ನಗರದ ಐದು ವೃತ್ತಗಳು, 12 ಉದ್ಯಾನಗಳಲ್ಲಿ ಅಂದದ ಕಾರಂಜಿಗಳು
ಸಾಲೋಮನ್
ಮೈಸೂರು: ಕಾರಂಜಿಗಳ ನಗರ ಎಂಬ ಹೆಸರು ಹೊಂದಿರುವ ಮೈಸೂರಿನಲ್ಲಿ ಪ್ರವಾಸಿ ಗರು, ನಗರದ ನಿವಾಸಿಗಳನ್ನು ರಂಜಿಸಲು ನಗರದ ಉದ್ಯಾನವನಗಳು, ವೃತ್ತಗಳಲ್ಲಿನ ಕಾರಂಜಿಗಳು ಸಿದ್ಧವಾಗುತ್ತಿವೆ. ಸ್ವಚ್ಛ ಸರ್ವೇ ಕ್ಷಣ್ ಸಮೀಕ್ಷೆ ಸದ್ಯದ ಆರಂಭವಾಗ ಲಿದ್ದು, ಈ ಸಾಲಿನಲ್ಲಿ ಮೊದಲ ಐದು ಸ್ವಚ್ಛ ನಗರಗಳಲ್ಲಿ ಸ್ಥಾನ ಪಡೆಯಲು ಮೈಸೂರು ಮಹಾನಗರ ಪಾಲಿಕೆಯು ಪಣ ತೊಟ್ಟು ಎಲ್ಲ ವಿಭಾಗಗಳಲ್ಲೂ ಕಾರಂಜಿಗಳನ್ನು ಸಿದ್ಧ ಗೊಳ್ಳುತ್ತಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಪ್ರತಿ ವರ್ಷ ದಂತೆ ಈ ಬಾರಿಯೂ ಸ್ವಚ್ಛ ಸರ್ವೇಕ್ಷಣ್ ಪರಿಶೀಲನೆಗಾಗಿ ಈ ವಾರಾಂತ್ಯ ಅಥವಾ ಮುಂದಿನ ವಾರದಲ್ಲಿ ನಗರಕ್ಕೆ ಬರಲಿದ್ದಾರೆ.
ಅದಕ್ಕೂ ಮುಂಚೆ ಪಾಲಿಕೆ ಅಧಿಕಾರಿಗಳು ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಮೂಲಭೂತ ಸೌಲಭ್ಯ ಮುಂತಾದವುಗಳ ಕಡೆ ಗಮನ ಹರಿಸುತ್ತಿದ್ದಾರೆ. ಈ ಬಾರಿ ವಿಶೇಷ ವಾಗಿ ನಗರದ ವೃತ್ತಗಳು ಹಾಗೂ ಉದ್ಯಾನ ಗಳಲ್ಲಿ ಇರುವ ಕಾರಂಜಿ ಫೌಂಟೇನ್)ಗಳ ದುರಸ್ತಿಗೆ ಮುಂದಾಗಿದೆ.
ನಗರ ಪಾಲಿಕೆಯ ತೋಟಗಾರಿಕೆ ವಿಭಾಗಕ್ಕೆ ಕಾರಂಜಿಗಳ ದುರಸ್ತಿ ಜವಾಬ್ದಾರಿಯನ್ನು ನೀಡಲಾಗಿದೆ. ಇದಕ್ಕಾಗಿ ಹೆಚ್ಚುವರಿ ಅನುದಾನ ಇಲ್ಲ. -ಂಟೇನ್‌ಗಳ ಮೋಟಾರ್ ಹಾಗೂ ನಾಜಿಲ್‌ಗಳು ಕೆಟ್ಟಿದ್ದರೆ ಅದರ ದುರಸ್ತಿಯ ಜವಾಬ್ದಾರಿಯನ್ನು ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗಕ್ಕೆ ವಹಿಸಲಾಗಿದೆ.
ದೂಳು ನಿಯಂತ್ರಣಕ್ಕಾಗಿ ಕಾರಂಜಿ: ಸ್ವಚ್ಛತೆ ಎಂದರೆ ಕೇವಲ ಕಸ ವಿಲೇವಾರಿ, ರಸ್ತೆ-ಚರಂಡಿ ಸ್ವಚ್ಛತೆ ಮಾತ್ರವಲ್ಲ. ರಸ್ತೆಗಳಲ್ಲಿರುವ ದೂಳನ್ನು ನಿಯಂತ್ರಿಸಲು ಏನೇನು ಕ್ರಮ ಕೈಗೊಳ್ಳುತ್ತೀರಿ ಎನ್ನುವ ಸವಾಲು ಸರ್ವೇಕ್ಷಣೆಯಲ್ಲಿ ಕೇಳಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಧೂಳು ನಿಯಂತ್ರಣ ಮಾಡುವ ಉದ್ದೇಶ ದಿಂದ ವೃತ್ತಗಳಲ್ಲಿ ಫೌಂಟೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ನಗರದ ಸೌಂದರ್ಯವೂ ಹೆಚ್ಚುತ್ತದೆ.
ಹಾಗೆಯೇ ಬಡಾವಣೆಗಳಲ್ಲಿರುವ ಉದ್ಯಾನಗಳಲ್ಲೂ ಫೌಂಟೇನ್‌ಗಳು ಕೂಡ ಸುತ್ತಲಿನ ಪ್ರದೇಶಗಳ ವಾತಾವರಣದಲ್ಲಿ ರುವ ಅತ್ಯಂತ ಸೂಕ್ಷ್ಮವಾದ ಧೂಳಿನ ಕಣ ಗಳನ್ನೂ ನಿಯಂತ್ರಿಸುತ್ತವೆ. ಗಾಳಿಯಲ್ಲಿರುವ ಫರ್ಟಿಕ್ಯುಲರ್ ಮ್ಯಾಟರ್ (ಪಿ. ಎಂ. ) ೨. ೫ ಇರುತ್ತದೆ. ಇದಕ್ಕಿಂತ ಕಡಿಮೆ ಪಿಎಂ ಅಂಶ ಗಳನ್ನು ಫೌಂಟೆನ್‌ಗಳಿಂದ ಚಿಮ್ಮುವ ನೀರಿನ ಹನಿಗಳು ನಿಯಂತ್ರಿಸುತ್ತದೆ. ಧೂಳಿನಿಂದ ಹರಡುವ ಕಾಯಿಲೆಗಳೂ ನಿಯಂತ್ರಣ ಆಗುತ್ತದೆ, ಆದ್ದರಿಂದ ಕಾರಂಜಿಗಳಿದ್ದರೆ ಸ್ವಚ್ಛ ಸರ್ವೇಕ್ಷಣ್ ಸರ್ವೆಯಲ್ಲಿ ಅಂಕ ಪಡೆಯಲು ಪ್ರಮುಖ ಕಾರಣವಾಗಿದೆ.
ಸುಂದರ ಕಾರಂಜಿಗಳಿವೆ: ಮೈಸೂರು ನಗರದ ಪ್ರಮುಖ ವೃತ್ತಗಳಲ್ಲಿ ವಿಶಾಲವಾದ ಕಾರಂಜಿಗಳಿರುವುದು ನಗರ ಸೌಂದರ್ಯಕ್ಕೆ ಇಂಬುಕೊಟ್ಟಂತಿದೆ. ರಾಜ್ಯದ ಕೆಲವೇ ಕೆಲವು ನಗರಗಳಲ್ಲಿ ವಿಶಾಲವಾದ -ಂಟೇನ್ ವೃತ್ತಗಳು ಕಂಡು ಬರುತ್ತವೆ. ನಗರದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಫೌಂಟೇನ್ ವೃತ್ತ, ಬನ್ನಿಮಂಟಪ ಹೈವೇ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಅಗ್ರಹಾರ ವೃತ್ತ ಹಾಗೂ ಹಾರ್ಡಿಂಜ್ ವೃತ್ತದಲ್ಲಿರುವ ಸೆಲಿ ಸ್ಪಾಟ್‌ನಲ್ಲಿರುವ ಕಾರಂಜಿಯು ‘ವಾಟರ್ ಕ್ಯಾಸ್ಕೇಡ್’ ಗುಂಪಿಗೆ ಸೇರಿದ್ದು, ಇವುಗಳು ದೂಳಿನ ಕಣಗಳನ್ನು ನಿಯಂತ್ರಿಸುತ್ತವೆ.
೧೨ ಉದ್ಯಾನಗಳಲ್ಲಿ ಕಾರಂಜಿ: ನಗರದ ವೃತ್ತಗಳಲ್ಲಿ ಮಾತ್ರವಲ್ಲ ೧೨ ಉದ್ಯಾನಗಳಲ್ಲೂ ಕಾರಂಜಿಗಳಿವೆ. ಅವುಗಳಲ್ಲಿ ಎರಡು ಕಡೆ ಸಂಗೀತ ಕಾರಂಜಿ ಇರುವುದು ವಿಶೇಷ. ಈ ವರೆಗೂ ಅವುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ನಗರ ಪಾಲಿಕೆ ೪೫ನೇ ವಾರ್ಡ್ ನಿವೇದಿತಾ ಉದ್ಯಾನ ಹಾಗೂ ವಾರ್ಡ್ ೫೫ರ ನಿರಂಜನ ಉದ್ಯಾನದಲ್ಲಿ ಸಂಗೀತ ಕಾರಂಜಿಗಳಿವೆ. ಸದ್ಯಕ್ಕೆ ನಿರಂಜನ ಉದ್ಯಾನದ ಸಂಗೀತ ಕಾರಂಜಿಯ ನಾಜಿಲ್ ಕೆಟ್ಟಿದ್ದು ಅದನ್ನು ದುರಸ್ತಿಗೆ ಕುಂದಾಪುರಕ್ಕೆ ಕಳುಹಿಸಲಾಗಿದೆ. ಈ ವಾರದಲ್ಲಿ ಅದರ ದುರಸ್ತಿ ಪೂರ್ಣಗೊಳ್ಳುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಪಾಲಿಕೆ ವಾರ್ಡ್ ೫೭ರ-ಲವಕುಶ ಉದ್ಯಾನ, ವಾರ್ಡ್ ೪೭ರ-ತಪೋನಂದನ, ವಾರ್ಡ್ ೪೭ರ-ಸಂಜೀವಿನಿ ಉದ್ಯಾನ, ವಾರ್ಡ್ ೪೭ರ-ಸುಮಸೋಪಾನ ಉದ್ಯಾನ, ವಾರ್ಡ್ ೪೫ರ-ಶಾರದಾಂಬ ಉದ್ಯಾನ, ವಾರ್ಡ್ ೧೮ರ-ಚೆಲುವಾಂಬ ಉದ್ಯಾನ, ವಾರ್ಡ್ ೧೯ರ-ಗಿಣಿ ಉದ್ಯಾನ, ವಾರ್ಡ್ ೨೩ರ-ಸುಬ್ಬರಾಯನ ಕೆರೆ ಉದ್ಯಾನ, ವಾರ್ಡ್ ೪೧ರ-ಟೌನ್‌ಹಾಲ್ ಉದ್ಯಾನ ಹಾಗೂ ವಾರ್ಡ್ ೨೭ರ-ಮಿಲಾದ್ ಬಾಗ್ ನಲ್ಲಿ ಉತ್ತಮ ಕಾರಂಜಿಗಳಿವೆ.