Mysore
22
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಿವೇಶನ ರಹಿತರ ಸರ್ವೆ ಶುರು

ಸೂರು ನೀಡಲು ಮೈಸೂರು ಸೇರಿ ರಾಜ್ಯಾದ್ಯಂತ ಸರ್ವೆ ಕಾರ್ಯ

ಕೆ. ಬಿ. ರಮೇಶನಾಯಕ

ಮೈಸೂರು: ನಿವೇಶನ, ವಸತಿ ರಹಿತರಿಗೆ ಸೂರು ಒದಗಿ ಸಲು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೇಂದ್ರ ಸರ್ಕಾರವು ಮುಂದಾಗಿರುವ ಪರಿಣಾಮ ವಾಗಿ ಏಳು ವರ್ಷಗಳ ಬಳಿಕ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮತ್ತೊಮ್ಮೆ ಸರ್ವೆ ಕಾರ್ಯ ಶುರುವಾಗಿದೆ. ಮುಂಬರುವ ಮಾರ್ಚ್ ತಿಂಗಳ ಅಂತ್ಯದೊಳಗೆ ಸರ್ವೆ ಮುಗಿಸಿ ವರದಿಯನ್ನು ಸಲ್ಲಿಸಲಾಗುತ್ತದೆ.

ಕಳೆದ ೨೦೧೮ರಲ್ಲಿ ನಡೆದಿ ರುವ ಸರ್ವೆಯಲ್ಲಿ ಗುರುತಿಸಿ ಮನೆ ಮತ್ತು ನಿವೇಶನ ಕಲ್ಪಿಸಿರುವ -ಲಾನುಭವಿ ಗಳನ್ನು ಹೊರತುಪಡಿಸಿ, ಹೊಸದಾಗಿ ಸರ್ವೆ ನಡೆಸಲು ಪ್ರತ್ಯೇಕ ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ. ರಾಜ್ಯದ ೬,೦೨೬ ಗ್ರಾಪಂಗಳ ವ್ಯಾಪ್ತಿಯಲ್ಲೂ ಏಕಕಾಲದಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ.

ಹಲವು ವರ್ಷಗಳಿಂದ ತಮಗೊಂದು ಮನೆ ಇಲ್ಲದೆ ಚಾತಕಪಕ್ಷಿಯಂತೆ ಕಾದು ಕುಳಿತಿದ್ದ ಬಡವರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ), ಬುಡಕಟ್ಟು ನಿವಾಸಿಗಳಿಗೆ ಪಿಎಂ ಜನ್‌ಮನ್ ಯೋಜನೆ ಜಾರಿಗೆ ತಂದಿದ್ದರೆ, ರಾಜ್ಯ ಸರ್ಕಾರ ಬಸವ ವಸತಿ, ಅಂಬೇಡ್ಕರ್ ಆವಾಸ್ ಯೋಜನೆ, ಡಿ. ದೇವರಾಜ ಅರಸು ವಿಶೇಷ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಕೇಂದ್ರ ಸರ್ಕಾರವು ೨೦೨೮ನೇ ಇಸವಿ ವೇಳೆಗೆ ಗುಡಿಸಲು ಮುಕ್ತ ರಾಷ್ಟ್ರವನ್ನಾಗಿ ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ರಾಜ್ಯಕ್ಕೂ ನಿಗದಿತ ಗುರಿಯನ್ನು ನೀಡಲು ಸಜ್ಜಾಗಿದೆ.

೨೫೬ ಗ್ರಾಪಂ ವ್ಯಾಪ್ತಿಯಲ್ಲಿ ಸರ್ವೆ: ಮೈಸೂರು ಜಿಲ್ಲೆಯ ೨೫೬ ಗ್ರಾಪಂ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಆರಂಭವಾಗಿದ್ದು, ಗ್ರಾಪಂಗಳ ಕಾರ್ಯದರ್ಶಿ, ದ್ವಿತೀಯ ದರ್ಜೆ ಸಹಾಯಕರು ಗಣತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣತಿದಾರರು ಪ್ರತಿ ಮನೆಗೂ ಭೇಟಿ ಕೊಟ್ಟಾಗ ನಿವೇಶನ ಮತ್ತು ವಸತಿ ರಹಿತರು ಅಗತ್ಯ ದಾಖಲೆಗಳನ್ನು ನೀಡಿ ಎಪಿಪಿ (ಅವಾಸ್ ಪ್ಲಸ್) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. -ಲಾನುಭವಿಗಳು ಆಧಾರ್ ಕಾರ್ಡ್, ಖಾಲಿ ನಿವೇಶನ ಇರುವ ಸ್ಥಳವನ್ನು ಪರಿಶೀಲಿಸಿ ಜಿಪಿಎಸ್ ಅಳವಡಿಸುವುದು ಹಾಗೂ ಹಾಲಿ ವಾಸ ಮಾಡುತ್ತಿರುವ ಮನೆಯ ಜಿಪಿಎಸ್ ಭಾವಚಿತ್ರ, ರೇಷನ್ ಕಾರ್ಡ್, ಕುಟುಂಬಸ್ಥರ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿ, -ಲಾನುಭವಿ -ಟೊ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ, ನರೇಗಾ ಜಾಬ್ ಕಾರ್ಡ್ ಪಡೆದುಕೊಂಡು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ನಂತರ, ಇದೆಲ್ಲವನ್ನೂ ಕ್ರೋಡೀಕರಿಸಿ ತಾಲ್ಲೂಕು ಪಂಚಾಯಿತಿ ಮೂಲಕ ಜಿಪಂಗೆ ಕಳುಹಿಸಲಾಗುತ್ತದೆ. ನಂತರ, ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರಕ್ಕೆ ಸಮೀಕ್ಷಾ ವರದಿಯನ್ನು ರವಾನಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಏಳು ವರ್ಷಗಳ ಬಳಿಕ ಸರ್ವೆ: ಮನೆ, ನಿವೇಶನ ರಹಿತರಿಗೆ ಪ್ರತಿವರ್ಷ ಮನೆಗಳನ್ನು ನೀಡುತ್ತಿದ್ದರೂ ಬೇಡಿಕೆ ಪ್ರಮಾಣ ಕಡಿಮೆಯಾಗುತ್ತಿಲ್ಲ ಎನ್ನಲಾಗಿದೆ. ಸರ್ಕಾರ ೨೦೧೮ರಲ್ಲಿ ಕುಟುಂಬಗಳ ಸಮೀಕ್ಷಾ ವರದಿ ತಯಾರಿಸಿದ್ದು, ಇದರಲ್ಲಿ ೧,೧೯,೦೧೩ ಕುಟುಂಬಗಳು ಪತ್ತೆಯಾಗಿದ್ದವು. ವಸತಿ ರಹಿತ ಕುಟುಂಬಗಳಲ್ಲಿ ಪರಿಶಿಷ್ಟ ಜಾತಿ-೧೪,೭೬೩, ಪರಿಶಿಷ್ಟ ಪಂಗಡ-೯,೭೯೦, ಸಾಮಾನ್ಯ-೫೧,೪೦೬, ಅಲ್ಪಸಂಖ್ಯಾತರು-೧,೬೦೦ ಕುಟುಂಬಗಳು, ನಿವೇಶನ ರಹಿತ ಕುಟುಂಬಗಳಲ್ಲಿ ಪರಿಶಿಷ್ಟ ಜಾತಿ-೧೦,೧೨೦, ಪರಿಶಿಷ್ಟ ಪಂಗಡ-೮,೪೯೭, ಸಾಮಾನ್ಯ-೨೧,೪೮೧, ಅಲ್ಪಸಂಖ್ಯಾತರು ೧,೩೫೬ ಸೇರಿದಂತೆ ಒಟ್ಟು ೧,೧೯,೦೧೩ ಕುಟುಂಬಗಳು ಇರುವುದನ್ನು ಗುರುತಿಸಲಾಗಿತ್ತು ಎಂದು ಜಿಪಂ ಅಧಿಕಾರಿ ಹೇಳಿದರು.

Tags:
error: Content is protected !!