್ಲಿ ನಿರೂಪಕ–ನಟ ಸುದೀಪ್ ಅವರು ಇದ್ದ ಫೈನಲಿಸ್ಟ್ಗಳನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ರೂಪೇಶ್ ಕೈ ಎತ್ತುತ್ತಿದ್ದಂತೆಯೇ, ಅವರ (ರೂಪೇಶ್) ಕುಟುಂಬದವರು ಕಣ್ಣೀರಾದರು. ಈ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾನ್ಯಾ ಅಯ್ಯರ್ ಮತ್ತು ಪ್ರಶಾಂತ್ ಸಂಬರಗಿ ಕುಣಿದು ಕುಪ್ಪಳಿಸಿದರು.
ರೂಪೇಶ್ ಮತ್ತು ಸಾನ್ಯಾ ಉತ್ತಮ ಒಡನಾಟ ಹೊಂದಿದ್ದರು. ಇವರಿಬ್ಬರ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ, ಸಾನ್ಯಾ ಆರನೇ ವಾರವೇ ಎಲಿಮಿನೇಟ್ ಆದಾಗ ರೂಪೇಶ್ ಕಣ್ಣೀರು ಹಾಕಿದ್ದರು.