-ಜಯಶಂಕರ್ ಬದನಗುಪ್ಪೆ
ಅತಿಯಾದ ಮಳೆಯಿಂದ ಸಾಕಷ್ಟು ಪ್ರಮಾಣ ಬೆಳೆ ನಷ್ಟವಾಗಿದೆ. ಹಲವಾರು ಕಡೆಗಳಲ್ಲಿ ಬಾಳೆ, ಶುಂಠಿ, ಹರಿಸಿಣ ಸೇರಿ ಹಲವಾರು ಬೆಳೆಗಳು ನಷ್ಟಕ್ಕೀಡಾಗಿವೆ. ಅದೇ ವೇಳೆಯಲ್ಲಿ ಇವುಗಳ ಬೆಲೆ ಹೆಚ್ಚಾಗಿ ರೈತನಿಗೆ ತುಸು ಲಾಭವಾಗಿದೆ. ಅದರಲ್ಲಿಯೂ ಏಲಕ್ಕಿ ಬಾಳೆಗೆ ಈ ಬಾರಿ ಹೆಚ್ಚಿನ ಬೆಲೆ ಸಿಕ್ಕಿದ್ದು, ರೈತನ ಕೈ ಹಿಡಿಯುವಲ್ಲಿ ಏಲಕ್ಕಿ ಯಶಸ್ವಿಯಾಗಿದೆ.
ಈ ವರ್ಷದ ಆರಂಭದಿಂದ ಹಿಡಿದು ಏಲಕ್ಕಿ ಬಾಳೆಗೆ ಸಾಧಾರಣ ಬೆಲೆ ಸಿಕ್ಕಿದೆ. ಒಂದು ಹಂತದಲ್ಲಿ ಕೆಜಿಗೆ ೭೫ ರೂ. ದಾಟಿದ್ದೂ ಇದೆ. ಪ್ರಸ್ತುತ ಮೈಸೂರು ಹಾಪ್‌ಕಾಮ್ಸ್‌ನಲ್ಲಿ ಕೆಜಿ ಏಲಕ್ಕಿ ಬಾಳೆಗೆ ೪೦ ರೂ. ಇದ್ದು, ರೈತರು ತುಸು ಆದಾಯ ಕಾಣುವಂತಾಗಿದೆ.
ಮೈಸೂರು, ಚಾಮರಾಜನಗರ, ಮಂಡ್ಯದ ಕೆಲ ಭಾಗಗಳಲ್ಲಿ ಏಲಕ್ಕಿ ಬಾಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತಮಿಳುನಾಡಿನಲ್ಲಿ ಬೆಳೆಯುವ ಏಲಕ್ಕಿ ಬಾಳೆಗಿಂತ ಗಾತ್ರದಲ್ಲಿ ಸಣ್ಣದಿದ್ದರೂ ಹೆಚ್ಚು ರುಚಿ ಹೊಂದಿರುವ ಕಾರಣ ಈ ಭಾಗದ ಬಾಳೆಗೆ ಹೆಚ್ಚು ಬೇಡಿಕೆ ಇದೆ. ಈ ಬಾರಿ ತಗ್ಗು ಪ್ರದೇಶಗಳಲ್ಲಿ ಬೆಳೆದ ಬಾಳೆ ಹೆಚ್ಚಿನ ಮಳೆಯಿಂದ ಹಾನಿಗೀಡಾಗಿದ್ದು, ಎತ್ತರದ ಪ್ರದೇಶಗಳಲ್ಲಿ ಬೆಳೆದಿರುವ ಬಾಳೆ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಏಲಕ್ಕಿ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇದ್ದು, ರೈತರಿಗೆ ಅನುಕೂಲ ಆಗಲಿದೆ.
೨೦೧೭-೧೮ ರಲ್ಲಿ ಕೆ.ಜಿ.ಏಲಕ್ಕಿ ಬಾಳೆಗೆ ೬೦ ರೂ. ದರ ಸಿಕ್ಕಿತ್ತು. ಈಗ ೪ ವರ್ಷದ ನಂತರ ನನಗೆ ೭೨ ರೂ. ಸಿಕ್ಕಿದೆ. ಇದು ಕೃಷಿಯಲ್ಲಿ ಆದ ನಷ್ಟ ಸರಿದೂಗಿಸಲು ನೆರವಾಗಿದೆ. ೨ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೆ. ಆರಂಭದಲ್ಲಿ ೭೨ ರೂ. ದರ ಸಿಕ್ಕಿದರೂ ತಿಂಗಳ ನಂತರ ಗುಣಮಟ್ಟ ಆಧರಿಸಿ ೫೫-೬೦ ರೂ. ಗೆ ಮಾರಾಟ ಮಾಡಿದ್ದೇವೆ. ಮೈಸೂರಿನ ಬೋಟಿ ಬಜಾರ್‌ನಲ್ಲಿ ಉತ್ತಮ ದರ ದೊರಕಿದೆ. ಈಗ ದರ ಕೆಜಿಗೆ ೪೦ ರೂ. ಇರುವುದರಿಂದ ಲಾಭದಾಯಕ ಎಂದು ಹೇಳಲಾಗದು. -ಬಿ.ಉದಯಕುಮಾರ್, ರೈತರು, ಹರವೆ ಗ್ರಾಮ, ಚಾ.ನಗರ ತಾಲ್ಲೂಕು.
೧೦ ಎಕರೆ ಪ್ರದೇಶದಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೆ, ಅತಿಯಾದ ಮಳೆಯಿಂದಾಗಿ ಒಂದಷ್ಟು ಫಸಲು ನಷ್ಟವಾಗಿದೆ. ಉಳಿದ ಬಾಳೆ ಬೆಳೆಯನ್ನು ಕೆ.ಜಿ.ಗೆ ೬೬ ರೂ.ನಂತೆ ಮಾರಾಟ ಮಾಡಿದ್ದೇನೆ. ಪ್ರತಿ ಬಾರಿ ಹಾಪ್ ಕಾಮ್ಸ್ ಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ರಿಲಾಯನ್ಸ್ ಮಾರಾಟ ಮಳಿಗೆಗೂ ಕೊಟ್ಟಿದ್ದೇನೆ. -ಶಿವನಂಜಪ್ಪ, ರೈತರು, ಚಿಕ್ಕಕಾನ್ಯ, ಮೈಸೂರು ತಾಲ್ಲೂಕು
ಹಾಪ್ ಕಾಮ್ಸ್ ವಾರ್ಷಿಕ ಸರಾಸರಿ ದರ
೨೦೧೮-೧೯ರಲ್ಲಿ ಕೆಜಿ.ಗೆ ೪೪ ರೂ.
೨೦೧೯-೨೦ರಲ್ಲಿ ೫೪ ರೂ.
೨೦೨೦-೨೧ ರಲ್ಲಿ ೫೧ ರೂ.
೨೦೨೧-೨೨ ರಲ್ಲಿ ೩೯ ರೂ.