Mysore
27
clear sky

Social Media

ಮಂಗಳವಾರ, 21 ಜನವರಿ 2025
Light
Dark

ಐದು ವಿಮಾನ ಸಂಪರ್ಕಕ್ಕೆ ಯದುವೀರ್‌ ಮನವಿ

ಮೈಸೂರು: ಮೈಸೂರು ನಗರದಿಂದ ಹೊಸದಾಗಿ 5 ವಿಮಾನಗಳ ಮಾರ್ಗಗಳನ್ನು ವಿಸ್ತರಿಸುವಂತೆ ಕೋರಿ ವಿಮಾನಯಾನ ಸಚಿವ ಕಿಂಜ ರಾಪೂ ರಾಮಮೋಹನ್ ನಾಯ್ಡು ಅವರಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.

ನಗರದ ಸರ್ವತೋಮುಖ ಬೆಳವಣಿಗೆ, ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಮೈಸೂರು ವಿಮಾನ ನಿಲ್ದಾಣ ಸಮೀಪದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ. ಸದ್ಯಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ 2 ವಿಮಾನಗಳು ಮಾತ್ರ ಹಾರಾಟ ನಡೆಸು ತ್ತಿವೆ. ಇದು ಸ್ಥಳೀಯರು, ಪ್ರವಾಸಿಗರು, ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಿಲ್ಲ ಎಂದು ತಿಳಿಸಿದ್ದಾರೆ.

ನಗರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣವಿದ್ದರೂ ವಿಮಾನಗಳೇ ಇಲ್ಲದ ಕಾರಣ ಉಪಯುಕ್ತವಾಗಿಲ್ಲ. ವಿಮಾನಗಳನ್ನು ರದ್ದು ಮಾಡಿರುವುದರಿಂದ ತೊಂದರೆಯಾಗಿದೆ. ಪ್ರವಾಸೋದ್ಯಮಕ್ಕೂ ಬಿಸಿ ತಟ್ಟಿದ್ದು, ಮೈಸೂರಿನ ಆರ್ಥಿಕ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ. ಮೈಸೂರು ಪಾರಂಪರಿಕ ನಗರವಾಗಿದ್ದು, ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮೈಸೂರಿನಿಂದ ಕೊಚ್ಚಿನ್, ಗೋವಾ, ಮುಂಬೈ, ಹೈದರಾಬಾದ್ ಹಾಗೂ ವಿಜಯವಾಡ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸಚಿವರಿಗೆ ಪತ್ರದ ಮುಖಾಂತರ ಮನವಿ ಮಾಡಿರುವುದಾಗಿ ಯದುವೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

Tags: