Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಡಿಕೇರಿಯಲ್ಲಿ ಸ್ವಚ್ಛತೆ ಕಾಣದ ಶೌಚಗೃಹಗಳು

Municipal Council appeals to the public to join hands in cleanliness

ನಿರ್ವಹಣೆ ಇಲ್ಲದೆ ಪರದಾಟ : ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಲು ನಗರಸಭೆ ಮನವಿ

ಮಡಿಕೇರಿ: ನಗರದಲ್ಲಿರುವ ಸಾರ್ವಜನಿಕ ಶೌಚಗೃಹಗಳು ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿರುವ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿದೆ.

ನಗರದಲ್ಲಿ ವಿವಿಧೆಡೆ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಶೌಚಗೃಹದಲ್ಲಿ ಶುಚಿತ್ವ ಇಲ್ಲದೇ ಮೂತ್ರ ವಿರ್ಸಜನೆಗೆ ಹೋಗುವ ಪ್ರಯಾಣಿಕರು, ಸಾರ್ವಜನಿಕರು ಮೂಗುಮುಚ್ಚಿ ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುರಿದ ಬಾಗಿಲಲ್ಲೇ ಮೂತ್ರ ವಿಸರ್ಜನೆ: ಮಡಿಕೇರಿಯ ಕಾವೇರಿ ಹಾಲ್ ಸಮೀಪವಿರುವ ಸಾರ್ವಜನಿಕರ ಶೌಚಗೃಹದಲ್ಲಿ ನೀರಿನ ವ್ಯವಸ್ಥೆ ಇದೆ. ಆದರೆ, ಬಾಗಿಲು ಮುರಿದಿದೆ. ಮೂತ್ರ ವಿಸರ್ಜನೆಯ ಸ್ಥಳಗಳು ಶುಚಿತ್ವವಿಲ್ಲದೆ ಜಿಡ್ಡುಹಿಡಿದಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೭ ಶೌಚಗೃಹಗಳಿದ್ದು, ಇದರಲ್ಲಿ ಸದ್ಯದ ಮಟ್ಟಿಗೆ ೪ ಶೌಚಾಗೃಹಗಳು ಮಾತ್ರ ಸಾರ್ವಜನಿಕರಿಗೆ ಉಪಯೋಗವಾಗುತ್ತಿವೆ. ಮಾರ್ಕೆಟ್ ಬಳಿಯ ಶೌಚಗೃಹವನ್ನು ನವೀಕರಣಗೊಳಿಸಲಾಗುತ್ತಿದೆ. ಮೂರ್ನಾಡು ರಸ್ತೆಯಲ್ಲಿನ ಶೌಚಗೃಹವನ್ನು ನವೀಕರಣದ ಹೆಸರಿನಲ್ಲಿ ಕೆಡವಿ ಹಾಕಲಾಗಿದ್ದು, ಮಳೆಯಿಂದ ಕಾಮಗಾರಿ ಆರಂಭಿಸಿಲ್ಲ. ಇನ್ನು ನಗರಸಭೆಯ ಕಾವೇರಿ ಕಲಾಕ್ಷೇತ್ರದ ಬಳಿ ಇರುವ ಶೌಚಲಯ ಅಶುಚಿತ್ವದಿಂದ ಕೂಡಿದ್ದು, ಸಾರ್ವ ಜನಿಕರು ಇದನ್ನು ಅಷ್ಟಾಗಿ ಬಳಸುತ್ತಿಲ್ಲ.

ಮುಖ್ಯ ರಸ್ತೆಯಲಿಲ್ಲ ಶೌಚಾಲಯ: ಹೆಚ್ಚು ಸಾರ್ವಜನಿಕರು ಓಡಾಡುವ ಪ್ರದೇಶವಾದ ಮಹದೇವಪೇಟೆ, ಚೌಕಿ(ಇಂದಿರಾ ಗಾಂಧಿ ವೃತ್ತ), ಅಂಚೆ ಕಚೇರಿ ರಸ್ತೆ, ಕಾಲೇಜು ರಸ್ತೆ, ಹಿಲ್ ರಸ್ತೆ ಹಾಗೂ ನಗರದ ಪ್ರಮುಖ ಸ್ಥಳಗಳಾದ ಐಟಿಐ ಜಂಕ್ಷನ್, ನೂತನ ತಾಲ್ಲೂಕು ಕಚೇರಿ ಬಳಿ ಸಾರ್ವಜನಿಕ ಶೌಚಗೃಹಕ್ಕೆ ಬೇಡಿಕೆ ಇದೆ. ಆದರೆ, ಇದುವರೆಗೂ ಈ ಭಾಗದಲ್ಲಿ ಶೌಚಗೃಹ ನಿರ್ಮಾಣವಾಗದ ಕಾರಣ ಸಾರ್ವಜನಿಕರು ಹಾಗೂ ಪ್ರವಾಸಿಗರು ರಸ್ತೆ ಬದಿಯಲ್ಲೇ ಮೂತ್ರವಿರ್ಸಜನೆ ಮಾಡುತ್ತಿದ್ದು, ಪ್ರಮುಖ ಬೀದಿಗಳು ಗಬ್ಬೆದ್ದು ನಾರುವ ಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ನಗರದಲ್ಲಿರುವ ಶೌಚಗೃಹಗಳು ನಿರ್ವಹಣೆ ಇಲ್ಲದೆ ಸಾರ್ವಜನಿಕರು ಪರದಾ ಡುವಂತಾಗಿದ್ದರೆ, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರು, ಪ್ರಯಾಣಿಕರು ಅನೈರ್ಮಲ್ಯ ಕುರಿತು ಆಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶೌಚಾಗೃಹದ ಕೊರತೆ : ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಮಡಿಕೇರಿ ನಗರದಲ್ಲಿ ಸಾರ್ವಜನಿಕ ಶೌಚಗೃಹಗಳ ಕೊರತೆ ಎದ್ದು ಕಾಣುತ್ತಿದೆ. ಪ್ರವಾಸಿಗರೂ ಸೇರಿದಂತೆ ಸಾರ್ವಜನಿಕರು ಹೆಚ್ಚು ಓಡಾಡುವ ಮುಖ್ಯ ರಸ್ತೆಗಳಲ್ಲಿ ಶೌಚಾಲಯವಿಲ್ಲದ್ದಾಗಿದೆ. ಸುಮಾರು ೩೨ ಸಾವಿರ ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರಕ್ಕೆ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಇಷ್ಟು ಪ್ರಮಾಣದ ಜನಸಂಖ್ಯೆಗೆ ಇರುವುದು ಕೇವಲ ೫ ಸಾರ್ವಜನಿಕ ಶೌಚಗೃಹಗಳು ಮಾತ್ರ. ಇದರಿಂದ ಸಾರ್ವಜನಿಕರು, ಪ್ರವಾಸಿಗರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಮಡಿಕೇರಿಯ ಹೈಟೆಕ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಲಾಗಿರುವ ಶೌಚಗೃಹ ಶುಚಿತ್ವದಿಂದ ಕೂಡಿದೆ. ನಗರದ ಎಲ್ಲ ಸಾರ್ವಜನಿಕ ಶೌಚಗೃಹಗಳೂ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಇದ್ದಾರೆ. ಕೇವಲ ಶೌಚಗೃಹ ನಿರ್ಮಾಣ ಮಾಡಿದರೆ ಸಾಲದು, ಅದರ ನಿರ್ವಹಣೆ ಅತಿ ಮುಖ್ಯ. -ಜೆ. ರವಿಗೌಡ, ಅಧ್ಯಕ್ಷರು, ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ

ನಗರದಲ್ಲಿ ಮತ್ತಷ್ಟು ಶೌಚಗೃಹ ನಿರ್ಮಾಣಕ್ಕೆ ಬೇಡಿಕೆ ಇದೆ. ಸುಸಜ್ಜಿತ ಶೌಚಗೃಹಗಳ ನಿರ್ಮಾಣಕ್ಕೆ ಅದರದ್ದೇ ಆದ ಮಾರ್ಗಸೂಚಿ ಹಾಗೂ ನಿಯಮಗಳಿವೆ. ಆದರೆ, ಬೇಡಿಕೆ ಇರುವ ಕಡೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಸ್ಥಳವಕಾಶವಿಲ್ಲ. ಈಗಿ ರುವ ಶೌಚಗೃಹಗಳನ್ನೇ ನಿರ್ವಹಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಬೇಕು. – ಎಚ್. ಎಸ್. ರಮೇಶ್, ಪೌರಾಯುಕ್ತ, ಮಡಿಕೇರಿ ನಗರಸಭೆ

Tags:
error: Content is protected !!